ಗುಡಿಸಲು ಕಳೆದುಕೊಂಡವರಿಗೆ ನೆರವು: ಡಿಸಿ ಭರವಸೆ
ಕ.ಪ್ರ.ವಾರ್ತೆ ಹಾಸನ ಡಿ. 19
ಆಕಸ್ಮಿಕ ಬೆಂಕಿ ದುರಂತದಿಂದ ಗುಡಿಸಲು ಕಳೆದುಕೊಂಡಂತ ಬೇಲೂರು ತಾಲ್ಲೂಕಿನ ನಂಜಾಪುರ ಗ್ರಾಮದ 7 ಕುಟುಂಬಗಳಿಗೆ ಸರ್ಕಾರದ ವತಿಯಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವನ್ನು ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಸೌಲಭ್ಯ: ನಂಜಾಪುರ ಗ್ರಾಮಕ್ಕೆ ಗುರುವಾರ ಅಧಿಕಾರಿಗಳ ತಂಡದೊಂದಿಗೆ ತೆರಳಿ ಪರಿಶೀಲಿಸಿದ ಜಿಲ್ಲಾಧಿಕಾರಿ, ನಂತರ ಗ್ರಾಮಸ್ಥರೊಂದಿಗೆ ಸಭೆ ನಡೆಸಿದರು. ನಿರಾಶ್ರಿತರಿಗೆ ಮನೆ ನೀಡುವ ಬಗ್ಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಶಾಸಕರು, ಸಚಿವರು ಸಹ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ. ಅನುಮೋದನೆಗೆ ಒಂದಿಷ್ಟು ಕಾಲಾವಕಾಶದ ಅಗತ್ಯವಿದೆ. ಉಳಿದಂತೆ ಸ್ಥಳಿಯವಾಗಿ ಜಿಲ್ಲಾಡಳಿತದಿಂದ ಸಾಧ್ಯವಿರುವ ಸೌಲಭ್ಯಗಳು ಇನ್ನೊಂದು ವಾರದೊಳಗೆ ಒದಗಿಸಲಾಗುವುದು ಎಂದರು.
ಬಡ್ಡಿ ಮನ್ನಾಕ್ಕೆ ಶಿಫಾರಸ್ಸು: 7 ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಹಸುಗಳನ್ನು ದೊರಕಿಸಲಾಗುವುದು. ಬ್ಯಾಂಕ್ಗಳಲ್ಲಿ ಮಾಡಿರುವ ಸಾಲಗಳ ಬಡ್ಡಿ ಮನ್ನಾ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದ ಅವರು, ಬೆಂಕಿ ದುರಂತದಲ್ಲಿ ಮನೆ ಕಳೆದುಕೊಂಡಿರುವ ಎಲ್ಲಾ 7 ಕುಟುಂಬಗಳಿಗೆ ತಕ್ಷಣವೇ ತಿಂಗಳಿಗಾಗುವಷ್ಟು ದವಸ ಧಾನ್ಯ ಸೀಮೆಎಣ್ಣೆ ವಿತರಿಸುವಂತೆ ಹಾಗೂ ಹೊಸ ಪಡಿತರ ಕಾರ್ಡ್ಗಳನ್ನು ಸಹ ವಿತರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಸೂಚನೆ: ಹಾಲಿ ನಂಜಾಪುರ ಅಂಗನವಾಡಿಯಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ದಿಂಬು, ಚಾಪೆ, ಹೊದಿಕೆ ಒದಗಿಸಲಾಗಿದೆಯಾದರೂ ಇನ್ನಷ್ಟು ಹೊದಿಕೆ ಹಾಗೂ ಬಟ್ಟೆಗಳನ್ನು ಪೂರೈಸುವಂತೆ ಅವರು ಸಮಾಜ ಕಲ್ಯಾಣಾಧಿಕಾರಿಗೆ ತಿಳಿಸಿದರು.
ಅಧಿಕಾರಿಗಳಿಂದ ಕ್ರಮ: ಮನೆ ಕಳೆದುಕೊಂಡವರಲ್ಲಿ ವಿಧವೆಯರು ಅಥವಾ ವಯಸ್ಸಾದವರು, ಅಂಗವಿಕಲರು ಇದ್ದಲ್ಲಿ ಅವರಿಗೆ ತಕ್ಷಣವೇ ಮಾಸಿಕ ಪಿಂಚಣಿಗೆ ಸೇರ್ಪಡೆ ಮಾಡಲಾಗುವುದು. 5ನೇ ತರಗತಿ ಮೇಲ್ಪಟ್ಟು ಕಲಿಯುತ್ತಿರುವ ಇಬ್ಬರು ಮಕ್ಕಳಿಗೆ ಮುರಾರ್ಜಿ ಮತ್ತು ನಿವಾಸಿ ಶಾಲೆಗಳಲ್ಲಿ ವಿದ್ಯಾಭ್ಯಾಸಕ್ಕೆ ಪ್ರವೇಶಾವಕಾಶ ಒದಗಿಸಲಾಗುವುದು ಅಲ್ಲದೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ಗಳನ್ನು ಹಾಗೂ ಭಾಗ್ಯಲಕ್ಷ್ಮಿ ಬಾಂಡ್ ಸುಟ್ಟುಹೋಗಿದ್ದರೆ ಹೊಸದಾಗಿ ಒದಗಿಸಲಾಗುವುದು. ಈ ಬಗ್ಗೆ ತಹಸೀಲ್ದಾರ್ ಮತ್ತು ಸಮಾಜ ಕಲ್ಯಾಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸುತ್ತಾರೆ ಎಂದು ಹೇಳಿದರು.
ಸೌಲಭ್ಯಾಭಿವೃದ್ಧಿಗೆ ಸೂಚನೆ: ಸುಮಾರು 50 ಮನೆಗಳಿಗೆ ಕುಟೀರ ಜ್ಯೋತಿ, ಭಾಗ್ಯಜ್ಯೋತಿ ಯೋಜನೆಗಳಡಿ ಒಂದು ವಾರದೊಳಗೆ ಸೌಲಭ್ಯ ಕಲ್ಪಿಸಲು ಚೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದ ರಸ್ತೆ, ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡುವಂತೆ ತಿಳಿಸಿದರು.
ಶೌಚಾಲಯ ನಿರ್ಮಾಣ: ಇದೇ ವೇಳೆ ಜಿಲ್ಲಾಧಿಕಾರಿಯವರು ಗ್ರಾಮದಲ್ಲಿರುವ ಗ್ರಾಮದಲ್ಲಿ ಈವರೆಗೆ ವಿದ್ಯುತ್ ಸಂಪರ್ಕವಿರದ ಸಂಪೂರ್ಣ ಸ್ವಚ್ಛತಾ ಆಂದೋಲನ ಹಾಗೂ ಉದ್ಯೋಗ ಖಾತರಿ ಯೋಜನೆಯಡಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಮಾಡಿಸಿಕೊಡಲು ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಗಸ್ತು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಮಾತನಾಡಿ, ಗ್ರಾಮಸ್ಥರ ಮನವಿಯಂತೆ ಪೊಲೀಸ್ ಇಲಾಖೆಯ ಹಳೇಬೀಡು ಪೊಲೀಸ್ ಠಾಣೆ ಮೂಲಕ ನಂಜಾಪುರ ಗ್ರಾಮವನ್ನು 2014ನೇ ಸಾಲಿನಿಂದ ದತ್ತು ಪಡೆದು ಅಭಿವೃದ್ಧಿಗೆ ಶ್ರಮಿಸಲಿದೆ. ಅಲ್ಲದೆ ಪ್ರತಿ 15 ದಿನಗಳಿಗೊಮ್ಮೆ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಹಾಗೂ ಪೊಲೀಸರ ತಂಡ ನಂಜಾಪುರಕ್ಕೆ ಭೇಟಿ ನೀಡಿ ಗಸ್ತು ಹಾಕಲಿದೆ ಎಂದರು.
ಅನುಮೋದನೆ: ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ಮಾತನಾಡಿ, ಗ್ರಾಮಸ್ಥರ ಬೇಡಿಕೆಯಂತೆ ಗ್ರಾಮದಲ್ಲಿಂದು ಸಮುದಾಯ ಶೌಚಾಲಯ ನಿರ್ಮಿಸಲಾಗುವುದು.
ಅದರ ಸ್ವಚ್ಛತಾ ಹಾಗೂ ನಿರ್ವಹಣೆಯನ್ನು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯ್ತಿ ನೋಡಿಕೊಳ್ಳಬೇಕು. ಈಗ ಶೌಚಾಲಯಗಳನ್ನು ನಿರ್ಮಿಸಿಕೊಂಡವರಿಗೆ ಹಣ ಬಿಡುಗಡೆ ಮಾಡಲಾಗುವುದು. ಹೊಸದಾಗಿ ಶೌಚಾಲಯವನ್ನು ನಿರ್ಮಿಸಿಕೊಳ್ಳುವವರಿಗೂ ಕ್ರಿಯಾ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಅನುಮೋದನೆ ನೀಡಲಾಗುವುದು ಎಂದರು.
ರಸ್ತೆ ನಿರ್ಮಾಣ: ನಮ್ಮ ಹೊಲ, ನಮ್ಮ ದಾರಿ ಯೋಜನೆಯಡಿ ಜಮೀನುಗಳಿಗೆ ತೆರಳುವ ದಾರಿ ನಿರ್ಮಾಣ, ನಂಜಾಪುರ ಗ್ರಾಮಕ್ಕೆ ಜಲ್ಲಿ ರಸ್ತೆ ನಿರ್ಮಾಣ ಹಾಗೂ ಉದ್ಯೋಗ ಖಾತ್ರಿ ಯೋಜನೆಯಡಿ ಇತರ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶರತ್, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರ, ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಕರಿಯಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣ ಚಂದ್ರಶೇಖರ್, ನಾನಾ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಹಾಜರಿದ್ದರು.