ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಿಇಟಿ ಕಾಯ್ದೆ ತಿದ್ದುಪಡಿ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 20 Dec 2013, 12:24 pm

ಕ.ಪ್ರ.ವಾರ್ತೆ ಅರಸೀಕೆರೆ ಡಿ. 19
ರಾಜ್ಯ ಸರ್ಕಾರ ಸಿಇಟಿ ಕಾಯ್ದೆ ಜಾರಿಗೊಳಿಸುವುದನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ಶಿಕ್ಷಣ ಸಂಸ್ಥೆಗಳ ಮಾಲೀಕರ ಕೈಗೊಂಬೆಯಾಗಿ ಬಡ ವಿದ್ಯಾರ್ಥಿಗಳಿಗೆ ಕೊಡಲಿ ಪೆಟ್ಟು ನೀಡಿದ್ದು, ಈ ವಿದ್ಯಾರ್ಥಿ ವಿರೋಧಿ ನೀತಿಯಿಂದ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಣಕಟ್ಟೆ ಮಂಜು ಸರ್ಕಾರದ ವಿರುದ್ಧ ಕಿಡಿಕಾರಿದರು.
ಧಿಕ್ಕಾರ: 2006ರ ಸಿ.ಇ.ಟಿ. ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ಖಂಡಿಸಿ, ಪಟ್ಟಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಅಲ್ಲದೇ, ಪರೋಕ್ಷವಾಗಿ ಕಾಮೆಡ್-ಕೆ ಪ್ರವೇಶ ಪರೀಕ್ಷೆ ನಡೆಸುವ ಖಾಸಗಿ ಕಾಲೇಜುಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಕಳ್ಳನ ಕೈಗೆ ಕೀಲಿ ನೀಡುವ ಪ್ರಯತ್ನವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಮನವಿ: ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರದ ನಿರ್ಧಾರದಿಂದ ಅನ್ಯಾಯವಾಗುವುದಲ್ಲದೆ  ವೃತ್ತಿಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ರಾಜ್ಯ ಸರ್ಕಾರದ ಹುನ್ನಾರದ ಹಿಂದೆ ಕಾಣದ ಕೈಗಳ ವ್ಯವಸ್ಥಿತ ಪಿತೂರಿಯಿದ್ದು ಕೂಡಲೇ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದರಲ್ಲದೆ, ಸರ್ಕಾರ ತನ್ನ ನೀತಿಯನ್ನು ಬದಲಾಯಿಸದಿದ್ದಲ್ಲಿ ಉಗ್ರ  ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿ, ನಂತರ ಗ್ರೇಡ್- 2 ತಹಸೀಲ್ದಾರ್ ಭಾಗ್ಯರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ಪ್ರಮುಖ ಪೂಲ್‌ಚಂದ್, ಗಿರೀಶ್, ನಗರ ಕಾರ್ಯದರ್ಶಿ ನಂದಿನಿ ಮೆಳವಂಕಿ, ರಮೇಶ್, ಪುನೀತ್, ಅನುಷ, ರಾಧಿಕಾ, ಚೈತ್ರ ಬಿ.ಎಸ್., ಇನ್ನಿತರ ವಿದ್ಯಾರ್ಥಿಗಳು ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement