ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿಧಾನಸಭೆ ಚುನಾವಣೆ ಮೇಲೆ ಹೆಚ್ಚಿನ ಪ್ರಭಾವ

Srinivasa Murthy VN
Updated On : 23 Feb 2013, 11:31 am

-ಮಾದಿಹಳ್ಳಿ ವೆಂಕಟೇಶ್
ಚನ್ನರಾಯಪಟ್ಟಣ: ಮುಂದಿನ ತಿಂಗಳು ನಡೆಯಲಿರುವ ಪುರಸಭೆ ಚುನಾವಣೆಯ ಫಲಿತಾಂಶ ಮುಂಬರುವ ವಿಧಾನಸಭಾ ಚುನಾವಣೆಯ ಮೇಲೆ ಅತ್ಯಂತ ಪ್ರಭಾವ ಬೀರಲಿದ್ದು, ಈ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರ ಗದ್ದುಗೆ ಹಿಡಿಯುತ್ತದೆಯೋ ಆ ಪಕ್ಷಕ್ಕೆ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 10 ಸಾವಿರ ಮತ ಹೆಚ್ಚುವರಿ ಮತಗಳು ದೊರೆಯುವ ಲಕ್ಷಣಗಳು ಕಾಣುತ್ತಿವೆ.
ಸಿ.ಎಸ್. ಪುಟ್ಟೇಗೌಡ ಅವರು ಜೆಡಿಎಸ್ ತೊರೆಯುವ ಮುನ್ನಾ ರಾಜಕೀಯದಲ್ಲಿ ಒಂದು ರೀತಿಯಲ್ಲಿ ಬದಲಾವಣೆ ಕಾಣುತ್ತದೆ ಎಂಬ ಕೂಗು ಪಟ್ಟಣದಲ್ಲಿ ಕೇಳಿ ಬರುತ್ತಿತ್ತಾದರೂ, ಆ ನಂತರದಲ್ಲಿ ಅದರ ಚಿತ್ರಣವೇ ಬದಲಾಗಿದೆ. ಪುಟ್ಟೇಗೌಡ ಅವರು ಕಾಂಗ್ರೆಸ್ ಸೇರುವುದು ಖಚಿತವಾಗಿದ್ದರೂ ಸ್ಥಳೀಯವಾಗಿ ಕಾಂಗ್ರೆಸ್ ನಾಯಕರು ಅವರನ್ನು ಯಾವ ರೀತಿಯಿಂದಲೂ ಗಣನೆಗೆ ತೆಗೆದುಕೊಳ್ಳದೆ ಟಿಕೆಟ್ ಹಂಚಿಕೆ ಮಾಡಿದ್ದಾರೆ.
ಪುರಸಭಾ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ಜೆಡಿಎಸ್‌ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲು ಮುಂದಾದ ಪುಟ್ಟೇಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಲ್ಲಿ ವಿಳಂಬ ತೋರುತ್ತಿರುವುದರಿಂದ ಪುರಸಭಾ ಚುನಾವಣೆಯಲ್ಲಿ ಅವರ ಪಾತ್ರವೇನು, ಅವರಿಗೆ ಅಧಿಕಾರ ಸಿಕ್ಕಿದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದಾಗಿ ಹೇಳುತ್ತಿದ್ದ ಜೆಡಿಎಸ್ ಮಾಜಿ ಪುರಸಭಾ ಸದಸ್ಯರು ಹಾಗೂ ಪಟ್ಟಣದ ನಾಯಕರು ಜೆಡಿಎಸ್‌ನಲ್ಲಿಯೇ ತಮ್ಮ ಸ್ಥಾನ ಭದ್ರ ಮಾಡಿಕೊಂಡು ಕೆಲವರು ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡರೆ ಇನ್ನೂ ಕೆಲವರು ಪ್ರಬಲವಾಗಿ ಗುರುತಿಸಿಕೊಂಡು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ.  
ಗುದ್ದುಗೆಯೇರಲು ಏನೆಲ್ಲಾ ಸರ್ಕಸ್:  ಜನತಾದಳ ಮತ್ತೆ ಪುರಸಭೆಯ ಅಧಿಕಾರ ಗುದ್ದುಗೆಯೇರಲು ಏನೆಲ್ಲಾ ಸರ್ಕಸ್ ಮಾಡುತ್ತಿದ್ದು, ಕಾಂಗ್ರೆಸ್‌ನಲ್ಲಿ ಟಿಕೆಟ್ ವಂಚಿತರಾಗಿರುವವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಯಾವುದಾದರೂ ಅವಕಾಶ ನೀಡುವ ಭರವಸೆ ನೀಡಿ ಗೆಲುವಿನ ಹಾದಿ ಹಿಡಿಯುವತ್ತಾ ಮುಂದಾಗಿದ್ದಾರೆ.
ಸಿ.ಎಸ್.ಪುಟ್ಟೇಗೌಡ ತಮ್ಮ ಶಾಸಕ ಸ್ಥಾನವಿರುವ ತನಕ ಪುರಸಭೆಯ ಎಲ್ಲಾ ಸಾಮಾನ್ಯ ಸಭೆಗಳಲ್ಲಿ ಭಾಗವಹಿಸಿ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದವರು ಇಂದು ಯಾರಿಗಾದರೂ ಟಿಕೆಟ್ ನೀಡುವ ಭರವಸೆ ನೀಡದೆ  ಹತಾಶರಾಗಿ ಅವರನ್ನು ಒಬ್ಬಂಟಿಯಾಗಿ ಮಾಡುವ ಮಟ್ಟಕ್ಕೆ ಸ್ಥಳೀಯ ಕಾಂಗ್ರೆಸಿಗರು ಮುಂದಾಗಿದ್ದಾರೆ.
ತಾವು ಕಾಂಗ್ರೆಸ್ ಸೇರುವುದು ಖಚಿತ. ಪಟ್ಟಣದಲ್ಲಿ ಯಾವ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಹೇಳಿದರೆ ಅವರ ಪರ ಪ್ರಚಾರ ಮಾಡುತ್ತೇನೆ. ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ. ಹೈಕಮಾಂಡ್ ಯಾವ ಸ್ಥಾನ ನೀಡುತ್ತದೆಯೋ ಅದಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪುಟ್ಟೇಗೌಡರು ಹೇಳುತ್ತಾರೆ.
ಅತೃಪ್ತರನ್ನು ಸೆಳೆಯುವ: ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದು, ಪ್ರತಿಷ್ಠಿತ 7ಮತ್ತು 8ನೇ ವಾರ್ಡ್‌ಗಳಲ್ಲಿ ಅಧಿಕಾರ ಹಿಡಿಯಲು ಏನೆಲ್ಲಾ ಸರ್ಕಸ್ ಮಾಡುತ್ತಿದ್ದು,  ಜಿಪಂ ಮಾಜಿ ಸದಸ್ಯ ಕೆ.ಎಸ್.ಕೃಷ್ಣೇಗೌಡ ಅವರನ್ನು ಪರಾಭವಗೊಳಿಸಿದ್ದ ಮಂಜುನಾಥ್ ದಿನೇಶ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು 7ನೇ ವಾರ್ಡ್‌ನಿಂದ ಅವರ ಪತ್ನಿ ಗೀತಾ ಅವರಿಗೆ ಟಿಕೆಟ್ ನೀಡಿ ಅವರನ್ನು ಗೆಲ್ಲಿಸುವ ಭರವಸೆ ನೀಡಿದ್ದಾರೆ.
ಕಾಂಗ್ರೆಸ್‌ನಿಂದ ಟಿಕೆಟ್ ಸಿಗದೇ ಅತೃಪ್ತರಾಗಿರುವವರನ್ನು ಸೆಳೆಯುವಲ್ಲಿ ಸಫಲವಾಗಿರುವ ಜೆಡಿಎಸ್ ನಾಯಕರು ರವೀಂದ್ರ, ಮಹದೇವ್ ಅವರನ್ನು ತಮ್ಮತ್ತ ಸೆಳೆದಿರುವ ಸಿ.ಎನ್.ಬಾಲಕೃ,ಷ್ಣ 9ನೇ ವಾರ್ಡ್‌ನಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಮಾಜಿ ಅಧ್ಯಕ್ಷ ಸಿ.ಟಿ ಅಶೋಕ್‌ಕುಮಾರ್ ಅವರನ್ನು ಸೆಳೆಯುವತ್ತಾ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ.
ಕಣದಿಂದ ಹೊರಗುಳಿದವರು: ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಉಪಾಧ್ಯಕ್ಷ ಸಿ.ಎನ್. ಮೂರ್ತಿ ಅವರಿಗೆ ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡಲು ಹಿಂಜರಿದ ಕಾರಣ ಅವರು ಕಣದಿಂದ ಹೊರ ಉಳಿದಿದ್ದಾರೆ. ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡ ಅಧ್ಯಕ್ಷೆ ಗೀತಾ ಅವಿನಾಶ್ ಹಾಗೂ ಭಾಗ್ಯ ಉಮೇಶ್ ಅವರಿಗೆ ಯಾವುದೇ ಪಕ್ಷದಲ್ಲಿ ಟಿಕೆಟ್ ನೀಡದ ಕಾರಣ ಕಣದಿಂದ ಹಿಂದೆ ಸರಿದ್ದಾರೆ.
ಮಾಜಿ ಅಧ್ಯಕ್ಷರು ಡೆಮ್ಮಿ ಅಭ್ಯರ್ಥಿ:  ಪುರಸಭೆಯಲ್ಲಿ ಅವಿಶ್ವಾಸ ನಿರ್ಣಯ ಮುಖೇನ ಪದಚ್ಯುತಿಗೊಂಡ ಅನಸೂಯ ಪ್ರಕಾಶ್ ಅವರಿಗೆ ಟಿಕೆಟ್ ನೀಡದ ಜೆಡಿಎಸ್ ಅವರನ್ನು ಡೆಮ್ಮಿ ಅಭ್ಯರ್ಥಿಯಾಗಿಸಿದ್ದಾರೆ. ಅದೇ ರೀತಿ ಮಾಜಿ ಸಚಿವ ಶ್ರೀಕಂಠಯ್ಯ    ಅವರ ಕೃಪೆಯಿಂದ ಅಧ್ಯಕ್ಷರಾದ ಮೀನಾಕ್ಷಿ ರಘು ಕೂಡಾ ಅನುಸೂಯ ಪ್ರಕಾಶ್ ದಾರಿ ಹಿಡಿದಿದ್ದಾರೆ. ಎರಡನೇ ವಾರ್ಡ್‌ನಿಂದ ಡೆಮ್ಮಿ ಅಭ್ಯರ್ಥಿಯಾಗಿದ್ದಾರೆ.
ಸ್ಪರ್ಧಿಗಳಲ್ಲಿ ಆತಂಕ: ಪುರಸಭಾ ಚುನಾವಣೆಯಲ್ಲಿ ಆಡಳಿತಾರೂಢ ಜೆಡಿಎಸ್‌ನ ವಿರೋಧಿ ಅಲೆ ಕಂಡಿತಾದರೂ ಅದರ ಪ್ರಯೋಜನ ಕಾಂಗ್ರೆಸ್ ಪಡೆಯಲು ಮುಂದಾಗದೆ ಕೊನೆ ಕ್ಷಣದವರೆಗೆ ಬಿ.ಫಾರಂ ನೀಡದೆ ಪಕ್ಷದ ಕಾರ್ಯರ್ತರಲ್ಲಿ ಹಾಗೂ ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿದ ಹಿನ್ನೆಲೆಯಲ್ಲಿ ಕೆಲವರು ತಟಸ್ಥವಾಗಿ ನಿಂತು ನೋಡುವ ನಿರ್ಧಾರ ತೆಗೆದುಕೊಂಡರೆ ಇನ್ನೂ ಕೆಲವರು ಕಾಂಗ್ರೆಸ್ ನಾಯಕರ ಮನೆಯ ಬಾಗಿಲು ಸವೆಸಿ ಅಲ್ಲಿ ಉಂಟಾದ ಗೊಂದಲದಿಂದ ಕೆಲವರು ತಟಸ್ಥರಾದರೆ ಇನ್ನೂ ಕೆಲವರು ಪಕ್ಷಾಂತರ ಮಾಡಿದ್ದಾರೆ.

ಕಡೇ ದಿನ ನಾಮಪತ್ರ ಮಹಾಪೂರ
ಹಾಸನ: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಲು ಶನಿವಾರ ಕಡೆಯ ದಿನವಾಗಿದ್ದು, ನಗರಸಭೆ ಚುನಾವಣೆ ಆಕಾಂಕ್ಷಿಗಳು ಅಪಾರ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದರು.
ನಗರದಲ್ಲಿ 35 ವಾರ್ಡ್‌ಗಳಿದ್ದು, ಪ್ರತಿಯೊಂದು ವಾರ್ಡ್‌ನಿಂದಲು ಸಾಕಷ್ಟು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಒಂದೇ ವಾರ್ಡ್‌ನಿಂದ ಹಾಗೂ ಒಂದೇ ಪಕ್ಷದ ಎರಡು ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಒತ್ತಡ ಇರುವ ಕಡೆಗಳಲ್ಲಿ ಇಬ್ಬರಿಗೆ ಬಿ ಫಾರಂ  ನೀಡಲಾಗಿದೆ.
ನಗರದ 3ನೇ ವಾರ್ಡ್‌ನಿಂದ ಎಚ್.ಎಂ.ಸುರೇಶ್‌ಕುಮಾರ್, 8ನೇ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ತಾರಾ, 14ನೇ ವಾರ್ಡ್ ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಅನ್ನಪೂರ್ಣಮ್ಮ, 9ನೇ ವಾರ್ಡ್‌ನಿಂದ ಎಚ್.ಎಸ್.ಅನಿಲಲ್ಕುಮಾರ್, ಬಿ.ಕೆ.ಪೂರ್ಣಚಂದ್ರ, 16ನೇ ವಾರ್ಡ್ ನಿಂದ ಜೆಡಿಎಸ್ಬೆಂಬಲಿತ ಅಭ್ಯರ್ಥಿ ವಿಜಯಕುಮಾರ್, 6ನೇ ವಾರ್ಡ್‌ನಿಂದ ಅಂಬಿಕಾ ರವಿಶಂಕರ್ ನಾಮಪತ್ರ ಸಲ್ಲಿಸಿದರು.
ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಗರಸಭೆ ಚುನಾವಣೆಯಲ್ಲಿ 25ನೇ ವಾರ್ಡ್‌ನಿಂದ ಜಯಗಳಿಸಿದ ಎಚ್.ಪಿ.ರಘುನಾಥ್ ನಾಮಪತ್ರ ಸಲ್ಲಿಸಿದರು. ಕಳೆದ ಬಾರಿ ನಗರ ಸಭೆಯಿಂದ ಜಯಗಳಿಸಿದ 21ನೇ ವಾರ್ಡ್‌ನ ಇರ್ಷಾದ್‌ಪಾಷಾ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಕಡೆ ದಿನವಾಗಿದ್ದರಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುಗಿ ಬಿದ್ದಿದ್ದರು. ನಾಮಪತ್ರ ಸಲ್ಲಿಸಲು ಬಂದಿದ್ದ ಅಭ್ಯರ್ಥಿಗಳು ಬೆಂಬಲಿಗರು, ಅಭಿಮಾನಿಗಳೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಕೆಲವರಿಗೆ ಅಧಿಕೃತವಾಗಿ ತಮ್ಮ ಪಕ್ಷದಿಂದ  ಬಿ ಫಾರಂ ಲಭ್ಯವಾಗದಿದ್ದರೂ ನಾಮಪತ್ರ ಸಲ್ಲಿಸಿದರು.
9ನೇ ವಾರ್ಡ್‌ನಿಂದ ಜೆಡಿಎಸ್‌ನಿಂದ ಎಚ್.ಎಸ್.ಅನಿಲ್‌ಕುಮಾರ್ ಸ್ಪರ್ಧಿಸಲು ಎರಡನೇ ಅವಧಿಗೆ ಬಿ ಫಾರಂ ಪಡೆಯಲು ಹರಸಾಹಸ ಪಟ್ಟರು. ಶುಕ್ರವಾರದಿಂದಲೂ ಬಿ ಫಾರಂ ಗೆ ಪೈಪೋಟಿ ನಡೆದಿದ್ದು, ಕೊನೆಯದಾಗಿ 9ನೇ ವಾರ್ಡ್‌ನಿಂದ ಮೊದಲ ಅಭ್ಯರ್ಥಿಯಾಗಿ ಅನಿಲ್‌ಕುಮಾರ್, ಎರಡನೇ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ ಬಿ.ವಿ.ಕರೀಗೌಡರ ಪುತ್ರ ಬಿ.ಕೆ.ಪೂರ್ಣಚಂದ್ರ ನಾಮಪತ್ರ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement