ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಭಂಡಾರ
ಹಾಸನ: ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ಭಂಡಾರ ಎಂದು ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಬಿ.ಸಿ. ಜಯಮ್ಮ ಮತ್ತು ಡಿ.ಲಕ್ಕಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಮೌಢ್ಯಗಳನ್ನು ಬಿತ್ತಲು ಪ್ರಯತ್ನಿಸುತ್ತಿದ್ದ ಜಡ ಸಂಪ್ರದಾಯದ, ಪುರೋಹಿತಶಾಯಿಯ ವಿರುದ್ಧ ಸಿಡಿದೆದ್ದ ವಚನಕಾರರು ಬಸವಣ್ಣನ ನೇತೃತ್ವದಲ್ಲಿ ನಡೆಸಿದ ಈ ಚಳವಳಿ ಸಾಮಾಜಿಕ ಕ್ರಾಂತಿಯ ಜೊತೆಗೆ ಕನ್ನಡ ಭಾಷೆಗೆ ಅಪೂರ್ವ ಸಮೃದ್ಧತೆಯನ್ನು ತಂದು ಕೊಟ್ಟಿದ್ದು ವಿಶೇಷ ಎಂದರು.
ಬಸವಣ್ಣ ರೂಪಿಸಿದ ಸ್ಥಾವರ ಜಂಗಮ ಕಲ್ಪನೆ ಇಂದಿಗೂ ಚಿಂತನಶೀಲ ಸಿದ್ಧಾಂತವಾಗಿ ನಮ್ಮ ನಡುವೆ ನಿಂತಿದೆ. ಇಂತಹ ಅಮೂಲ್ಯ ಸಂಪತ್ತನ್ನು ಯುವ ಜನಾಂಗಕ್ಕೆ ತಲುಪಿಸಿ, ಆ ಮೂಲಕ ಮುಂದಿನ ಪರಂಪರೆಗೆ ಮುಟ್ಟಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ದತ್ತಿ ಉಪನ್ಯಾಸ ಮಾಲೆಯನ್ನು ಹಮ್ಮಿ ಕೊಂಡಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದು ಕೊಳ್ಳಬೇಕೆಂದು ವಿನಂತಿಸಿದರು.
ಎವಿಕೆ ಮಹಿಳಾ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕ ಪ್ರೊ. ಸೀ.ಚ. ಯತೀಶ್ವರ್ ಮಾತನಾಡಿ, ರಾಜರ ಆಸ್ಥಾನಗಳಲ್ಲಿ ಪಂಡಿತರಿಗೆ ಮಾತ್ರ ಸೀಮಿತವಾಗಿದ್ದ ವಚನ ಸಾಹಿತ್ಯವನ್ನು ಜನ ಸಾಮಾನ್ಯರ ಬಳಿಗೆ ತಂದು, ಅದನ್ನು ಜನಮುಖಿಯನ್ನಾಗಿಸಿದ ಕೀರ್ತಿ 12ನೇ ಶತಮಾನದ ವಚನಕಾರರಿಗೆ ಸಲ್ಲುತ್ತದೆ ಎಂದು ಅಭಿಪ್ರಾಯಟ್ಟರು.
ವಿಶ್ವದ ಯಾವುದೇ ಭಾಷೆಯ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲ ಸತ್ವ ವಚನ ಸಾಹಿತ್ಯಕ್ಕಿದೆ. ಸಾಂಪ್ರದಾಯಿಕವಾಗಿ ಬಂದ ಪೌರಾಣಿಕ ವಸ್ತುವನ್ನು ನಿರಾಕರಿಸಿ ಸಂಪೂರ್ಣವಾಗಿ ಮನುಷ್ಯನನ್ನೇ ಕೇಂದ್ರವಾಗಿರಿಸಿ ರೂಪಗೊಂಡ ಅದ್ಭುತ ಸಾಹಿತ್ಯವಿದು. ವಚನ ಸಾಹಿತ್ಯ ಸ್ವಾನುಭವದಿಂದ ಹುಟ್ಟಿದ್ದು ಎಂದರು.
ಸಮಾಜದಲ್ಲಿ ಅಸಮಾನತೆ ತೊಡೆದುಹಾಕಲು ಪಣತೊಟ್ಟ, ಸ್ತ್ರೀಸ್ವಾತಂತ್ರ್ಯ, ಸಮಾನತೆ, ಹಾಗೂ ಗೌರವವನ್ನು ಉತ್ತುಂಗಕ್ಕೆ ಕೊಂಡೊಯ್ದ ವಚನಕಾರರ ಮೌಲ್ಯಗಳು, ಚಿಂತನೆಗಳು ನಮಗೆ ಸಾಮಾಜಿಕ ಪರಿವರ್ತನೆಯ ಆದರ್ಶವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿ. ಕೃಷ್ಣಪ್ಪ ನಮ್ಮ ನಡವಳಿಕೆ,ನಮ್ಮ ಚಿಂತನೆ ಹಾಗೂ ನಮ್ಮ ದಿಕ್ಕುಗಳನ್ನು ರೂಪಿಸಲು ವಚನಸಾಹಿತ್ಯ ಆದರ್ಶವಾಗಬೇಕು. ಪ್ರತಿ ವಚನವೂ ನಮ್ಮ ಜೀವನಕ್ಕೆ ಮಾರ್ಗದರ್ಶನವಾಗಿದ್ದು, ಇದನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಜನಪದ ಹಾಗೂ ರಂಗಗೀತೆಯ ಗಾಯಕ ಗುಂಡೂರಾಜ್ ವಚನಗಳನ್ನು ಹಾಡಿದರು. ತಾ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಮತೇಶ್ ಹಾಗೂ ಗೌರವಾಧ್ಯಕ್ಷ ರುದ್ರಪ್ಪ ಉಪಸ್ಥಿತರಿದ್ದರು. ಕಾವ್ಯಶ್ರೀ ಪ್ರಾರ್ಥನೆ ಮಾಡಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ. ಕೆ.ಜಿ. ಕವಿತ ಸ್ವಾಗತಿಸಿದರು. ಡಾ.ಇ. ಶ್ರೀನಿವಾಸ ವಂದಿಸಿದರು. ಎಂ.ಕೆ. ಮಹೇಶ್ ನಿರೂಪಿಸಿದರು.