ಕುಡಿವ ನೀರಿಗಾಗಿ ಪ್ರತಿಭಟನೆ
ಹಳೇಬೀಡು: ಕುಡಿಯುವ ನೀರಿಗಾಗಿ ಆಗ್ರಹಿಸಿ ಬಸವರಾಜಪುರ ಬೋವಿ ಕಾಲೋನಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ಬಸವರಾಜಪುರ ಭೋವಿ ಕಾಲೋನಿ ನಿವಾಸಿಗಳು ಹಳೇಬೀಡು ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಪರಮೇಶ್ ಮಾತನಾಡಿ, ಒಂದು ವರ್ಷದಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಗ್ರಾಮದಲ್ಲಿ ಕೊಳವೆ ಬಾವಿಯನ್ನು ತೆಗೆಯಲಾಗಿದ್ದು ಅದಕ್ಕೆ ಪೈಪ್ ಅಳವಡಿಸಿ ನೀರು ನೀಡುವಲ್ಲಿ ಗ್ರಾಮ ಪಂಚಾಯ್ತಿ ವಿಫಲವಾಗಿದೆ.ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ. ಕುಡಿಯುವ ನೀರಿಗೆ ಬದಲಿ ವ್ಯವಸ್ಥೆ ಮಾಡದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಮಾತನಾಡಿ, ನೀರಿನ ಸಮಸ್ಯೆಯ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗೆ ಗ್ರಾಮ ಪಂಚಾಯಿತಿಯಿಂದ ಮನವಿ ಸಲ್ಲಿಸಲಾಗುವುದು. ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಅಧ್ಯಕ್ಷರು ಭರವಸೆಯನ್ನು ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ಪುಟ್ಟರಾಜು, ಸ್ವಾಮಿ, ರಾಜು ಇತರರು ಇದ್ದರು.
ಚೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ
ಹಳೇಬೀಡು: ಗ್ರಾಮೀಣ ಪ್ರದೇಶದ ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಚೆಸ್ಕಾಂ ಕಚೇರಿ ಎದುರು ರೈತ ಸಂಘದ ಮುಖಂಡರು ಪ್ರತಿಭಟನೆ ನಡೆಸಿದರು.
ಹೋಬಳಿಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಹೊಯ್ಸಳ ವೃತ್ತದಿಂದ ಚೆಸ್ಕಾಂ ಕಚೇರಿಗೆ ತೆರಳಿ ಮಂಡಳಿಗೆ ಮುತ್ತಿಗೆ ಹಾಕಿ ಸಮಯಕ್ಕೆ ಸರಿಯಾಗಿ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳನ್ನು ಒತ್ತಾಯಿಸಿದರು.
ಗ್ರಾಮೀಣ ಪ್ರದೇಶದ ರೈತರಿಗೆ ಪ್ರತಿ ದಿನ ಹಗಲು 3 ಫೇಸ್ ವಿದ್ಯುತ್ ಅನ್ನು ಆರು ಗಂಟೆಯಿಂದ ರಾತ್ರಿ 12 ರವರೆಗೆ ವ್ಯವಸ್ಥೆ ಕಲ್ಪಿಸಬೇಕು. ರೈತರ ಬೇಡಿಕೆ ಈಡೇರಿಸದಿದ್ದರೆ ಹೋಬಳಿ, ಗ್ರಾಮೀಣ ಪ್ರದೇಶದ ಮನೆಗಳ ವಿದ್ಯುತ್ ಬಿಲ್ಲನ್ನು ಕಟ್ಟುವುದಿಲ್ಲವೆಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಗೆ ಸ್ಪಂದಿಸಿದ ಜಿಲ್ಲಾ ವಿದ್ಯುತ್ ಮಂಡಳಿ ಅಧಿಕಾರಿ ರಮೇಶ್ ಮಾತನಾಡಿ, ಇಡೀ ರಾಜ್ಯವೇ ವಿದ್ಯುತ್ ಕೊರತೆ ಎದುರಿಸುತ್ತಿದೆ. ಪರಿಣಾಮ ಗ್ರಾಮೀಣ ಪ್ರದೇಶದ ರೈತರಿಗೆ ಸಮರ್ಪಕ ವಿದ್ಯುತ್ ಒದಗಿಸಲು ಕಷ್ಟವಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿ ರೈತರಿಗೆ ಹಾಗೂ ವಿದ್ಯಾರ್ಥಿಗಳ ವಿದ್ಯಾ ಭ್ಯಾಸಕ್ಕೆ ತೊಂದರೆ ಆಗದಂತೆ ದಿನಕ್ಕೆ ನಾಲ್ಕು ಗಂಟೆ ಕಾಲ ನಿರಂತರವಾಗಿ ರೈತರ ಪಂಪ್ಸೆಟ್ಣಗಳಿಗೆ ವಿದ್ಯುತ್ ವ್ಯವಸೆ ಕಲ್ಪಿಸಿಕೊಡುವುದಾಗಿ ತಿಳಿಸಿದ ಮೇಲೆ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.
ತಾಲೂಕು ರೈತ ಸಂಘದ ಉಪಾಧ್ಯಕ್ಷ ಬಿ.ಶಿವಪ್ಪ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಪಿ. ಕುಮಾರ್, ಮುಖಂಡರಾದ ಚನ್ನೇಗೌಡ ಇತರರು ಇದ್ದರು.