ವೈದ್ಯರಿಂದ ಸ್ವಯಂ ರಕ್ತದಾನ
ಕ.ಪ್ರ.ವಾರ್ತೆ ಹಾಸನ ಡಿ. 12
ನಗರದ ಭಾರತೀಯ ವೈದ್ಯಕೀಯ ಸಂಸ್ಥೆ (ಐ.ಎಂ.ಎ)ಯ ಆವರಣದಲ್ಲಿ ರೋಟರಿ ಕ್ವಾಂಟ, ಐಎಂಎ ಹಾಗೂ ಹಾಸನ ಬ್ಲಡ್ ಬ್ಯಾಂಕ್ಗಳ ವತಿಯಿಂದ ಇತ್ತೀಚೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಐಎಂಎ ಅಧ್ಯಕ್ಷ ಡಾ. ರಾಮಕೃಷ್ಣ ಭಟ್ ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು. ಡಾ. ದೇವಿಪ್ರಸಾದ್, ಡಾ. ಶ್ರೀರಂಗ ಮುಂತಾದ ವೈದ್ಯರು ರಕ್ತದಾನ ಹಾಗೂ ರೋಟರಿ ಕ್ವಾಂಟ ಸದಸ್ಯರು, ವಕೀಲರು ಸಹ ರಕ್ತದಾನ ಮಾಡಿದರು.
ದಾಸ್ ಲ್ಯಾಬ್ನ ಡಾ. ದೇವದಾಸ್, ಮೂಳೆ ತಜ್ಞ ಡಾ. ಮಂಜುನಾಥ್ ಹಾಗೂ ರೋಟರಿ ಕ್ವಾಂಟ ಅಧ್ಯಕ್ಷ ಜಿತೇಂದ್ರ ಶಿಬಿರದ ಮೇಲ್ವಿಚಾರಣೆ ವಹಿಸಿದ್ದರು. ಇದೇ ವೇಳೆ ರಕ್ತದಾನದ ಮಹತ್ವದ ಬಗ್ಗೆ ವಿಡಿಯೋ ಪ್ರದರ್ಶನ ಮಾಡಲಾಯಿತು. ರಕ್ತದಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ರೋಟರಿ ಕ್ವಾಂಟದ ಕಾರ್ಯದರ್ಶಿ ಮಂಜುನಾಥ್, ಐಎಂಎ ಕಾರ್ಯದರ್ಶಿ ಡಾ. ಶ್ರೀರಂಗ, ರೋಟರಿ ಸದಸ್ಯರಾದ ನಟರಾಜ್, ಮಧುನಾರಾಯಣ್, ಶಿವಕುಮಾರ್, ಶಿವಶಂಕರ್ ಇತರರು ಇದ್ದರು.
ವಿವಿಧೆಡೆ ಇಂದು ವಿದ್ಯುತ್ ವ್ಯತ್ಯಯ
ಹಾಸನ: ನಗರದ ನಾನಾಕಡೆ ಡಿ. 13ರಂದು ರಾಮೇಶ್ವರನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ರವರೆಗೆ ಮೂರನೇ ತ್ರೈಮಾಸಿಕ ನಿರ್ವಾಹಣಾ ಕೆಲಸಗಳನ್ನು ಮಾಡಬೇಕಾಗಿರುವುದರಿಂದ ಸತ್ಯಮಂಗಲ, ದೊಡ್ಡಪುರ, ಭೂವನಹಳ್ಳಿ, ಕೆ.ಆರ್.ಪುರಂ, ಬಿ.ಎಂ.ರಸ್ತೆ, ಉದಯಗಿರಿ, ಶಂಕರಿ ಪುರಂ, ಆಡುವಳ್ಳಿ, ರೇಲ್ವೇ ನಿಲ್ದಾಣ, ಆರರ್ಟಿ ಓ ಕಚೇರಿ ಪ್ರದೇಶ, ರಾಜಘಟ್ಟ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ., ಹಾಸನ ನೋಡಲ್ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಇಂದು ಸಾಮಾನ್ಯ ಸಭೆ
ಹಾಸನ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಿ.ಜಿ. ಅಂಬಿಕಾ ರಾಮಣ್ಣ ಅವರ ಅಧ್ಯಕ್ಷತೆಯಲ್ಲಿ ಡಿ. 13ರಂದು ಮದ್ಯಾಹ್ನ 12 ಗಂಟೆಗೆ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.