6 ಕೋಟಿ ವೆಚ್ಚದಲ್ಲಿ ನೀರಿನ ಸಂಪರ್ಕ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ. 17
ಪಟ್ಟಣದಾದ್ಯಂತ ಇರುವ ಎಲ್ಲಾ ರಸ್ತೆಗಳಿಗೂ ರು. 6 ಕೋಟಿ ವೆಚ್ಚದಲ್ಲಿ ನೂತನ ನೀರಿನ ಮಾರ್ಗವನ್ನು ಅಳವಡಿಸಿ, ಅವುಗಳಿಂದ ಎಲ್ಲಾ ಮನೆಗಳಿಗೂ ನೂತನವಾಗಿ ನೀರಿನ ಸಂಪರ್ಕ ಕಲ್ಪಿಸುವ ಯೋಜನೆಯೊಂದು ಸಿದ್ಧಗೊಳ್ಳುತ್ತಿದ್ದು, ಶೀಘ್ರವೇ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.
ಪಟ್ಟಣದ ಅರಕಲಗೂಡು ರಸ್ತೆಯಲ್ಲಿನ ಹೇಮಾವತಿ ನದಿ ತೀರದಲ್ಲಿ ರು. 2.83 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ 9 ಮಿಲಿಯನ್ ಲೀಟರ್ ನೀರೆತ್ತುವ ಸಾಮರ್ಥ್ಯದ ನೂತನ ಜಾಕ್‌ವೆಲ್ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ದೂರದೃಷ್ಟಿತ್ವದ ಕಾಮಗಾರಿ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ 6 ಮಿಲಿಯನ್ ಲೀಟರ್ ನೀರೆತ್ತುವ ಸಾಮರ್ಥ್ಯದ ಜಾಕ್‌ವೆಲ್ ನಿರ್ಮಿಸಲಾಗುತ್ತಿದ್ದು, ಇದು 9 ಮಿಲಿಯನ್‌ಗೆ ಹೆಚ್ಚಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ಇದು ಮುಂದಿನ 30 ವರ್ಷಗಳ ದೂರದೃಷ್ಟಿತ್ವದ ಕಾಮಗಾರಿಯಾಗಿದೆ ಎಂದು ಅವರು ತಿಳಿಸಿದರು.
ಪಂಪ್ ಹೌಸ್‌ಗೆ ಪೈಪ್‌ಲೈನ್: ಪುರಸಭೆಯ ಕೆಎಂಆರ್‌ಪಿ ಯೋಜನೆಯಡಿಯಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಪಟ್ಟಣ ವ್ಯಾಪ್ತಿಯ ಎಲ್ಲಾ ನಾಗರಿಕರಿಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಈಗಾಗಲೇ ಅರಕಲಗೂಡು ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸೇತುವೆ ಹಾಗೂ ಬ್ಯಾರೇಜ್‌ನಿಂದಾಗಿ ಪಟ್ಟಣಕ್ಕೆ ಗರಿಷ್ಠಮಟ್ಟದ ನೀರು ಶೇಖರಣೆಗೊಳ್ಳಲಿದ್ದು, ಇದನ್ನು ನೂತನ ಜಾಕ್‌ವೆಲ್ ಸಹಾಯದಿಂದ ಈಗಿರುವ ಹಳೆಯ ಪಂಪ್‌ಹೌಸ್‌ಗೆ ಸಾಗಿಸಲು ಪೈಪ್‌ಲೈನ್ ಅಳವಡಿಸಲಾಗುವುದು ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಪ್ರಸಕ್ತವಾಗಿ ಸುಮಾರು 4000 ಸಂಪರ್ಕಗಳಿದ್ದು, ಇದನ್ನು ಇನ್ನೂ 2000 ಹೆಚ್ಚಿಸಿ ಪಟ್ಟಣದಾದ್ಯಂತ ಅವಿರತವಾಗಿ ನೀರು ಸರಬರಾಜು ಕಲ್ಪಿಸಬಲ್ಲ ಯೋಜನೆಯನ್ನು ಸಿದ್ದಗೊಳಿಸಲಾಗುತ್ತಿದೆ ಎಂದ ಅವರು ಈ ಕಾಮಗಾರಿಯನ್ನು ಕೇವಲ 15ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದರು.
ಪುರಸಭೆ ಅಧ್ಯಕ್ಷೆ ಎಚ್.ಆರ್.ಕಲಾವತಿ, ಸದಸ್ಯ ಎಚ್.ವಿ. ಪುಟ್ಟರಾಜು, ಮುಫೀದ್ ಆಲಿ, ಪುರಸಭೆಯ ಆರೋಗ್ಯಾಧಿಕಾರಿ ವಸಂತಕುಮಾರ್, ಕೆಎಂಪಿಯ ಹೇಮಂತ್, ಪರಿಸರ ಎಂಜಿನಿಯರ್ ಅರ್ಚನಾ ಆರಾಧ್ಯ ಇತರರು ಇದ್ದರು.