ಬೌದ್ಧಿಕ ಸಾಮರ್ಥ್ಯ ವಿಕಸನಗೊಳಿಸುವ ಶಿಕ್ಷಣ ಅಗತ್ಯವಿದೆ: ವೀರೇಶಾನಂದ ಶ್ರೀ
ಕ.ಪ್ರ.ವಾರ್ತೆ ಹೊಳೆನರಸೀಪುರ ಡಿ. 21
ಸ್ವಾಮಿ ವಿವೇಕಾನಂದರ ಪರಿಕಲ್ಪನೆಯಂತೆ ಇಂದು ಚಾರಿತ್ರ್ಯವನ್ನು ರೂಪಿಸುವ, ಮಾನಸಿಕ ಶಕ್ತಿಯನ್ನು ಹೆಚ್ಚಿಸುವ, ಬೌದ್ಧಿಕ ಸಾಮರ್ಥ್ಯವನ್ನು ವಿಕಸನಗೊಳಿಸುವ ಮತ್ತು ಸ್ವಾವಲಂಬನೆಯನ್ನು ಕಲಿಸುವ ಶಿಕ್ಷಣ ನೀತಿಯ ಅವಶ್ಯಕತೆ ಇದೆ ಎಂದು ತುಮಕೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಡಾ. ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ದೊಡ್ಡಕುಂಚೆ ಗ್ರಾಮದಲ್ಲಿನ ನವೋದಯ ವಿದ್ಯಾಸಂಘದ ಪ್ರೌಢಶಾಲೆಯು ಸ್ಥಾಪನೆಗೊಂಡು 50 ವರ್ಷವಾದ ಹಿನ್ನೆಲೆಯಲ್ಲಿ ಶನಿವಾರ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ, ಬಡತನವೆಂಬುದು ಅಪಮಾನ, ಶ್ರೀಮಂತಿಕೆ ಎಂಬುದು ವರ ಎನ್ನುವ ನೀತಿಯನ್ನು ಬದಿಗೊತ್ತಿ ಪರಿಶ್ರಮವನ್ನು ಅವಲಂಬಿಸಿ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಯು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬಲ್ಲ ಎಂದು ಹೇಳಿದರು.
ಪ್ರಜ್ಞಾವಂತಿಕೆ ಮೂಡಬೇಕು: ಶಾಲೆಗಳು ರಾಷ್ಟ್ರವನ್ನು ನಿರ್ಮಿಸುವ ದೇವಾಲಯಗಳಾಗಿ, ಸಮಾಜವನ್ನು ಕಟ್ಟುವ ಸಂಸ್ಕತಿಯ ಕೇಂದ್ರಗಳಾಗಿ, ವ್ಯಕ್ತಿತ್ವವನ್ನು ನಿರ್ಮಾಣ ಮಾಡುವ ನೀತಿ ಕೇಂದ್ರಗಳಾದಾಗ ಭವಿಷ್ಯದಲ್ಲಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಬಹುದಾಗಿದೆ ಎಂದ ಅವರು, ಶಿಕ್ಷಣವೆಂಬುದು ಕೇವಲ ಮಾಹಿತಿಯಾಗಬಾರದು, ಮಾಹಿತಿಯ ಮುಂದಿನ ಹೆಜ್ಜೆಯಾದ ಬುದ್ಧಿಯಾಗಿ ಪರಿವರ್ತನೆಯಾಗಿ, ಅಲ್ಲಿ ಪ್ರಜ್ಞಾವಂತಿಕೆ ಮೂಡಿದಾಗ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.
ಪ್ರಶಂಸೆ: ನವೋದಯ ವಿದ್ಯಾಸಂಸ್ಥೆಯು 5 ದಶಕಗಳ ಕಾಲ ನಿರಂತರವಾಗಿ ಸಮಾಜಮುಖಿಯಾಗಿ ಶಿಕ್ಷಣ ಕೇಂದ್ರವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜನರ, ಸರ್ಕಾರದ ಜವಾಬ್ದಾರಿ: ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಸಿಗಬೇಕೆನ್ನುವ ಸದುದ್ದೇಶದಿಂದ ದಾನಿಗಳು ಹಾಗೂ ಪ್ರಜ್ಞಾವಂತರು ಸ್ಥಾಪಿಸಿದ ನವೋದಯ ಪ್ರೌಢಶಾಲೆಯು 50 ವರ್ಷಗಳನ್ನು ಪೂರೈಸಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದ ಅವರು, ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಿಕೊಡುವುದು ಪ್ರಜ್ಞಾವಂತ ಜನರ ಹಾಗೂ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ತಾವು, ಎಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳ ವಿವರಗಳನ್ನು ನೀಡಿದ ಅವರು, ಇನ್ನು ಕೇವಲ 5 ವರ್ಷಗಳು ಅಧಿಕಾರದಲ್ಲಿರುವ ಅವಕಾಶ ಸಿಕ್ಕಿದ್ದಲ್ಲಿ, ರಾಜ್ಯದಲ್ಲಿನ ಪ್ರತಿ ತಾಲೂಕುಗಳಲ್ಲಿಯೂ ಕಡ್ಡಾಯವಾಗಿ ಎಂಜಿನಿಯರಿಂಗ್ ಹಾಗೂ ಉನ್ನತ ಶಿಕ್ಷಣ ಕಾಲೇಜುಗಳನ್ನು ಸ್ಥಾಪಿಸುತ್ತಿದ್ದೆ ಎಂದರು.
ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ದಂಡಿಗನಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಿಗೂ ಹೇಮಾವತಿಯ ಕುಡಿಯುವ ನೀರನ್ನು ಒದಗಿಸುವ ಯೋಜನೆಗೆ ಯೋಜನೆ ರೂಪಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಪಟೇಲ್ ಶಿವರಾಂ ಹಾಗೂ ಮಾಜಿ ಶಾಸಕ ಡಾ.ಎನ್.ಬಿ. ನಂಜಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶಾಲೆಯ ಸ್ಥಾಪನೆಗೆ ಸಹಕಾರ ನೀಡಿದವರು ಹಾಗೂ ಭೂಮಿಯನ್ನು ದಾನ ನೀಡಿದ ಕುಟುಂಬದವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ನವೋದಯ ವಿದ್ಯಾಸಂಘದ ಅಧ್ಯಕ್ಷ ಜೆ.ಎಸ್.ಜಯರಾಂ ವಹಿಸಿದ್ದರು, ಜಿಪಂ ಅಧ್ಯಕ್ಷೆ ಅಂಬಿಕಾ ರಾಮಣ್ಣ, ತಾಪಂ ಅಧ್ಯಕ್ಷೆ ಕೆ.ಎಂ.ಪುಷ್ಪಾಗೌಡೇಗೌಡ, ಜಿಪಂ ಸದಸ್ಯೆ ಗೌರಮ್ಮ, ತಾಪಂ ಸದಸ್ಯ ಹುಚ್ಚೇಗೌಡ, ಸಂಸ್ಥೆಯ ಕಾರ್ಯದರ್ಶಿ ಸಿ.ಎನ್. ನವೀನ್, ಪ್ರಾಂಶುಪಾಲ ಸಿ. ಪುಟ್ಟಣ್ಣ, ಸಂಸ್ಥೆಯ ನಿರ್ದೇಶಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಇದ್ದರು.