ನಾನಾ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಡಿ. 12
ಜೆಸಿಟಿಯು ನೇತೃತ್ವದಲ್ಲಿ ದೆಹಲಿಯಲ್ಲಿ ಕಾರ್ಮಿಕರ ಬೃಹತ್ ಪಾರ್ಲಿಮೆಂಟ್ ನಡೆಯುತ್ತಿರುವುದನ್ನು ಬೆಂಬಲಿಸಿ ಮತ್ತು ನಾನಾ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಗುರುವಾರ ನಗರದ ಹೇಮಾವತಿ ಪ್ರತಿಮೆ ಮುಂಭಾಗದಲ್ಲಿ ಸೇರಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಜನಪರ ನೀತಿಗೆ ಆಗ್ರಹ: ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್ ಮಾತನಾಡಿ, ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿಗಳಿಂದ ಬೇಸತ್ತ ಜನ ಇತ್ತೀಚೆಗೆ ನಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದಲಾದರೂ ಸರ್ಕಾರ ಎಚ್ಚೆತ್ತು ಈ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಜನರ ಸಮಸ್ಯೆಗಳ ಕುರಿತು ಚರ್ಚಿಸಿ, ಜನಪರವಾದ ನೀತಿಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಚಳವಳಿ: ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್ಮಾ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ತಾನು, ದುಡಿಯುವ ಜನರ ವಿರೋಧಿ ಎಂದು ಸಾಬೀತುಪಡಿಸಿಕೊಂಡಿದೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅತ್ಯಂತ ಅನಾಗರೀಕವಾದ ಎಸ್ಮಾ ಕಾಯ್ದೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿ ಮಾಡುವ ಮುಖಾಂತರ ಕಾರ್ಪೊರೇಟ್ ಹಾಗೂ ಬಂಡವಾಳಶಾಹಿಗಳ ಹಿತ ರಕ್ಷಣೆಗೆ ನಿಂತಿದೆ ಇದನ್ನು ಸಹಿಸಲಾಗುವುದಿಲ್ಲ. ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಚಳವಳಿ ನಡೆಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ ಕುಮಾರ್ ಮಾತನಾಡಿದರು.
ಪ್ರದರ್ಶನ: ವಿಭಿನ್ನವಾದ ಸೈದ್ಧಾಂತಿಕ, ರಾಜಕೀಯ ಧೋರಣೆಗಳನ್ನು ಹೊಂದಿದ್ದರೂ, ವಿಭಿನ್ನವಾದ ಬಣ್ಣಗಳ ಬಾವುಟಗಳನ್ನು ಹಿಡಿದಿದ್ದರೂ ಕಾರ್ಮಿಕರ ಹಿತ ಒಂದೇ ಎನ್ನುವ ದಿಸೆಯಲ್ಲಿ 11 ಕೇಂದ್ರ ಕಾರ್ಮಿಕ ಸಂಘಟನೆಗಳಾದ ಬಿಎಂಎಸ್, ಐಎನ್ಟಿಯುಸಿ, ಎಐಟಿಯುಸಿ, ಹೆಚ್ಎಂಎಸ್, ಸಿಐಟಿಯು, ಎಲ್ಪಿಎಫ್, ಟಿಯುಸಿಸಿ, ಎಐಸಿಸಿಟಿಯು, ಎಐಯುಟಿಯುಸಿ, ಯುಟಿಯುಸಿ ಮತ್ತು ಬ್ಯಾಂಕು, ವಿಮಾ, ಸರಕಾರಿ ನೌಕರರ ಸಂಘಟನೆಗಳ ನೂರಾರು ಸದಸ್ಯರು ಒಂದು ದಿನದ ದೇಶವ್ಯಾಪಿ ಐಕ್ಯ ಕಾರ್ಮಿಕರ ಪ್ರದರ್ಶನವನ್ನು ಡಿ. 12ರಂದು ನಡೆಸಲಾಗುತ್ತದೆ.
ಗಾಯದ ಮೇಲೆ ಬರೆ: ಕಾರ್ಮಿಕ ವರ್ಗದ ಐಕ್ಯ ಹೋರಾಟದ ಕರೆಯಲ್ಲಿ 10 ಪ್ರಮುಖ ಬೇಡಿಕೆಗಳನ್ನು ರೂಪಿಸಲಾಗಿದೆ. ಕೇಂದ್ರ ಕಾಮಿಂಕ ಸಂಘಟನೆಗಳು ದೇಶದ ಕಾರ್ಮಿಕರ ಹಾಗೂ ಜನ ಸಾಮಾನ್ಯರ ಹಿತದೃಷ್ಟಿಯಿಂದ ದುಡಿಯುವ ಜನರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನಿರಂತರ ಹೋರಾಟಗಳನ್ನು ನಡೆಸುತ್ತಾ ಬಂದಿವೆ. ಆದರೇ ಸರಕಾರಗಳು ಬೆಲೆ ಏರಿಕೆ ನಿಯಂತ್ರಿಸಲು ಯಾವುದೇ ಸಕಾರಾತ್ಮಕ ಕ್ರಮಗಳನ್ನು ಕೈಗೊಳ್ಳಲು ಕಾಳಜಿ ವಹಿಸುತ್ತಿಲ್ಲ. ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತಷ್ಟು ತೀವ್ರಗೊಳ್ಳುವಂತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.
ಬೆಲೆ ಏರಿಕೆ ನಿಯಂತ್ರಣಕ್ಕಾಗಿ ದೃಢವಾದ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ. ಆದರೆ ಬಹುಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳವನ್ನು ಹೂಡಿಕೆ ಮಾಡಲು ಅವಕಾಶ ನೀಡುವ ಕ್ರಮಗಳನ್ನು ಸರಕಾರ ಕೈಗೊಂಡಿದೆ. ಇದರಿಂದಾಗಿ ಮತ್ತಷ್ಟು ಬೆಲೆ ಏರಿಕೆಗೆ ಕಾರಣವಾಗಲಿದೆ. ಅಲ್ಲದೇ ಚಿಲ್ಲರೆ ವ್ಯಾಪಾರದಲ್ಲಿ ತೊಡಗಿರುವ 4 ಕೋಟಿಗೂ ಅಧಿಕ ಕುಟುಂಬಗಳು ಉಪಜೀವನದ ಆಧಾರವನ್ನು ಕಳೆದುಕೊಂಡು ನಿರುದ್ಯೋಗಿಗಳಾಗುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.
ಧಕ್ಕೆ: ಸರ್ಕಾರ ತನ್ನ ಬಜೆಟ್ನಲ್ಲಿ ಜನಪರ ಉದ್ಯೋಗ ಕಾರ್ಯಕ್ರಮಗಳಿಗೆ ಹಾಗೂ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕವಾಗಿರುವ ಕಲ್ಯಾಣ ಕಾರ್ಯಕ್ರಮಗಳಾದ ಃಖಊಎಆ, ಐಈಉಖ ಗಳಿಗೆ ಹಣ ಕಡಿತ ಮಾಡದೆ ಲಾಭದಾಯಕವಾಗಿರುವ ಕೇಂದ್ರ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಬಂಡವಾಳವನ್ನು ಮಾರಾಟ ಮಾಡುವ ಮೂಲಕ ಈ ಒಂದು ವರ್ಷದಲ್ಲೇ ರು. 40000 ಕೋಟಿ ಸಂಗ್ರಹಿಸುವ ಗುರಿ ಹೊಂದಿರುವುದು ಕಾರ್ಮಿಕರ ಹಾಗೂ ದೇಶದ ಹಿತಕ್ಕೆ ಮಾರಕವಾದ ಕ್ರಮ. ಕಾರ್ಮಿಕ ಕಾನೂನು ಜಾರಿಗೊಳಿಸದೇ ಸಾಮಾಜಿಕ ಭದ್ರತೆಗೆ ಧಕ್ಕೆ ಉಂಟು ಮಾಡಲಾಗಿದೆ ಎಂದು ಆರೋಪಿಸಿದರು.
ವಿಷಾದ: ವರ್ಷವಿಡೀ ನಿರಂತರವಾಗಿ ಮಾಡಬೇಕಾದ ಖಾಯಂ ಕೆಲಸಗಳನ್ನು ಗುತ್ತಿಗೆ ಪದ್ಧತಿಯಲ್ಲಿ ನಿರ್ವಹಿಸುವ ಮೂಲಕ ಕಾರ್ಮಿಕರನ್ನು ತೀವ್ರ ಶೋಷಣೆಗೆ ಗುರಿ ಮಾಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಡಿಯಲ್ಲಿ ಗುತ್ತಿಗೆ ಪದ್ದತಿಯಲ್ಲಿ ದುಡಿಯುವ ಕಾರ್ಮಿಕರಿಗೂ ಒಳಗೊಂಡು ಸಾರ್ವಜನಿಕ ಕ್ಷೇತ್ರದ ಹಾಗೂ ಖಾಸಗಿ ರಂಗದ ಕೈಗಾರಿಕೆಗಳಲ್ಲಿಯೂ ಕನಿಷ್ಟ ವೇತನ, ಭವಿಷ್ಯನಿಧಿ, ಇಎಸ್ಐ, ಬೋನಸ್ ಮತ್ತು ಗ್ರಾಚ್ಯುಟಿ ಸೌಲಭ್ಯಗಳನ್ನು ಜಾರಿಗೊಳಿಸದೇ ನಿರಾಕರಿಸಲಾಗುತ್ತಿದೆ. ಉದ್ಯೋಗ ಸೃಷ್ಟಿಸಲು ಬೇಕಾದ ಯೋಜನೆಗಳು ರೂಪಿಸಲಾಗುತ್ತಿಲ್ಲ ಎಂದು ವಿಷಾದಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಾದ ಐಈಉಖ, ಆಶಾ, ಬಿಸಿಯೂಟ, ಹಾಗೂ ಸರ್ವಶಿಕ್ಷಣ ಅಭಿಯಾನದಲ್ಲಿ ಲಕ್ಷಾಂತರ ಕೆಲಸಗಾರರು (ಕಾರ್ಮಿಕರು) ದುಡಿಯುತ್ತಿದ್ದರೂ ಅವರಿಗೆ ಕನಿಷ್ಠ ವೇತನ ಹಾಗೂ ಕಾರ್ಮಿಕ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮಾಡಿದ ಕಾನೂನು ಜಾರಿಗೊಳಿಸಲು ಅಗತ್ಯ ಹಣಕಾಸು ಸಂಪನ್ಮೂಲವನ್ನು ಒದಗಿಸದೇ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಎನ್ನುವುದು ಕೇವಲ ಬೂಟಾಟಿಕೆಯಾಗಿದೆ ಎಂದು ಹೇಳಿದರು.
ಕಾರ್ಮಿಕರ ಸಂಘಟನಾ ಹಕ್ಕನ್ನೇ ಮೊಟಕುಗೊಳಿಸಲು ಬಹುರಾಷ್ಟ್ರೀಯ ಕಂಪನಿಗಳು ಧಾಳಿ ನಡೆಸುತ್ತಿರುವಾಗ ಸರಕಾರಗಳು ವಿದೇಶಿ ಹಾಗೂ ದೇಶಿಯ ಬಂಡವಾಳಗಾರೊಂದಿಗೆ ಶಾಮೀಲಾಗಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ಅರವಿಂದ್, ಪ್ರಕಾಶ್ ಮತ್ತಿತರರು ಇದ್ದರು.
ಬೇಡಿಕೆಗಳು
1. ಬೆಲೆ ಏರಿಕೆ ನಿಯಂತ್ರಣ
2. ಉದ್ಯೋಗ ಸೃಷ್ಟಿಸಲು ಹಾಗೂ ರಕ್ಷಿಸಲು ಪ್ಯಾಕೇಜ್
3. ಕಾರ್ಮಿಕ ಕಾನೂನುಗಳ ಕಠಿಣ ಅನುಷ್ಠಾನ
4. ಸಾರ್ವತ್ರಿಕವಾಗಿ ಎಲ್ಲಾ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಒದಗಿಸಲು ಹಣಕಾಸು ಸಂಪನ್ಮೂ ಒದಗಿಸುವ ಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು.
5. ಲಾಭದಾಯಕ ಸಾರ್ವಜನಿಕ ಕ್ಷೇತ್ರದ ಕೈಗಾರಿಕೆಗಳ ಷೇರು ಮಾರಾಟ ಮಾಡದಿರಲು ಹಾಗೂ ಖಾಸಗೀಕರಣ ಮಾಡಬಾರದು.
6. ಕಾಯಂ ಹಾಗೂ ನಿರಂತರ ಸ್ವರೂಪದ ಕೆಲಸಗಳನ್ನು ಗುತ್ತಿಗೆ ನೀಡದಂತೆ ಹಾಗೂ ಅಲ್ಲಿಯವರೆಗೆ ಕೈಗಾರಿಕೆ ಸಂಸ್ಥೆಯಲ್ಲಿ ಕಾಯಂ ಕಾರ್ಮಿಕರಿಗೆ ನೀಡಲಾಗುವ ಸಮಾನ ವೇತನ ಸೌಲಭ್ಯಗಳ ದರದಲ್ಲಿಯೇ ಗುತ್ತಿಗೆ ಕಾರ್ಮಿಕರಿಗೂ ಸಿಗುವಂತೆ ಕ್ರಮ ವಹಿಸಬೇಕು.
7. ಷೆಡ್ಯೂಲ್ಗಳ ವ್ಯತ್ಯಾಸವಿಲ್ಲದೆ, ಸೂಚ್ಯಂಕ ಆಧಾರಿತ ತಿಂಗಳಿಗೆ 10,000 ರು.ಗೆ ಕಡಿಮೆ ಇಲ್ಲದಂತೆ ಶಾಸನಬದ್ಧ ಕನಿಷ್ಟ ಕೂಲಿಯನ್ನು ನಿಗದಿಪಡಿಸಲು ಕನಿಷ್ಟ ಕೂಲಿ ಕಾಯಿದೆಗೆ ತಿದ್ದುಪಡಿ ಮಾಡಿ ಅದರ ವ್ಯಾಪ್ತಿಯನ್ನು ಸಾರ್ವತ್ರಿಕಗೊಳಿಸಬೇಕು.
8. ಬೋನಸ್, ಭವಿಷ್ಯನಿಧಿ ಪಾವತಿಗೆ ಇರುವ ಎಲ್ಲಾ ಮಿತಿ ಹಾಗೂ ಅರ್ಹತೆಗಳನ್ನು ತೆಗೆದು ಹಾಕಿ ಗ್ರಾಚ್ಯುಟಿ ಮೊತ್ತವನ್ನು ಏರಿಸಬೇಕು.
9. ಎಲ್ಲರಿಗೂ ನಿವೃತ್ತಿ ವೇತನ ನೀಡಬೇಕು.
10. 45 ದಿನಗಳ ಒಳಗಾಗಿ ಕಾರ್ಮಿಕ ಸಂಘಟನೆಗಳ ಕಡ್ಡಾಯ ನೋಂದಣಿ ಮತ್ತು ಐಎಲ್ಓನ 87 ಹಾಗೂ 98ರ ಸಮಾವೇಶಗಳ ನಿರ್ಣಯವನ್ನು ಈ ಕೂಡಲೇ ದೃಢೀಕರಿಸಬೇಕು.