ಸಂಸತ್ ಚುನಾವಣೆ ನಂತರ ಕಾಂಗ್ರೆಸ್ ಪತನ
ಕ.ಪ್ರ.ವಾರ್ತೆ ಬೇಲೂರು ಡಿ. 19
ಮುಂದಿನ ಲೋಕಸಭಾ ಚುನಾವಣೆ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಬಿಜೆಪಿ ಆಯೋಜಿಸಿದ್ದ ಹಾಸನ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಲೇವಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಠಾನಗೊಳಿಸಲು ಹೊರಟಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಕಾಂಗ್ರೆಸ್ ಶಾಸಕರೇ ಒಪ್ಪುತ್ತಿಲ್ಲ. ಎಲ್ಲಾ ಯೋಜನೆಗಳಿಗೆ ಅಡ್ಡಿಪಡಿಸುವ ಮೂಲಕ ಸಿದ್ದು ವಿರುದ್ಧ ಹೈಕಮಾಂಡ್ಗೆ ದೂರಿನ ಸರಮಾಲೆಯನ್ನು ನೀಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿಎಂ ಬದಲಾವಣೆ: 7 ಬಾರಿ ಬಜೆಟ್ ಮಂಡನೆ ಮಂಡಿಸಿರುವ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸುವಲ್ಲಿ ಅಸಮರ್ಥರಾಗಿದ್ದಾರೆ ಎಂದ ಈಶ್ವರಪ್ಪ, ಲೋಕಸಭಾ ಚುನಾವಣೆ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲು ಸಾಧ್ಯವಿಲ್ಲ ಎಂದರು.
ಜೆಡಿಎಸ್ಗೆ ಅಧಿಕಾರ ಸಿಗೋದಿಲ್ಲ: ರಾಜ್ಯದಲ್ಲಿ ಜೆಡಿಎಸ್ನ ಸ್ಥಿತಿ ಹೇಳತೀರದಾಗಿದೆ ಎಂದ ಅವರು, ರಾಮನಗರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಬಿಜೆಪಿ ಪಕ್ಷ ಅನಿತಾ ಕುಮಾರಸ್ವಾಮಿಗೆ ಸಹಕಾರ ನೀಡಿತ್ತು. ಆದರೆ ಚುನಾವಣೆ ನಂತರದಲ್ಲಿ ಬಿಜೆಪಿ ಕೋಮುವಾದಿ ಪಕ್ಷ ಎಂದು ಜೆಡಿಎಸ್ ಪಕ್ಷದ ಮುಖಂಡರು ದೂರಿದರು ಕೇವಲ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುವ ಜೆ.ಡಿ.ಎಸ್ ಪಕ್ಷ ಎಂದಿಗೂ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ಮೋದಿ ಬೆಂಬಲಕ್ಕೆ ಜನತೆ: ಮುಂಬರುವ ಲೋಕಸಭೆ ಚುನವಣೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ದೇಶದ ಜನರು ನರೇಂದ್ರ ಮೋದಿಯವರ ಅಭಿವೃದ್ಧಿಯನ್ನು ಅವಲೋಕಿಸಿದ್ದಾರೆ. ಗುಜರಾತ್ನಲ್ಲಿ ವಿದ್ಯುತ್, ನೀರಾವರಿ, ಕೈಗಾರಿಕೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿರುವ ಹಿನ್ನಲೆಯಲ್ಲಿ ದೇಶದ ಮತದಾರರು ಮೋದಿಯವರನ್ನು ಬೆಂಬಲಿಸಲಿದ್ದಾರೆ ಎಂದು ತಿಳಿಸಿದರು.
ಅಧಿಕ ಸ್ಥಾನ: ರಾಜ್ಯದ ಮತದಾರರು ಬಿಜೆಪಿ ಪಕ್ಷವನ್ನು ತಿರಸ್ಕರಿಸಲು ಪಕ್ಷದ ನಾಲ್ಕು ಜನರಿಂದ ಚುನಾಣೆಯಲ್ಲಿ ಹೀನಾಯ ಸ್ಥಿತಿಗೆ ಬರಲು ಕಾರಣವಾಯಿತು ಐದು ವರ್ಷ ಆಡಳಿತ ನೆಡೆಸಿರುವ ಬಿಜೆಪಿ ಪಕ್ಷಕ್ಕೆ ಬುದ್ದಿ ಬಂದಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸ್ಥಾನಗಳಿಸಲಿದೆ ಎಂದರು
ಕಾರ್ಯಾಗಾರದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್, ಜಿಲ್ಲಾ ಬಿಜೆ.ಪಿ. ಅಧ್ಯಕ್ಷ ರೇಣುಕುಮಾರ್, ಮುಖಂಡರಾದ ನವಿಲೆ ಅಣ್ಣಪ್ಪ, ಕೃಷ್ಣೇಗೌಡ, ಜಿಪಂ ಸದಸ್ಯರಾದ ಅಮೀತ್ ಶೆಟ್ಟಿ, ಜಯಶೀಲ ಜಯಶಂಕರ್, ಲಕ್ಮಣ್, ಡಾ. ನಾರಾಯಣಸ್ವಾಮಿ, ಅಶ್ವತ್ಥ ನಾರಾಯಣ ಇತರರು ಇದ್ದರು.