'ಮೂಲ ಸಂವಿಧಾನ ಜಾರಿಯಾದರೆ ಭಾರತ ಮಾದರಿ ರಾಷ್ಟ್ರ'
ಹೊಳೆನರಸೀಪುರ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ಯಥಾವತ್ತಾಗಿ ಜಾರಿಗೆ ಬಂದಿದ್ದಲ್ಲಿ ಕೇವಲ 20 ವರ್ಷಗಳಲ್ಲಿ ನಮ್ಮ ದೇಶವು ಇಡೀ ವಿಶ್ವಕ್ಕೇ ಮಾದರಿಯಾಗಬಲ್ಲ ಉತ್ಕಷ್ಟ ಪ್ರಜಾಪ್ರಭುತ್ವದ ರಾಷ್ಟ್ರವಾಗುತ್ತಿತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಂಡ್ಯದ ವೆಂಕಟಗಿರಿಯಯ್ಯ ಅಭಿಪ್ರಾಯಪ್ಟಟರು.
ಪಟ್ಟಣದ ಶಿಕ್ಷಕರ ಭವನದಲ್ಲಿ ತಾಲೂಕು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ಇತ್ತೀಚೆಗೆ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 57ನೇ ಪರಿನಿರ್ವಾಣ ದಿನದ ಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೂಲ ಭಾರತೀಯ ಸಂಸ್ಕೃತಿಯ ದಮನ ಮಾಡಿದ ಮನುವಾದಿಗಳಿಂದಾಗಿ ಇಂದಿಗೂ ನಮ್ಮ ಭಾರತೀಯ ವ್ಯವಸ್ಥೆ ಅಸಮಾನತೆಯ ತೊಳಲಾಟದಲ್ಲಿಯೇ ಮುಳುಗಿ ಹೊರಬರಲಾರದೇ ನಲುಗುತ್ತಿದೆ ಎಂದು ವಿಷಾದಿಸಿದರು.
ನಾಗರೀಕತೆ ಮರೆತ ರಾಷ್ಟ್ರ: ನೈತಿಕ ಮೌಲ್ಯಗಳೇ ಸಾಮಾಜಿಕ ಪ್ರಗತಿಗೆ ಮೂಲಾಧಾರ ಎಂದು ಹೇಳಿದ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳು ಎಲ್ಲರಿಗೂ ಮಾದರಿಯಾಗಬೇಕಿದೆ ಎಂದ ಅವರು, 2500 ವರ್ಷಗಳ ಹಿಂದೆಯೇ ಹರಪ್ಪ ಮತ್ತು ಮಹೆಂಜಾದರೋ ಕಾಲದಲ್ಲಿಯೇ ಸಾಮಾಜಿಕ ಸಂಸ್ಕತಿಯಿಂದ ವ್ಯವಸ್ಥಿತವಾಗಿದ್ದ ಈ ದೇಶ, ಪಟ್ಟಭದ್ರ ಮನುವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಇಂದಿಗೂ ನಾಗರಿಕತೆಯನ್ನು ಮರೆತ ರಾಷ್ಟ್ರವಾಗಿದೆ ಎಂದರು.
ಪರಿವರ್ತನೆಯ ಹರಿಕಾರ: ವ್ಯಕ್ತಿ ಸ್ವಾತಂತ್ರ್ಯವನ್ನು ಪ್ರತಿಪಾದಿಸಿ, ತಮ್ಮ ನಾಯಕನ ಆಯ್ಕೆಯ ಹಕ್ಕನ್ನು ಪಡೆಯಲು ಹೋರಾಡಿದ ಅಂಬೇಡ್ಕರ್ ಅವರ ಹೋರಾಟ ಈ ಜನರಿಗೆ ಅಂಬೇಡ್ಕರ್ ಅವರ ಬದುಕಿನ ಕೊನೆಗಾಲದಲ್ಲಿಯೂ ನೆನಪಾಗದೇ ಹೋದದ್ದು ವಿಷಾದನೀಯ ಎಂದು ಹೇಳಿದರು.
ಶತ ಶತಮಾನಗಳಿಂದಲೂ ಹಕ್ಕುಗಳಿಂದ ವಂಚಿತರಾಗಿದ್ದ ಜನರಿಗೆ ಸಮಾನ ಹಕ್ಕುಗಳನ್ನು ನೀಡುವ ಹಾಗೂ ಅಸ್ಪೃಶ್ಯತೆಯ ವಿಮೋಚನೆಗೆ ಹೋರಾಡಿದ ಮಹಾನ್ ನಾಯಕ ಹಾಗೂ ಪರಿವರ್ತನೆಯ ಹರಿಕಾರ ಡಾ.ಬಿ.ಆರ್. ಅಂಬೇಡ್ಕರ್ ಎಂದು ಹೇಳಿದರು.
ಅಧಿಕಾರಿಗಳ ಢೋಂಗಿ ಮಾತು: ವಿದ್ಯೆ- ಅಸ್ಪಶ್ಯತೆ- ಅಸಮಾನತೆ ಹಾಗೂ ಹಸಿವಿನಿಂದ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಮ್ಮ ದೇಶ ಹೊರಬರಲಾಗಿಲ್ಲ ಎಂದು ವಿಷಾದಿಸಿದ ಅವರು, ಧರ್ಮ ಹಾಗೂ ದೇವರ ಹೆಸರಿನಲ್ಲಿ ನಮ್ಮ ಸಾಮಾಜಿಕ ಜೀವನದ ಮೇಲೆ ಕೊಡಲಿ ಪೆಟ್ಟು ನೀಡುತ್ತಲೇ, ಈ ದೇಶದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಎಲ್ಲ ವರ್ಗಗಳ ನಾಯಕರುಗಳೂ ತಮ್ಮ ಅಫಿಡವಿಟ್‌ಗಳಲ್ಲಿ ಜಾತಿಯನ್ನು ನಮೂದಿಸುವುದನ್ನು ಬಿಡದೇ, ಜಾತೀಯತೆಯನ್ನು ಹೋಗಲಾಡಿಸುವ ಹೋರಾಟದ ಮಾತಗಳನ್ನಾಡುತ್ತಾರೆ ಎಂದು ಅಧಿಕಾರಶಾಹಿಗಳ ನೀತಿಯನ್ನು ಖಂಡಿಸಿದರು.
ತಾಲೂಕು ಪರಿಶಿಷ್ಟ ಜಾತಿ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘಟನೆಯ ಪದಾಧಿಕಾರಿಗಳು ಬೌದ್ಧ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಕದಸಂಸಮಿತಿಯ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್, ಕಾರ್ಯದರ್ಶಿ ವೈ.ಎಸ್. ಸೋಮಯ್ಯ, ಉಪ-ಪ್ರಾಂಶುಪಾಲ ಬಿ.ಜೆ. ರಂಗೇಶ್, ತಾಪಂ ಸದಸ್ಯ ಸಿ.ಆರ್. ಮಂಜುನಾಥ್, ವೈದ್ಯ ವೆಂಕಟರಾಮು, ಸ್ಫೂರ್ತಿ ಡಿಇಡಿ ಕಾಲೇಜಿನ ಪ್ರಾಂಶುಪಾಲ ಎಂ.ಜೆ. ರತ್ನಾಕರ್ ಇತರರು ಇದ್ದರು. ಎನ್.ಎಸ್. ಯತೀಶ್ ರಾಯ್ ನಿರೂಪಿಸಿ, ಜಿಲ್ಲಾ ಸಂಚಾಲಕ ಎಚ್.ಸಿ. ಜಗದೀಶ್ ಸ್ವಾಗತಿಸಿದರು.