ಸಾಹಿತ್ಯ ಸಮಾಜದ ಏಳಿಗೆಗೆ ಪೂರಕವಾಗಿರಬೇಕು: ದುದ್ದ
ಕ.ಪ್ರ.ವಾರ್ತೆ ಹಾಸನ ಡಿ.15
ಯಾವುದೇ ಪ್ರಕಾರದ ಸಾಹಿತ್ಯಗಳು ಬಂದರೂ ಸಮಾಜದ ಸ್ವಾಸ್ಥತೆಗೆ ದಕ್ಕೆಯಾಗದಂತೆ ನೈಜತೆಯನ್ನು ತಿರುಚದಂತೆ ಸಮಾಜಮುಖಿ ಏಳಿಕೆಗೆಗೆ ಪೂರಕವಾಗಿರಬೇಕು ಎಂದು ದಲಿತ ಸಾಹಿತ್ಯ ಸಮೇಳನದ ಸಮ್ಮೇಳನಾಧ್ಯಕ್ಷ ಸಾಹಿತಿ ದುದ್ದ ಶ್ರೀನಿವಾಸ್ ಹೇಳಿದರು.
ದಲಿತ ಸಾಹಿತ್ಯ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ನಾಗಭೂಮಿ ವಿವಿದೋದ್ದೇಶ ಅಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷ ನುಡಿಗಳನ್ನಾಡಿದ ಅವರು, ನಾನಾ ಪ್ರಕಾರದ ಸಾಹಿತ್ಯಗಳನ್ನು ನೋಡಿದ್ದು, ಇತ್ತೀಚಿನ ಕಾಲಮಾನದಲ್ಲಿ ದಲಿತ ಸಾಹಿತ್ಯ ಹೆಚ್ಚು ಉಚ್ಛ್ರಾಯಸ್ಥಿತಿ ತಲುಪುತ್ತಿದೆ ಎಂದ ಅವರು, ಸಾಹಿತ್ಯ ಈ ಸಮಾಜದಲ್ಲಿ ಶತಮಾನಗಳಿಂದಲೂ ಯಾವ ವರ್ಗ, ಜಾತಿಗಳ ಸ್ಥಾನಮಾನಗಳನ್ನು ಸಾಮಾಜಿಕ ವ್ಯವಸ್ಥೆಯಲ್ಲಿ ನಿಷ್ಕರ್ಷಿಸುವ ನಿಯಂತ್ರಿಸುವ ಶಕ್ತಿಗಳಾಗಿವೆ ಎಂದರು.
ವಿಶಿಷ್ಟ ಧೋರಣೆ: ದಲಿತ ಸಾಹಿತ್ಯ ಎಂಬುದು ಕೇವಲ ನಮ್ಮ ಪರಿಸರದಲ್ಲಿ ಕಾಣಿಸಿಕೊಂಡದ್ದಲ್ಲ. ಇತ್ತೀಚೆಗೆ ಭಾರದಲ್ಲಿ ಸ್ಪಷ್ಟವಾಗಿ ರೂಪುತಾಳುತ್ತಿರುವ ಒಂದು ಜಾಗತಿಕ ಸಾಹಿತ್ಯ ಪ್ರಭೇದ. ಜಗತ್ತಿನಾದ್ಯಂತ ಎಚ್ಚೆತ್ತುಕೊಳ್ಳುತ್ತಿರುವ ಶತಶತಮಾನಗಳ ಕಾಲ ದಮನಕ್ಕೆ ಒಳಗಾದ ತಳಸಮುದಾಯದ ವಿಶಿಷ್ಟ ದನಿಯಾಗಿದೆ. ನವೋದಯ ಪ್ರಗತಿಶೀಲ ನವ್ಯ ಇತ್ಯಾದಿಗಳಿಗೆ ಹೇಗೆ ಗುರುತಿಸಬಲ್ಲ ನಿಲುವುಗಳಿವೆಯೋ ಹಾಗೆಯೆ ದಲಿತ ಸಾಹಿತ್ಯಕ್ಕೆ ವಿಶಿಷ್ಟವಾದ ಗುಣ ಲಕ್ಷಣ ಧೋರಣೆಗಳಿವೆ ಎಂದು ಹೇಳಿದರು.
ಒಳ್ಳೆಯದು: ಸಾಹಿತ್ಯಕ ಆಂದೋಲನಗಳು ಇರುವಂತೆ ರಭಸ, ಘೋಷಣೆಗಳಿವೆ. ಆದರೆ ಕೇವಲ ಘೋಷಣೆಗಳನ್ನು ಕೂಗಿದ್ದಷ್ಟಕ್ಕೆ ಯಾವುದೇ ಸಾಹಿತ್ಯ ಚಳವಳಿ ಮೌಲಿಕವಾಗುವುದಿಲ್ಲ. ಘೋಷಣೆಯಿಂದಾಚೆಗೆ ಸೈದ್ಧಾಂತಿಕ ನಿಲುವುಗಳಿವೆ. ಹೊಸ ಸಾಹಿತ್ಯ ಚಳವಳಿ ಹುಟ್ಟಿಕೊಂಡಾಗ ನೆಲೆ ನಿಂತ ಸಾಹಿತ್ಯದೊಂದಿಗೆ ಸಂಬಂಧಿಸಿದವರು ಅದನ್ನು ಗುಮಾನಿಯಿಂದ ನೋಡುವುದು ಸಹಜ. ಆದರೆ ನಮ್ಮ ಪರಿಸರದಲ್ಲಿ ಒಂದನ್ನೊಂದು ಹಾದುಕೊಂಡು ಹೋಗುವಂಥ ವಿಚಾರ ಪ್ರವಾಹಗಳಿದ್ದರೆ ಎಷ್ಟಿದ್ದರೆ ಅಷ್ಟು ಒಳ್ಳೆಯದು ಎಂದರು.
ಒಂದಕ್ಕೊಂದು ಪೂರಕ: ಒಂದು ಜನಾಂಗವನ್ನು ಜೀವಂತವಾಗಿಡುವುದಕ್ಕೆ ಮತ್ತು ಸೃಜನಶೀಲತೆಯನ್ನು ಕಾಪಾಡಿಕೊಳ್ಳುವುದಕ್ಕೆ ಸಾಹಿತ್ಯ ಅಗತ್ಯವಾಗಿದೆ. ದಲಿತರು ಈ ಸಮಾಜದಲ್ಲಿ ಕೇವಲ ಶೋಷಿತರಷ್ಟೆ ಅಲ್ಲ ಶೋಷಣೆಯ ಜತೆಗೆ ಅಮಾನವೀಯವಾದ ಹಿಂಸೆ ಕ್ರೌರ್ಯಗಳಿಗೆ ಒಳಗಾದವರು. ಈ ಸಮುದಾಯಕ್ಕೆ ವ್ಯಕ್ತಿತ್ವವೇ ಇಲ್ಲ ಎಂಬಂತೆ ನಡೆಯಿಸಿಕೊಳ್ಳಲ್ಪಟ್ಟವರು ಇವರು ಸಶಕ್ತರಾಗಬೇಕಾದರೆ ಸಾಹಿತ್ಯ ಮತ್ತು ಚಳವಳಿ ಇರಲೇ ಬೇಕು. ಸಾಹಿತ್ಯ ಮತ್ತು ಚಳವಳಿ ಒಂದಕ್ಕೊಂದು ಪೂರಕವಾಗಿದೆ ಎಂದರು.
ಅಸಮಾಧಾನ: ಆರ್ಥಿಕವಾಗಿ ಸದೃಢರಾಗಿರುವವರು ಮೇಲಿಂದ ಮೇಲೆ ದಲಿತರನ್ನು ಜೀತದಾಳುಗಳಾಗಿ ದುಡಿಸಿಕೊಳ್ಳುವ ಮುಖೇನ ಜೀತ ಸಂಸ್ಕೃತಿಯನ್ನು ಸೃಷ್ಟಿಸಿರುವುದು ಒಂದೆಡೆಯಾದರೆ, ತಮ್ಮ ಬದುಕಿನ ದುರಂತಕ್ಕೆ ಪ್ರತಿಭಟಿಸಲಾರದ ಮೂಕವೇದನೆಯೇ ತಮ್ಮ ಬಾಳಿಗಂಟಿದ ಪಾಪ, ಶೋಷಣೆ ಮತ್ತು ಅದರಿಂದ ಬಿಡಿಸಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿಯಲ್ಲಿ ಬೆಂದು ಹೋದ ದಲಿತ ಜನರು ಮುಖ ಧ್ವನಿಯಲ್ಲಿ ಸಾಗುವುದನ್ನು ನೋಡಬಹುದು. ಇದು ಕೇವಲ ಜಿಲ್ಲೆಯ ಯಾವುದೇ ಒಂದು ಭಾಗದ ಕಥೆಯಾಗಿರದೆ ಇಡೀ ದಲಿತ ಸಮುದಾಯವನ್ನು ತನ್ನ ಬಾಹುಗಳಿಂದ ಆವರಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಲಿತ ಬಂಡಾಯ ಸಾಹಿತ್ಯದ ನೆಲೆಯಲ್ಲಿ ದಾಖಲಿಸುವ ಮೂಲಕ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದ ಕೊಡುಗೆಯನ್ನು ಅನೇಕ ದಲಿತಪರ ಚಿಂತಕರು, ಸಾಹಿತಿಗಳು, ದಲಿತ ನಾಯಕರು ಕೊಟ್ಟಿದ್ದಾರೆ ಎಂದರು.