ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರೆಂಟು... ಸಮಸ್ಯೆ ನೂರೆಂಟು

ಚಳಿಗಾಲದಲ್ಲಿ ಹಾಸನ ಜಿಲ್ಲೆಯ ಜನತೆ ವಿದ್ಯುತ್ ಕಡಿತಕ್ಕೆ ಬೆವರುವಂತಾಗಿದೆ! ಕಾರಣ, ಜಿಲ್ಲೆಗೆ ಬೇಕಾಗಿರುವಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ.

Srinivasa Murthy VN
Updated On : 21 Dec 2013, 1:12 am

ಹಾಸನ: ಚಳಿಗಾಲದಲ್ಲಿ ಹಾಸನ ಜಿಲ್ಲೆಯ ಜನತೆ ವಿದ್ಯುತ್ ಕಡಿತಕ್ಕೆ ಬೆವರುವಂತಾಗಿದೆ! ಕಾರಣ, ಜಿಲ್ಲೆಗೆ ಬೇಕಾಗಿರುವಷ್ಟು ವಿದ್ಯುತ್ ಪೂರೈಕೆಯಾಗುತ್ತಿಲ್ಲ. ನಿತ್ಯ ನಗರ ಸೇರಿದಂತೆ ಜಿಲ್ಲೆಯಾದ್ಯಂತ 130ರಿಂದ 140 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಆದರೆ, ಪೂರೈಕೆ ಆಗುತ್ತಿರುವುದು 80ರಿಂದ 90 ಮೆಗಾವ್ಯಾಟ್ ಮಾತ್ರ. ಇದರ ಪರಿಣಾಮ ಪಂಪ್‌ಸೆಟ್‌ಗಳಿಗೆ ಅಗತ್ಯದಷ್ಟು ವಿದ್ಯುತ್ ಸಿಗುತ್ತಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗೆ ಹಿನ್ನಡೆ ಆಗುತ್ತಿದೆ. ಇಂದಿನ ವಿದ್ಯುತ್ ಸ್ಥಿತಿಗತಿ ಗಮನಿಸಿದರೆ ಬೇಸಿಗೆಯಲ್ಲಿ ಕುಡಿವ ನೀರು ಒದಗಿಸಲು ವಿದ್ಯುತ್ ಸರಬರಾಜು ಸಿಗುವುದು ದುಸ್ತರವಾಗುವ ಸನ್ನಿವೇಶ ಉದ್ಭವವಾಗಬಹುದು. ಹೀಗಾಗಿ ಈಗಲೇ ಜನರಲ್ಲಿ ಈ ಆತಂಕ ಶುರುವಾಗಿದೆ. ಜಿಲ್ಲಾದ್ಯಂತ 72,000 ಅಧಿಕೃತ ಕೃಷಿ ಪಂಪ್‌ಸೆಟ್‌ಗಳಿದ್ದು, ಸೆಸ್ಕ್ ಸಮೀಕ್ಷೆ ಪ್ರಕಾರ 24,000 ಅನಧಿಕೃತವಾಗಿವೆ. ಎಲ್ಲ ಪಂಪ್‌ಸೆಟ್‌ಗಳಿಗೆ ನಿತ್ಯ 400 ಕಿಲೋ ವ್ಯಾಟ್ ವಿದ್ಯುತ್ ಬೇಕು. ಕೈಗಾರಿಕೆ, ಏತ ನೀರಾವರಿ, ವಾಣಿಜ್ಯ ಉದ್ದೇಶಗಳಿಗೆ 41,200 ಕಿವ್ಯಾ, ಗೃಹ ಬಳಕೆಗೆ 420 ಕಿ.ವ್ಯಾಟ್ ವಿದ್ಯುತ್ ಬೇಕು. ಬೀದಿ ದೀಪ ಮತ್ತು ಭಾಗ್ಯ ಜ್ಯೋತಿಯಡಿ ಕುಟುಂಬಗಳಿಗೆ ಪ್ರತಿದಿನ 90 ಕಿ. ವ್ಯಾಟ್ ವಿದ್ಯುತ್ ಬೇಕು. ಆದರೆ ಇಷ್ಟು ಲಭ್ಯವಾಗುತ್ತಿಲ್ಲ. ಪ್ರತಿದಿನ 6 ಗಂಟೆ ತ್ರೀಫೇಸ್, ಗ್ರಾಮೀಣ ಪ್ರದೇಶಕ್ಕೆ 8 ಗಂಟೆ, ನಗರಗಳಿಗೆ 15 ರಿಂದ 18 ಗಂಟೆಗಳು ವಿದ್ಯುತ್ ನೀಡಲಾಗುತ್ತಿದೆ. ಸೆಸ್ಕ್ ಉನ್ನತಾಧಿಕಾರಿಗಳ ಪ್ರಕಾರ ಈಗ ಶೇ.72ರಷ್ಟು ಮಾತ್ರ ವಿದ್ಯುತ್ ಸಿಗುತ್ತಿದೆ. ಜಿಲ್ಲೆಯಲ್ಲಿ ಪವನ (ಗಾಳಿ) ವಿದ್ಯುತ್‌ನಿಂದ ಪ್ರತಿದಿನ ಕೇವಲ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದು ಕೂಡು ಯಾವುದಕ್ಕೆ ಸಾಕಾಗುತ್ತಿಲ್ಲ. ಯುಪಿಸಿಎಲ್‌ನಲ್ಲಿ ವಿದ್ಯುತ್ ಉತ್ಪಾದಿಸುವ ಜನರೇಟರ್‌ಗಳು ವಿಫಲವಾಗಿವೆ. ಆದ್ದರಿಂದ ಬೇಡಿಕೆಯಷ್ಟು ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಹಾಗಾಗಿ ವಿದ್ಯುತ್ ಕಡಿತ ಅನಿವಾರ್ಯ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೊಪ್ಪಳ: ಈಗ ಲೋಡ್‌ಶೆಡ್ಡಿಂಗ್ ಸಪ್ಪಳ
ಕೊಪ್ಪಳ:
ಜಿಲ್ಲಾ ಕೇಂದ್ರ ಕೊಪ್ಪಳ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಬೇಡಿಕೆಗೂ ಪೂರೈಕೆಗೂ ಅಜಗಜಾಂತರ ಇರುವುದರಿಂದ ಲೋಡ್‌ಶೆಡ್ಡಿಂಗ್ ಮೀರಿಯೂ ಅನಧಿಕೃತ ಲೋಡ್‌ಶೆಡ್ಡಿಂಗ್ ಆಗಾಗ ಆಗುತ್ತಲೇ ಇರುತ್ತದೆ.  ಜಿಲ್ಲೆಗೆ ಪ್ರತಿದಿನ 140 ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ, ಈಗ ಪೂರೈಕೆಯಾಗುತ್ತಿರುವುದು ಕೇವಲ 50ರಿಂದ 60 ಮೆಗಾವ್ಯಾಟ್. ಇದರಿಂದ ಅನಿವಾರ್ಯವಾಗಿ ಲೋಡ್‌ಶೆಡ್ಡಿಂಗ್ ಮೀರಿಯೂ ಅನಧಿಕೃತವಾಗಿ ವಿದ್ಯುತ್ ಕಟ್ ಮಾಡಲಾಗುತ್ತಿದೆ. ಈ ವೇಳೆಯಲ್ಲಿ ಏಕಕಾಲಕ್ಕೆ ಎಲ್ಲಾ ಕಡೆಯೂ ಕಟ್ ಮಾಡುವ ಬದಲು ಫೀಡರ್‌ವೈಸ್ ವಿದ್ಯುತ್ ಸ್ಥಗಿತ ಮಾಡುತ್ತೇವೆ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು. ಕೊಪ್ಪಳ ತಾಲೂಕಿಗೆ 35 ಮೆಗಾವ್ಯಾಟ್ ಬೇಕು ಆದರೆ, ಕೇವಲ 12-18 ಮೆವ್ಯಾ  ನೀಡುತ್ತಾರೆ. ಇನ್ನು ಕುಷ್ಟಗಿ ತಾಲೂಕಿಗೆ 37 ಮೆವ್ಯಾ ಬೇಕಾಗಿದ್ದರೂ ನೀಡುವುದು ಮಾತ್ರ 12-15 ಮೆವ್ಯಾ ಮಾತ್ರ. ಗಂಗಾವತಿ ಹಾಗೂ ಯಲಬುರ್ಗಾ ತಾಲೂಕು ಇದಕ್ಕೆ ಹೊರತಾಗಿಲ್ಲ. ಹೀಗಾಗಿ, ಬೇಡಿಕೆಯ ಅರ್ಧಕ್ಕಿಂತಲೂ ಕಡಿಮೆ ಪೂರಕೈ ಇರುವುದರಿಂದ ನಿರ್ವಹಣೆ ಮಾಡುವುದೇ ದುಸ್ತರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ದಿನದಲ್ಲಿ ಈಗ 16-18 ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತದೆ. ಈ ಪೈಕಿ ಹಗಲು ವೇಳೆಯಲ್ಲಿ ಕೇವಲ 6 ಗಂಟೆ ತ್ರಿಫೇಸ್ ವಿದ್ಯುತ್ ನೀಡಲಾಗುತ್ತದೆ. ರಾತ್ರಿ ವೇಳೆ ಸಂಜೆ 6ರಿಂದ ಬೆಳಗ್ಗೆ 6 ಗಂಟೆಯವರೆಗೂ ಸಿಂಗಲ್ ಫೇಸ್ ವಿದ್ಯುತ್ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆಯಾದರೂ ರಾತ್ರಿ ಪೂರ್ತಿ ವಿದ್ಯುತ್ ಇರುವುದೇ ಇಲ್ಲ. ಇನ್ನು ಹಗಲು ವೇಳೆಯಲ್ಲಿ 6 ಗಂಟೆ ತ್ರಿಫೇಸ್ ನೀಡಲಾಗುತ್ತದೆ ಎನ್ನಲಾಗುತ್ತಿದೆ ಆದರೂ ಅದು ಸರಿಯಾಗಿ ಇರುವುದಿಲ್ಲ. ವೋಲ್ಟೇಜ್ ಇರದೆ ಇರುವುದರಿಂದ ಪಂಪ್‌ಸೆಟ್ ಶುರುವಾಗುವುದೇ ಇಲ್ಲ ಎನ್ನುವುದು ರೈತರ ಅಳಲು.

ನೇಕಾರರ ಬದುಕಿಗೆ 'ಕತ್ತಲು'!
ಬೆಳಗಾವಿ:
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ವಿದ್ಯುತ್ ಲೋಡ್ ಶೆಡ್ಡಿಂಗ್ ಶುರುವಾಗಿದೆ. ಅನಿರ್ದಿಷ್ಟಾವಧಿ ವಿದ್ಯುತ್ ಕಡಿತವಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ನಾಗರಿಕರು, ವಿದ್ಯಾರ್ಥಿಗಳು, ರೈತರು, ಉದ್ದಿಮೆದಾರರು ಸಂಕಷ್ಟ ಎದುರಿಸುವಂತಾಗಿದೆ. ಬೆಳಗಾವಿ ನಗರಕ್ಕೆ ನಿತ್ಯ 130ರಿಂದ 140 ಮೆಗಾವ್ಯಾಟ್ ವಿದ್ಯುತ್ ಬೇಕು. ಈಗ ಸರ್ಕಾರ ಕೇವಲ 60ರಿಂದ 80 ಮೆಗಾವ್ಯಾಟ್ ವಿದ್ಯುತ್ ಮಾತ್ರ ಪೂರೈಸುತ್ತಿದೆ. ಇಡೀ ಜಿಲ್ಲೆಗೆ 550 ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ, ಈಗ 280ರಿಂದ 300 ಮೆಗಾವ್ಯಾಟ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದೆ. ಪರೀಕ್ಷೆಗಳು ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಪರೀಕ್ಷಾ ಪೂರ್ವತಯಾರಿಗೆ ಅಡ್ಡಿಯಾಗಿದೆ. ಹೀಗಾಗಿ ಅವರು ಮೇಣದ ಬತ್ತಿ ಬೆಳಕಿನಲ್ಲಿಯೇ ಪರೀಕ್ಷೆ ಸಿದ್ಧತೆ ಮಾಡುವಂತಾಗಿದೆ. ಬರ, ನೆರೆ ಹಾವಳಿಯಿಂದ ತತ್ತರಿಸಿರುವ ರೈತರನ್ನು ಇದೀಗ ವಿದ್ಯುತ್ ಸಮಸ್ಯೆ ಮತ್ತಷ್ಟು ಹೈರಾಣಾಗಿಸಿದೆ.

ಬಿಜಾಪುರದಲ್ಲಿ ಬಿಜಲಿ ಫಜೀತಿ
ಬಿಜಾಪುರ:
ಬಿಜಾಪುರ ಜಿಲ್ಲೆಗೆ ದಿನವೊಂದಕ್ಕೆ 220ರಿಂದ 250 ಮೆವ್ಯಾ ವಿದ್ಯುತ್ ಅವಶ್ಯಕತೆ ಇದೆ. ಆದರೆ ಸದ್ಯಕ್ಕೆ 170ರಿಂದ 190 ಮೆವ್ಯಾ ವಿದ್ಯುತ್ ಲಭ್ಯವಾಗುತ್ತಿದೆ. ಇದರಿಂದಾಗಿ 50 ಮೆವ್ಯಾ ವಿದ್ಯುತ್ ಕೊರತೆ ಕಾಡುತ್ತಿದೆ. ಬರುವ ಬೇಸಿಗೆಯಲ್ಲಿ ಇದರ ಪ್ರಮಾಣ ಇನ್ನಷ್ಟು ಹೆಚ್ಚುವ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಹಗಲು 4 ಗಂಟೆ, ರಾತ್ರಿ 2ಗಂಟೆಯಂತೆ ಒಟ್ಟು 6 ತಾಸು ತ್ರಿಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದರ ನಡುವೆ ಲೋಡ್ ಶೆಡ್ಡಿಂಗ್ ಕೂಡ ಮಾಡಲಾಗುತ್ತಿದೆ. ಇದು ಬೇಸಿಗೆಯಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ಬಿಜಾಪುರದಲ್ಲಿಯೂ 3 ತಾಸು ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಗಳು ಹತ್ತಿರ ಬರುತ್ತಿವೆ. ಆದರೆ, ಲೋಡ್ ಶೆಡ್ಡಿಂಗ್‌ನಿಂದಾಗಿ ಅವರ ಓದಿಗೂ ಹೊಡೆತ ಬೀಳುವ ಆತಂಕದಲ್ಲಿದ್ದಾರೆ.

ದೇವರ ಮೇಲೆ ವೈದ್ಯರ ಭಾರ!
ದಾವಣಗೆರೆ:
ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರು ತಮ್ಮ ಪ್ರಯತ್ನದ ಜೊತೆಗೆ ದೇವರ ಮೇಲೂ ಒಂದಿಷ್ಟು ಭಾರ ಹಾಕುತ್ತಿದ್ದರು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಪರೇಷನ್ ವೇಳೆ ವಿದ್ಯುತ್ ನಿಲುಗಡೆಯಾಗದಂತೆ ನೋಡಿಕೊಳ್ಳುವಂತೆಯೂ ಬೇಡಿಕೊಳ್ಳಬೇಕಿದೆ. ಹೌದು. ಇಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದು ಬೆಸ್ಕಾಂ ಸಿಬ್ಬಂದಿ. ಹೀಗಾಗಿ ಇಲ್ಲಿನ ವೈದ್ಯರು ಆಪರೇಷನ್ ಮಾಡುವಾಗ ಜನರೇಟರ್‌ಗಳನ್ನು ಸಿದ್ಧಪಡಿಸಿಟ್ಟುಕೊಂಡೇ ಆಪರೇಷನ್‌ಗೆ ಮುಂದಾಗುತ್ತಿದ್ದಾರೆ. ಕಳೆದ 4 ದಿನಗಳಿಂದ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಜಿಲ್ಲೆಯ ಜನ ತತ್ತರಿಸಿದ್ದಾರೆ. ಅದರಲ್ಲೂ ರೈತರಂತೂ ಈ ಅನಿರೀಕ್ಷಿತ ವಿದ್ಯುತ್ ಕ್ಷಾಮದಿಂದಾಗಿ ವರ್ಷಾನುಗಟ್ಟಲೆ ತಾವು ಕಷ್ಟಪಟ್ಟು ಬೆಳೆದ ಬೆಳೆ ರಕ್ಷಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇದರ ಜೊತೆಗೆ ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಜಿಲ್ಲೆಗೆ ದಿನಕ್ಕೆ ಒಟ್ಟು 260 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ. ಆದರೆ, ಕೇವಲ 150- 170 ಮೆಗಾವ್ಯಾಟ್ ವಿದ್ಯುತ್ ಮಾತ್ರ ಪೂರೈಕೆಯಾಗುತ್ತಿದೆ. ಹೀಗಾಗಿ ಅನಿಯಮಿತ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.

ಲೋಡ್‌ಶೆಡ್ಡಿಂಗ್ ಇಲ್ಲ, ಆದರೂ...
ಲೋಡ್‌ಶೆಡ್ಡಿಂಗ್ ಇಲ್ಲ, ಅನಧಿಕೃತ ಲೋಡ್‌ಶೆಡ್ಡಿಂಗ್ ಕೂಡ ಇಲ್ಲ. ಆದರೆ, ಪ್ರತಿನಿತ್ಯ ಗಂಟೆಗಟ್ಟಲೆ ವಿದ್ಯುತ್ ಪೂರೈಕೆ ಕಡಿತಗೊಳ್ಳುವುದು ಮಾತ್ರ ತಪ್ಪಿಲ್ಲ. ಇದಕ್ಕೆ ಕಾರಣ ತಾಂತ್ರಿಕ ಸಮಸ್ಯೆ, ಟ್ರಾನ್ಸ್‌ಫಾರ್ಮರ್‌ಗಳ ಸಮಸ್ಯೆ, ವಿದ್ಯುತ್ ತಂತಿಗಳ ದುರಸ್ತಿ ಅಥವಾ ಬದಲಾವಣೆ ಮಾಡುತ್ತಿರುವುದು. ಈ ಹಿಂದೆಲ್ಲಾ ಅಕ್ಟೋಬರ್ ವೇಳೆಗೆ ವಿದ್ಯುತ್ ಸಮಸ್ಯೆ ಆರಂಭವಾಗುತ್ತಿತ್ತು. ಈ ಬಾರಿ ಡಿಸೆಂಬರ್‌ವರೆಗೆ ಅಂತಹ ಸಮಸ್ಯೆ ಉದ್ಭವವಾಗಿರಲಿಲ್ಲ. ಆದರೆ, ಕಳೆದ 20 ದಿನಗಳಿಂದ ಬಿಸಿಲು ಹೆಚ್ಚಾಗಿ ವಿದ್ಯುತ್ ಬೇಡಿಕೆ ತೀವ್ರಗತಿಯಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಎಲ್ಲಾ ಕಡೆ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಅದನ್ನು ಸರಿಪಡಿಸುವ ಕಾರ್ಯ ಆರಂಭವಾಗಿದೆ. ಇದಕ್ಕಾಗಿ ಪ್ರತಿನಿತ್ಯ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ ಎನ್ನುತ್ತಾರೆ ಎಸ್ಕಾಂ ಅಧಿಕಾರಿಗಳು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಅತಿ ಹೆಚ್ಚು ವಿದ್ಯುತ್ ಬಳಸಲಾಗುತ್ತಿದೆ. ರೈತರು ತಮ್ಮ ಬೆಳೆಗಳಿಗೆ ನೀರುಣಿಸಲು ಮೋಟರ್ ಪಂಪ್‌ಗಳನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಏಕಾಏಕಿ ಒತ್ತಡ ತಾಳಿಕೊಳ್ಳಲು ಸಾಧ್ಯವಾಗದೆ ಆಗಾಗ್ಗೆ ಕೈಕೊಡುತ್ತಿವೆ.

ನಿಗದಿಪಡಿಸಿರುವ ವಿದ್ಯುತ್    (ದಶಲಕ್ಷ ಯೂನಿಟ್‌ಗಳಲ್ಲಿ)
ಎಸ್ಕಾಂಗಳು    ಕೆಪಿಟಿಸಿಎಲ್          ಪೂರೈಕೆ
ಬೆಸ್ಕಾಂ    75.67     74.46
ಹೆಸ್ಕಾಂ    36.36    29.55
ಗೆಸ್ಕಾಂ    18.98    20.54
ಮೆಸ್ಕಾಂ    12.84    13.05
ಚೆಸ್ಕಾಂ    17.01    16.40
ಒಟ್ಟು    161.05    154.00

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement