ಎಸ್‌ಐ ಆರೋಗ್ಯಪ್ಪ ವಿರುದ್ಧ ಹಣ ವಸೂಲಿ ಆರೋಪ
ಬೇಲೂರು: ಸಬ್‌ಇನ್ಸ್‌ಪೆಕ್ಟರ್ ಆರೋಗ್ಯಪ್ಪ ಕ್ರಿಮಿನಲ್‌ಗಳೊಂದಿಗೆ ಶಾಮೀಲಾಗಿ ಕರ್ತವ್ಯ ದುರುಪಯೋಗಪಡಿಸಿಕೊಂಡು ಮರಳು ದಂಧೆಯಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ತಾಲೂಕು ಯುವ ಜನ ಒಕ್ಕೂಟದ ಮಾಜಿ ಅಧ್ಯಕ್ಷ ಬಸವರಾಜಜ್ಮತ್ತು ತಾಲೂಕು ಪಂಚಾಯ್ತಿ ಸದಸ್ಯ ಜೆ.ಸಿ. ಮೋಹನ್ ಕುಮಾರ್ ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರೇಹಳ್ಳಿ ಸಬ್‌ಇನ್ಸ್‌ಪೆಕ್ಟರ್ ಆರೋಗ್ಯಪ್ಪ ಠಾಣೆಯಲ್ಲಿ ಪೇದೆಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳದೇ ರಾತ್ರೋ ರಾತ್ರಿ ಮರಳು ಸಾಗಿಸುವ ದಂಧೆಕೋರರ ಬಳಿ ಹಣ ವಸೂಲಿ ಮಾಡಲು ಬಳಸಿಕೊಳ್ಳುತ್ತಿದ್ದಾರೆ ಎಂದರು.
ಡಿ.11ರಂದು ಬಿಕ್ಕೋಡಿನ ವಿರಕ್ತ ಮಠದಲ್ಲಿ ಕಾರ್ತಿಕ ಮಹೋತ್ಸವಕ್ಕೆ ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಗಳು ಮದ್ಯಪಾನ ಮಾಡಿ ಭಕ್ತರ ಎದುರು ಅಸಭ್ಯವಾಗಿ ವರ್ತಿಸಿರುವುದಲ್ಲದೇ, ಒಬ್ಬ ಪೇದೆ ಕುಡಿದ ಮತ್ತಿನಲ್ಲಿ ತನ್ನ ಕ್ಯಾಪ್ ಅನ್ನು ಬಿಟ್ಟುಹೋಗಿ ಕರ್ತವ್ಯ ಲೋಪವೆಸಗಿದ್ದಾರೆ.
ಬೇಜವಾಬ್ದಾರಿ ಉತ್ತರ: ಈ ಬಗ್ಗೆ ಅರೇಹಳ್ಳಿ ಸಬ್ ಇನ್ಸ್‌ಪೆಕ್ಟರ್ ಆರೋಗ್ಯಪ್ಪಗೆ ದೂರವಾಣಿ ಮೂಲಕ ತಿಳಿಸಿದಾಗ ಇಂತಹ ಕ್ಯಾಪ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ ಎಂಬ ಬೇಜಾಬ್ದಾರಿ ಉತ್ತರ ನೀಡಿದರು ಎಂದು ತಿಳಿಸಿದರು.
ಭಕ್ತರಲ್ಲಿ ಅನುಮಾನ: ಅರೇಹಳ್ಳಿ-ಬಿಕ್ಕೋಡು ಭಾಗಗಳಲ್ಲಿ ಹಲವರು ಕೊಲೆ ಕಳ್ಳತನಗಳು ನಡೆದಿದ್ದರೂ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದು, ಇದರಿಂದ ಮಳೆನಾಡು ಭಾಗದ ಜನರು ಪೊಲೀಸರೊಂದಿಗಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ದೂರಿದರು.
ಕೊಡಿಮಠದ ಶಾಖಾಮಠ ಬಿಕ್ಕೋಡಿನಲ್ಲಿದ್ದು ಹಲವಾರು ಕಾರ್ಯಕ್ರಮಗಳಿಗೆ ಶ್ರೀ ಶಿವಾನಂದಶಿವಯೋಗಿ ಮಹಾಸ್ವಾಮೀಜಿ ಇಲ್ಲಿಗೆ ಅಗಮಿಸುತ್ತಾರೆ. ಇವರಿಗೆ ನಕ್ಸಲರಿಂದ ಭೀತಿ ಉಂಟಾದರೆ ತಡೆಯುವಲ್ಲಿ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಅನುಮಾನ ಭಕ್ತರಲ್ಲಿ ಉಂಟಾಗಿದೆ ಎಂದು ದೂರಿದರು.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಸ್ಥಳೀಯ ಪೋಲಿಸರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಗುವುದು.
ಇಲ್ಲವಾದರೆ ಈ ಭಾಗದ ಗ್ರಾಮಸ್ಥರೊಂದಿಗೆ ಪೊಲೀಸರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯ ಶಿವಶಂಕರ್, ರತನ್ ಕುಮಾರ್, ಹೇಮಚಂದ್ರ ಇದ್ದರು.