ಬಸವೇಗೌಡರಿಗೆ ಸನ್ಮಾನ
ಹಾಸನ: ನೀರಾವರಿ ಯೋಜನೆಗಳ ಬಗ್ಗೆ ಪುಸ್ತಕ ಬರೆದ ಎಂಟಿಇಎಸ್ ಉಪಾಧ್ಯಕ್ಷ ಡಾ. ಡಿ.ಬಿ. ಬಸವೇಗೌಡರನ್ನು ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಸಿಬ್ಬಂದಿ ಇತ್ತೀಚೆಗೆ ಕಾಲೇಜಿನ ಸಭಾಂಗಣದಲ್ಲಿ ಸನ್ಮಾನಿಸಿ ಗೌರವಿಸಿದರು. ಎಂಟಿಇಎಸ್ ಖಜಾಂಚಿ ಸಿ.ಎಸ್. ಕೃಷ್ಣಸ್ವಾಮಿ ಮಾತನಾಡಿ, 25 ವರ್ಷಗಳ ಹಿಂದೆ ಸ್ಥಗಿತವಾಗಿದ್ದ ಸಾವಿರ ಮೆಟ್ಟಿಲು ಚಿತ್ರವನ್ನು ನಂತರ ಪೂರೈಸಿ ಬಿಡುಗಡೆಗೊಳಿಸಿದರು ಎಂದರು. ಪುಸ್ತಕ ರಚನೆ: ರಾಜ್ಯದ ನೀರಾವರಿ, ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಬಗ್ಗೆ ಪುಸ್ತಕ ಬರೆದಿರುವುದು ಒಂದು ಮೈಲಿಗಲ್ಲು ಆಗಿದೆ ಎಂದು ಬಣ್ಣಿಸಿದರು. ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಎಂ.ವಿ. ಸತ್ಯನಾರಾಯಣ ಸ್ವಾಗತಿಸಿದರು. ಎಲ್.ಎಸ್. ಭರತನಾರಾಯಣ ಪ್ರಾರ್ಥಿಸಿದರು. ಎಂ.ಎಸ್. ಕಾಳಪ್ಪ ಅತಿಥಿಗಳನ್ನು ಪರಿಚಯಿಸಿದರು. ಕಾಲೇಜಿನ ಉಪಾಧ್ಯಕ್ಷ ಪುಟ್ಟರಾಜ್, ಶೇಷಗಿರಿ, ಕಾರ್ಯದರ್ಶಿ ಆರ್.ಟಿ. ದ್ಯಾವೇಗೌಡ, ಮಾಜಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್, ಉಪ ಪ್ರಾಂಶುಪಾಲ ಕೆ.ಎಸ್. ಜಯಂತ್, ಗುರುನಾಥ್, ಕೆ. ಪಾಲಾಕ್ಷ ಹಾಗೂ ಇತರರು ಇದ್ದರು.
ದೇಗುಲದ ಹುಂಡಿ ಹಣ ಕಳವಿಗೆ ವಿಫಲ ಯತ್ನ
ಹೊಳೆನರಸೀಪುರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹೊರ ಆವರಣದಲ್ಲಿದ್ದ ಕಾಣಿಕೆ ಹುಂಡಿಯನ್ನು ಇತ್ತೀಚೆಗೆ ದುಷ್ಕರ್ಮಿಗಳು ದೋಚಲು ಯತ್ನ ನಡೆಸಿ ವಿಫಲವಾಗಿರುವ ಘಟನೆ ಬೆಳಕಿಗೆ ಬಂದಿದೆ. ದೇವಾಲಯದಲ್ಲಿನ ಹಿಂಬದಿಯಲ್ಲಿರುವ ಕಲ್ಲಿನ ಗೋಡೆಗಳ ಮೇಲಿನಿಂದ ಏರಿ, ಗೋಡೆಯ ಪಕ್ಕದಲ್ಲೇ ಇದ್ದ ಮರದ ಸಹಾಯದಿಂದ ಕೆಳಗಿಳಿದು, ದೇಗುಲದ ಮುಂಬಾಗಿಲಿನ ಮುಂದಿದ್ದ ಕಬ್ಬಿಣದ ಕಾಣಿಕೆ ಹುಂಡಿಯನ್ನು ದುಷ್ಕರ್ಮಿಗಳು ಒಡೆಯಲು ಯತ್ನಿಸಿದ್ದಾರೆ. ಆದರೆ ಹುಂಡಿಯನ್ನು ಯೊತ್ತೊಯ್ಯಲು ಯತ್ನಿಸಿರುವ ಮಾದರಿಯಲ್ಲಿ ಮರದ ಬಡಿಗೆಗಳ ಸಹಾಯದಿಂದ ಹುಂಡಿಯನ್ನು ಮಗುಚಿದ್ದು, ಹುಂಡಿಯ ಬೀಗ ಹಾಗು ಲಾಕರನ್ನು ಒಡೆಯಲು ವಿಫಲ ಯತ್ನ ನಡೆಸಿದ್ದು, ಬಹುಶಃ ಹೊರಗಡೆ ಸದ್ದು ಕೇಳಿ ಬಂದ ಕೂಡಲೇ ಸ್ಥಳದಿಂದ ಪರಾರಿಯಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆ ಬೆಳಕಿಗೆ ಬಂದ ಕೂಡಲೇ ಇಲ್ಲಿನ ನಗರ ಠಾಣೆ ಎಸ್ಐ ಶಿವಕುಮಾರ್ ತಂಡ ದೇವಾಲಯಕ್ಕೆ ಧಾವಿಸಿ ಪ್ರಕರಣದ ಪತ್ತೆಗಾಗಿ ಸೂಕ್ತ ಕ್ರಮ ಕೈಗೊಂಡು, ಶ್ವಾನದಳ ಹಾಗೂ ಬೆರಳಚ್ಚುಗಾರರಿಗೆ ಸುದ್ದಿ ನೀಡಲಾಯಿತಲ್ಲದೇ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕನ್ನಡಕ್ಕೆ ಅವಮಾನ: ಕ್ರಮಕ್ಕೆ ಆಗ್ರಹ
ಹಾಸನ: ರಾಜ್ಯದ ಹಿತಾಸಕ್ತಿಗೆ ಮತ್ತು ಕನ್ನಡಕ್ಕೆ ಅವಮಾನ ಮಾಡುತ್ತಿರುವವರ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ನೀಡಿದರು. ಕನ್ನಡ ನಾಡು- ನುಡಿಗೆ ಅಡ್ಡಿ ಹಾಗೂ ಆತಂಕ ಉಂಟು ಮಾಡುತ್ತಿರುವ ಕ್ರಿಯೆಗಳು ಆಗಾಗ್ಗೆ ನಡೆಯುತ್ತಿರುವುದು ಖಂಡಿನೀಯಾಗಿದೆ. ಇತ್ತೀಚೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಜರುಗಿದ ವಿಧಾನಸಭಾ ಅಧಿವೇಶನದ ವೇಳೆ ಗಡಿನಾಡು ಭಾಗದ ಎಂಇಎಸ್ ಮರಾಠಿ ಶಾಸಕರು ಕನ್ನಡಿಗರ ಸ್ವಾಭಿಮಾನ ಕೆಣಕುವಂತೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುವುದಾಗಿ ಮಾತನಾಡಿ ಅವಮಾನಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜವಾಬ್ದಾರಿಯುತ ಶಾಸಕರೆನಿಸಿಕೊಂಡವರ ಬಾಯಿಯಲ್ಲಿ ಇಂತಹ ಅವಹೇಳನಕಾರಿ ಮಾತುಗಳನ್ನಾಡುವ ಮೂಲಕ ರಾಜ್ಯದ ಜನತೆಗೆ ಅಪಮಾನ ಮಾಡಲಾಗಿದೆ. ಕಳೆದ ವರ್ಷ, ಮಾಜಿ ಸಚಿವ ಉಮೇಶ್ ಕತ್ತಿ ಅಧಿವೇಶನದ ವೇಳೆ ಪ್ರತ್ಯೇಕ ರಾಜ್ಯದ ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ರಾಜ್ಯದ ಜನತೆ ಶಾಂತಿ ಸಹಬಾಳ್ವೆಗೆ ಧಕ್ಕೆ ಉಂಟು ಮಾಡಿದ್ದು ಎಂದು ಆರೋಪಿಸಿದರು.
ಆಗ್ರಹ: ಕನ್ನಡ ನಾಡು ನುಡಿಯ ರಕ್ಷಣೆಗಾಗಿ ನಾನಾ ಸಮಘಟನೆಗಳು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಪೊಲೀಸರು ಸಾಕಷ್ಟು ಕೇಸುಗಳನ್ನು ರಾಜ್ಯಾದ್ಯಂತ ಹಾಕಿದ್ದು, ಇಂತಹ ನಿರ್ಧಾರಗಳು ಕನ್ನಡಿಗರ ಭಾವನೆಗಳನ್ನು ಕೆಣಕಿದಂತಾಗಿದೆ ಹಾಗೂ ಕನ್ನಡ ಚಳುವಳಿ ಹೋರಾಟಗಾರರನ್ನು ಹತ್ತಿಕ್ಕುವಂತಹ ಕೃತ್ಯವಾಗಿದೆ. ಆದ್ದರಿಂದ ಕನ್ನಡಕ್ಕೆ ಅಪಮಾನ ಮಾಡುವವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಜನಾರ್ಧನ್, ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಗೊರೂರು ಶಿವೇಶ್, ಸಾಹಿತಿ ರೂಪ ಹಾಸನ್, ನಿರ್ಮಲದೇವಿ, ವಸಂತಕುಮಾರ್, ಕಾಂಗ್ರೆಸ್ ಮುಖಂಡರಾದ ಮಹಂತೇಶ್, ವಿಜಯಕುಮಾರ್ ಇತರರು ಇದ್ದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮ
ಬೇಲೂರು: ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವು ಈಗಾಗಲೇ ಪ್ರಾರಂಭವಾಗಿದ್ದು, ಡಿ. 13ರವರೆಗೆ ನಿಗದಿಪಡಿಸಿದ ಶಾಲೆಗಳಲ್ಲಿ ನಡೆಸಲಾಗುವುದು. ಕ್ಲಸ್ಟರ್ಹ್ಂತದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನ ರಹಿತ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಡಿ. 12ರಂದು 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಲೂರಿನ ಕುವೆಂಪು ನಗರದಲ್ಲಿರುವ ಯುನೈಟೆಡ್ ಅಕಾಡೆಮಿ ಶಲೆಯಲ್ಲಿ ನಡೆಯುವುದು. ಮತ್ತು 13ರಂದು 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೇಲೂರು ಹೊಳೆಬೀದಿಯಲ್ಲಿರುವ ಹೊಯ್ಸಳ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವುದು ಎಂದು ಬಿಇಓ ಸುಂದರೇಶ್ ತಿಳಿಸಿದ್ದಾರೆ.