ನಾನಾ ಬೇಡಿಕೆ ಈಡೇರಿಕೆಗೆ ದಸಂಸ ಆಗ್ರಹ
ಕ.ಪ್ರ.ವಾರ್ತೆ ಸಕಲೇಶಪುರ ಡಿ. 19
ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಧರಣಿ: ದಲಿತರ ದಶಕಗಳ ಬಗೆ ಹರಿಯದ ಭೂಮಿ ಸಮಸ್ಯೆಯನ್ನು ಪರಿಹರಿಸಬೇಕು, ಸಾರ್ವಜನಿಕರ ಮೂಲಭೂತ ಸಮಸ್ಯೆಗಳಾದ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ ಸಮಸ್ಯೆ ಬಗೆಹರಿಸಬೇಕು, ರುದ್ರಭೂಮಿಯನ್ನು ಪಹಣಿಗೆ ನೋಂದಾಯಿಸಬೇಕು. 22.75 ಅನುದಾನದಡಿ ಜೀವನೊಪಯದ ತರಬೇತಿ ನೀಡಬೇಕು. ಕಂದಾಯ ಇಲಾಖೆಯಲ್ಲಿ ಕಾಣೆಯಾಗಿರುವ ದಾಖಲೆಗಳನ್ನು ಪತ್ತೆ ಹಚ್ಚಬೇಕು. ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ನೇರ ಸಾಲ ನೀಡಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ಆರಂಭಿಸಿದ ಕಾರ್ಯಕರ್ತರು ನಂತರ ಮಿನಿ ವಿಧಾನಸೌಧದವರೆಗೆ ಮೆರವಣಿಗೆ ತೆರಳಿ ಮಿನಿವಿಧಾನ ಸೌಧದ ಎದುರು ಧರಣಿ ಆರಂಭಿಸಿದರು.
ಮನವಿಗೆ ಸ್ಪಂದಿಸಿಲ್ಲ: ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ತಾಲೂಕಿನಲ್ಲಿ 398 ಹಳ್ಳಿಗಳಿದ್ದರೂ, ಕೇವಲ 21 ಹಳ್ಳಿಗಳಲ್ಲಿ ಮಾತ್ರ ರುದ್ರಭೂಮಿ ನೀಡಲಾಗಿದೆ. ಅಲ್ಲದೆ ದಲಿತರ ನಿವೇಶನವನ್ನು ಶ್ರೀಮಂತರು ಒತ್ತುವರಿ ಮಾಡಿದ್ದಾರೆ. ಆದರೆ ಈ ಬಗ್ಗೆ ಹಲವು ಬಾರಿ ಮನವಿ ನೀಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು.
ಎಚ್ಚರಿಕೆ: ದಲಿತ ಶಿಕ್ಷಕ ಮಹೇಶ್ ಶಿಕ್ಷಣ ಇಲಾಖೆಯ ಡಿಡಿಪಿಐ ಅವರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದರು. ಈ ಅಧಿಕಾರಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಹಾಗೂ ದಲಿತರ ಬಾರಿ ವಿರೋಧವಿದ್ದರೂ ಪುರಸಭೆ ದಲಿತ ವಿಧವ ಮಹಿಳೆ ಸೋಮಮ್ಮ ಎಂಬವರಿಗೆ ಸೇರಿದ ನಿವೇಶನವನ್ನು ಪುರಸಭೆ ಅಧಿಕಾರಿಗಳು ಶ್ರೀಮಂತರಿಗೆ ಪರಭಾರೆ ಮಾಡಿದ್ದಾರೆ. ಆದ್ದರಿಂದ ತಾಲೂಕಿನಲ್ಲಿ ದಲಿತರಿಗೆ ರಕ್ಷಣೆ ಇಲ್ಲದಾಗಿದೆ ಎಂದು ಆರೋಪಿಸಿದ ಪ್ರತಿಭಟನಕಾರರು, ಎಲ್ಲಾ ಬೇಡಿಕೆಗಳನ್ನು ಶೀಘ್ರವೇ ಈಡೇರಿಸದಿದ್ದರೆ ತಾಲೂಕು ಕಚೇರಿ ಎದುರು ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದರು.
ಸಮಸ್ಯೆ ಬಗೆಹರಿಸಬೇಕು: ಧರಣಿಯನ್ನು ಮದ್ಯಾಹ್ನ ಒಂದು ಗಂಟೆಗೆ ಆರಂಭಿಸಿ ಸಂಜೆ 4ರವರೆಗೆ ಮುಂದುವರೆಸಲಾಯಿತು. ನಂತರ ಧರಣಿ ನಡೆಸುತ್ತಿದ್ದ ಸ್ಥಳಕ್ಕಾಮಿಸಿದ ತಹಸೀಲ್ದಾರ್ ಪಾರ್ವತಿ ಅವರಿಗೆ ಮನವಿ ಪತ್ರ ನೀಡಿದ ಮುಖಂಡರು ಶೀಘ್ರವೇ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವವನ್ನು ದಸಂಸದ ರಾಜ್ಯ ಸಂಘಟನ ಸಂಚಾಲಕ ಎಸ್.ಎನ್. ಮಲ್ಲಪ್ಪ, ಜಿಲ್ಲಾ ಸಂಚಾಲಕ ಕೃಷ್ಣ, ಚಂದ್ರಪ್ರಸಾದ್, ಆಲೂರು ತಾಲೂಕು ಸಂಚಾಲಕ ಎಸ್.ಎನ್.ತುಂಗೇಶ್, ತಾಲೂಕು ಸಂಘಟನಾ ಸಂಚಾಲಕರಾದ ತಿಮ್ಮಯ್ಯ, ರುದ್ರೇಶ್, ನಿಂಗಪ್ಪ, ಶೇಖುನ್ನಿ, ಮಂಜಯ್ಯ, ಕನಕಯ್ಯ, ಬಿ.ಪಿ. ಲಕ್ಷ್ಮಣ್, ನಂಜಯ್ಯ, ಆಟೋ ರಮೇಶ್, ಗುಡಾಣಕೆರೆ ಮಂಜು ಮುಂತಾದವರು ವಹಿಸಿದ್ದರು.