ಶಿಕ್ಷಣ ಹಕ್ಕು ಕಾಯ್ದೆ ಸಮರ್ಪಕ ಜಾರಿಗೆ ಆಗ್ರಹ
ಕ.ಪ್ರ.ವಾರ್ತೆ ಹಾಸನ ಡಿ. 17
ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ)ಯಲ್ಲಿರುವ ಲೋಪಗಳನ್ನು ಸರಿಪಡಿಸಿ ಸಮರ್ಪಕವಾಗಿ ಜಾರಿಗೊಳಿಸುವಂತೆ ಜಿಲ್ಲಾ ಆರ್ಟಿಇ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸಮಿತಿಯ ಅಧ್ಯಕ್ಷ ಎಚ್.ಟಿ. ಶ್ರೀನಿವಾಸ್ ಮಾತನಾಡಿ, ಆರ್ಟಿಇ ಉಚಿತ ಮತ್ತು ಕಡ್ಡಾಯ ಶಿಕ್ಷಣ 2009 ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದು, ಆರ್ಥಿಕವಾಗಿ ಹಿಂದುಳಿದವರ ಹಾಗೂ ಎಸ್ಸಿ ಎಸ್ಟಿ ಮತ್ತು ಕೆಳವರ್ಗದವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿದೆ. ಆದರೆ ಈ ವ್ಯವಸ್ಥೆಯಲ್ಲಿ ಕೆಲವು ಲೋಪದೋಷಗಳಿದ್ದು, ಅವುಗಲನ್ನು ಸರಿಪಡಿಸದಿದ್ದಲ್ಲಿ, ಬಡಜನರ ಹಾಗೂ ಕೊಳಗೇರಿ ಜನರ ಮಕ್ಕಳ ಶಿಕ್ಷಣದ ಕನಸು ನನಸಾಗುತ್ತದೆ.
ವಂಚಿತರಾಗಿದ್ದಾರೆ: ಈಗ ನಿಗದಿ ಪಡಿಸಿರುವ ನೆರೆ, ಹೊರೆ ಎಂಬ ಪದದ ಅರ್ಥವನ್ನು ಸರಿಯಾಗಿ ಅರ್ಥಹಿಸಿ ವಾರ್ಡ್ ನಿಗದಿಗೊಳಿಸಬೇಕು ಹಾಗೂ ಆದಾಯ ನಿಗದಿಯಾಗಿರುವಂತೆ ರು. 1 ಲಕ್ಷ ಒಳಗೆ ಇರುವ ಬಡವರ ಮಕ್ಕಳಿಗೆ ಆರ್ಟಿಇ ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ಕೆಲವರು ಸ್ವಾರ್ಥಕ್ಕಾಗಿ ಸುಳ್ಳು ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳ ಪ್ರಮಾಣ ಪತ್ರವನ್ನು ನೀಡಿರುವುದರಿಂದ ದುರ್ಬಲ ವರ್ಗದವರು, ಶೋಷಿತರು, ಅವಕಾಶ ವಂಚಿತರು, ಆರ್ಟಿಇ ಸೀಟ್ ಪಡೆಯುವಲ್ಲಿ ವಂಚಿತರಾಗಿದ್ದಾರೆ ಎಂದರು.
ಬಡಮಕ್ಕಳಿಗೆ ದಾಖಲಾತಿ ನೀಡಿ: ಎಲ್ಲಾ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ದೃಢೀಕರಣ ಪ್ರಮಾಣ ಪತ್ರಗಳಿಂದ ಎಚ್ಚರ ವಹಿಸಿ, ಆದಾಯ ಪ್ರಮಾಣ ಪತ್ರ ಹಾಗೂ ವಾಸಸ್ಥಳ ಪ್ರಮಾಣ ಪ್ತರ ನೀಡಬೇಕು. ಕಳೆದ ಬಾರಿ ನಡೆದ ಲೋಪಗಳು ಈ ಬಾರಿ ಮರುಕಳುಹಿಸಬಾರದು. ಕೆಲವು ವಾರ್ಡ್ಗಳಲ್ಲಿ 2 ಹಾಗೂ 3 ಶಾಲೆಗಳಿದ್ದು, ಈ ಹೆಚ್ಚುವರಿ ಶಾಲೆಗಳನ್ನು ಬೇರೆ ವಾರ್ಡ್ಗಳಿಗೆ ನಿಯೋಜಿಸಲು ಶಿಕ್ಷಣ ಇಲಾಖೆಯು ಕ್ರಮಕೈಗೊಳ್ಳಬೇಕು. ಸಿ ಬಿ ಎಸಸ್ಸಿ, ಎಸ್ ಇ ಶಾಲೆಗಳು ಕೂಡ ಆರ್ಟಿಇ ವ್ಯಾಪ್ತಿಗೆ ಒಳಪಟ್ಟಿದ್ದು, ಈ ಶಾಲೆಗಳು ಕೂಡ ಈ ಬಾರಿ ಆರ್ಟಿಇ ಅರ್ಜಿ ಸ್ವೀಕರಿಸಿ ಬಡಮಕ್ಕಳಿಗೆ ದಾಖಲಾತಿ ನೀಡಬೇಕಾಗಿದೆ ಎಂದರು.
ಅಲ್ಪಸಂಖ್ಯಾತರಿಗೆ ನೆರವಾಗಬೇಕು: ಜಿಲ್ಲೆಯಲ್ಲಿ ಯಾವುದಾದರು ಅಲ್ಪಸಂಖ್ಯಾತ ಶಾಲೆಗಳಿದ್ದಲ್ಲಿ ಅವುಗಳು ಮೊದಲೇ ಘೋಷಿಸಿ, ಅಲ್ಪಸಂಖ್ಯಾತರ ಶಾಲೆನ ಅಥವಾ ಅಲ್ಲವೇ ಎಂದು ಪರಿಶೀಲಿಸಿ ಆ ಶಾಲೆಯಲ್ಲಿಯೂ ಆರ್ಟಿಇ ಜಾರಿಯಾಗುವಂತೆ ಶಿಕ್ಷಣ ಇಲಾಖೆ ಕ್ರಮವಹಿಸಲು ಮುಂದಾಗಬೇಕು. ಅಲ್ಪಸಂಖ್ಯಾತ ಶಾಲೆಗಳಾಗಿದ್ದರೂ, ಕನಿಷ್ ಅಲ್ಪಸಂಖ್ಯಾತರಿಗೆ ಸೀಟು ನೀಡುವ ಮೂಲಕ ಅಲ್ಪಸಂಖ್ಯಾತ ಶಾಲೆಗಳು ಅಲ್ಪಸಂಖ್ಯಾತರಿಗೆ ನೆರವಾಗಬೇಕು ಎಂದು ಹೇಳಿದರು.
ಶಿಫಾರಸು ಮಾಡಬಾರದು: ಕೆಳವರ್ಗದ ಜನರು, ಸ್ಲಂಗಳಲ್ಲಿ ವಾಸ ಮಾಡುವ ಬಡ ಜನರ ಮಕ್ಕಳಿಗೆ ಶೈಕ್ಷಣಿಕವಾಗಿ ಮುಂದೆ ತರುವಲ್ಲಿ ಈ ಕಾಯ್ದೆಯು ಉತ್ತಮವಾಗಿದ್ದು, ಕಾಯ್ದೆಯ ಬಗ್ಗೆ ಅರಿವನ್ನು ಮೂಡಿಸಬೇಕು. ಎಷ್ಟೇ ಮಂದಿ ಈ ಕಾಯ್ದೆ ತಿಳಿದಿಲ್ಲ ಎಂದ ಅವರು, ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲೀ ಉಳ್ಳವರಿಗೆ ಆರ್ಟಿಇ ಸೀಟುಗಳನ್ನು ನೀಡಲು ಶಿಫಾರಸು ಮಾಡಬಾರದು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಕ್ರಿಯೆ ನಡೆಯದಂತೆ ನೋಡಿಕೊಳ್ಳಬೇಕು ಎಂದರು.
ಮೂಗು ತೂರಿಸಬಾರದು: ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಆರ್ಟಿಇ ಅನುದಾನ ಬಿಡುಗಡೆ ಮಾಡಬೇಕು. ಶಾಲೆಯ ಶಿಕ್ಷಣಕರಿಗೆ ಶಿಕ್ಷಣ ಇಲಾಖೆ ಒತ್ತಡ ಹಾಕಬಾರದು. ಪ್ರಾಥಮಿಕ ಹಂತದಲ್ಲಿ ಗುಣಾತ್ಮಕ ಶಿಕ್ಷಣ ನೀಡಬೇಕು. ಎಲ್ಕೆಜಿ 1ನೇ ತರಗತಿಯಿಂದ ಸ್ನೇಹಮಯಿ ಶಿಕ್ಷಣ ನೀಡಬೇಕು. ಯಾವುದು ಶಿಕ್ಷಕರಿಗೆ ಬೇರಾವುದೇ ಕೆಲಸವಹಿಸಬಾರದು. ಶಿಕ್ಷಕ ಶಿಕ್ಷಕನಾಗಿಯೇ ಇರಬೇಕು. ವಿದ್ಯಾರ್ಥಿ ವಿದ್ಯಾರ್ಥಿಯಾಗಿಯೇ ಇರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಅನವಶ್ಯಕ ಮೂಗು ತೂರಿಸಬಾರದು ಎಂದು ಹೇಳಿದರು.
ಪೋಷಕರು, ಚಿಂತಕರು, ಬುದ್ದಿಜೀವಿಗಳು, ಸಾಹಿತಿಗಳು ಇವರ ಚಿಂತನೆಗಳನ್ನು ಗುಣಾತ್ಮಕವಾಗಿ ಯಾವುದೇ ಒತ್ತಡಗಳಿಲ್ಲದೇ ಶಿಕ್ಷಣಕ್ಕೆ ಅಳವಡಿಸಿ ಶಿಕ್ಷಣ ನೀಡಬೇಕು.
ಗಮನ ಹರಿಸಬೇಕು: ಬಿಸಿಯೂಟ, ಹಾಲು ಬೇರೆ ಯಾವುದೇ ಕೆಲಸಗಳಿಗೆ ಶಿಕ್ಷಕರನ್ನು ನಿಯೋಜಿಸಬಾರದು. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಲ್ಕೆಜಿ ಅಥವಾ 1ನೇತರಗತಿಯಿಂದಲೇ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ನಡತೆ, ಸತ್ಯ ನಿಷ್ಠೆಗಳನ್ನೊಳಗೊಂಡ ಉತ್ತಮ ಪ್ರಜೆಯಾನ್ನಾಗಿಸುವ ಕಡೆ ಗಮನಹರಿಸಬೇಕು ಎಂದರು.
ಒತ್ತಾಯ: ರಾಜ್ಯದಲ್ಲಿ ಕಳೆದ ಬಾರಿ 1.5 ಲಕ್ಷ ಸೀಟುಗಳಿದ್ದು, ಈ ಪೈಕಿ 1.26 ಲಕ್ಷ ಮಾತ್ರ ಸೀಟು ನೀಡಿದ್ದು, 39 ಸಾವಿರ ಸೀಟುಗಳು ಹಾಗೇ ಉಳಿದಿದ್ದವು. ಜಿಲ್ಲೆಯಲ್ಲಿ 2800 ಸೀಟುಗಳು ಆರ್ಟಿಇ ನಲ್ಲಿ ಸಿಕ್ಕಿದ್ದು, ಇನ್ನು ಹಲವಾರು ಸೀಟುಗಳನ್ನು ನೀಡದೆ ವಂಚಿಸಲಾಗಿದೆ. ಆದ್ದರಿಂದ, ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಜನವರಿ 6ರವರೆಗೆ ಸಮಯವಕಾಶವಿರುವುದನ್ನು ಸಂಬಂಧಪಟ್ಟ ಸಚಿವರು ಲೋಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಕಾನೂನು ಸಲಹೆಗಾರ ಸಿ. ಕ್ರಾಂತಿಪ್ರಸಾದ್ ತ್ಯಾಗಿ, ಜಿಲ್ಲಾ ಸಂಚಾಲಕ ಟಿ.ಡಿ. ಜಗದೀಶ್ ಚೌಡಳ್ಳಿ, ಪ್ರಧಾನ ಕಾರ್ಯದರ್ಶಿ ಕೆ.ಪ್ರಕಾಶ್, ಖಜಾಂಚಿ ಸುದರ್ಶನ್, ಉಪಾಧ್ಯಕ್ಷ ಫಾಜಿಲ್ ಖಾನ್ ಇದ್ದರು.