ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಕಾಲಿಕ ಮಳೆಯಿಂದ ಕಾಫಿ ನಷ್ಟ: ಪರಿಹಾರಕ್ಕೆ ಆಗ್ರಹ

Srinivasa Murthy VN
Updated On : 20 Feb 2013, 11:02 am

ಸಕಲೇಶಪುರ: ಅಕಾಲಿಕ ಮಳೆಯಿಂದ ಕಾಫಿ ಬೆಳೆಯ ಮೇಲೆ ತೀವ್ರ  ದುಷ್ಫರಿಣಾಮ ಉಂಟಾಗಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಅರೇಬಿಕಾ ಕಾಫಿಗೆ ಬೆಂಬಲ ಬೆಲೆ ಘೋಷಿಸ ಬೇಕು ಎಂದು ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮುಜಾಹಿದ್ ಆಲಂ ಒತ್ತಾಯಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಅತಿ ಬೇಗ ಮಳೆಯಾಗಿರುವುದು, ಮುಂದಿನ ವರ್ಷದ ಅರೇಬಿಕಾ ಫಸಲಿನಲ್ಲಿ ಸಾಕಷ್ಟು ಕುಸಿತ ಉಂಟಾಗಿದೆ. ರೋಬಸ್ಟಾ ಕಾಫಿ ಕಟಾವಿನ ಕಾರ್ಯ ನಡೆಯತ್ತಲೇ ಇದ್ದು, ಈಗ ಸುರಿದ ಮಳೆಯಿಂದ  ಗಿಡದಲ್ಲಿದ್ದ ಕಾಫಿಯು ಹೆಚ್ಚಿನ ಪ್ರಮಾಣದಲ್ಲಿ ನೆಲಕ್ಕುದುರಿದೆ ಎಂದು  ತಿಳಿಸಿದ್ದಾರೆ.
ಬಿದ್ದ ಕಾಫಿಯನ್ನು ಹೆರಕಿಸಲಾರದೆ, ಬೆಳೆಗಾರರು ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಕಾಫಿಯು ನೆಲಕ್ಕುದುರಿರುವುದರಿಂದ ಮುಂದಿನ ಸಾಲಿಗೆ ಬೆರ್ರಿ ಬೋರರ್ರೋಗವು ತೀವ್ರ ತರನಾಗಿ ಹರಡುವುದರಲ್ಲಿ ಸಂಶಯವಿಲ್ಲ. ಇಷ್ಟಲ್ಲದೆ ಹೂವಿನ ಮಳೆಯಾಗಿರುವುದು ಮುಂದಿನ ವರ್ಷದ ಫಸಲಿನ ಮೇಲೆ ಹೆಚ್ಚಿನ ದುಷ್ಪರಿಣಾಮವನ್ನು ಉಂಟುಮಾಡಿದೆ. ಕಣದಲ್ಲಿ ಒಣಗಲು ಹಾಕಿದ್ದ ಕಾಫಿಯು ಸಹ ಮಳೆಯಲ್ಲಿ ನೆನೆದು ತನ್ನ ಗುಣಮಟ್ಟವನ್ನು ಕಳೆದುಕೊಂಡಿದೆ ಎಂದು  ಹೇಳಿದ್ದಾರೆ.
ಇದಲ್ಲದೆ ಈಗಾಗಲೇ ಅರೇಬಿಕಾ ಕಾಫಿಯ ಬೆಲೆ ಸಂಪೂರ್ಣವಾಗಿ ಕುಸಿದಿದ್ದು, ಅರೇಬಿಕಾ ಬೆಳೆಗಾರರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಈ ಅಕಾಲಿಕ ಮಳೆಯಿಂದ ಬೆಳೆಗಾರರು ಇದ್ದ ಫಸಲನ್ನು ಕಳೆದುಕೊಂಡು ಚಿಂತಾಕ್ರಾಂತರಾಗಿದ್ದಾರೆ. ಅರೇಬಿಕಾ ಕಾಫಿಗೆ ಸೂಕ್ತ ಬೆಲೆ ನೀಡದಿದ್ದ ಪಕ್ಷದಲ್ಲಿ, ಅರೇಬಿಕಾ ತೋಟಗಳು ಕಣ್ಮರೆಯಾಗಿರುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ   ಕಾಫಿ ಮಂಡಳಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅರೇಬಿಕಾ ಕಾಫಿಗೆ ಸೂಕ್ತ ಬೆಲೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ರಾಸಾಯನಿಕ ಗೊಬ್ಬರಗಳ ಬೆಲೆ ಅಧಿಕವಾಗಿದ್ದು, ಬೆಳೆಗಾರರು ಸಮಯಕ್ಕೆ ಸರಿಯಾಗಿ ಗೊಬ್ಬರ ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ರಾಸಾಯನಿಕ ಗೊಬ್ಬರವನ್ನು ಸಹಾಯಧನ ಅಡಿಯಲ್ಲಿ ಒದಗಿಸಬೇಕು ಮತ್ತು ಅಕಾಲಿಕ ಮಳೆಯಿಂದ ನಷ್ಟ ಹೊಂದಿರುವ ತೋಟಗಳಿಗೆ, ಭೇಟಿ ನೀಡಿ ಸಮೀಕ್ಷೆ ನಡೆಸಲು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement