ರಾಜನಸಿರಿಯೂರು ಕೆರೆಗೆ ಯಗಚಿ ನೀರು: ಆಗ್ರಹ
ಭಾಗ-6
ಹಳೆಬೀಡು ಹೋಬಳಿಯ ಸುತ್ತಮುತ್ತಲಿನ ಗ್ರಾಮ ಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ಲಕ್ಷಾಂತರ ರು. ಖರ್ಚು ಮಾಡಲಾಗಿದೆ. ಆದರೆ ಇಂಗುಗುಂಡಿ ಎಂಬುದು ಅವೈಜ್ಞಾನಿಕ ತಂತ್ರಜ್ಞಾನವಾಗಿದ್ದು ಇದು ಕೇವಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಣ ಮೂಡಿಕೊಡುವ ಉತ್ತಮ ದಂಧೆಯಾಗಿದೆ.
ಬೇಲೂರು: ಯಗಚಿ ಜಲಾಶಯ ನೀರು ವಿತರಣೆಯಲ್ಲಿ ತಾಲೂಕಿಗೆ ಮೊದಲ ಆದ್ಯತೆ ನೀಡಬೇಕು ಎಂಬ ನಿಟ್ಟಿನಲ್ಲಿ ಹಳೆಬೀಡು, ಚೀಕನಹಳ್ಳಿ, ಬಿಕ್ಕೋಡು, ಜಾವಗಲ್ ಸೇರಿದಂತೆ ಇನ್ನೂ ಅನೇಕ ಭಾಗದಲ್ಲಿ ಒತ್ತಾಯದ ಕೂಗು ಆರಂಭಗೊಂಡಿದ್ದು ಜಾಥಾ, ಧರಣಿ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಯಗಚಿ ಜಲಾಶಯದ ನೀರು ತಾಲೂಕಿಗೆ ಸಮರ್ಪಕವಾಗಿ ದೊರಕದೆ ಹೊರ ಜಿಲ್ಲೆಗಳಿಗೆ ಉಪಯೋಗವಾಗುತ್ತಿದೆ ಎಂಬ ಕೂಗು ಹಿಂದಿನಿಂದಲೂ ಕೇಳಿಬರುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ ಯಗಚಿ ಜಲಾಶಯದ ನೀರು ಚಿಕ್ಕಮಗಳೂರು, ಅರಸೀಕೆರೆ, ಹೊಳೆನರಸೀಪುರ, ತುಮಕೂರಿಗೆ ಹರಿದು ಹೋಗುತ್ತಿದೆ. ಆದರೆ ಹಳೆಬೀಡು ಹೋಬಳಿಯಂತಹ ಫ್ಲೋರೈಡ್ಯುಕ್ತ ಗ್ರಾಮಗಳಿಗೆ ಯಗಚಿ ನೀರು ಎಂಬುದು ಆಕಾಶದೀಪದಂತಾಗಿದೆ.
ಆಮೆವೇಗದಲ್ಲಿ ಕಾಮಗಾರಿ: ಅರಸೀಕೆರೆಗೆ ನೀರು ಕೊಡುವ ನಿಟ್ಟಿನಲ್ಲಿ ಹಳೆಬೀಡು ಮೂಲಕ ಪೈಪ್ಲೈನ್ ಹಾದು ಹೋಗಿದ್ದು ಇದರಲ್ಲಿ ಕೇವಲ 3 ಗ್ರಾಮಗಳಿಗೆ ಅಂದರೆ ನರಸೀಪುರ, ತಿಪ್ಪನಹಳ್ಳಿ ಹಾಗೂ ಮಾಯಗೊಂಡನಹಳ್ಳಿಗೆ ಮಾತ್ರ ಯಗಚಿ ನೀರು ಲಭ್ಯವಾಗುತ್ತಿದ್ದು ಉಳಿದ ಗ್ರಾಮಗಳಿಗೆ ನೀರು ಗಗನ ಕುಸುಮವಾಗಿದೆ. ಇನ್ನು ಹಳೆಬೀಡು ಮಾದೀಹಳ್ಳಿಗಳ ಕೆರೆ ನೀರು ತುಂಬಿಸಲು ಅಂದಾಜು 9 ಕೋಟಿ ರು. ವೆಚ್ಚದಲ್ಲಿ ಏತನೀರಾವರಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿದ್ದು ಸದ್ಯಕ್ಕೆ ಮುಗಿಯುವ ಸೂಚನೆ ಕಾಣುತ್ತಿಲ್ಲ.
ಹಳೆಬೀಡು ಹೋಬಳಿಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ಲಕ್ಷಾಂತರ ರು. ಖರ್ಚು ಮಾಡಲಾಗಿದೆ. ಆದರೆ ಇಂಗುಗುಂಡಿ ಎಂಬುದು ಅವೈಜ್ಞಾನಿಕ ತಂತ್ರಜ್ಞಾನವಾಗಿದ್ದು ಇದು ಕೇವಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಹಣ ಮೂಡಿಕೊಡುವ ಉತ್ತಮ ದಂಧೆಯಾಗಿದೆ. ಇಂಗು ಗುಂಡಿಗೆ ಖರ್ಚು ಮಾಡುವ ಹಣವನ್ನು ಕೆರೆಕಟ್ಟೆಗಳ ಹೂಳು ಎತ್ತಲು ಉಪಯೋಗಿಸಿದ್ದರೆ ಮಳೆಗಾಲದಲ್ಲಿ ತಕ್ಕಮಟ್ಟಿಗೆ ನೀರನ್ನು ಶೇಖರಿಸಬಹುದು.
ಕಿರುನಾಲೆ ಮೂಲಕ: ಮಾಜಿ ತಾಪಂ ಅಧ್ಯಕ್ಷ ಕಡಿದಾಳ್ ಮಂಜಪ್ಪ ಪತ್ರಿಕೆಯೊಂದಿಗೆ ಮಾತನಾಡಿ, ಯಗಚಿ ಜಲಾಶಯದ ಹಿನ್ನೀರಿನಿಂದ ಬೆಳವಾಡಿ ಕೆರೆಗೆ ನೀರು ಹರಿಸಲಾಗುತ್ತಿದೆ. ಬೆಳವಾಡಿ ಕೆರೆಯಿಂದ ಕಿರುನಾಲೆ ಅಥವ ಪೈಪ್ಲೈನ್ ಮೂಲಕ ರಾಜನಸಿರಿಯೂರು ಕೆರೆಗೆ ನೀರು ಹರಿಸಿದರೆ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದ್ದು, ಈ ಯೋಜನೆಗೆ ಕೇವಲ ಕೋಟಿ ರು. ಖರ್ಚು ಮಾಡಿದರೆ ಹತ್ತಾರು ಗ್ರಾಮದ ಮಂದಿಗೆ ಕುಡಿಯುಲು ನೀರು ಸಿಗುತ್ತದೆ ಎನ್ನುತ್ತಾರೆ.
ಎತ್ತಿನಹಳ್ಳ ಯೋಜನೆ: ಎತ್ತಿನಹಳ್ಳಿ ಯೋಜನೆ ರಾಜ್ಯಸರ್ಕಾರ ಫ್ಲೋರೈಡ್ಮುಕ್ತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಕೈಗೊಂಡಿರುವ ಮಹತ್ವದ ಯೋಜನೆಯಾಗಿದೆ. ಪಶ್ಚಿಮಘಟ್ಟದಲ್ಲಿ ಅಂದಾಜು 1500 ಟಿಎಂಸಿ ಬೇಡದ ನೀರು ಬೆಟ್ಟಗುಡ್ಡ ಅರಣ್ಯಗಳಿಂದ ಹರಿದು ಸಮುದ್ರ ಸೇರುತ್ತಿದೆ. ಇದರಲ್ಲಿ 25 ಟಿಎಂಸಿ ನೀರನ್ನು ಅತ್ಯಂತ ಬರಗಾಲ ಪ್ರದೇಶಗಳಾದ ತುಮಕೂರು, ಶಿರಾ, ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ ಸೇರಿದಂತೆ ಇತರೆ ಜಿಲ್ಲೆಗೆ ಕುಡಿಯುವ ನೀರು ಹರಿಸುವ ಯೋಜನೆ ಸಿದ್ದಗೊಳ್ಳುತ್ತಿದ್ದು ಅಂದಾಜು 18 ಸಾವಿರ ಕೋಟಿ ರು. ಮೀಸಲಿಡಲಾಗಿದೆ. ಯೋಜನೆ ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಸಕಲೇಶಪುರದ ಮಾಜಿ ಶಾಸಕ ಹಾಗೂ ರಾಜ್ಯ ಕೆಜೆಪಿ ಉಪಾಧ್ಯಕ್ಷ ಎಚ್.ಎಂ.ವಿಶ್ವನಾಥ್ ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿ, ಯಗಚಿ ಜಲಾಶಯದಿಂದ ಹಳೆಬೀಡು ಮಾದಿಹಳ್ಳಿ ಹೋಬಳಿಗೆ ಕುಡಿಯುವ ನೀರನ್ನು ಪೂರೈಸಲು ಈ ಹಿಂದಿನ ಜನಪ್ರತಿನಿಧಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಾವೇರಿ ಕೃಷ್ಣಾಬೇಸಿನ್ ತಾಂತ್ರಿಕ ನೆಪ ಮುಂದೊಡ್ಡಿ ಆ ಭಾಗದ ಜನತೆಗೆ ವಂಚನೆ ಮಾಡಿಕೊಂಡು ಬಂದಿದ್ದಾರೆ.
ಯಗಚಿ ಜಲಾಶಯದಿಂದ ನೀರನ್ನು ಹಳೆಬೀಡು ಭಾಗಗಳಲ್ಲಿರುವ ಕೆರೆಕಟ್ಟೆಗಳಿಗೆ ತುಂಬಿಸಲು ಕನಿಷ್ಟ ಸಣ್ಣ ಯೋಜನೆಯನ್ನೂ ರುಪಿಸಿಲ್ಲ. ಆಯ್ಕೆಯಾಗಿರುವ ಚುನಾಯಿತ ಜನಪ್ರತಿನಿಧಿಗಳು ನೀರನ್ನು ಹರಿಸುವ ಬಗ್ಗೆ ಜನಪರ ಹೋರಾಟ ರೂಪಿಸುವಲ್ಲಿ ಹಾಗೂ ಶಾಸನಸಭೆಯಲ್ಲಿ ಸರ್ಕಾರದ ಗಮನ ಸೆಳೆಯುವಲ್ಲಿ ವಿಫಲರಾಗಿದ್ದು ಕೇವಲ ಸ್ವಾರ್ಥದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ.
ಬಯಲುಸೀಮೆ ಸೇರಿದಂತೆ ಬರಗಾಲ ಪೀಡಿತ ಪ್ರದೇಶಗಳಿಗೆ ಪಶ್ಚಿಮ ಘಟ್ಟದ ನದಿಗಳಿಂದ ನೀರು ಹರಿಸುವ ಎತ್ತಿನಹಳ್ಳ ಯೋಜನೆಯಲ್ಲಿ ನೀರು ಪೂರೈಸಿದರೆ ಜಲಕ್ಷಾಮ ತಹಬದಿಗೆ ತರಬಹುದು. ಎತ್ತಿನಹಳ್ಳದ ಯೋಜನೆಯಲ್ಲಿ ತುಮಕೂರು, ಕೋಲಾರ ಭಾಗದ ಪ್ರದೇಶಗಳಿಗೆ 25 ಟಿಎಂಸಿ ನೀರನ್ನು ಹರಿಸುವ ಯೋಜನೆಯಿದ್ದು ಇದರಲ್ಲಿ ಜಾವಗಲ್, ಹಳೆಬೀಡು ಮಾದೀಹಳ್ಳಿ, ಹಾಸನ ಹಾಗೂ ಚನ್ನರಾಯಪಟ್ಟಣದ ಬರಪೀಡಿತ ಪ್ರದೇಶಗಳಿಗೆ 8 ಟಿ.ಎಂ.ಸಿ ನೀರನ್ನು ಕೊಟ್ಟರೆ ಬಹುತೇಕ ಕೆರೆಕಟ್ಟೆಗಳು ತುಂಬಿ ಅಂತರರ್ಜಲ ಮಟ್ಟವೂ ಹೆಚ್ಚಿನ ಜನರಿಗೆ ಕುಡಿಯುವ ನೀರು ಸಿಕ್ಕಂತಾಗುತ್ತದೆ.
ದೂರಗಾಮಿ ಯೋಜನೆ: ಅಲ್ಲದೆ ನೀರಿನ ಸಮಸ್ಯೆ ಬಗೆಹರಿಸುವ ದೂರಗಾಮಿ ಯೋಜನೆ ರೂಪಿಸುವುದು ಅವಶ್ಯಕವಾಗಿದ್ದು. ಈ ನಿಟ್ಟಿನಲ್ಲಿ ಅಣ್ಣಾಹಜಾರೆ, ರಾಜೆಂದ್ರಸಿಂಗ್, ಶರದ್ಜೋಷಿ ಇನ್ನಿತರರು ನಡೆಸಿದ ಹೋರಾಟ ಜಿಲ್ಲೆಯಲ್ಲೂ ಬರಬೇಕಿದೆ. ರಾಜಸ್ತಾನ, ಮಹಾರಾಷ್ಟ್ರ, ಬಿಹಾರ್ನಂತಹ ಬರಡಾಗಿದ್ದ ರಾಜ್ಯಗಳು ನೀರಾವರಿ ವ್ಯವಸ್ಥೆಯಲ್ಲಿ ಸಂಪೂರ್ಣ ಸ್ವಾವಲಂಬಿಯಾಗುವಂತೆ ಅವರು ಮಾಡಿರುವ ಹೋರಾಟದ ರೂಪುರೇಷೆ ತಿಳಿಯಲು ಅಧ್ಯಯನ ತಂಡ ಕಳಸಿಕೊಡಲಾಗುತ್ತಿದ್ದು ಅಲ್ಲಿನ ಚಿಂತನೆ ಇಲ್ಲಿ ಅಳವಡಿಸುವ ಪ್ರಯತ್ನ ಮಾಡಿದರೆ ನೀರಿನ ಸಮಸ್ಯೆಗೆ ಪರಿಹಾರ ಹುಡುಕಬಹುದು.
ಎತ್ತಿನಹೊಳೆ ಯೋಜನೆಗೆ ಒತ್ತಾಯಿಸಿ ಜನಾಂದೋಲನ ಜಾಥಾ ಫೆಬ್ರವರಿ 3 ನೇ ವಾರದಲ್ಲಿ ನಡೆಸಲು ಚಿಂತಿಸಲಾಗಿದ್ದು, 10 ದಿನಗಳ ಕಾಲ ತಾಲೂಕಿನಲ್ಲಿ ಪಾದಯಾತ್ರೆ ನಡೆಸುವ ಮೂಲಕ ಜನಜಾಗೃತಿ ಮೂಡಿಸಲು ಮುಂದಾಗುವುದಾಗಿ ವಿಶ್ವನಾಥ್ ಹೇಳಿದರು.