ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದುರಸ್ತಿ ಕಾಣದ ಶಿಥಿಲ ಸೇತುವೆ

Srinivasa Murthy VN
Updated On : 21 Dec 2013, 11:34 am

ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ.21
ಎಚ್ಚರಿಕೆ ಸೇತುವೆ ಶಿಥಿಲಗೊಂಡಿದೆ ನಿಧಾನವಾಗಿ ಚಲಿಸಿ ಎಂಬ ಸೂಚನಾ ಫಲಕ ಹಾಕಿ ಎರಡು ವರ್ಷಗಳಾಗುತ್ತಾ ಬಂದರೂ, ಶಿಥಿಲಗೊಂಡಿರುವ ಸೇತುವೆಯನ್ನು ತೆರವುಗೊಳಿಸಿ, ನೂತನ ಸೇತುವೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಗೋಜಿಗೆ ಹೋಗದ ಇಲ್ಲಿನ ನೀರಾವರಿ ಇಲಾಖೆಯ ನಿರ್ಲಕ್ಷ್ಯತೆ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಳಜಿ ಇಲ್ಲ: ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸೇತುವೆಯು ಅಪಾಯದಲ್ಲಿರುವ ಮುನ್ಸೂಚನೆಯನ್ನು ಮಾತ್ರ ನಿಷ್ಠೆಯಿಂದ ಪ್ರದರ್ಶಿಸುತ್ತಿರುವ ಇಲ್ಲಿನ ನೀರಾವರಿ ಇಲಾಖೆಗೆ, ಅಷ್ಟೇ ನಿಷ್ಠೆಯಿಂದ ಅಪಾಯದಲ್ಲಿರುವ ಸೇತುವೆಯನ್ನು ದುರಸ್ತಿಗೊಳಿಸುವ ಅಥವಾ ಹೊಸ ಸೇತುವೆಯನ್ನು ನಿರ್ಮಿಸುವ ಇರಾದೆಯೇ ಇಲ್ಲವೇನೋ ಎಂಬಂತೆ ಕಣ್ಣುಮುಚ್ಚಿ ಕುಳಿತಿದೆ.
ಅಪಾಯದ ಮುನ್ಸೂಚನೆ: ಹೊಳೆನರಸೀಪುರದಿಂದ ಗೊರೂರಿಗೆ ಹೋಗುವ ಮಾರ್ಗದಲ್ಲಿನ ಗಂಗೂರು ಗ್ರಾಮದ ಹೊರವಲಯದಲ್ಲಿನ ಹೇಮಾವತಿ ಕಾಲುವೆಯ ಸರಪಳಿ 33.650ರ ಬಳಿಯಲ್ಲಿ ನಿರ್ಮಿಸಲಾಗಿರುವ ಸೇತುವೆಗೆ ಏನಿಲ್ಲವೆಂದರೂ ಎರಡು ದಶಕಗಳಿಗೂ ಮೀರಿದ ವಯಸ್ಸಾಗಿದೆ. ಈ ಮಾರ್ಗದಲ್ಲಿ ತೆರಳುವ ವಾಹನಗಳು ಹಾಗೂ ಜನಸಂಚಾರಕ್ಕೆ ಈ ಸೇತುವೆಯು ಬಹುಮುಖ್ಯ ಸಂಪರ್ಕ ಸಾಧನವಾಗಿದೆ. ಆದರೆ ದಶಕಗಳ ಕಾಲ ನಿಂತು ತನ್ನ ಮೇಲೆ ಲೆಕ್ಕವಿಲ್ಲದಷ್ಟು ವಾಹನಗಳು ಹಾಗೂ ಜನಸಂಚಾರಕ್ಕೆ ದಾರಿಯಾಗಿದ್ದ ಈ ಸೇತುವೆ ಕಾಲ ಕಳೆದಂತೆ ಸಹಜವಾಗಿ ಶಿಥಿಲವಾಗಿದ್ದು, ಬಂದೊದಗಬಹುದಾದ ಅಪಾಯದ ಮುನ್ಸೂಚನೆ ನೀಡುತ್ತಾ ನಿಂತಿದೆ.
ಗೋಜಿಗೆ ಹೋಗಿಲ್ಲ: ಸೇತುವೆಯು ಶಿಥಿಲವಾಗಿರುವ ಸಂಗತಿ ಸಂಬಂಧಿಸಿದ ನೀರಾವರಿ ಇಲಾಖೆಗೆ ತಿಳಿದಿದ್ದು, ಈ ಸಂಬಂಧವಾಗಿ ಇಲಾಖೆಯು ಶಿಥಿಲವಾಗಿರುವ ಸೇತುವೆಯ ಬಳಿ ಎಚ್ಚರಿಕೆಯ ಫಲಕವನ್ನು ಹಾಕಿ ಕೈತೊಳೆದುಕೊಂಡಿದೆ. ಆದರೆ ಶಿಥಿಲವಾಗಿರುವ ಸೇತುವೆಯನ್ನು ತೆರವುಗೊಳಿಸಿ, ಇಂದಿನ ಜನಸಾಂದ್ರತೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ ಸೂಕ್ತವಾದ ನೂತನ ಸೇತುವೆಯನ್ನು ನಿರ್ಮಿಸುವ ಗೋಜಿಗೆ ಮಾತ್ರ ನೀರಾವರಿ ಇಲಾಖೆ ಹೋಗಿಲ್ಲ.
ಪ್ರತಿ ನಿತ್ಯವೂ ಈ ಮಾರ್ಗದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಾಗೂ ವಾಹನ ಚಾಲಕರುಗಳು ಸಂಚರಿಸುತ್ತಿದ್ದು, ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿರುವ ಸೇತುವೆಯ ನಿರ್ಮಾಣ ಈ ಭಾಗಕ್ಕೆ ಅವಶ್ಯಕವಾಗಿ ಬೇಕಾಗಿದೆ.
ಆದರೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡುವ ನೀರಾವರಿ ಇಲಾಖೆ ತಾನು ಮಾತ್ರ ಇನ್ನೂ ಎಚ್ಚರಗೊಂಡು ಅವಶ್ಯಕವಾಗಿ ಆಗಬೇಕಾಗಿರುವ ಕಾಮಗಾರಿಗೆ ಮುತುವರ್ಜಿ ವಹಿಸದಿರುವುದು ಮಾತ್ರ ಇಲಾಖೆಯ ಕಾರ್ಯದಕ್ಷತೆ ಹಾಗೂ ಕಾರ್ಯತತ್ಪರತೆಯನ್ನು ಪ್ರಶ್ನಿಸುವಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement