ನೂತನ ಆಂಬ್ಯುಲೆನ್ಸ್ ಉದ್ಘಾಟನೆ
ಬೇಲೂರು: ಗ್ರಾಮೀಣ ಪ್ರದೇಶದ ಬಡ ರೋಗಿಗಳ ಆರೋಗ್ಯ ಹಿತ ದೃಷ್ಟಿಯಿಂದ ಸರ್ಕಾರ ನಗು-ಮಗು ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಆಂಬುಲೆನ್ಸ್ ನೀಡಿದ್ದು, ಇದರ ಉಪಯೋಗ ಪಡೆಯುವಂತೆ ಶಾಸಕ ವೈ.ಎನ್. ರುದ್ರೇಶಗೌಡ ತಿಳಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ನೂತನ ಆಂಬುಲೆಸ್ಸ್ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ರೋಗಗಳ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಹಲವು ಯೋಜನೆ ರೂಪಿಸಿದ್ದು, ಇದರಲ್ಲಿ ಮುಖ್ಯವಾಗಿ ಆಂಬುಲೆಸ್ಸ್ ಒಂದಾಗಿದೆ ಅಪಘಾತ ಹೆರಿಗೆ ಇನ್ನಿತರ ಹಲವಾರು ಯೋಜನೆಗಳಿಗೆ ಆಂಬುಲೆಸ್ಸ್ ಅತ್ಯವಶ್ಯ ಎಂದರು. ವಾಜಪೇಯಿ ಆರೋಗ್ಯಶ್ರೀ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಮಾತ್ರ ರು. 2 ಲಕ್ಷ ತನಕ ಶಸ್ತ್ರಚಿಕಿತ್ಸೆ ನೀಡುತ್ತಿದ್ದು, ಇದನ್ನು ಎಪಿಎಲ್ ಕಾರ್ಡ್ದಾರರಿಗೆ ವಿಸ್ತರಿಸಲಿದೆ ಎಂದರು. ವೈದ್ಯಾಧಿಕಾರಿ ಡಾ. ನರಸೇಗೌಡ ಮಾತನಾಡಿ, ಆಂಬ್ಯುಲೆನ್ಸ್ ರೋಗಿಗಳಿಗೆ ಅವಶ್ಯವಾದ ಅಮ್ಲಜನಕ ಹಾಗೂ ಇನ್ನಿತರ ಸೌಲಭ್ಯಗಳನ್ನು ಹೊಂದಿದೆ. ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಡಿ.ಚಂದ್ರೇಗೌಡ, ಜಿ.ಟಿ.ಇಂದಿರಾಧರ್ಮಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಶ್ಯಾಮಲಾದೇವಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಂಧ್ಯಾ ಇತರರು ಇದ್ದರು.
3 ವರ್ಷದಲ್ಲಿ 1.2 ಕೋಟಿ ಹೆಣ್ಣು ಭ್ರೂಣ ಹತ್ಯೆ
ಸಕಲೇಶಪುರ: ಮೂರು ವರ್ಷಗಳಲ್ಲಿ ಭಾರತದಲ್ಲಿ 1.2ಕೋಟಿ ಹೆಣ್ಣು ಭ್ರೂಣವನ್ನು ಹತ್ಯೆಗೈಯ್ಯಲಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸದಸ್ಯ ಮಹಮ್ಮದ್ ಶಾಕೀರ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇತ್ತೀಚೆಗೆ ಆಯೋಜಿಸಿದ್ದ 'ನಿರ್ಭಯ... ಸಾಕು ಕ್ರೌರ್ಯ, ಬೇಕು ಸ್ತ್ರೀ ಸ್ವಾತಂತ್ರ್ಯ' ಮಹಿಳಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಅಧುನಿಕ ಜಗತ್ತಿನಲ್ಲೂ ಹೆಣ್ಣೆ ಶೋಷಣೆಗೀಡಾಗುತ್ತಿದ್ದಾಳೆ. ವರದಕ್ಷಣಿ, ಕಿರುಕುಳ, ಹೆಣ್ಣು ಭ್ರೂಣಹತ್ಯೆ, ಲೈಂಗಿಕ ದುರುಪಯೋಗ, ಅತ್ಯಾಚಾರದ ಅಭದ್ರತೆಯಿಂದ ಜೀವಿಸುತ್ತಿದ್ದಾರೆ ಎಂದರು. ಮಹಿಳೆಯರ ಸಂಕ್ಷಣೆಗಾಗಿ ಕಾನೂನುಗಳು ಹೆಚ್ಚಿದಂತೆಲ್ಲಾ ಅಪರಾದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ ವರ್ಷ ಮಹಿಳೆಯ ವಿರುದ್ಧ 2,44,270 ಅಪರಾಧ ಪ್ರಕರಣಗಳು ನಡೆದಿವೆ. ಇನ್ನು ದೂರು ದಾಖಲಾಗದ ಪ್ರಕರಣಗಳು ಬಹಳಷ್ಟಿವೆ ಎಂದರು.
ದಿಲ್ಲಿ, ಮಣಿಪಾಲ, ಉಜಿರೆ ಪ್ರಕರಣಗಳಲ್ಲಿ ಅನ್ಯಾಯದ ವಿರುದ್ಧ ಎದ್ದ ಧ್ವನಿಯನ್ನು ದಮನಿಸಲು ಯತ್ನಿಸಲಾಯಿತು. ಸ್ತ್ರೀಯರಿಗೆ ಭದ್ರತೆ ನೀಡುವ ಸಮಾಜವೊಂದು ನಿರ್ಮಾಣವಾಗುವ ತನಕ ಹೋರಾಟ ಮುಂದುವರೆಯಬೇಕಾಗಿದೆ ಎಂದು ಹೇಳೀದರು. ಜಿಲ್ಲಾಧ್ಯಕ್ಷ ಮಹಮ್ಮದ್ ಇರ್ಷಾದ್, ತಾಲ್ಲೂಕು ಅಧ್ಯಕ್ಷ ಇರ್ಷಾದ್ ಪಾಶ, ಪ್ರಾಂಶುಪಾಲ ಶಿವಣ್ಣ, ಉಪನ್ಯಾಸಕರಾದ ಅಶ್ವತ್, ಸಯ್ಯಿದ್, ಸಂಘಟನೆಯ ಕಾರ್ಯಕರ್ತ ಮಸೂದ್ ಆನೆಮಹಲ್ ಇದ್ದರು.
'ಗೌರವ ನೀಡಿದಾಗಲೇ ಬದುಕು ಸಾರ್ಥಕ'
ಸಕಲೇಶಪುರ: ತಾಯಿಗೆ ನೀಡುವ ಗೌರವವನ್ನು ಹುಟ್ಟಿದ ಭೂಮಿಗೂ ನೀಡಿದಾಗಲೇ ಸಾರ್ಥಕ ಬದುಕು ನಮ್ಮದಾಗಲಿದೆ ಎಂದು ಆದಿಚುಂಚುನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಹೇಳಿದರು. ಕರ್ನಾಟಕ ರಕ್ಷಣ ವೇದಿಕೆ ಪಟ್ಟಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ದೇಶದಲ್ಲಿ ಕರ್ನಾಟಕ ಸುಂದರ ರಾಜ್ಯವಾಗಿದ್ದು, ಇಲ್ಲಿನ ನೆಲ, ಜಲ, ಸಾಹಿತ್ಯ, ಕಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಇಂತಹ ನಾಡಿನಲ್ಲಿ ಹುಟ್ಟಿರುವ ನಾವು ನಮ್ಮ ನೆಲದ ಬಗ್ಗೆ ಅವಹೇಳನವಾಗಿ ಮಾತನಾಡಿದರೆ ಸೂಕ್ತ ಉತ್ತರ ನೀಡಬೇಕು ಇದಕ್ಕಾಗಿ ಸ್ವಾಭಿಮಾನದಿಂದ ಬದುಕುವುದನ್ನು ಕಲಿಯುವ ಅವಶ್ಯಕತೆ ಇದೆ ಎಂದರು. ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ಮಾತನಾಡಿ, ಕನಿಷ್ಠ 10 ನೇ ತರಗತಿಯವರಗೆ ಕನ್ನಡದಲ್ಲಿ ವಿದ್ಯಾಬ್ಯಾಸ ಮಾಡಿದವರಿಗೆ ಸರಕಾರಿ ಹುದ್ದೆಗಳಲ್ಲಿ ಶೇ. 50ರಷ್ಟು ಮೀಸಲಾತಿ ಮಾಡಿದರೆ ಕನ್ನಡದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ಕರವೇ ಹೋರಾಟ ನಡೆಸಬೇಕಿದೆ ಎಂದರು.