ದುದ್ದ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಧರಣಿ
ಗಂಡಸಿ (ಅರಸೀಕೆರೆ ತಾ.) ಡಿ. 17
ದುದ್ದ ರಸ್ತೆ ಕೆಲಸ 15 ದಿನಗಳೊಳಗೆ ಆರಂಭಿಸಿದಿದ್ದರೆ ಸಿ.ಎಂ. ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಶಾಸಕ ಕೆ.ಎಂ. ವಲಿಂಗೇಗೌಡ ಎಚ್ಚರಿಕೆ ನೀಡಿದರು. ಗಂಡಸಿಯ ಶ್ರೀ ಶಂಭುಲಿಂಗೇಶ್ವರ ವಿದ್ಯಾಸಂಸ್ಥೆಯು ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಶಾಲೆಯ ಸುವರ್ಣ ಸಂಭ್ರಮ ಮತ್ತು ಕಾಲೇಜಿನ ರಜತ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ನೀರಾವರಿ ಇಲ್ಲದೆ ಈ ಪ್ರದೇಶಕ್ಕೆ ಹೇಮಾ ವತಿಯಿಂದ ಪೈಪ್‌ಲೈನ್ ಮುಖಾಂತರ ನೀರು ಹರಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು. ಹಾಸನ- ತಿಪಟೂರು ರಸ್ತೆಯ ಕಾಮಗಾರಿ ಕೇಂದ್ರ ಸರ್ಕಾರದ 47 ಕೋಟಿ ರೂ. ರಾಜ್ಯ ಸರ್ಕಾರದ ರು. 45 ಕೋಟಿ ಒಟ್ಟು ರು. 92 ಕೋಟಿಗಳ ಕಾಮಗಾರಿ ಕೆಲಸ ಅಭಿಜಿತ್ ಕಂಪನಿಯು ಆರಂಭಿಸಿದ್ದು, ಕಾರಣಾಂತರಗಳಿಂದ ಕೆಲಸವು ಸ್ಥಗಿತಗೊಂಡಿದ್ದು, ಈ ಕಾಮಗಾರಿ ಕೆಲಸ 15 ದಿನದೊಳಗೆ ಆರಂಭಿಸದಿದ್ದರೆ ಸಿದ್ದರಾಮಯ್ಯನವರ ಮನೆ ಮುಂದೆ ಧರಣಿ ನಡೆಸುವುದಾಗಿ ಹೇಳಿದರು.
ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್. ಎನ್. ಮಲ್ಲೇಶಗೌಡ ಅವರು ಆದಿಚುಂಚನಗಿರಿ ಕ್ಷೇತ್ರ ಕುರಿತು ಶಿಕ್ಷಣ ಕ್ಷೇತ್ರದಲ್ಲಿ ಈ ಕ್ಷೇತ್ರ ಮಹತ್ತರ ಸಾಧನೆ ಮಾಡಿದೆ. ಈ ಕ್ಷೇತ್ರದ 71ನೇ ಪೀಠಾಧ್ಯಕ್ಷರಾಗಿ ಬಾಲಗಂಗಾಧರನಾಥ ಸ್ವಾಮೀಜಿ ಯವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಮಹತ್ವ ಕೊಟ್ಟಿರುವುದು ಇಲ್ಲಿ ಸ್ಮರಿಸಬಹುದಾಗಿದೆ. 72ನೇ ಪೀಠಾಧ್ಯಕ್ಷರಾಗಿರುವ ನಿರ್ಮಲಾ ನಂದ ಸ್ವಾಮೀಜಿಯವರು ಸಹ ಹೆಚ್ಚಿನ ವಿದ್ಯಾಭ್ಯಾಸ ಪಡೆದು ಒಬ್ಬ ವಿಜ್ಞಾನಿ ಆಗಬಹುದಿತ್ತು. ಆದರೆ ಎಲ್ಲಾ ಭಾಗ್ಯಗಳನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿ, 72ನೇ ಪೀಠಾಧ್ಯಕ್ಷರಾಗಿರುವುದು ನಮ್ಮ ಸುದೈವ ಎಂದರು.
ಸುವರ್ಣ ಸಿರಿಯ ಕಟ್ಟಡದ ಉದ್ಘಾಟನೆ ನೆರವೇರಿಸಿದ ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಸಂಸ್ಥೆಯು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ಕೊಟ್ಟಿದೆ. ಅಂತೆಯೇ 450ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳನ್ನು ತೆರೆದು ವಿದ್ಯಾಭ್ಯಾಸ ನೀಡುತ್ತಿರುವುದು ಸಾಕ್ಷಿ ಯಾಗಿದೆ ಎಂದರು. ನಂತರ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.