ಮಾನವ ಹಕ್ಕುಗಳಿಗೆ ಚ್ಯುತಿ ತರಬಾರದು: ನ್ಯಾ. ಸನತ್
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ.12
ಮಾನವ ಹಕ್ಕುಗಳಿಗೆ ಚ್ಯುತಿ ಬಾರದಂತೆ ಪ್ರತಿಯೊಬ್ಬ ಮನುಷ್ಯನಿಗೂ ಸಮಾಜದಲ್ಲಿ ಉತ್ತಮ ಬಾಳ್ವೆ ನಡೆಸಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಪ್ರತಿಯೊಬ್ಬರಿಗೂ ಹಕ್ಕಿದೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶ ಸಿ.ವಿ. ಸನತ್ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯಾಯಾಲಯದ ಅವರಣದಲ್ಲಿ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯನಿಗೂ ತನ್ನದೇ ಆದ ಭಾವನೆಗಳನ್ನು ವ್ಯಕ್ತಪಡಿಸುವ ಅಧಿಕಾರ ಇದೆ. ಆದರೆ ಆ ಭಾವನೆಗಳು ಮತ್ತೊಬ್ಬರಿಗೆ ಕೆಡುಕುಂಟು ಮಾಡಬಾರದೆಂದು ಸಾಮಾನ್ಯ ಜ್ಞಾನ ಪಡೆದಿರಬೇಕೆಂದು ತಿಳಿ ಹೇಳಿದರು.
ಸಂತಸ: ಮನುಷ್ಯನ ಹಕ್ಕುಗಳ ಉಲ್ಲಂಘನೆ ಆಗದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ತಮ್ಮನ್ನು ಸಮರ್ಪಿಸಿಕೊಂಡು ಸೇವೆಯತ್ತ ದಾಪುಗಾಲು ಹಾಕಿವೆ ಎಂದು ಸಂತಸ ವ್ಯಕ್ತಪಡಿಸಿದರು.
ಮಾನವ ಹಕ್ಕುಗಳ ಕುರಿತು ಚನ್ನರಾಯಪಟ್ಟಣ ತಾಲೂಕಿನ ಮಾನವ ಹಕ್ಕುಗಳ ಮಹಿಳಾ ಘಟಕದ ಅಧ್ಯಕ್ಷೆ ಕುಮಾರಿ ಹಸೀನಾಭಾನು, ಪರಿಶಿಷ್ಟ ಜಾತಿ ವರ್ಗಗಳ ಕಾನೂನಿನ ಬಗ್ಗೆ ನ್ಯಾಯವಾದಿ ಎಚ್.ವಿ. ಶಿವಮ್ಮ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನದೊಡ್ಡಗೌಡರ್, ತಾಲುಕು ಮಾನವ ಹಕ್ಕುಗಳ ಸಮಿತಿ ಅಧ್ಯಕ್ಷ ಜಿ.ಬಿ. ಕುಮಾರ್, ಕಾರ್ಯಾಧ್ಯಕ್ಷ ಆರ್. ವಸಂತ ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಎಚ್.ಆರ್. ಜಯರಾಂ ಇತರರು ಇದ್ದರು.