ಕಾಂಗ್ರೆಸ್ ಸರ್ಕಾರದ ಅಂತ್ಯಕಾಲ ಸನ್ನಿಹಿತ: ಎನ್.ಡಿ. ಪ್ರಸಾದ್
ಹಾಸನ: ಕಾಂಗ್ರಸ್ ಸರ್ಕಾರ ಅಂಗವಿಕಲ ಸರ್ಕಾರವಾಗಿದ್ದು, ಇದರ ಅಂತ್ಯಕಾಲ ಸನ್ನಿಹಿತವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ಹೇಳಿದ್ದಾರೆ. ರಾಜ್ಯದ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಾರಂಭದಿಂದಲೂ ಜನವಿರೋಧಿ ನೀತಿಯನ್ನು ಅಳವಡಿಸಿಕೊಂಡು ಶಾದಿ ಭಾಗ್ಯ ಎಂಬಂತಹ ಎಡವಟ್ಟು ಯೋಜನೆಗಳನ್ನು ಜಾರಿಗೊಳಿಸಿ ಮೂಡನಂಬಿಕೆ ನಿಷೇಧ ಕಾನೂನು ಮತ್ತು ಶಾಲಾ ಮಕ್ಕಳಲ್ಲಿ ಜಾತಿಯ ವಿಷಬೀಜ ಬಿತ್ತಬಹುದಾದ ಶಾಲಾ ಪ್ರವಾಸ ಯೋಜನೆ ಮುಂತಾದವುಗಳನ್ನು ಜಾರಿಗೆ ತರಲು ತುದಿಗಾಲಲ್ಲಿ ನಿಂತು ರಾಜ್ಯದ ಜನತೆಯ ಆಕ್ರೋಶಕ್ಕೆ ಅಪಹಾಸ್ಯಕ್ಕೆ ಗುರಿಯಾಗಿರುವ ಸರ್ಕಾರ ರಾಜ್ಯದ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವಿಲ್ಲದೆ ಕಣ್ಣಿದ್ದು ಕರುಡಾಗಿ, ಕಿವಿ ಇದ್ದು ಕಿವುಡಾಗಿ, ಬಾಯಿದ್ದು ಮೂಕನಾಗಿ ಕಾಲಿದ್ದು ಹೆಳವ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಹೇಳಿದ್ದಾರೆ.
ನಾಡಿನ ದೌರ್ಭಾಗ್ಯ: ಈ ಎಡಬಿಡಂಗಿ ಸರ್ಕಾರ ಜಾರಿಗೆ ತಂದಿರುವ ಹಾಗೂ ಜಾರಿಗೆ ತರಲು ಉದ್ದೇಶಿಸಿರುವ ಅವೈಜ್ಞಾನಿಕ ಯೋಜನೆಗಳಿಂದಾಗಿ ರಾಜ್ಯದ ಜನ ಅಕ್ರೋಶಿತಗೊಂಡಿದ್ದು ಸಿದ್ದರಾಮಯ್ಯ ಸರ್ಕಾರ ನಗೆಪಾಟಲಿಗೆ ಗುರಿಯಾಗಿರುವುದು ಸತ್ಯಸಂಗತಿ. ಪ್ರತಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಉದ್ಧಟತನ, ಠೇಂಕಾರಗಳನ್ನೇ ಬಂಡವಾಳವನ್ನಾಗಿಸಿಕೊಂಡು ದುರಾಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವೋಟ್ ಬ್ಯಾಂಕ್ಗಾಗಿ ಮತ್ತು ಅಗ್ಗದ ಪ್ರಚಾರಕ್ಕಾಗಿ ಸಲ್ಲದ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿರುವುದು ಈ ನಾಡಿನ ದೌರ್ಭಾಗ್ಯ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸದೃಢ: ಜಿಲ್ಲೆಯಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿನೊಂದಿಗೆ ಬಿಜೆಪಿ ಮತ್ತಷ್ಟು ಸದೃಢವಾಗಿದೆ ಎಂದ ಅವರು, ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರವು ಎಸಗಿರುವ ಅಕ್ಷಮ್ಯ ಪ್ರಮಾದಗಳನ್ನು ಪಟ್ಟಿಮಾಡಲಾಗುತ್ತದೆ ಎಂದರು.
ಟೀಕೆ: ಚುನಾವಣೆ ಸನಿಹವಾದಾಗ ಮಾತ್ರ ಜನರ ಬಳಿಗೆ ಬರುವ ಮಾಜಿ ಪ್ರಧಾನಿ, ಹಾಲಿ ಸಂಸದ ದೇವೇಗೌಡರ ನಿರ್ಲಕ್ಷ್ಯದಿಂದಾಗಿ ಹಾಸನ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಿಂದ ಹಿಂದುಳಿಯುವಂತಾಗಿದೆ ಎಂದು ಅವರು ಟೀಕಿಸಿದರು. ಹಾಸನ ಲೋಕಸಭಾ ಕ್ಷೇತ್ರವನ್ನು ಮುಂದಿನ ಲೋಕಸಭಾ ಚುನಾವಣಾ ದೃಷ್ಟಿಯಿಂದ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು ಒಬ್ಬ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ಯಶಸ್ವಿ ಹೋರಾಟವನ್ನು ನಡೆಸಲಿದೆ ಎಂದು ಹೇಳಿದ್ದಾರೆ.