'ಕೌಟುಂಬಿಕ ಪ್ರೀತಿ ಕಣ್ಮರೆ'
ಹಾಸನ: ಇಂದಿನ ಆಡಂಬರದ ಜೀವನ ದಲ್ಲಿ ಕೌಟುಂಬಿಕ ಪ್ರೀತಿ ವಿಶ್ವಾಸ ಕಣ್ಮರೆಯಾಗುತ್ತಿದೆ ಎಂದು ಸಾಹಿತಿ ಜ.ಹೊ. ನಾರಾಯಣ ಸ್ವಾಮಿ ವಿಷಾದ ವ್ಯಕ್ತಪಡಿಸಿದರು.
ನಗರದ ಎಸ್ಜಿಆರ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹಳೆಬೇರು ಹೊಸ ಚಿಗುರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ ನಾಡಿದ ಅವರು ಮಕ್ಕಳಿಗೆ ಮಾತೃಭಾಷೆಯಲ್ಲೇ ಒಂದು ಹಂತದವರೆಗೆ ಶಿಕ್ಷಣವಿರಬೇಕು ಅದು ಮುಂದಿನ ಭವಿಷ್ಯಕ್ಕೆ ಬುನಾದಿ ಆಗುತ್ತದೆ ಎಂದರು.
ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ವೃದ್ಧಾಪ್ಯದ ಅನುಭವಗಳನ್ನು ಹಂಚಿಕೊಳ್ಳುತ್ತಾ ವಯಸ್ಸು ದೇಹಕ್ಕೆ ಆಗುವುದೇ ಹೊರತು ಮನಸ್ಸಿಗಲ್ಲ. ನಾವೆಲ್ಲಾ ಇನ್ನೂ ಯುವಕರು ಎಂದು ಹೇಳಿದರು.
ಎಸ್ಜಿಆರ್ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಶಿವು ಮಾತನಾಡಿ, ದೈನಂದಿನ ಜೀವನದಲ್ಲಿ ಗಂಡ- ಹೆಂಡತಿ ಇಬ್ಬರು ದುಡಿಯುವ ಅನಿವಾರ್ಯವಿದೆ. ಆದರೆ ಅದರ ಒತ್ತಡ ಅವಿಭಕ್ತ ಕುಟುಂಬದ ಮೇಲೆ ತುಂಬಾ ಪರಿಣಾ ಬೀರುತ್ತಿದೆ. ಹಳ್ಳಿಗಳಿಂದ ವಲಸೆ ಬರುವುದು ಹೆಚ್ಚಾಗಿದೆ. ನಗರ ಪ್ರದೇಶದಲ್ಲಿ ವಾಸಿಸುವವರು ಹಲವಾರು ಕಾರಣಗಳಿಂದ ತಮ್ಮ ಮನೆಯ ಹಿರಿಯರನ್ನು ವೃದ್ಧಾಶ್ರಮದ ವಾಸಿಗಳನ್ನಾಗಿ ಮಾಡಿದ್ದಾರೆ. ಅಜ್ಜಿ, ತಾತನ ಆರೈಕೆಯಲ್ಲಿ ಬೆಳೆಯಬೇಕಾದ ಮಕ್ಕಳು ಅವರ ಪ್ರೀತಿಯಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ, ಸಂಸ್ಥೆಯ ಅಧ್ಯಕ್ಷ ಶಿವಣ್ಣ ಮಾತನಾಡಿದರು.