ಮುಂದುವರಿದ ನರ್ಸಿಂಗ್ ವಿದ್ಯಾರ್ಥಿಗಳ ಪ್ರತಿಭಟನೆ
ಹಾಸನ: ಕಾಲೇಜಿನ ಅವ್ಯವಸ್ಥೆ ಖಂಡಿಸಿ ಹಾಗೂ ಮಾನಸಿಕವಾಗಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಪ್ರಾಂಶುಪಾಲರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಸರ್ಕಾರಿ ನರ್ಸಿಂಗ್ ವಿದ್ಯಾರ್ಥಿಗಳು ಬುಧವಾರ ಕೂಡ ಮುಂದುವರೆಸಿದರು.
ಪ್ರಾಂಶುಪಾಲೆ ಎಸ್.ದಮಯಂತಿ ಅವರು ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ತೊಂದರೆ ನೀಡುತ್ತಿದ್ದಾರೆ. ಜಾತಿವಾರು ನಿಂದನೆ, ಪ್ರಾಂತೀಯ ಬೇಧ, ವಿದ್ಯಾರ್ಥಿಗಳಲ್ಲಿ ಗುಂಪುಗಾರಿಗೆ ಸೃಷ್ಟಿಸಿ ಕಾಲೇಜಿನ ಇತರೆ ಉಪನ್ಯಾಸಕರನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟು ಕೊಂಡು ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಅಶ್ಲೀಲ ಮತ್ತು ವೈಯಕ್ತಿಕ ನಿಂದನೆ ಮಾಡುತ್ತಿದ್ದಾರೆ ಎಂದು ದೂರಿದರು.
ಪೋಷಕರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಆರೋಗ್ಯ ಸಂಬಂಧಿ ಹಾಗೂ ಸಾವು-ನೋವಿನ ಪರಿಸ್ಥಿತಿಯಲ್ಲಿ ಯೂ ಕಡೆಗಣಿಸುತ್ತಿದ್ದಾರೆ. ತರಗತಿ ಮತ್ತು ಕ್ಲಿನಿಕಲ್ ಟೆಸ್ಟಿಂಗ್ ಸಂದರ್ಭದಲ್ಲಿ ಬೆಂಗಳೂರಿನ ಜಯದೇವ, ಕಿಡ್ವಾಯ್, ನಿಮ್ಹಾನ್ಸ್ ಹಾಗೂ ಧಾರವಾಡ ಪೋಸ್ಟಿಂಗ್ ಸಂದರ್ಭದಲ್ಲಿ ಊಟ ಮತ್ತು ವಸತಿ ವಿಷಯದಲ್ಲಿ ಉದಾಸಿನತೆಯಿಂದ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುತ್ತಿಲ್ಲ. ನಿಮ್ಮು ಎಂಬ ವಿದ್ಯಾರ್ಥಿನಿಯ ಹಾಜರಾತಿ ಕಡಿಮೆ ಇದೆ ಎಂದು ಸುಳ್ಳು ಹೇಳಿ ವಿದ್ಯಾರ್ಥಿಯ ಭವಿಷ್ಯಕ್ಕೆ ಮಾರಕವಾಗಿ ನಿಂತು ಆಕೆಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಿವ್ಯ ದರ್ಶನ್, ಮನು, ಆಯುಬ್, ದೇವರಾಜು, ಮಂಜುನಾಥ್, ಪ್ರವೀಣ್, ಕುಮಾರ್, ರಾಜು, ಸತೀಶ್, ಮಹೇಶ್, ಶ್ವೇತಾ, ಮಂಜುಳಾ, ರೂಪ, ಲತಾ, ಪೂರ್ಣಿಮಾ, ಕವಿತಾ, ದಿವ್ಯ, ರಾಣಿ, ನವ್ಯ, ಜ್ಯೋತಿ, ರೇಖಾ, ಭವ್ಯ, ಸ್ವಾತಿ, ಕಾವ್ಯ, ಸಹನಾ, ಶೃತಿ, ಪಲ್ಲವಿ ಹಾಗೂ ಇತರರು ಇದ್ದರು.