ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಡಿ. 21
ಕನಿಷ್ಠ ಕೂಲಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯ ಬಳಿ ಕೆಲ ಸಮಯ ಪ್ರತಿಭಟನೆ ನಡೆಸಿ, ದುಡಿಯುವ ಮಹಿಳೆಯರ ಮೂಲಭೂತ ಹಕ್ಕುಗಳಿಗಾಗಿ ಒತ್ತಾಯಿಸಿದ ಅವರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಆಕ್ರೋಶ: ದುಡಿಯುವ ಮಹಿಳೆಯರ ಬದುಕು ಉದಾರೀಕರಣದ ನೀತಿಗಳಿಂದ ಮತ್ತಷ್ಟು ಹದಗೆಟ್ಟಿದೆ. ಗೃಹಾಧಾರಿತವಾಗಿ ಮತ್ತು ಸಾಂಪ್ರಾದಾಯಿಕವಾಗಿ ಮಹಿಳೆಯರೇ ಹೆಚ್ಚಾಗಿ ದುಡಿಯುವ ಗೋಡಂಬಿ, ನಾರು, ಅಗರಬತ್ತಿ, ಬೀಡಿ, ಮೀನುಗಾರಿಕೆ, ಹ್ಯಾಂಡಲೂಂ, ಪವರ್ ಲೂಂ, ಟೈಲರಿಂಗ್, ಲೇಸ್, ಹೂಮಾಲೆ, ಗಾಳಿಪಟ, ಕಾಗದದ ಚೀಲ, ಎಲೆಕ್ಟ್ರಾನಿಕ್ಸ್ ಉಪಕರಣಗಳ ಜೋಡಿಕೆ ಅದರ ಸಾಮಾಗ್ರಿಗಳು ಮುಂತಾದ ವಲಯಗಳು ಸರ್ಕಾರದ ನೀತಿಗಳಾದ ವಿಶ್ವ ವ್ಯಾಪಾರ ಸಂಸ್ಥೆ, ಅಸಿಯಾನ ಮುಕ್ತ ವ್ಯಾಪಾರ ಒಪ್ಪಂದದಂತಹ ಕ್ರಮಗಳಿಂದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಲಕ್ಷಾಂತರ ಮಹಿಳೆಯರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ನಿರ್ಲಕ್ಷ್ಯ: ಮಹಿಳೆಯರ ರಕ್ಷಣೆಗಾಗಿ ಇರುವ ಕೆಲವೇ ಕಾನೂನುಗಳು ಅಸಂಘಟಿತ ವಲಯದ ದುಡಿಯುವ ಮಹಿಳೆಯರಿಗೆ ಲಭ್ಯವಿಲ್ಲ. 2008ರಲ್ಲಿ ಸ್ವೀಕೃತವಾದ ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಸುರಕ್ಷತಾ ಕಾಯ್ದೆಯಡಿ ಕಾರ್ಮಿಕರ ದಾಖಲಾತಿಯ ಕೆಲಸವೂ ಆರಂಭವಾಗಿಲ್ಲ. ಹಾಗೆಯೇ ಮಹಿಳೆಯರೇ ಹೆಚ್ಚಾಗಿರುವ ಕಟ್ಟಡ ನಿರ್ಮಾಣ, ಚಿಲ್ಲರೆ ವ್ಯಾಪಾರ ಮುಂತಾದ ವಲಯಗಳಲ್ಲಿ ಸಂಬಂಧಿಸಿದ ಕಾನೂನುಗಳಲ್ಲಿ ಜಾರಿಗೊಳಿಸಿಲ್ಲ. ಮಹಿಳೆಯರೇ ಹೆಚ್ಚಾಗಿ ದುಡಿಯುವ ವಿಶೇಷ ಆರ್ಥಿಕ ವಲಯಗಳಲ್ಲಿ ಸರ್ಕಾರವೇ ಕಾರ್ಮಿಕ ಕಾನೂನು ಉಲ್ಲಂಘನೆಗೆ ಸರ್ಕಾರವೇ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಗುರುತಿಸುತ್ತಿಲ್ಲ: ಸರ್ಕಾರದ ನಾನಾ ಯೋಜನೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಆಹಾರ, ಪೌಷ್ಠಿಕತೆ, ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ನಾಗರೀಕರಿಗೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಅಧಿಕಾರದಲ್ಲಿ ಇರುವ ಸರ್ಕಾರಗಳು ಈ ಕಾರ್ಯಕ್ರಮಗಳ ಗರಿಷ್ಠ ರಾಜಕೀಯ ಲಾಭಕ್ಕೆ ಇದನ್ನು ಬಳಸುತ್ತಿದ್ದರೂ, ಈ ಯೋಜನೆಗಳನ್ನು ಯಾವುದೇ ಸಮಯದಲ್ಲಿ ಹಿಂದೆ ತೆಗೆದುಕೊಳ್ಳಬಹುದಾಗಿದೆ. ಒಂದು ಕಡೆ ಈ ಯೋಜನೆಯ ಲಾಭ ಪಡೆಯಬೇಕಾದ ಜನತೆಯನ್ನು ವಂಚಿಸಿದರೆ ಇನ್ನೊಂದೆಡೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ದುಡಿಯುವವರನ್ನು ಕೆಲಸಗಾರರೆಂದು ಗುರುತಿಸಲಾಗುತ್ತಿಲ್ಲ ಎಂದು ದೂರಿದರು.
ಕಿಡಿ: ಸಮಾಜ ಸೇವಕರು, ಸೇವಾ ಕಾರ್ಯಕರ್ತರು, ಅತಿಥಿಗಳು, ಸ್ವಯಂ-ಸೇವಕರು ಇತ್ಯಾದಿ ಹೆಸರುಗಳಿಂದ ಅವರನ್ನು ಗುರುತಿಸಲಾಗುತ್ತಿದೆ. ಅಂಗನವಾಡಿ, ಬಿಸಿಯೂಟ, ರಾಷ್ಟ್ರೀಯ ಗ್ರಾಮೀಣಾ ಆರೋಗ್ಯ ಮಿಷನ್, ಸರ್ವ ಶಿಕ್ಷಣ ಅಭಿಯಾನ, ಅಂಚೆ ಮತ್ತು ಸಣ್ಣ ಉಳಿತಾಯ ಯೋಜನೆ, ಕೃಷಿ ತಂತ್ರಜ್ಞಾನ ನಿರ್ವಹಣೆ ಹೀಗೆ ಸರ್ಕಾರದ ವಿವಿಧ ಯೋಜನೆಗಳಲ್ಲಿ ಸುಮಾರು ಒಂದು ಕೋಟಿಗೂ ಹೆಚ್ಚು ಮಹಿಳೆಯರು ದುಡಿಯುತ್ತಿದ್ಧಾರೆ.
ಖಾಸಗಿ ವಿಭಾಗದಲ್ಲಿ ಗೃಹಾಧಾರಿತವಾಗಿ ಹೊರಗುತ್ತಿಗೆ ಆಧಾರದಲ್ಲಿ ಸಿಗುತ್ತಿದ್ದ ಕೆಲಸಗಳು ಉತ್ಪಾದನಾ ಕ್ಷೇತ್ರದಲ್ಲಿ ಕುಸಿತ ಉಂಟಾಗುತ್ತಿದೆ ಎಂದು ಕಿಡಿಕಾರಿದರು.
ಸೌಲಭ್ಯಗಳಿಲ್ಲ: ಉತ್ಪಾದನಾ ಕ್ಷೇತ್ರಗಳಲ್ಲಿನ ಕೆಲಸಗಳಲ್ಲಿ ಅನಿಶ್ಚಿತತೆ ಮತ್ತು ಡೋಲಾಯಮಾನ ಪರಿಸ್ಥಿತಿ ಉದ್ಭವಿಸಿದೆ. ಧೀರ್ಘಕಾಲಕ್ಕೆ ಲಭ್ಯವಿರುವ ಮತ್ತು ಉತ್ತಮ ವೇತನ ನೀಡುವ ಮೂಲ ಕೆಲಸಗಳಲ್ಲಿ ಮಹಿಳೆಯರ ಸಂಖ್ಯೆ ಕುಸಿದಿದೆ.
ಅಲ್ಪಾವಧಿಯ ಕಡಿಮೆ ಸಂಭಾವನೆಯ ಕೆಲಸಗಳು ಮಾತ್ರವೇ ದೊರೆಯುತ್ತಿವೆ. ಹೆಚ್ಚಿನ ಮಹಿಳೆಯರು ತಮ್ಮ ಕುಟುಂಬದ ಉಳಿವಿಗಾಗಿ ಎಷ್ಟೋ ಅವಧಿಗೆ ಯಾವುದೇ ಪರಿಸ್ಥಿತಿಯಲ್ಲಿ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಬಂದಿದೆ. ಉಪಯೋಗಿಸು- ಬಿಸಾಡು ಎಂಬ ನೀತಿ ಸರ್ಕಾರಗಳು ಎಲ್ಲಾ ವಿಭಾಗಗಳಲ್ಲಿ ಜಾರಿ ಮಾಡುತ್ತಿದೆ. ಈ ಕಾರಣಗಳಿಂದ ದುಡಿಯುವ ಮಹಿಳೆಯರಿಗಾಗಿಯೇ ಇರುವ ಮೂಲಭೂತ ಹಕ್ಕುಗಳಾದ ಸಮಾನ-ಕೆಲಸಕ್ಕೆ-ಸಮಾನ ವೇತನ, ಹೆರಿಗೆ ಭತ್ಯೆಯ ಜಾರಿ, ವಿಶ್ರಾಂತಿ ಕೊಠಡಿಗಳು, ಪ್ರತ್ಯೇಕ ಶೌಚಾಲಯಗಳು ಮುಂತಾದ ಸೌಲಭ್ಯಗಳು ಇಲ್ಲದೇ ಮತ್ತಷ್ಟು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಅಲವತ್ತುಕೊಂಡರು.
ಒಂದೆಡೆ ಮಹಿಳೆಯರು ಕೆಲಸದ ಭದ್ರತೆಯನ್ನು ಉಳಿಸಿಕೊಳ್ಳಲು ಮತ್ತು ಸಾಂಪ್ರದಾಯಿಕ ಕುಟುಂಬಗಳ ಹಿನ್ನಲೆಯಲ್ಲಿ ಬಂದಿರುವುದರಿಂದ ದೂರು ಕೊಡುವುದೇ ಕಡಿಮೆ. ಇನ್ನು ಹಲವರಿಗೆ ಈ ರೀತಿಯ ತೀರ್ಪಿನ ಬಗ್ಗೆಯೇ ಗೊತ್ತಿಲ್ಲ.
ಇನ್ನು ಕೆಲವೆಡೆ ಸಮಿತಿಗಳನ್ನು ರಚಿಸಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಇಂತಹ ವ್ಯವಸ್ಥೆಯನ್ನು ತೆಗೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಪುಷ್ಪ, ತೋಟ ಕಾರ್ಮಿಕರ ಸಂಘದ ಮುಖಂಡೆ ಸೌಮ್ಯ, ಅಂಗನವಾಡಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಲತಾ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮೇಶ್, ಜಿಲ್ಲಾ ಖಜಾಂಚಿ ವೈ.ಅರ್. ಮಂಜಮ್ಮ ಹಾಗೂ ಇತರರು ಇದ್ದರು.