ಸಿಇಟಿ ಕಾಯ್ದೆ ತಿದ್ದುಪಡಿ: ಎಸ್‌ಎಫ್‌ಐ ಪ್ರತಿಭಟನೆ
ಚನ್ನರಾಯಪಟ್ಟಣ: ಸಿಇಟಿ ಶುಲ್ಕವನ್ನು ರಾಜ್ಯ ಸರ್ಕಾರ ಹೆಚ್ಚಿಸಲು ಉದ್ದೇಶಿಸಿರುವುದನ್ನು ಖಂಡಿಸಿ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸಂಘಟನೆ ವತಿಯಿಂದ ಪಟ್ಟಣದಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪೃಥ್ವಿ ನೇತೃತ್ವದಲ್ಲಿ ಪಟ್ಟಣದ ವಿವಿಧ ಕಾಲೇಜುಗಳ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯ ಸರ್ಕಾರ ಸಿಇಟಿ ಶುಲ್ಕ ಹೆಚ್ಚುವರಿ ಮಾಡಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾಲೂಕು ಕ:ಕೇರಿಗೆ ಆಗಮಿಸಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕಿ ಧನಲಕ್ಷ್ಮಿ ಮಾತನಾಡಿ, ರಾಜ್ಯ ಸರ್ಕಾರ ಸಿಇಟಿ ಶುಲ್ಕ ಹೆಚ್ಚಿಸಿರುವುದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಕಲ್ಪಿಸಿದಂತೆ. ರಾಜ್ಯ ಸರ್ಕಾರ ಬಡ ವಿದ್ಯಾರ್ಥಿಗಳನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಎಂದರು. ರಾಜ್ಯ ಸರ್ಕಾರ ಶೇ. 75- 25ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಬಡವರಿಗೆ ಕೈಗೆಟಕುವ ರೀತಿಯಲ್ಲಿ ಶುಲ್ಕ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
'ಆತ್ಮೀಯತೆಯಿಂದ ದುಡಿದರೇ ಆರ್ಥಿಕ ಸ್ವಾವಲಂಬನೆ'
ನುಗ್ಗೇಹಳ್ಳಿ: ಮನಸ್ಸುಗಳು ಒಂದಾಗಿ ಆತ್ಮೀಯತೆಯಿಂದ ದುಡಿದರೆ ಮಾತ್ರ ಆರ್ಥಿಕ ಸ್ವಾವಲಂಬಿಗಳಾಗಬಹುದು ಎಂದು ತಾಲೂಕು ಪಂಚಾಯ್ತಿ ಸದಸ್ಯ ಎನ್. ಬಸವರಾಜು ಹೇಳಿದರು.
ಇಲ್ಲಿಗೆ ಸಮೀಪದ ಹೆಗ್ಗಡಿಗೆರೆಯಲ್ಲಿ ಇತ್ತೀಚೆಗೆ ನಡೆದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಸಮಾಲೋಚನಾ ಸಭೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಯ ಬಡಜನರ ಅಭಿವೃದ್ಧಿಗೆ ಜ್ಞಾನದ ಜೊತೆಗೆ ಸಾಲದ ವಿತರಣೆಯನ್ನು ಶ್ರೀಕ್ಷೇತ್ರದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಶಂಕರ್ ಕಂಟೆ ವಹಿಸಿದ್ದರು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಲತಾ ಮೇಲ್ವಿಚಾರಕ ರಾಘವೇಂದ್ರ, ಹೈನುಗಾರಿಕೆ ಅಧಿಕಾರಿ ಆನಂದ್, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವಿಜಯಾ ಬೋವಿ, ಗ್ರಾಪಂ ಸದಸ್ಯೆ ಸರೋಜ, ಸೇವಾ ಪ್ರತಿನಿಧಿ ಗಿರಿಜಾ ನಾಗೇಶ್ ಇದ್ದರು.