ಇಂದಿನಿಂದ ಅಕ್ಕಿ ಗಿರಣಿಗಳು ಬಂದ್
ಹೊಳೆನರಸೀಪುರ: ರಾಜ್ಯ ಸರ್ಕಾರ ರೈಸ್‌ಮಿಲ್ ಮಾಲೀಕರಿಂದ ಅಕ್ಕಿ ಖರೀದಿಗೆ ನಿಗದಿ ಪಡಿಸಿರುವ ಬೆಲೆಯನ್ನು ಖಂಡಿಸಿ ತಾಲೂಕು ಅಕ್ಕಿಗಿರಣಿ ಮಾಲೀಕರ ಸಂಘ ಸಭೆ ನಡೆಸಿ ಸರ್ಕಾರದ ನೀತಿಯನ್ನು ಖಂಡಿಸಿ ಡಿ. 16, 17ರಂದು ಗಿರಣಿಗಳನ್ನು ಬಂದ್ ಮಾಡುವುದಾಗಿ ತಿಳಿಸಿದೆ.
ಪಟ್ಟಣದಲ್ಲಿ ತಾಲೂಕಿನ ಅಕ್ಕಿಗಿರಣಿ ಮಾಲೀಕರು ಭಾನುವಾರವಾದ ಇಂದು ಸಭೆ ಸೇರಿ ರಾಜ್ಯ ಸರಕಾರ ಲೆವಿಭತ್ತಕ್ಕೆ ರು. 1600 ನಿಗದಿಗೊಳಿಸಿದೆ. ಅದರಂತೆ, ಲೆವಿ ಅಕ್ಕಿಗೆ ರು. 2400 ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು ಸರ್ಕಾರದ ಲೆವಿ ಬತ್ತಕ್ಕೆ ನಿಗದಿ ಪಡಿಸಿರುವ ರು. 1600 ಹೋಲಿಸಿದಲ್ಲಿ ಕ್ವಿಂಟಾಲ್ ಅಕ್ಕಿಗೆ ರು. 2600 ಆಗುತ್ತದೆ. ಆದರೆ ರಾಜ್ಯ ಸರ್ಕಾರ ಮಾಡಿರುವ ದರವನ್ನು ಹೆಚ್ಚಿಸುವಂತೆ ಆಗ್ರಹಪಡಿಸಿದರು.
ರಾಜ್ಯ ಸರ್ಕಾರ ನಿಗದಿಪಡಿಸಿರುವ ದರವನ್ನು ಹೆಚ್ಚಿಸಬೇಕು. ಈ ಹಿಂದಿನ ವರ್ಷಗಳಲ್ಲಿ ಲೆವಿ ಅಕ್ಕಿಯನ್ನು ಒಂದುವರೆ ಲಕ್ಷ ಟನ್‌ನಿಂದ ಎರಡು ಲಕ್ಷ ಟನ್ ಲೆವಿ ಮೂಲಕ ಸಂಗ್ರಹಿಸುತ್ತಿತ್ತು.
ಆದರೆ ಈ ಬಾರಿ ರಾಜ್ಯ ಸರಕಾರ 13 ಲಕ್ಷ ಟನ್ ಲೆವಿ ಅಕ್ಕಿಯನ್ನು ಸಂಗ್ರಹಿಸಲು ಮುಂದಾಗಿರುವುದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅಕ್ಕಿ ದೊರೆಯದೆ ಕ್ಷಾಮ ಉಂಟಾಗುವ ಸಾದ್ಯತೆ ಇದೆ ಎಂದು ಮಾಲೀಕರ ಸಂಘ ತಿಳಿಸಿದೆ.
ರಾಜ್ಯ ಸರ್ಕಾರದ ಲೆವಿ ನೀತಿಯನ್ನು ಸಡಿಲಿಸಿ, ಲೆವಿ ಬತ್ತ ಮತ್ತು ಅಕ್ಕಿ ದರವನ್ನು ಹೆಚ್ಚಿಸಬೇಕೆಂದು ಆಗ್ರಹಪಡಿಸಿದ ಅವರು, ಡಿ.16ರ ಸೋಮವಾರ ರಾಜ್ಯ ಸರ್ಕಾರದ ನೀತಿ ವಿರುದ್ಧ ತಾಲೂಕು ಅಕ್ಕಿಗಿರಣಿ ಮಾಲೀಕರ ಸಂಘದ ಸದಸ್ಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಾಲೂಕು ತಹಸೀಲ್ದಾರ್ ಅವರಿಗೆ ಮನವಿ ಪತ್ರ ಅರ್ಪಿಸಲು ಸಭೆ ತಿರ್ಮಾನಿಸಿ ಎರಡು ದಿನಗಳ ಕಾಲ ಅಕ್ಕಿ ಗಿರಣಿಗಳನ್ನು ಬಂದ್ ಮಾಡಲಾಗುವುದು, ನಂತರ ರಾಜ್ಯ ಸಂಘ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುವುದಾಗಿ ಹೇಳಿರುವ ಅವರು ಬುಧವಾರ ಪುನಃ ಸಭೆ ಸೇರಿ ಮುಂದಿನ ನಡೆ ಬಗ್ಗೆ ತಿರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಅಕ್ಕಿಗಿರಿಣಿ ಮಾಲೀಕರ ಸಂಘದ ಅಧ್ಯಕ್ಷ ಎಚ್.ಆರ್. ಮುಕುಂದೇಗೌಡ ವಹಿಸಿದ್ದರು. ಸಭೆಯಲ್ಲಿ ಉಪಾದ್ಯಕ್ಷ ಅರುಣ್, ಸಹಕಾರ್ಯದರ್ಶಿ ಸಚಿನ್, ಉಪಾದ್ಯಕ್ಷ ಶಿವಾನಂದ್, ಕೆ. ಶ್ರೀನಿವಾಸ್, ಜಯಶಂಕರಪ್ಪ ಸೇರಿದಂತೆ ಅಕ್ಕಿಗಿರಿಣಿ ಮಾಲಿಕರು ಸೇರಿದ್ದರು.