ಕಾಂಗ್ರೆಸ್ ನಾಯಕರ ಟೀಕೆ ಮಹಿಳೆಯರಿಗೆ ಮಾಡಿದ ಅವಮಾನ
ಕನ್ನಡಪ್ರಭ ವಾರ್ತೆ, ಹಾಸನ, ಡಿ. 12
ಎಸ್‌ಟಿಡಿ ಬೂತ್ ನಡೆಸುತ್ತಿದ್ದ ಮಹಿಳೆ ನಗರಸಭೆ ಸದಸ್ಯರಾಗಿದ್ದಾರೆ ಎಂದು ತಮ್ಮನ್ನು ಅವಮಾನಿಸುವ ಮೂಲಕ ಕಾಂಗ್ರೆಸ್ ಮುಖಂಡರು ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಇದು ಖಂಡನೀಯ ಎಂದು ನಗರಸಭೆ ಅಧ್ಯಕ್ಷೆ ಶ್ರೀ ವಿದ್ಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಶಿಷ್ಟ ಸಮಾಜಕ್ಕೆ ಸೇರಿದ ಮಹಿಳೆಯೊಬ್ಬರು ಅಧ್ಯಕ್ಷರಾಗಿರುವುದನ್ನು ಸಹಿಸದೇ ನಗರಸಭೆ ಕಾಂಗ್ರೆಸ್ ಸದಸ್ಯರು ಕೀಳುಮಟ್ಟಕ್ಕೆ ಇಳಿದು ಟೀಕೆ ಮಾಡಿರುವುದು ಸರಿಯಲ್ಲ ಇದರಿಂದ ನನಗೆ ಅವಮಾನ ಮಾಡಿದಂತಾಗಿದೆ. ಆದರೆ ನನ್ನ ತಂದೆ ಹಾಗೂ ಪತಿಯು ಸಹ ರಾಜಕೀಯದಲ್ಲಿ ಕಾರ್ಯನಿರ್ವಹಿಸಿದ್ದು, ರಾಜಕೀಯ ಹಿನ್ನೆಲೆಯಿಂದಲೇ ನಾನು ಈ ಕ್ಷೇತ್ರಕ್ಕೆ ಬಂದಿರುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಾದಿಸಿದರು.
ಸತ್ಯಕ್ಕೆ ದೂರ: ನಾನು ಕೇವಲ ಜೆಡಿಎಸ್ ಸದಸ್ಯರನ್ನು ಪರಿಗಣಿಸಿ, ಇತರೆ ಸದಸ್ಯರನ್ನು ಕಡೆಗಣಿಸಿಲ್ಲ. ಎಲ್ಲರನ್ನೂ ಸಮಾನವಾಗಿ ಪರಿಗಣಿಸಿ ಕಾರ್ಯನಿರ್ವಹಿಸುತ್ತಿದ್ದೇನೆ. ಆದರೂ, ನಗರಸಭೆಯ ಅಧ್ಯಕ್ಷರು, ಪ್ರಭಾವಿ ಸದಸ್ಯರಿಂದ ಅಸಹಾಯಕರಾಗಿದ್ದಾರೆ ಹಾಗೂ ಜನಪರ ಕೆಲಕಾರ್ಯಗಳನ್ನು ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.
23ಕ್ಕೆ ಸಭೆ: ನಗರಸಭೆಯ ಅಧ್ಯಕ್ಷರು ಸಾಮಾನ್ಯ ಸಭೆ ಕರೆಯಲು ಹಾಗೂ ಸ್ವತಂತ್ರವಾಗಿ ಅಧಿಕಾರ ಚಲಾಯಿಸಲು ಜೆಡಿಎಸ್‌ನ ಪ್ರಭಾವಿ ಸದಸ್ಯರಾದ ಎಚ್.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷ ಇರ್ಷಾದ್ ಪಾಷ, ವಿಜಯ್ ಕುಮಾರ್ ಹಾಗೂ ಇತರರು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಯಾರೂ ಸಹ ನನ್ನ ಮೇಲೆ ಒತ್ತಡ ಹಾಕಿಲ್ಲ. ನಾನು 2 ಬಾರಿ ಸಭೆಯನ್ನು ನಡೆಸಲಾಗಿದೆ. ಮೂರನೇ ಸಭೆಯ ದಿನಾಂಕ ನಿಗದಿಯಾಗಿತ್ತು. ಆದರೆ, ನಗರಸಭೆ ಸದಸ್ಯರಿಗೆ ಮೈಸೂರಿನಲ್ಲಿ ಸಭೆ ಆಯೋಜಿಸಿದ್ದರಿಂದ ಮೂರನೇ ಸಭೆಯನ್ನು ಮುಂದೂಡಿದ್ದು, ಡಿ.23ಕ್ಕೆ ಸಭೆ ಕರೆಯಲು ತೀರ್ಮಾನಿಸಲಾಗಿದೆ ಎಂದರು.
ನಗರಸಭೆಯ ಖಜಾನೆ ಖಾಲಿಯಾಗಿದ್ದು, ತುಂಬು ಸಂಕಷ್ಟದಲ್ಲಿ ನಗರಸಭೆಯು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ನಗರಸಭೆಯ ಕಂದಾಯದ ಆದಾಯದಿಂದ ಮೂಲಭೂತ ಸೌಕರ್ಯಗಳಾದ ಸ್ವಚ್ಛತೆ ಮತ್ತು ನೀರು ಸರಬರಾಜು ಹಾಗೂ ಆಡಳಿತಾತ್ಮಕ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಇನ್ನು ರು. 1 ಕೋಟಿ ರು. ತೆರಿಗೆ ಬಾಕಿ ಹಣವು 20 ಮಳಿಗೆಗಳಿಂದ ವಸೂಲಿ ಮಾಡಿಲ್ಲ. ಈ ರೀತಿಯಲ್ಲಿ ಸಾಕಷ್ಟು ಹಣ ನಗರಸಭೆಗೆ ಸರಿಯಾಗಿ ಬರದೆ ವಂಚನೆಯಾಗುತ್ತಿದೆ ಎಂದು ದೂರಿದ್ದಾರೆ. ಆದರೆ ಸರ್ಕಾರದಿಂದ ಬರಬೇಕಾದಂತಹ ಅನುದಾನ ಹಾಸನ ನಗರಸಭೆಗೆ ತಡವಾಗಿ ಬಂದಿದೆ.
ಈಗ ಬಂದಿರುವಂತಹ ರು. 30 ಕೋಟಿ ಅನುದಾನ ರಸ್ತೆ ಹಾಗೂ ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕಾಗಿದ್ದು, ಕೂಡಲೇ ಈ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಲಾಗುತ್ತದೆ. ಸರ್ಕಾರದಿಂದ ಅನುದಾನ ತಡವಾಗಿದೆ. ಇದರೆ ಜಿಲ್ಲೆಗಳಿಗೆ ಹೋಲಿಸಿದೆ ಜಿಲ್ಲೆಗೆ ಅನುದಾನ ನೀಡುವಂತಹ ತಾರತಮ್ಯವನ್ನು ಸರ್ಕಾರ ತಾಳಿದೆ. ತಾಂತ್ರಿಕ ದೋಷಗಳನ್ನು ಪರಿಗಣಿಸದೇ ಈಗ ಆಡಳಿತಾರೂಢ ಕಾಂಗ್ರೆಸ್ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಕಾಂಗ್ರೆಸ್‌ಗೆ ಒಳಿತಲ್ಲ ಎಂದು ಹೇಳಿದರು.
ತೀರ್ಮಾನ ಕೈಗೊಳ್ಳಬೇಕಿದೆ: ಕಸ ವಿಲೇವಾರಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ ಗುತ್ತಿಗೆದಾರರು ನಗರಸಭೆಯ ಹಿಂದೆಯೇ ಸುರಿಯಲಾಗಿದೆ. ಆದರೆ ಈಗ ಕಸದ ರಾಶಿಯನ್ನು ನಾವು ಇಲ್ಲಿಂದ ವಿಲೇವಾರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ. ಈ ಬಾರಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ ನಗರದಲ್ಲಿ ಸ್ವಚ್ಛತೆ ಕಾಪಾಡಲಾಗುತ್ತದೆ ಎಂದರು. ಸ್ವಚ್ವತೆಯ ಟೆಂಡರ್ ಪ್ರಕ್ರಿಯೆ ಹೊಸದಾಗಿ ನಡೆಯುತ್ತಿದ್ದು, ಇವತ್ತು ಈ ಬಾರಿ ಗುತ್ತಿಗೆದಾರರಿಗೆ ಷರತ್ತುಗಳನ್ನು ಹಾಕಿ ಸ್ವಚ್ಛತೆಯ ಗುತ್ತಿಗೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಯೋಚಿಸಬೇಕು: ಜೊತೆಗೆ ನಗರಸಭೆಯ ಜಾಗವನ್ನು ಕೆಲವು ಸದಸ್ಯರು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಅಕ್ರಮಗಳು ನಡೆದಿದ್ದರೆ ಆದನ್ನು ತನಿಖೆ ನಡೆಸಲು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಯಾವುದೇ ಆರೋಪಗಳನ್ನು ಮಾಡುವ ಮುನ್ನ ಯೋಚಿಸಿ ಆರೋಪ ಮಾಡಬೇಕು ಎಂದು ಹೇಳಿದರು.
ದನಗಳ ಜಾತ್ರೆ: ಸದಸ್ಯ ಎಚ್.ಎಸ್. ಅನಿಲ್ ಕುಮಾರ್ ಮಾತನಾಡಿ, ದನಗಳ ಜಾತ್ರಾಮಹೋತ್ಸವನ್ನು ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಈ ದನಗಳಿಗೆ ಕಾಲುಬಾಯಿ ರೋಗಗಳು ಕಾಣಿಸಿಕೊಂಡಿಲ್ಲ. ಸುಮ್ಮನೇ ದನಗಳ ಜಾತ್ರೆಗೆ ಅಡಚಣೆ ಉಂಟಾಗಿದೆ. ಇನ್ನು ಜಾತ್ರಾಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಡಿ. 29ರಿಂದ 45 ದಿನಗಳ ಕಾಲ ಜಾತ್ರೆ ನಡೆಯಲಿದೆ. ಈಗಾಗಲೇ ಅಂಗಡಿ-ಮುಂಗಟ್ಟುಗಳನ್ನು ಹಾಕುವ ಬಗ್ಗೆ ಟೆಂಟರ್ ಪ್ರಕ್ರಿಯೆಗಳು ನಡೆಯುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಹತ್ತಿರ ಕಡತ ಇದೆ ಎಂದು ಹೇಳಿದರು.
ನಗರಸಭೆ ಉಪಾಧ್ಯಕ್ಷ ಇರ್ಷಾದ್ ಪಾಷ, ಸದಸ್ಯರಾದ ವಿಜಯ್ ಕುಮಾರ್, ಗೋಪಾಲ್, ಬಾನು ಪ್ರಕಾಶ್ ಇದ್ದರು.
ಆರೋಪ ಸರಿಯಲ್ಲ
ನಾನು ಅಧಿಕಾರಕ್ಕೆ ಬಂದು ಕೇವಲ 3 ತಿಂಗಳಾಗಿದ್ದು, ಈಗಾಗಲೇ 2 ಬಾರಿ ಸಾಮಾನ್ಯ ಸಭೆಯನ್ನು ನಡೆಸಲಾಗಿದೆ. ಹಿಂದೆ ಆದಂತಹ ಕೆಲವು ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಯುವ ಮೂಲಕ ಜನಪರ ಕಾರ್ಯಕ್ರಮಗಳನ್ನು ಮಾಡಲು ಕ್ರಮಕೈಗೊಳ್ಳುತ್ತಿದ್ದರೂ ಸಹ ಕಾಂಗ್ರೆಸ್ ಸದಸ್ಯ ಯಶವಂತ್ ಅವರು ಆರೋಪ ಮಾಡಿರುವುದು ಸರಿಯಲ್ಲ ಎಂದು ಶ್ರೀ ವಿದ್ಯಾ ಹೇಳಿದರು.