ಬಿಸಿಯೂಟ ಖಾಸಗೀಕರಣ: ಪ್ರತಿಭಟನೆ
ಅರಸೀಕೆರೆ: ಅಕ್ಷರ ದಾಸೋಹದ ಬಿಸಿಯೂಟವನ್ನು ಖಾಸಗೀಕರಣ ಮಾಡಲು ಹೊರಟಿರುವ ಸರ್ಕಾರದ ಕ್ರಮ ವಿರೋಧಿಸಿ, ಸೇವಾ ಭದ್ರತೆ, ಇನ್ನಿತರ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಬುಧವಾರ ತಾಲೂಕು ಬಿಸಿಯೂಟ ತಯಾರಕರ ಸಂಘ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕು ಕಚೇರಿ ಎದುರು ಧರಣಿ ನಡೆಸಿ ತಹಶೀಲ್ದಾರ್ ಜಗದೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಬಿಸಿಯೂಟ ತಯಾರಿಕಾ ಸಿಬ್ಬಂದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಾ. ಕಚೇರಿಗೆ ತೆರಳಿ ಧರಣಿ ನಡೆಸಿ ಕನಿಷ್ಠ ವೇತನವನ್ನು 10 ಸಾವಿರ ರು.ಗಳಿಗೆ ಏರಿಸಬೇಕು. ಪಡಿತರ ವಿತರಣಾ ವ್ಯವಸ್ಥೆ ನಿಲ್ಲಿಸಿ ನೇರವಾಗಿ ಹಣ ವರ್ಗಾವಣೆ ಮಾಡುವ ಮೂಲಕ ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಸರ್ಕಾರ ಹೊರಟಿದೆ ಎಂದು ದೂರಿದರು.
26 ಲಕ್ಷ ಮಹಿಳೆಯರು: ಸಂಘದ ಜಿಲ್ಲಾಧ್ಯಕ್ಷೆ ಪುಪ್ಪ ಮಾತನಾಡಿ ದೇಶಾದ್ಯಂತ ಸುಮಾರು 26 ಲಕ್ಷ ಮಹಿಳೆಯರು ಮಧ್ಯಾಹ್ನದ ಬಿಸಿಯೂಟದ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ವೇತನ ಹೆಚ್ಚಳ ಮಾಡುವ ಬದಲಿಗೆ ಶಾಲೆಗಳಲ್ಲಿನ ಹಾಜರಾತಿ ಕೊರತೆಯ ಹೆಸರಿನಲ್ಲಿ ಈಗಾಗಲೇ ರಾಜ್ಯದಲ್ಲಿ 3,371 ಶಾಲೆಗಳನ್ನು ಮುಚ್ಚಲಾಗಿದ್ದು ಆರ್.ಗೋವಿಂದ್ ಸಮಿತಿಯ ಶಿಫಾರಸ್ಸಿನಂತೆ 12740 ಶಾಲೆಗಳನ್ನು ಮುಚ್ಚಲು ಸರ್ಕಾರ ಯೋಜನೆ ರೂಪಿಸಿದೆ. ಇದರ ಭಾಗವಾಗಿ ಇಸ್ಕಾನ್, ನಂದಿ ಫೌಂಡೇಶನ್ ಹಾಗೂ ಅದಮ್ಯ ಚೈತನ್ಯದಂತಹ ಧಾರ್ಮಿಕ ಸಂಸ್ಥೆಗಳಿಗೆ ಜವಾಬ್ದಾರಿ ನೀಡಿ ಸಾವಿರಾರು ಮಹಿಳೆಯರನ್ನು ಬೀದಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
11 ವರ್ಷಗಳಿಂದ ಕೇವಲ ಸಾವಿರ ರು.: ತಾಲೂಕು ಬಿಸಿಯೂಟ ಸಂಘದ ಅಧ್ಯಕ್ಷೆ ತಾರಾಮಣಿ ಮಾತನಾಡಿ ಕೇವಲ 1ಸಾವಿರ ರು. ಗಳಿಗೆ ಕಳೆದ 11 ವರ್ಷಗಳಿಂದ ಶಾಲೆಯಲ್ಲಿ ಅಡುಗೆ ಪರಿಚಾರಕಿಯರಾಗಿ ಕೆಲಸ ಮಾಡಿಕೊಂಡು ಬಂದಿರುವ ನಮಗೆ ಕನಿಷ್ಠ ಸವಲತ್ತುಗಳು ಇಲ್ಲ. ಕೆಲಸದ ಭದ್ರತೆಯಿಲ್ಲದೆ ಹಲವು ರೀತಿಯ ಹಿಂಸೆಗಳನ್ನು ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ಶಾಲೆಯಲ್ಲಿನ ಅಡುಗೆ ಕೆಲಸದ ಜೊತೆಗೆ ಇನ್ನಿತರ ಕೆಲಸಗಳಲ್ಲಿಯೂ ನಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು ಆದ್ದರಿಂದ ಡಿ ದರ್ಜೆ ನೌಕರರೆಂದು ಪರಿಗಣಿಸಬೇಕೆಂದು ಒತ್ತಾಯಿಸಿದ ಅವರು ಇಂದಿನ ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ 10ಸಾವಿರ ರು.ಗಳ ವೇತನ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಮೆರವಣಿಗೆಯಲ್ಲಿ ಸಂಘದ ಕಾರ್ಯದರ್ಶಿ ಜ್ಯೋತಿ, ಕಲಾವತಿ, ಯಶೋಧ, ಮಹಾಲಕ್ಷ್ಮೀ, ಶಿವಗಂಗಮ್ಮ, ಕಮಲಾ ಇನ್ನಿತರರು ಪಾಲ್ಗೊಂಡಿದ್ದರು.