ವಿಕಲಚೇತನರಿಗೆ ರಿಯಾಯಿತಿ ಬಸ್ಪಾಸ್
ಹಾಸನ: ರಾಜ್ಯ ರಸ್ತೆ ಸಾರಿಗೆ ನಿಗಮವು 2013ನೇ ಸಾಲಿಗೆ ವಿಲಕಚೇತನರಿಗೆ ರಿಯಾಯಿತಿ ದರದ ಬಸ್ಪಾಸುಗಳನ್ನು ನೀಡಿದೆ. ಡಿ. 31ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸ್ಗಳನ್ನು ನವೀಕರಿಸದೆ ಮುಂದಿನ ಫೆ. 28ರವರೆಗೆ ಮಾನ್ಯ ಮಾಡಲಾಗುವುದು. ಅಷ್ಟರೊಳಗೆ ಹಳೆಯ ಪಾಸುಗಳನ್ನು ನವೀಕರಿಸಿಕೊಳ್ಳಬೇಕಿದೆ. ಪಾಸ್ ನವೀಕರಿಕೊಳ್ಳುವ ಫಲಾನುಭವಿಗಳು ಹಳೆಯ ಪಾಸಿನೊಂದಿಗೆ 660 ಪಾವತಿಸಿ (ಚನ್ನರಾಯಪಟ್ಟಣ ತಾಲ್ಲೂಕಿನವರು ಚನ್ನರಾಯಪಟ್ಟಣ ಘಟಕದಲ್ಲಿ, ಹೊಳೆನರಸೀಪುರ ತಾಲ್ಲೂಕಿನವರು ಹೊಳೆನರಸೀಪುರ ಘಟಕದಲ್ಲಿ, ಅರಕಲಗೂಡು ಘಟಕದಲ್ಲಿ, ಆಲೂರು, ಹಾಸನ ಘಟಕದಲ್ಲಿ) ಫೆ. 28ರೊಳಗಾಗಿ ನವೀಕರಿಸಿಕೊಳ್ಳಬೇಕಿದೆ. ಹೊಸದಾಗಿ ಪಾಸು ಪಡೆಯುವ ಫಲಾನುಭವಿಗಳು ಹಾಸನ ವಿಭಾಗೀಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಪಾಸನ್ನು ಪಡೆಯಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಶ್ರೀಗಳ ಆಗಮನ
ಜಾವಗಲ್: ಹಳೇಬೀಡು ಸಮೀಪ ಘಟ್ಟದಹಳ್ಳಿ ಗ್ರಾಮಕ್ಕೆ ಹಂಪೆ ವಿದ್ಯಾರಣ್ಯ ಭಾರತಿ ಸ್ವಾಮೀಜಿ ಡಿ. 21ರಂದು ಸಂಜೆ ಆಗಮಿಸುತ್ತಿದ್ದಾರೆ ಅಂದು ಗ್ರಾಮದ ವತಿಯಿಂದ ಧೂಳಿ ಪಾದಪೂಜೆ ಏರ್ಪಡಿಸಲಾಗಿದ್ದು, 22ರಂದು ಅಲ್ಲೇ ವಾಸ್ತವ್ಯವಿದ್ದು, ಚಂದ್ರಮೌಳೇಶ್ವರ ದೇವರಿಗೆ ಪೂಜೆ ಸಲ್ಲಿಸಲಿದ್ದಾರೆಂದು ಬಾಣಾವರ ಸದ್ಗುರು ವಿಶ್ವಸ್ಥ ಮಂಡಲಿ ತಿಳಿಸಿದೆ.
ವಿಜೃಂಭಣೆಯ ಅಯಪ್ಪಸ್ವಾಮಿ ದೀಪೋತ್ಸವ
ಜಾವಗಲ್: ಜಾವಗಲ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ ದೀಪೋತ್ಸವ ಕಾರ್ಯಕ್ರಮ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಅಯ್ಯಪ್ಪ ಸ್ವಾಮಿಯವರ ಉತ್ಸವ ಊರಿನ ಪ್ರಮುಖ ಬೀದಿಗಳಲ್ಲಿ ಚಂಡೆ ವಾದ್ಯದೊಂದಿಗೆ ನೆರವೇರಿತು. ಲಕ್ಷ್ಮೀನರಸಿಂಹ ಸ್ವಾಮಿ ದೇಗುಲದ ಮುಂಭಾಗದಲ್ಲಿ ಬೂತಾಳೆ ಮರದ ಕೊಂಬೆಯನ್ನು ಅಲಂಕರಿಸಿ, ದೀಪಗಳ ಅಲಂಕಾರ ಮಾಡಿ ಪಾಲುಕೊಂಬು ಉತ್ಸವಕ್ಕೆ ಚಾಲನೆ ನೀಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕೇರಳದ ಪ್ರಸಿದ್ಧ ಚಂಡೆ ವಾದ್ಯದೊಂದಿಗೆ ಕೇರಳದ ಕಲಾವಿದರು ಬೂತಾಳೆ ಗಿಡಕ್ಕೆ ಪೂಜೆ ಸಲ್ಲಿಸಿ ಆಕರ್ಷಕ ಕತ್ತಿ, ಈಟಿ, ಹಿಡಿದು ನೃತ್ಯ ಪ್ರದರ್ಶನ ಮಾಡಿದರು. ದೀಪದಾರತಿ ಹೊತ್ತ ಹೆಣ್ಣು ಮಕ್ಕಳು ರಸ್ತೆಯ 2 ಬದಿಗಳಲ್ಲಿ ಸಾಗಿದರು ಅಯ್ಯಪ್ಪ ಸ್ವಾಮಿ ಉತ್ಸವವು ಮಾಲಾದಾರಿಗಳು, ನೂರಾರು ಭಕ್ತರೊಂದಿಗೆ ಮೆರವಣಿಗೆಯಲ್ಲಿ ಸಾಗಿ, ಸ್ವಾಮಿ ಸನ್ನಿಧಿಯಲ್ಲಿ ಮುಕ್ತಾಯಗೊಂಡಿತು. ಸೇವಾ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇದ್ದರು.
ಇಂದು ತರಬೇತಿ
ಜಾವಗಲ್: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಸನ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಕಚೇರಿ ಅರಸೀಕೆರೆ, ಪೊಲೀಸ್ ಉಪಾಧೀಕ್ಷಕರ ಕಚೇರಿ ಅರಸೀಕೆರೆ ಉಪವಿಭಾಗದ ಸಹಯೋಗದಲ್ಲಿ ಡಿ. 20ರಂದು ಜಾವಗಲ್ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 10.30ಕ್ಕೆ ಬಾಲ್ಯವಿವಾಹ ನೀಷೇಧ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕಾರ್ಯಾಗಾರದಲ್ಲಿ ಹೋಬಳಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳು. ಮತ್ತು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಾವಗಲ್ ಪೊಲೀಸ್ ಠಾಣಾಧಿಕಾರಿ ಸಿ.ಪಿ ನವೀನ್ ತಿಳಿಸಿದ್ದಾರೆ.
ಮಟ್ಕಾ: ಒಬ್ಬನ ಬಂಧನ, ನಗದು ವಶ
ಅರಸೀಕೆರೆ: ಪಟ್ಟಣದ ಹುಳಿಯಾರ್ ವೃತ್ತದಲ್ಲಿ ಮಟ್ಕಾ ಜೂಜಾಟಾಡುತ್ತಿದ್ದಾಗ ನಗರ ಠಾಣೆಯ ನಂದಕುಮಾರ್ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ- ಜೂಜಾಡುತ್ತಿದ್ದ ಅಪ್ಸರ್ (48)ನನ್ನು ಬಂಧಿಸಿದ್ದು, ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು # 1025 ನಗದನ್ನು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.