ಅಪಾರ ಕಾರ್ಯಕರ್ತರು, ಹಿತೈಷಿಗಳ ನಡುವೆ ಎಚ್.ಡಿ. ರೇವಣ್ಣ ಹುಟ್ಟುಹಬ್ಬ
ಕ.ಪ್ರ.ವಾರ್ತೆ ಹಾಸನ ಡಿ. 17
ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜೆಡಿಎಸ್ ಕಾರ್ಯಕರ್ತರು, ಹಿತೈಷಿಗಳು, ಮುಖಂಡರುಳು, ಪಕ್ಷದ ಯುವ ಕಾರ್ಯಕರ್ತರ ಜಯಕಾರ ಹಾಗೂ ಹಷೋದ್ಗಾರಗಳ ನಡುವೆ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ತಮ್ಮ56ನೇ ಜನ್ಮ ದಿನವನ್ನು ಮಂಗಳವಾರದಂದು ಪಟ್ಟಣದಲ್ಲಿನ ತಮ್ಮ ನಿವಾಸದಲ್ಲಿ ಸಂಭ್ರಮದಿಂದ ಆಚರಿಸಿಕೊಂಡರು.
ಸಾಮಾನ್ಯವಾಗಿ ತಮ್ಮ ಪ್ರತಿ ಹುಟ್ಟುಹಬ್ಬವನ್ನೂ ಪಟ್ಟಣದಲ್ಲಿಯೇ ಆಚರಿಸಿಕೊಳ್ಳುವ ಸಂಪ್ರದಾಯದಂತೆಯೇ ಈ ಬಾರಿ ಕೂಡ ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ಹುಟ್ಟುಹಬ್ಬವನ್ನು ತಮ್ಮ ಕಾರ್ಯಕರ್ತರ ಪಡೆಯ ನಡುವೆ ಇಲ್ಲಿಯೇ ಆಚರಿಸಿಕೊಂಡರು. ತಮ್ಮ ಜನ್ಮದಿನಕ್ಕೆ ಶುಭಾಷಯ ಕೋರಲು ದೂರದ ಊರುಗಳಿಂದ ಆಗಮಿಸಿದ್ದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಖುದ್ದಾಗಿ ಮಾತನಾಡಿಸಿ ಶುಭಾಶಯ ಸ್ವೀಕರಿಸಿದರು.
ತಮ್ಮ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಬೆಂಗಳೂರಿನಿಂದ ಆಗಮಿಸಿದ ರೇವಣ್ಣ ಅವರು ತಮ್ಮ ಆಗಮನಕ್ಕಾಗಿಯೇ ಕಾಯುತ್ತಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರ ನಡುವೆಯೇ ತಮ್ಮ ನಿವಾಸದ ಮುಂಭಾಗದಲ್ಲಿಯೇ ನೂರಾರು ಅಭಿಮಾನಿಗಳ ಅಭಿಮಾನದ ಹಾರ ಹಾಗೂ ಶಾಲುಗಳ ಮಹಾಪೂರವನ್ನು ಸ್ವೀಕರಿಸಿದರಲ್ಲದೇ, ಬೇರೆ ಊರುಗಳಿಂದ ತಮ್ಮ ಅಭಿಮಾನದ ನಾಯಕನಿಗೆ ಶುಭ ಕೋರಲು ವಿವಿಧ ಮಾದರಿಗಳಲ್ಲಿ ತಯಾರಿಸಲಾಗಿದ್ದ ಬೃಹತ್ ಗಾತ್ರದ ಕೇಕ್ಗಳೊಂದಿಗೆ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರುಗಳ ಜೊತೆಗೂಡಿ ಕೇಕ್ ಕತ್ತರಿಸಿ ನೆರೆದಿದ್ದ ಎಲ್ಲಾ ಅಭಿಮಾನಿ ಕಾರ್ಯಕರ್ತರಿಗೂ ಸಿಹಿ ಶಾಸಕರು ಹಾಗೂ ಅವರ ಪತ್ನಿ ಭವಾನಿ ಮತ್ತು ಪುತ್ರ ಪ್ರಜ್ವಲ್ ಅವರು ಹಂಚಿದರು.
ಶಾಸಕ ಎಚ್.ಡಿ. ರೇವಣ್ಣ ಅವರಿಗೆ ಶುಭಕೋರುವ ಸಲುವಾಗಿ ಹಿಂದಿನ ದಿನದಿಂದಲೇ ಶಾಸಕರ ನಿವಾಸವೂ ಸೇರಿದಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಶುಭಾಶಯ ಕೋರುವ ಹತ್ತಾರು ಬೃಹತ್ ಗಾತ್ರದ ಕೇಕ್ಗಳನ್ನು ಕಾರ್ಯಕರ್ತರುಗಳಲ್ಲದೇ, ಪುರಸಭೆ, ತಾಲೂಕು ಪಂಚಾಯಿತಿಯ ಪಕ್ಷದ ಚುನಾಯಿತ ಪ್ರತಿನಿಧಿಗಳೂ ಸಹ ಹಾಕಿದ್ದು ಕಂಡುಬಂತು. ವಿಶೇಷವಾಗಿ ತಮ್ಮ ನೆಚ್ಚಿನ ಜನನಾಯಕನಿಗೆ ಶುಭಾಷಯ ಕೋರಲು ವಿವಿಧ ನಗರಗಳ ಮುಖಂಡರುಗಳೂ ಸಹ ಫ್ಲೆಕ್ಸ್ಗಳನ್ನು ಪಟ್ಟಣದಲ್ಲಿ ತಂದು ತೂಗುಹಾಕಿದ್ದು ಗಮನ ಸೆಳೆಯಿತು.
ಪಟ್ಟಣದಲ್ಲಿನ ಶಾಸಕರ ನಿವಾಸಕ್ಕೆ ಶುಭಕೋರಲು ಜಿಲ್ಲೆಯ ನಾನಾ ತಾಲೂಕುಗಳಿಂದಲೂ ಹಲವಾರು ಮುಖಂಡರುಗಳು ಹಾಗೂ ಕಾರ್ಯಕರ್ತರು ಜಮಾಯಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ಹಾಸನ ಹಾಗೂ ಬೇಲೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರುಗಳು ಹಾಗೂ ಅಭಿಮಾನಿ ಕಾರ್ಯಕರ್ತರಲ್ಲದೇ, ಶಾಸಕ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ಅವರ ಅಭಿಮಾನಿ ಯುವಪಡೆ ಆಗಮಿಸಿ ಶುಭಕೋರಿತು. ತಮ್ಮ ಜನ್ಮದಿನಕ್ಕೆ ಶುಭಾಷಯ ಕೋರಲು ಆಗಮಿಸಿದ್ದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ರೇವಣ್ಣ ಅವರ ಪತ್ನಿ ಭವಾನಿ ಹಾಗೂ ಪುತ್ರ ಪ್ರಜ್ವಲ್ ಅವರು ಊಟದ ವ್ಯವಸ್ಥೆಯನ್ನು ಖುದ್ದಾಗಿ ನಿಂತು ನಿರ್ವಹಿಸಿದ್ದು ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಇಲ್ಲಿನ ಪುರಸಭೆ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳೂ ಆಗಮಿಸಿ ಶಾಸಕ ಎಚ್.ಡಿ.ರೇವಣ್ಣ ಅವರ ಜನ್ಮದಿನಕ್ಕೆ ಶುಭಾಷಯ ಕೋರಿದರು.
ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ
ಹಾಸನ: ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ 57ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪಕ್ಷದವತಿಯಿಂದ ನಗರದ ನೀರುವಾಗಿಲು ಶ್ರೀ ಅಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ನೀರುವಾಗಿಲು ಅಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಪರ ಘೋಷಣೆ ಕೂಗಿದರು. ನಂತರ ಈಡುಗಾಯಿ ಒಡೆದು, ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಹಾರೈಕೆ: ರೇವಣ್ಣ ಅಭಿಮಾನಿಗಳ ಸಂಘದವತಿಯಿಂದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ದೇವಾಲಯದ ಮುಂಭಾಗ ಈಡುಗಾಯಿ ಹೊಡೆದು ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಮುಖಂಡರು ನಾಡಿನ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಎಚ್.ಡಿ. ರೇವಣ್ಣ ಸಚಿವರಾಗಿದ್ದ ಅವಧಿಯಲ್ಲಿ ನಾಡು ಮೆಚ್ಚುವ ಕೆಲಸ ಮಾಡಿದ್ದಾರೆ. ಅವರಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ. ಇದಕ್ಕಾಗಿ ಭಗವಂತ ಇನ್ನಷ್ಟು ಶಕ್ತಿ, ಆಯುರಾರೋಗ್ಯ ನೀಡಲಿ ಎಂದು ಹಾರೈಸಿದರು.
ಶಾಸಕ ಎಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಮಾಜಿ ಶಾಸಕ ಬಿ.ವಿ. ಕರೀಗೌಡ, ನಗರಸಭೆ ಸದಸ್ಯ ಪ್ರಸನ್ನ ಕೃಷ್ಣಮೂರ್ತಿ, ವಾಸು, ಎಚ್.ಎಸ್. ರಘು, ಜಯಂತ್, ಕುಮಾರ್ ಹಾಗೂ ಇತರರು ಇದ್ದರು.