ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೃತ್ತಿ ಶಿಕ್ಷಣ ಪ್ರವೇಶ ಕಾಯ್ದೆಗೆ ವಿರೋಧ

Srinivasa Murthy VN
Updated On : 17 Dec 2013, 11:32 am

ಕ.ಪ್ರ.ವಾರ್ತೆ ಹಾಸನ ಡಿ. 17
ವೃತ್ತಿ ಶಿಕ್ಷಣ ಸಂಸ್ಥೆಗಳ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ವೃತ್ತಿ ಶಿಕ್ಷಣ ಮಾರಾಟ ಮಾಡಲು ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ, ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ದಲಿತ, ಹಿಂದುಳಿದವರಿಗೆ ಅನ್ಯಾಯ: ಕರ್ನಾಟಕ ವೃತ್ತಿ ಶಿಕ್ಷಣ ಹೆಸರಿನಲ್ಲಿ ಇಡೀ ವೃತ್ತಿ ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಲು ಸರ್ಕಾರ ಹೊರಟಿದೆ. ಕಾಯ್ದೆಯನ್ನು ಜಾರಿ ಮಾಡುವ ಮೂಲಕ ರಾಜ್ಯ ಸರ್ಕಾರ ವೃತ್ತಿ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳ ಕನಸಿಗೆ ಬಂಗ ತಂದಿದೆ. ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್‌ಗಳಿಗೆ ಶುಲ್ಕವನ್ನು ಹೆಚ್ಚಿಸುವುದರ ಜೊತೆಯಲ್ಲಿ ಖಾಸಗಿ ಕಾಲೇಜುಗಳಿಗೆ ಸಿಇಟಿ ಮೂಲಕ ಪ್ರವೇಶ ಪ್ರಕ್ರಿಯೆ ಕೈ ಬಿಡಲು ರಾಜ್ಯ ಸರ್ಕಾರ ಮುಂದಾಗಿದೆ. ಸರ್ಕಾರದ ಈ ನೀತಿಯಿಂದಾಗಿ ಲಕ್ಷಾಂತರ ದಲಿತ-ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶೈಕ್ಷಣಿಕ ವರ್ಷದಿಂದ ಈ ಕಾಯ್ದೆಯನ್ನು ಸರ್ಕಾರ ಜಾರಿ ಮಾಡಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಹೇಳಿದ್ದಾರೆ. ಕಾಯ್ದೆ ಪ್ರಕಾರ ಶುಲ್ಕ ನಿಗದಿ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯು ಕಾಲೇಜಿನ ಮೂಲಭೂತ ಸೌಲಭ್ಯಗಳ ಆಧಾರದಲ್ಲಿ ಶುಲ್ಕವನ್ನು ನಿಗದಿ ಮಾಡಿತ್ತದೆ. ರಾಜ್ಯದಲ್ಲಿ 10 ಸರ್ಕಾರಿ ಮತ್ತು 13 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. 9 ಡೀಮ್ಡ್ ವಿವಿಗಳಿದ್ದು, 12 ಸರ್ಕಾರಿ, 9 ಅನುದಾನಿತ 177 ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿವೆ.
ದುಬಾರಿ ಶುಲ್ಕ: ರಾಜ್ಯದಲ್ಲಿ ಖಾಸಗಿ ಕಾಲೇಜುಗಳೇ ಹೆಚ್ಚಾಗಿರುವುದರಿಂದ ಈ ಕಾಯ್ದೆಯಿಂದಾಗಿ ವಿದ್ಯಾರ್ಥಿಗಳು ಖಾಸಗಿ ಸಂಸ್ಥೆಗಳು ನಿಗದಿ ಪಡಿಸುವ ಶುಲ್ಕವನ್ನು ಭರಿಸಬೇಕಾಗುತ್ತದೆ. ಕಳೆದ ಬಾರಿ ವೈದ್ಯಕೀಯ ಖಾಸಗಿ ಕಾಲೇಜಿನ ಸರ್ಕಾರಿ ಕೋಟಾ ಸೀಟಿಗೆ ರು. 46 ಸಾವಿರ ಪಡೆಯಲಾಗುತ್ತಿತ್ತು. ಆದರೆ ಈ ಕಾಯ್ದೆಯಿಂದಾಗಿ ಖಾಸಗಿ ಕಾಲೇಜುಗಳು ರು. 1 ಲಕ್ಷದಿಂದ ರು. 2 ಲಕ್ಷ ನಿಗದಿ ಮಾಡುವ ಸಾಧ್ಯತೆಗಳಿವೆ ಎಂದು ಆರೋಪಿಸಿದರು.
ಭವಿಷ್ಯಕ್ಕೆ ಕೊಳ್ಳಿ: ಈ ಕಾಯ್ದೆಯು ಖಾಸಗಿ ಕಾಲೇಜುಗಳನ್ನು ನಿಯಂತ್ರಿಸುವ ಬದಲು ವ್ಯಾಪಕ ಹಣ ವಸೂಲಿ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡುತ್ತಿದೆ. ಈಗಿರುವ ಸರ್ಕಾರಿ ಸಿಇಟಿ ಪ್ರವೇಶ ಪರೀಕ್ಷೆಯು ಒಂದಿಷ್ಟು ಬಡವರು, ದಲಿತರು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸರ್ಕಾರಿ ಸಿಇಟಿಯನ್ನು ರದ್ದುಪಡಿಸಿರುವುದು ಈ ಕಾಯ್ದೆ ಖಾಸಗಿ ಕಾಲೇಜುಗಳಿಗೆ ಪರೀಕ್ಷೆ ಹೆಸರಿನಲ್ಲಿ ಅನೇಕ ಅಕ್ರಮಗಳಿಗೆ ಅವಕಾಶ ಕಲ್ಪಿಸುವ ಮುಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದೆ ಎಂದು ದೂರಿದರು.
ಟೀಕೆ: ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆಯಲ್ಲಿ ಯಾವುದೇ ತಪ್ಪುಗಳಿಲ್ಲ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಕಾಯ್ದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಮುಂದಿನ ವರ್ಷದಿಂದ ಸರ್ಕಾರ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸುತ್ತೇವೆ. ಆದ್ದರಿಂದ 900 ಸೀಟುಗಳು ಹೆಚ್ಚಳವಾಗುತ್ತದೆ. ಆದ್ದರಿಂದ ಸೀಟುಗಳು ಖೋತಾ ಆಗಲಿವೆ ಎಂದು ಭಯಪಡುವ ಅವಶ್ಯಕತೆ ಇಲ್ಲ ಎಂದು ಸಚಿವರು ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ. ವೃತ್ತಿಶಿಕ್ಷಣವನ್ನು ಖಾಸಗಿಯವರಿಗೆ ಮಾರಾಟ ಮಾಡಲು ಮತ್ತು ಕಾಮೆಡ್- ಕೆ ತಾಳಕ್ಕೆ ತಕ್ಕಂತೆ ಸರ್ಕಾರ ಕುಣಿಯುತ್ತಿದೆ ಎಂದು ಟೀಕಿಸಿದರು.
ವಿದ್ಯಾರ್ಥಿಗಳ ಹಿಂದೇಟು: ಕಾಲೇಜುವಾರು ಶುಲ್ಕ ನಿಗದಿ ಮಾಡಲು ಹೊರಟಿರುವುದು ಸಾಮಾಜಿಕ, ಶೈಕ್ಷಣಿಕ ಅಸಮಾನತೆಗೆ ದಾರಿ ಮಾಡಿಕೊಡಲಿದೆ. ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವುದಾಗಿ ಹೇಳುತ್ತಿರುವ ಸಿದ್ದರಾಮಯ್ಯನವರ ಸರ್ಕಾರ ವೃತ್ತಿ ಶಿಕ್ಷಣವನ್ನು ಉಳ್ಳವರಿಗೆ ಮಾತ್ರ ನೀಡಲು ಮುಂದಾಗಿರುವುದು ಶಿಕ್ಷಣ ವಿರೋಧಿ ನೀತಿಯಾಗಿದೆ ಎಂದು ಖಂಡಿಸಿದ ಪ್ರತಿಭಟನಾಕಾರರು, ಈಗಿರುವ ಶುಲ್ಕಗಳನ್ನು ಭರಿಸಲಾಗದೆ ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ.
ಆರೋಪ: ಪ್ರಸಕ್ತ ವರ್ಷದಲ್ಲಿ ಸುಮಾರು 22 ಸಾವಿರ ಎಂಜಿನಿಯರಿಂಗ್, ಮೆಡಿಕಲ್ ಸೀಟ್‌ಗಳು ಖಾಲಿ ಉಳಿದಿವೆ. ಈಗ ಮತ್ತೆ ಶುಲ್ಕವನ್ನು ಏರಿಸಲು ಹೊರಟಿರುವಂತಹ ಸರ್ಕಾರದ ನಿರ್ಧಾರ ಬಾರಿ ಅಪಾಯಕಾರಿಯಾಗಿದೆ. ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಒತ್ತಡಕ್ಕೆ ಮಣಿದು ಬಡ, ದಲಿತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯವನ್ನು ಮೂಲೆಗೆ ಹಾಕಿದೆ. ಇದರಿಂದ ವಿದ್ಯಾರ್ಥಿಗಳು ವೃತ್ತಿ ಶಿಕ್ಷಣದಿಂದ ವಂಚಿತರಾಗಲಿದ್ದಾರೆ ಎಂದು ಆರೋಪಿಸಿದರು.
ಆಕ್ರೋಶ: ವೃತ್ತಿ ಶಿಕ್ಷಣ ಸೀಟಿಗೆ ಇತ್ತೀಚೆಗೆ ಬೇಡಿಕೆಗಳು ಹೆಚ್ಚಾಗಿರುವುದರಿಂದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾಗಿ ನಿಲ್ಲುವಂತಹ ಪ್ರಯತ್ನವನ್ನು ಮಾಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಭವಿಷ್ಯವನ್ನು ಉಜ್ವಲಗೊಳಿಸಲು ಸರ್ಕಾರ ಮುಂದಾಗಿದೆ. ಇದು ಲಕ್ಷಾಂತರ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದ್ದರಿಂದ ಕೂಡಲೇ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ ಕಾಯ್ದೆಯನ್ನು ಕೈಬಿಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಎಂ.ಜಿ. ಪೃಥ್ವಿ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್, ನವೀನ್, ಮನೋಜ್, ಪ್ರವೀಣ್ ಕುಮಾರ್, ರಾಜು, ಮೋಹನ್, ವಿಜಯ್, ಕುಮಾರ್, ವೆಂಕಟೇಶ್, ಪ್ರಕಾಶ್, ಕಿರಣ್, ಪುರುಷೋತ್ತಮ್, ಸೌಮ್ಯ, ಮಂಜುಳ, ಪ್ರೀಯ, ಸ್ವಾತಿ, ಸುಮತಿ, ಕಾವ್ಯ, ಪೂರ್ಣಿಮಾ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement