ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತಿ: ಪುಷ್ಪಗಿರಿ ಶ್ರೀ
ಅರಸೀಕೆರೆ: ಮಕ್ಕಳ ಮನಸ್ಸು ನಿರ್ಮಲವಾದುದ್ದು, ಭೂಮಿಯಲ್ಲಿ ಯಾವ ರೀತಿ ಬೀಜ ಬಿತ್ತುತ್ತೇವೆಯೋ ಹಾಗೆ ಉತ್ತಮ ಫಸಲು ಬರುತ್ತದೆ. ಅಂತೆಯೇ ಮಕ್ಕಳಲ್ಲಿ ಸಂಸ್ಕಾರವೆಂಬ ಉತ್ತಮ ಬೀಜವನ್ನು ಬಿತ್ತಿ ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ರೂಪಿಸುವುದು ಪ್ರತಿ ಕುಟುಂಬದ ತಾಯಂದಿರ ಜವಾಬ್ದಾರಿ ಎಂದು ಹಳೇಬೀಡು ಪುಷ್ಪಗಿರಿ ಮಹಾಸಂಸ್ಥಾನದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಶ್ರೀನಿವಾಸ ನಗರದಲ್ಲಿ ನಡೆದ ಸೇವಾ ಸಂಕಲ್ಪ ಸಂಸ್ಥೆಯ ಕನ್ನಡ ಶಾಲೆ ನೂತನ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ಮಕ್ಕಳ ಬುದ್ಧಿ ವಿಕಾಸಗೊಳಿಸುವಲ್ಲಿ ತಮ್ಮದೇ ಪಾತ್ರ ವಹಿಸುವ ಶಕ್ತಿ ಕೇಂದ್ರಗಳಾಗಿವೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು ದೇಶದ ಸಂಸ್ಕೃತಿ ಆಚಾರ ವಿಚಾರಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ ಮೂಲಕ ದೇಶದ ಸತ್ಪ್ರಜೆಯನ್ನಾಗಿ ಮಾಡುವ ಮಹತ್ತರವಾದ ತಾಯಂದಿರದ್ದಾಗಿದೆ ಎಂದರು.
ಮೊದಲ ಗುರು ಭಗವಂತ: ಜೀವನದ ಪ್ರಕ್ರಿಯೆಯಲ್ಲಿ ಮೊದಲ ಗುರು ಭಗವಂತ, ಎರಡನೆಯ ಗುರು ಗುರು ತಂದೆ-ತಾಯಿ, ಮೂರನೆ ಗುರು ಶಿಕ್ಷಕರಾಗಿದ್ದು, ನಾಲ್ಕನೆಯ ಗುರುವು ನಮ್ಮಿಂದ ನಾವೇ ಸಂಸ್ಕಾರ ಪಡೆವ ಸಂದರ್ಭವಾಗಿದೆ. ದೇಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವವಾಗಿದ್ದು, ಆ ನಿಟ್ಟಿನಲ್ಲಿ ಶಾಲಾ ಕಾಲೇಜುಗಳು ಭಾರತವನ್ನು ವಿಶ್ವಕ್ಕೆ ಮಾದರಿಯಾಗುವಂತಹ ವಿದ್ಯಾಬ್ಯಾಸವನ್ನು ಮಕ್ಕಳಿಗೆ ನೀಡುವುದರ ಮೂಲಕ ಮಾದರಿಯಾಗಬೇಕೆಂದು ಹೇಳಿದರು.
ಗುರುವಿನ ಪಾತ್ರ ಅತ್ಯಮೂಲ್ಯವಾಗಿದ್ದು ಇಂದಿನ ಅಧುನಿಕ ಮತ್ತು ಪಾಶ್ಚಿಮಾತ್ಯ ಶಿಕ್ಷಣವನ್ನು ವೈಭವೀಕರಿಸಿ ನಮ್ಮತನ ಮರೆಯುವುದರ ಮೂಲಕ ಮೂಲ ಶಿಕ್ಷಣವನ್ನೇ ನಾವು ಮರೆಮಾಚುತ್ತಿರುವುದು ವಿಷಾದನೀಯ. ದೇವರೆಂಬ ಕಾಣದ ಶಕ್ತಿಯನ್ನು ಹುಡುಕುತ್ತಾ ಕಾಲಹರಣ ಮಾಡದೇ ಶಿಕ್ಷಣ ಮೂಲಕ ಪ್ರೀತಿ ವಿಶ್ವಾಸ ಮಾನವಿತೆಯನ್ನು ಒಗ್ಗೂಡಿಸಿಕೊಂಡಲ್ಲಿ ನಮ್ಮ ಸಂಸ್ಕಣತಿ ಸಂಸ್ಕಾರ ಉಳಿಸಲು ಸಾಧ್ಯ. ಕನ್ನಡ ಶಾಲೆಗಳನ್ನು ಕಡೆಗಣಿಸುತ್ತಿರುವ ಇಂದಿನ ದಿನಗಳಲ್ಲಿ ಸೇವಾ ಸಂಕಲ್ಪ ಸಂಸ್ಥೆಯ ಶಿಕ್ಷಣ ಸಮೂಹಗಳು ಇತರೇ ಶಾಲೆಗಳಿಗೆ ಮಾದರಿಯಾಗುವಂತೆ ತನ್ನ ಹದಿನೈದು ವರ್ಷಗಳ ಇತಿಹಾಸಗಳ ನೆನಪಿನಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ತೊಡಗಿಕೊಂಡಿರುವುದು ಶ್ಲಾಘನೀಯ ಎಂದರು.
ನಿಟ್ಟೆ ಕುಟುಂಬ ಪ್ರಬೋದನ್ಮುಖಜಂಪಾಡಿ ಸುಬ್ರಹ್ಮಣ್ಯ ಭಟ್ ಮುಖ್ಯ ಭಾಷಣ ಮಾಡಿದರು. ಮಾಜಿ ಸಚಿವ ಬಿ.ಶಿವರಾಂ, ಮಾಜಿ ಶಾಸಕ ಎ.ಎಸ್.ಬಸವರಾಜ್, ಮುಖಂಡ ಕಾಟೀಕೆರೆ ಪ್ರಸನ್ನ ಕುಮಾರ್, ಹಾರನಹಳ್ಳಿ ಸಿದ್ದಪ್ಪ, ಆರ್ಎಸ್ಎಸ್ನ ಸತ್ಯನಾರಾಯಣ, ಶ್ರೀನಿವಾಸ ಮೂರ್ತಿ, ಸಂಸ್ಥೆಯ ಗೌರವಾದ್ಯಕ್ಷ ಮಂಜುನಾಥ್, ಕಾರ್ಯದರ್ಶಿ ರೇವಣ್ಣಸಿದ್ದಪ್ಪ, ಶ್ರೀಧರ್, ಡಾ.ಜಗದೀಶ್, ನಾರಾಯಣಶರ್ಮ ಇತರರು ಇದ್ದರು.
ವಾರ್ಷಿಕೋತ್ಸವ ಪ್ರಯುಕ್ತ ಶಾಲೆ ಮಕ್ಕಳು ನಾನಾ ವೇಷ ಭೂಷಣಗಳೊಂದಿಗೆ ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪೋಷಕರ ಮನಸೂರೆಗೊಂಡಿತು.