25ಕ್ಕೆ ಪ್ರಗತಿಪರ ಸಂಘಟನೆಜಿಲ್ಲಾ ಸಮಾವೇಶ
ಹಾಸನ: ಶಿಕ್ಷಣ ಹಕ್ಕು ಕಾಯ್ದೆ (ಆರ್ಟಿಇ) ಸಮರ್ಪಕ ಜಾರಿಗಾಗಿ ಆರ್ಟಿಇ ಫಲಾನುಭವಿ ಫೋಷಕರ ಮತ್ತು ಪ್ರಗತಿಪರ ಸಂಘಟನೆಗಳ ಜಿಲ್ಲಾ ಸಮಾವೇಶ ಡಿ. 25ರಂದು ನಡೆಯಲಿದೆ ಎಂದು ಶಿಕ್ಷಣ ಹಕ್ಕು ಸಮಿತಿಯ ಸದಸ್ಯ ಶ್ರೀನಿವಾಸ್ ತಿಳಿಸಿದರು. ಶಿಕ್ಷಣ ಹಕ್ಕು ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಮಾವೇಶವನ್ನು ಪತ್ರಕರ್ತ ಆರ್.ಪಿ. ವೆಂಕಟೇಶ್ ಮೂರ್ತಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್. ಜನಾರ್ಧನ್ ಅಧ್ಯಕ್ಷತೆ ವಹಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಆರ್. ಬಸವರಾಜ್ ಹಾಗೂ ಎಂ. ಕೃಷ್ಣ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ವಿ. ಶ್ರೀನಿವಾಸ್ ಭಾಗವಹಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಗೋಪಾಲಕೃಷ್ಣ, ಪ್ರಕಾಶ್, ಅನ್ಷದ್, ನಿರ್ಮಲ ವಿ. ದೇವ್ ಹಾಗೂ ಇದ್ದರು.
'ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ'
ಹಾರನಹಳ್ಳಿ: ಹಾರನಹಳ್ಳಿಯ ಸುತ್ತಮುತ್ತಲ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದ್ದು, ಬೇಸಿಗೆಯಲ್ಲಿ ತೊಂದರೆಯಾಗದಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ ತಿಳಿಸಿದರು. ಹಾರನಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಇತ್ತೀಚೆಗೆ ಗ್ರಾಮ ಪಂಚಾಯ್ತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ 2013-14ನೇ ಸಾಲಿನ 2ನೇ ಸುತ್ತಿನ ಗ್ರಾಮಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಸೀಕೆರೆ ತಾಲೂಕು ಬರಗಾಲದಿಂದ ಕೂಡಿದ್ದು ಸರ್ಕಾರ ಬರ ಪ್ರದೇಶವೆಂದು ಘೋಷಣೆ ಮಾಡಿದ್ದು ಸರ್ಕಾರದಿಂದ ಬರ ಕಾಮಗಾರಿ ಅನುಷ್ಠಾನ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶಾಸಕ ಶಿವಲಿಂಗೇಗೌಡರು ಚರ್ಚಿಸುವುದಾಗಿ ತಿಳಿಸಿದರು. ಗ್ರಾಮಸಭೆಗೆ ಗೈರು ಹಾಜರಾದ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ ಅವರಿಗೆ ಮನವಿ ಮಾಡಿದರು.
ಅಪರಾಧ ತಡೆ ಮಾಸಾಚರಣೆ
ಹೊಳೆನರಸೀಪುರ: ಕಾನೂನು ಸುವ್ಯವಸ್ಥೆ ಹಾಗೂ ಅಪರಾಧಗಳನ್ನು ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಕೂಡ ಅತಿ ಮುಖ್ಯವಾಗಿದ್ದು, ಪೊಲೀಸರೂ ಕೂಡ ಜನಸ್ನೇಹಿಗಳಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸುವ್ಯವಸ್ಥಿತ ಸಮಾಜ ನಿರ್ಮಾಣ ಸಾಧ್ಯ ಎಂದು ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಅಭಿಪ್ರಾಯಪಟ್ಟರು. ಪಟ್ಟಣದ ವಾಸವಿ ಮಹಲ್ನಲ್ಲಿ ಇಲ್ಲಿನ ಜೆರಾಕ್ಸ್ ವರ್ತಕರ ಸಂಘದ ಸಹಯೋಗದಲ್ಲಿ ಇತ್ತೀಚೆಗೆ, ಹಮ್ಮಿಕೊಂಡಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿಸಿ ಟಿವಿ: ಸಾರ್ವಜನಿಕ ಸ್ಥಳಗಳಲ್ಲಿ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಶೀಘ್ರದಲ್ಲಿಯೇ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಜೆರಾಕ್ಸ್ ಮಾಲೀಕರ ಸಂಘದ ಅಧ್ಯಕ್ಷ ಮೀರ್ ಗುಲ್ಷನ್ ಆಲಿ ಇದ್ದರು. ಎಚ್.ಎಸ್. ಮಂಜುನಾಥ ಗುಪ್ತ ಕಾರ್ಯಕ್ರಮ ನಿರೂಪಿಸಿ, ಲಕ್ಷ್ಮೀ ಗುಪ್ತ ಪ್ರಾರ್ಥಿಸಿದರು. ಪ್ರಸನ್ನ ಕುಮಾರ್ ವಂದಿಸಿದರು.
ಗ್ರಾಮ ಸಭೆ ಕಾರ್ಯಕ್ರಮ
ಹಾರನಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ಇತ್ತೀಚೆಗೆ ಗ್ರಾಮ ಪಂಚಾಯ್ತಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಗ್ರಾಮಸಭೆ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಬಿಳಿಚೌಡಯ್ಯ, ತಾಪಂ ಹೆಚ್.ಟಿ. ಶಿವಮೂರ್ತಿ ಹಾಗೂ ಇತರರು ಇದ್ದಾರೆ.
ಮತದಾರರ ಪಟ್ಟಿಯಲ್ಲಿ ಲೋಪವಾಗದಂತೆ ಸೂಚನೆ
ಹಾಸನ: ಮತದಾರರ ಪಟ್ಟಿಯಲ್ಲಿ ಯಾವುದೇ ರೀತಿಯ ಸಣ್ಣಪುಟ್ಟ ಲೋಪಗಳೂ ಉಂಟಾಗದಂತೆ ಎಚ್ಚರಿಕೆ ವಹಿಸುವುದರ ಜೊತೆಗೆ ಮತದಾರರ ಪಟ್ಟಿಯಲ್ಲಿರುವ ಎಲ್ಲರಿಗೂ ಗುರುತಿನ ಚೀಟಿ ಇರುವಂತೆ ನೋಡಿಕೊಳ್ಳಬೇಕು ಹಾಗೂ ಮತದಾರರ ಪಟ್ಟಿ ಪರಿಪೂರ್ಣವಾಗಿರುವಂತೆ ನೋಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಅವರು ಜಿಲ್ಲಾ ತಹಸೀಲ್ದಾರ್, ಚುನಾವಣಾ ಶಿರಸ್ತೇದಾರಗಳಿಗೆ ಸೂಚಿಸಿದ್ದಾರೆ. ತಮ್ಮ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮುಂಬರುವ ಲೋಕಸಭಾ ಚುನಾವಣೆಗೆ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಜ. 25ರಂದು ನಡೆಯಲಿರುವ ಮತದಾರರ ದಿನಾಚರಣೆ ಕುರಿತಂತೆ ಪೂರ್ವಭಾವಿ ಸಭೆ ನಡೆಸಿದ ಅವರು ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅತ್ಯಂತ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೆ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಇನ್ನೆರಡು ದಿನಗಳೊಳಗಾಗಿ ಇತ್ಯರ್ಥಗೊಳಿಸಿ ಗಣಕೀಕರಣ ಪ್ರಕಿಯೆಯನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.
ಪಡುವಲಹಿಪ್ಪೆಯಲ್ಲಿ ಏಡ್ಸ್ ಜಾಥಾ
ಹೊಳೆನರಸೀಪುರ: ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೆಡ್ ರಿಬ್ಬನ್ ಕ್ಲಬ್, ಸಮುದಾಯ ಆರೋಗ್ಯ ಕೇಂದ್ರ, ಹೊಳೆನರಸೀಪುರ ರೋಟರಿ, ಹಾಗೂ ರೆಡ್ ಕ್ರಾಸ್ ಸಂಸ್ಥೆಗಳ ಇತ್ತೀಚೆಗೆ ಏಡ್ಸ್ ಅರಿವು ಕಾರ್ಯಕ್ರಮ ಹಾಗೂ ಜಾಥಾ ಕಾರ್ಯಕ್ರಮ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕೆ.ಹೆಚ್. ಯೋಗಣ್ಣ ಅವರು ಜಾಥಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ತಾಲೂಕು ರೆಡ್ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಸಿ. ಮರಿಯಪ್ಪ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಕೆ.ಹೆಚ್.ಯೋಗಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ಮೂಡಿಸಲು ಈಗಾಗಲೇ ಏಡ್ಸ್ ಕುರಿತ ಪ್ರಬಂಧ ಸ್ಪರ್ಧೆ, ಘೋಷಣಾ ವಾಕ್ಯ, ಹಾಗೂ ಬಿತ್ತಿಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಇನ್ನೂ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಜಾಥಾ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದರು.
ರಸ್ತೆಗಳ ಅಭಿವೃದ್ಧಿಗೆ ನೆರವಿನ ಭರವಸೆ: ಶಾಸಕ
ಸಕಲೇಶಪುರ: ತಾಲೂಕಿನ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ನೆರವಿನ ಭರವಸೆ ಸರ್ಕಾರದಿಂದ ದೊರೆತಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದ್ದಾರೆ. ಗುರುವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಅದಿವೇಶನದಲ್ಲಿ ತಾಲೂಕಿನ ಹದಗೆಟ್ಟ ರಸ್ತೆ ದುರಸ್ಥಿಯ ಬಗ್ಗೆ ಚರ್ಚೆ ನಡೆಸಲಾಗಿದ್ದು ಹಾಸನ ಜಿಲ್ಲೆಯ ಬಗ್ಗೆ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಥಮ ಹಂತದಲ್ಲಿ ತಾಲೂಕಿನ ಜನ್ನಾಪುರ- ವಣಗೂರು ನಡುವಿನ 48 ಕಿ.ಮೀ. ರಾಜ್ಯ ಹೆದ್ದಾರಿ ಅಭಿವೃದ್ಧಿಗೆ ಭರವಸೆ ದೊರಕಿದ್ದರೆ ಎರಡನೇ ಹಂತದಲ್ಲಿ ಬ್ಯಾದನೆಯಿಂದ- ಬ್ಯಾಕರವಳಿ ಗ್ರಾಮದವರವರಗಿನ 17 ಕಿ.ಮೀ. ರಸ್ತೆ ದುರಸ್ತಿಗಾಗಿ ಕೈಗೆತ್ತಿಕೊಳ್ಳವ ಭರವಸೆ ದೊರೆತಿದೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಮುಖೇಶ್, ಸದಸ್ಯರಾದ ರುದ್ರಕುಮಾರ್, ಶೋಭಾವತಿ, ಸಂತೋಷ್, ಉಮೇಶ್, ಗೀರಿಶ್, ಎಸ್.ಕೆ ಸೂರ್ಯ, ಜೆಡಿಎಸ್ನಾಯಕ ಬೆಕ್ಕಿನಹಳ್ಳಿ ನಾಗರಾಜ್, ಯಾದಗಾರ್ ಇಬ್ರಾಹಿಂ ಇದ್ದರು.
ಕಾಂಗ್ರೆಸ್, ಬಿಜೆಪಿಗೆ ಜೆಡಿಯು ಪರ್ಯಾಯ
ಹಾಸನ: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಹೊಸದಾಗಿ ಸಂಘಟಿಸುತ್ತಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಪಕ್ಷ ಬಲಗೊಳ್ಳಲಿದೆ ಎಂದು ಜನತಾದಳ (ಸಂಯುಕ್ತ)ದ ರಾಜ್ಯ ಉಪಾಧ್ಯಕ್ಷ ಅರವಿಂದ ದಳವಾಯಿ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವನ್ನು ರಾಜ್ಯದಲ್ಲಿ ಹೊಸದಾಗಿ ಸಂಘಟಿಸುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ, ಪ್ರತಿವಿಧಾನಸಭಾ ಕ್ಷೇತ್ರಗಳಲ್ಲಿ 5 ಜನರ ಪದಾಧಿಕಾರಿಗಳು ತಂಡ ಸೇರಿದಂತೆ ನಾನಾ 14 ವಿಭಾಗಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ ಹಾಗೂ ಇತರೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗುತ್ತದೆ ಲೋಕಸಭಾ ಕ್ಷೇತ್ರಕ್ಕೆ ರಾಜ್ಯಾದ್ಯಂತ 28 ಕ್ಷೇತ್ರಗಳಲ್ಲಿ ಪಕ್ಷ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದಾರೆ. ಅಭ್ಯರ್ಥಿಗಳನ್ನು ಗುರುತಿಸುವಂತಹ ಕಾರ್ಯ ನಡೆಯುತ್ತಿದ್ದು, ಶೀಘ್ರ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಸಂದರ್ಭದಲ್ಲಿ ರಾಜ್ಯ ಮುಖಂಡರಾದ ಶ್ರೀರಾಮ್, ಸೋಮಶೇಖರ್, ಬೆಂಗಳೂರು ನಗರ ಉಪಾಧ್ಯಕ್ಷ ಸಂತೋಷ್, ಜಿಲ್ಲಾಧ್ಯಕ್ಷ ಮಳಲಿ ನಾರಾಯಣಗೌಡ ಇದ್ದರು.
ಕಾನ್ಸ್ಟೆಬಲ್ಗಳಿಂದಲೇ ಹಣ ಕೀಳಲು ಯತ್ನ
ಹಾಸನ: ಬೇಲಿಯೇ ಎದ್ದು ಮೇಯ್ದಂತೆ ಎಂಬ ಗಾದೆ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ನಿಲ್ಲುತ್ತದೆ. ಪೊಲೀಸ್ ಕಾನ್ಸ್ಟೆಬಲ್ಗಳೇ ಯುವಕನಿಂದ ಹಣ ಕೀಳಲು ವಿಫಲ ಯತ್ನ ನಡೆಸಿರುವ ಆರೋಪ ಕೇಳಿಬಂದಿದೆ. ಕಾನ್ಸ್ಟೆಬಲ್ಗಳ ವರ್ತನೆಯನ್ನು ಖಂಡಿಸಿ ಶುಕ್ರವಾರ ರಾತ್ರಿ ನೂರಾರು ಮಂದಿ ಹಾಸನ ನಗರದ ಪೆನ್ಷನ್ ಮೊಹಲ್ಲಾ ಠಾಣೆಗೆ ಹೋಗಿ ಆಕ್ರೋಶ ವ್ಯಕ್ತಪಡಿಸಿ, ನಗರ ಠಾಣೆಗೆ ದೂರು ನೀಡಿದ್ದಾರೆ. ಆದರೆ ದೂರು ದಾಖಲು ಮಾಡಿಲ್ಲ. ಏತನ್ಮಧ್ಯೆ, ಈ ಬಗ್ಗೆ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿರುವ ಎಸ್ಪಿ ರವಿ ಡಿ. ಚನ್ನಣ್ಣನವರ ಅವರು, ಈ ಘಟನೆ ಕುರಿತು ಸಮಗ್ರ ಮತ್ತು ಸೂಕ್ತ ತನಿಖೆ ನಡೆಸಿ, ದೂರು ದಾಖಲು ಮಾಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.
ಘಟನೆ ವಿವರ: ಕಾನೂನು ಪ್ರಕಾರವೇ ಪರವಾನಗಿ ಪಡೆದು ನಡೆಸುತ್ತಿರುವ ಫೈನಾನ್ಸ್ ಸಂಸ್ಥೆಯ ವಿಜಯಕುಮಾರ್ ಎಂಬ ಯುವಕನೊಬ್ಬ ಶುಕ್ರವಾರ 9.38ರಲ್ಲಿ ಪೆನ್ಷನ್ ಮೊಹಲ್ಲಾ ಬಳಿ ಬೈಕ್ ಹೋಗುತ್ತಿದ್ದರು. ಈ ಸಮಯದಲ್ಲಿ ಹಠಾತ್ತನೆ ಬಂದಪೆನ್ಷನ್ ಮೊಹಲ್ಲಾ ಠಾಣೆಯ ಮೂವರು ಕಾನ್ಸ್ಟೆಬಲ್ಗಳು ಅಡ್ಡ ಹಾಕಿ, ಸಂತೆ ಪೇಟೆ ಶಾಲೆಯ ಹಿಂಭಾಗದ ಕಗ್ಗತ್ತಲಿಗೆ ಕರೆದುಕೊಂಡು ಹೋಗಿ ಜೇಬಿಗೆ ಕೈ ಹಾಕಿದರು ಎಂದು ಆರೋಪಿಸಲಾಗಿದೆ.
ಕಾರ್ಯಾಚರಣೆ...
ಸಕಲೇಶಪುರ ತಾಲೂಕಿನ ಮಾರನಹಳ್ಳಿ ಬಳಿ ಮಂಗಳೂರಿನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ಅಕ್ರಮ ಮರಳು ತುಂಬಿದ ಲಾರಿಗಳನ್ನು ತಹಸೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಚಾಲಕರು ಪರಾರಿಯಾಗಿದ್ದಾರೆ.
ಹಿಡಿದಿದ್ದು 18 ಲಾರಿ... ಇಲಾಖೆಗೆ ತಲುಪಿದ್ದು ಬರೀ 6
ಸಕಲೇಶಪುರ: ಅಕ್ರಮ ಮರಳು ಲಾರಿಗಳ ಕಾರ್ಯಾಚರಣೆಯಲ್ಲಿ ತಹಸೀಲ್ದಾರ್ ಪಾರ್ವತಿ ಹಿಡಿದಿದ್ದು 18 ಲಾರಿಗಳು, ಆದರೆ ಕಂದಾಯ ಇಲಾಖೆಗೆ ತಲುಪಿದ್ದು 6 ಲಾರಿಗಳು ಮಾತ್ರ. ರಾಷ್ಟ್ರೀಯ ಹೆದ್ದಾರಿ 48ರ ಪ್ರತಿದಿನ ನೂರಾರು ಅಕ್ರಮ ಮರಳು ಲಾರಿಗಳು ಸಾಗುತಿದ್ದು, ಈ ಮರಳು ಹೊತ್ತು ಸಾಗುವ ಲಾರಿಗಳಿಂದಾಗಿ ಶಿರಾಡಿ ಘಾಟ್ ರಸ್ತೆ ದುಸ್ಥಿತಿಗೀಡಾಗಿದೆ. ಈ ಬಗ್ಗೆ ಸ್ಥಳಿಯ ಅಧಿಕಾರಿಗಳಿಗೆ ತಿಳಿಸಿದರೆ, ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ ಎಂದು ಶಿರಾಡಿ ಉಳಿಸಿ ಹೋರಾಟ ಸಮಿತಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ಹಿರಿಯ ಅಧಿಕಾರಿಗಳ ಆದೇಶದಂತೆ ಗುರುವಾರ ರಾತ್ರಿ ಇನ್ಸ್ಪೆಕ್ಟರ್ ಗುರುರಾಜ್ ಹಾಗೂ ತಹಸೀಲ್ದಾರ್ ಪಾರ್ವತಿ ನೇತೃತ್ವದಲ್ಲಿ ಸುಮಾರು 25 ಪೊಲೀಸರು ಹಾಗೂ ಶಿರಾಡಿ ಉಳಿಸಿ ಹೋರಾಟ ಸಮಿತಿ ಕಾರ್ಯಕರ್ತರು ಹೆದ್ದಾರಿಯಲ್ಲಿ ಸಾಗುತ್ತಿದ್ದ 18 ಲಾರಿಗಳನ್ನು ವಶಕ್ಕೆ ಪಡೆದಿದ್ದರು. ಪ್ರತಿ ಲಾರಿಯ ನಂಬರ್ ಪಡೆದು ಪಟ್ಟಣದ ಕಂದಾಯ ಇಲಾಖೆ ಕಚೇರಿಗೆ ಲಾರಿಗಳನ್ನು ಸಾಗಿಸುವಂತೆ ತಿಳಿಸಿ ಪೊಲೀಸ್ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಆದರೆ, ವಶಕ್ಕೆ ಪಡೆದ ಮರಳುಲಾರಿಗಳಲ್ಲಿ ಕೇವಲ 6 ಲಾರಿಗಳು ಮಾತ್ರ ಕಂದಾಯ ಇಲಾಖೆ ಕಚೇರಿಗೆ ತಲುಪಿವೆ.
ತಾಂತ್ರಿಕ ವೃತ್ತಿ ತರಬೇತಿಗೆ ಅರ್ಜಿ ಆಹ್ವಾನ
ಹಾಸನ: ವಾರ್ತಾ ಇಲಾಖೆಯು 2013-14ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಆಸಕ್ತ ಪರಿಶಿಷ್ಟ ಜಾತಿಯ 40 ಸಂಖ್ಯೆಯ ನಿರುದ್ಯೋಗಿ ಪದವೀಧರ ಯುವಕ-ಯುವತಿಯರಿಗೆ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಅಂದರೆ ಛಾಯಾಗ್ರಹಣ, ಸಂಕಲನ, ಮಲ್ಟಿ ಮೀಡಿಯಾದಲ್ಲಿ ಒಂದು ತಿಂಗಳ ಸರ್ಟಿಫಿಕೇಟ್ ಕೋರ್ಸ್ನ ರೀತಿಯಲ್ಲಿ ತಾಂತ್ರಿಕ ವೃತ್ತಿ ತರಬೇತಿಯನ್ನು ನೀಡಲು ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರ ಇಲ್ಲಿ ಜನವರಿ, ಫೆಬ್ರವರಿ 2014ನೇ ಮಾಹೆಯಲ್ಲಿ ನಡೆಸಲು ಇಲಾಖೆಯು ಉದ್ದೇಶಿಸಿದೆ. ಈ ಸಂಬಂಧ ಪರಿಶಿಷ್ಟ ಜಾತಿಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ತರಬೇತಿ ಅವಧಿ 30 ದಿನಗಳಿದ್ದು, ತರಬೇತಿಯ ಅವಧಿಯಲ್ಲಿ ಊಟ ಮತ್ತು ವಸತಿ ಸೌಕರ್ಯವನ್ನು ಇಲಾಖೆಯಿಂದ ಒದಗಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ ವಾರ್ತಾ ಇಲಾಖೆ, ವಾತಾ ಸೌಧ, ನಂ.17, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು-560001 ಅಥವಾ ಉಪ ನಿರ್ದೇಶಕರು (ಚಲನಚಿತ್ರ), ವಾತಾ ಇಲಾಖೆ, ಬೆಂಗಳೂರು, ದೂರವಾಣಿ ಸಂಖ್ಯೆ 080-22028052 / 56ರ ಮೂಲಕ ಸಂಪರ್ಕಿಸಬಹುದು.
ಪ್ರವೇಶ ದಿನಾಂಕ ಮುಂದೂಡಿಕೆ
ಹಾಸನ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು-06, ರ ವತಿಯಿಂದ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ 2013-14ನೇ ಸಾಲಿನ ಶ್ಯೆಕ್ಷಣಿಕ ಸಾಲಿನ ಪ್ರಥಮ, ದ್ವಿತೀಯ, ತೃತೀಯ ಬಿ.ಎ, ಬಿ.ಕಾಂ., ಪ್ರಥಮ, ಅಂತಿಮ ಎಂ.ಎ, ಎಂ.ಕಾಂ., ಡಿಪ್ಲೋಮಾ, ಎಲ್.ಎಲ್.ಎಮ್., ಬಿ.ಎಲ್.ಐ.ಎಸ್ಸಿ., ಎಂ.ಎಲ್.ಐ.ಎಸ್ಸಿ., ಎಂ.ಎಸ್ಸಿ., ಸರ್ಟಿಫಿಕೇಟ್ ಕೋರ್ಸ್ಗಳ ಪ್ರವೇಶ ದಿನಾಂಕವನ್ನು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ರು. 400 ದಂಡಶುಲ್ಕದೊಂದಿಗೆ ಡಿ. 28ರವರೆಗೆ ವಿಸ್ತರಿಸಲಾಗಿದೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ, ಉತ್ತೀರ್ಣ ಅಥವಾ ಅನುತ್ತೀರ್ಣರಾಗಿರಲಿ 18 ವರ್ಷ ತುಂಬಿದ ಯಾವುದೇ ವ್ಯಕ್ತಿಯೂ ಬಿ.ಎ, ಬಿ.ಕಾಂಗೆ ನೇರವಾಗಿ ಪ್ರವೇಶಾತಿ ಪಡೆಯಬಹುದು. ಮಾಹಿತಿಗಾಗಿ ಹಾಸನ ಪ್ರಾದೇಶಿಕ ಕೇಂದ್ರ, ಆದಿಚುಂಚನಗಿರಿ ಕಲ್ಯಾಣಮಂಟಪ ಕಟ್ಟಡ, ಎಂ.ಜಿ. ರೋಡ್, ರವೀಂದ್ರ ನಗರ, ಹಾಸನ ಇಲ್ಲಿ ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಡಾ. ಪಿ. ಹರೀಶ್, ಪ್ರಾದೇಶಿಕ ನಿರ್ದೇಶಕರು, (08172 269244, ಮೊ.ನಂ. 98441 45234) ಇವರನ್ನು ಸಂಪರ್ಕಿಸಬಹುದು.
'ಕಾನೂನು ವ್ಯವಸ್ಥೆ ಹದಗೆಡಿಸಲು ಪಿತೂರಿ'
ಸಕಲೇಶಪುರ: ಭಜರಂಗದಳ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ಕಾನೂನು ವ್ಯವಸ್ಥೆಯನ್ನು ಹದೆಗೆಡಿಸುವಂತಹ ವ್ಯವಸ್ಥೆ ತಾಲೂಕಿನಲ್ಲಿ ಪಿತೂರಿ ನಡೆಸುತ್ತಿದ್ದಾರೆ ಎಂದು ಅರೋಪಿಸಿ ಪಿಎಫ್ಐ ಕಾರ್ಯಕರ್ತರು ತಹಸೀಲ್ದಾರ್ ಮತ್ತು ಪೋಲಿಸ್ ಇಲಾಖೆಗೆ ಶುಕ್ರವಾರ ಮನವಿ ಸಲ್ಲಿಸಿದರು. ಶುಕ್ರವಾರ ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಭೇಟಿ ನೀಡಿ ತಹಸೀಲ್ದಾರ್ ಮನವಿ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಧರ್ಮಗಳ ಬಗ್ಗೆ ಒಳ್ಳೆಯದನ್ನು ಹೇಳಿಕೊಳ್ಳಲು ಯಾವುದೇ ಅಭ್ಯಂತರವಿಲ್ಲ. ಇತ್ತೀಚೆಗೆ, ಭಜರಂಗದಳದ ಕಾರ್ಯಕರ್ತರು ತಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳುವ ಭರದಲ್ಲಿ ಇತರ ಹಕ್ಕುಗಳಿಗೆ ಧಕ್ಕೆ ತರಬಾರದು ಮನವಿ ಮಾಡಿದರು. ಇತ್ತೀಚೆಗೆ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ಆಡಳಿತದ ಯಾವುದೇ ಅನುಮತಿ ಪಡೆಯದೆ ಪೋಲಿಸರಿಂದ ಧ್ವನಿವರ್ಧಕದ ಬಳಕೆಗೆ ಅವಕಾಶವನ್ನು ಕೇಳಸ ಸಭೆಯಲ್ಲಿ ನಿರ್ದಿಷ್ಟವಾಗಿ ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಅವಾಚ್ಯ ಶಬ್ದ ಬಳಸಿ ಮಾತನಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಹೇಳಿದರು. ಈ ಸಂಧರ್ಭದಲ್ಲಿ ಪಿಎಫ್ಐ ಮುಖಂಡರಾದ ಇರ್ಫಾನ್, ಅಜೀಜ್, ಸಲೀಂ, ಮೀಸೆ ಮಂಜಯ್ಯ ಇತರರು ಇದ್ದರು.
ಡೆಮಾನ್ಸ್ಟ್ರೇಷನ್ ಶಾಲೆ ಪ್ರಥಮ
ಅರಸೀಕೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಹಾಗೂ ಉಪನಿರ್ದೇಶಕರ ಕಚೇರಿಯ ಸಹಯೋಗದಲ್ಲಿ ಚನ್ನರಾಯಪಟ್ಟಣದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಡೆಮಾನ್ಸ್ಟ್ರೇಷನ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರದರ್ಶಿಸಿದ ಮಾದರಿಗಳು ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ. ಸತತ ಆರನೇ ಬಾರಿ ರಾಜ್ಯಮಟ್ಟ ಪ್ರವೇಶಿಸಿರುವ ಈ ಶಾಲೆಯ ಗಣಿತ ಮತ್ತು ವಿಜ್ಞಾನ ಶಿಕ್ಷಕ ಕೆ.ಆರ್. ದಯಾನಂದ್ ಸಿದ್ಧಪಡಿಸಿ, ಸಾದರಪಡಿಸಿದ ವಿಜ್ಞಾನ ಮತ್ತು ಗಣಿತದ ಮಾದರಿಗಳು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 10ನೇ ತರಗತಿಯ ವಿದ್ಯಾರ್ಥಿನಿಯರಾದ ಭಾನು ಡಿ ಮತ್ತು ನಯನ ಸಿದ್ಧಪಡಿಸಿದ್ದ ಗಣಿತದ ಅನ್ವೇಷಣೆಗಳು ಪ್ರಶಸ್ತಿ ಸುತ್ತು ತಲುಪುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿವೆ. ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಸಾಧನೆಯನ್ನು ಯಳನಡು ಜಗದ್ಗುರು ವಿದ್ಯಾಸಂಸ್ಥೆಯ ಅಧ್ಯಕ್ಷ ಜ್ಞಾನಪ್ರಭು ಸಿದ್ದರಾಮ ದೇಶೀಕೇಂದ್ರ ಸ್ವಾಮೀಜಿ, ಕಾರ್ಯದರ್ಶಿ ಶ್ಯಾನೇಗೆರೆ ಶಿವನಂಜೇಗೌಡ, ನಿರ್ದೇಶಕರಾದ ಸಂಕೋಡನಹಳ್ಳಿ ಸ್ವಾಮಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಚಿಗುರು ಕಾರ್ಯಕ್ರಮ
ಹಾಸನದ ಶ್ರೀರಾಮನಗರದ ರಾಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ .ಕನ್ನಡ ಮತ್ತು ಸಂಸ್ಕತಿ ಇಲಾಖೆ ವತಿಯಿಂದ ನಡೆದ ಚಿಗುರು ಕಾರ್ಯಕ್ರಮದಲ್ಲಿ ಲೇಖಕ ಗೊರೂರು ಅನಂತರಾಜು ಮಾತನಾಡಿದರು. ಶ್ರೀ ರಂಗನಾಥ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೇಖರ್, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ತಿ. ರಾಮಕೃಷ್ಣಯ್ಯ, ಗಾಯಕ ಗಂಗಾಧರ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನೌಕರ ಕುಮಾರ್ ಇದ್ದಾರೆ.
ಲೋಕ ಕಲ್ಯಾಣಾರ್ಥ ಚಂಡಿಕಾ ಹೋಮ
ಅರಸೀಕೆರೆ: ಪಟ್ಟಣದ ವಿದ್ಯಾನಗರ ಬಡಾವಣೆಯ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಇತ್ತೀಚೆಗೆ ಲೋಕ ಕಲ್ಯಾಣಾರ್ಥ ಹಾಗೂ ತಾಲ್ಲೂಕಿನ ಬರಪರಿಹಾರಕ್ಕಾಗಿ ಚಂಡಿಕಾ ಹೋಮ ಹವನಗಳನ್ನು ನಡೆಸಲಾಯಿತು. ಪಟ್ಟಣದ ಹಾಸನ ರಸ್ತೆಯಲ್ಲಿನ ವಿದ್ಯಾನಗರ ಬಡಾವಣೆಯ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಬೆಳಗ್ಗೆ ಆಶ್ರಮದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಸತೀಶ್ ಶರ್ಮ ಸ್ವಾಮೀಜಿ ಮಾರ್ಗದರ್ಶನದಲ್ಲಿ ಋತ್ವಿಕರ ಸಮೂಹ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಹೋಮ ಮತ್ತು ಹವನಗಳನ್ನು ನಡೆಸಿದರು.
ಧಾರ್ಮಿಕ ಕಾರ್ಯಕ್ರಮಗಳು ಮುಕ್ತಾಯ ನಂತರ ಭಾಗವಹಿಸಿದ್ದ ಎಲ್ಲ ಭಕ್ತರಿಗೂ ಆಶ್ರಮದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆಶ್ರಮದ ಆಡಳಿತಾಧಿಕಾರಿ ಬಿ.ಎಸ್.ಸೇತುರಾಮು, ಮುರುಳಿ ಮಂದಾರ್ತಿ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
ಭಗವದ್ಗೀತೆ ವಿಷಯ ಕುರಿತು ಸ್ಪರ್ಧೆ
ಅರಸೀಕೆರೆ: ಶ್ರೀಮತ್ ಭಗವದ್ಗೀತೆ, ನಮಗೆಷ್ಟು ಗೊತ್ತು ಎಂಬ ವಿಷಯದ ಬಗ್ಗೆ ರಾಜ್ಯ ಮಟ್ಟದಲ್ಲಿ ದ್ವಿತೀಯ ವರ್ಷದ ಸ್ಪರ್ಧೆಗಳನ್ನು ಜ. 12ರಂದು ಪಟ್ಟಣದಲ್ಲಿ ಶ್ರೀರಾಮಕೃಷ್ಣ ವಿದ್ಯಾ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ವಿದ್ಯಾ ಕೇಂದ್ರದ ಕಾರ್ಯದರ್ಶಿ ಕೆ.ಕೆ. ವೇಣುಗೋಪಾಲ್ ತಿಳಿಸಿದ್ದಾರೆ. ಆಸಕ್ತರು ತಮ್ಮ ಹೆಸರುಗಳನ್ನು ಡಿ. 31ರೊಳಗೆ ನೋಂದಾಯಿಸಿಕೊಳ್ಳಬೇಕು. ಸ್ಪರ್ಧೆಗೆ ಪರ ಊರುಗಳಿಂದ ಬರುವವರಿಗೆ ಉಚಿತ ವಸತಿ ವ್ಯವಸ್ಥೆ ಇದೆ. ಎಲ್ಲಾ ಸ್ಪರ್ಧೆಗಳು 4ನೇ ಅಧ್ಯಾಯಕ್ಕೆ ಸೀಮಿತವಾಗಿದ್ದು, ಕಂಠಪಾಠ ಸ್ಪರ್ಧೆಗೆ 4ನೇ ಅಧ್ಯಾಯ ಪೂರ್ಣವಾಗಿರುತ್ತದೆ. ಭಾಷಣ ಸ್ಪರ್ಧೆ, ಮೌಖಿಕ ರಸ ಪ್ರಶ್ನಾ ಸ್ಪರ್ಧೆ, ಪದಬಂಧ ಸ್ಪರ್ಧೆ, ಲಿಖಿತ ಪರೀಕ್ಷಾ ಸ್ಪರ್ಧೆಗಳನ್ನು ಪ್ರತ್ಯೇಕವಾಗಿ ಆಯೋಜಿಸಿದ್ದು, ಈ ಎಲ್ಲಾ ಸ್ಪರ್ಧೆಗಳನ್ನು ಮೂರು ವಿಭಾಗಗಳಾಗಿ ಮಾಡಿದ್ದು, 1ನೇ ವಿಭಾಗದಲ್ಲಿ ಕಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿಗಳು, 2ನೇ ವಿಭಾಗದಲ್ಲಿ ಹಿರಿಯ ವಿದ್ಯಾರ್ಥಿಗಳ ವಿಭಾಗದಲ್ಲಿ 10ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ. 3ನೇ ವಿಭಾಗದಲ್ಲಿ ಸಾರ್ವಜನಿಕರು ವಯೋವುತಿ ಇಲ್ಲದೆ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ, ಮೊ- 98807 96056 ಮತ್ತು 99729 71063 ಸಂಪರ್ಕಿಸಲು ಕೋರಲಾಗಿದೆ.