ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವೈಭವದ ಲಕ್ಷ್ಮೀ ವೆಂಕಟರಮಣಸ್ವಾಮಿ ರಥೋತ್ಸವ

Srinivasa Murthy VN
Updated On : 23 Feb 2013, 11:32 am

ಹೊಳೆನರಸೀಪುರ: ತಾಲೂಕಿನ ಹಳೇಕೋಟೆ ಹೋಬಳಿಯ ಮಾವಿನಕೆರೆ ಗ್ರಾಮದ ಹೊಯ್ಸಳರ ಕಾಲದ ಇತಿಹಾಸ ಹೊಂದಿರುವ ಶ್ರೀ ಲಕ್ಷ್ಮೀವೆಂಕಟರಮಣಸ್ವಾಮಿ ಮಹಾರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಶುಭ ಮೇಷ ಲಗ್ನದಲ್ಲಿ ವೈಖಾನಸ ಆಗಮೋಕ್ತವಾಗಿ ನೆರವೇರಿತು.
ಇಲ್ಲಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯವು 11ನೇ ಶತಮಾನದಿಂದ 19ನೇ ಶತಮಾನದವರೆಗಿನ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದ್ದು, ಹೊಯ್ಸಳರ ದೊರೆ ವೀರನರಸಿಂಹನ ಕಾಲದ ಶಾಸನದಲ್ಲಿ ಈ ದೇವಾಲಯದ ಉಲ್ಲೇಖ ಹೊಂದಿದೆ. ವಿಜಯನಗರ ಸಾಮಂತರ ಕಾಲದಲ್ಲೂ ಈ ಗ್ರಾಮವು ಪ್ರಸಿದ್ಧಿಯನ್ನು ಹೊಂದಿತ್ತೆಂಬ ಇತಿಹಾಸವಿದೆ.
ಪ್ರತಿ ವರ್ಷ ಇಲ್ಲಿ ನಡೆಯುವ ಮಹಾಥೋತ್ಸವಕ್ಕೆ ನಾಡಿನ ನಾನಾ ಮೂಲೆಗಳಿಂದಲೂ ಭಕ್ತರು ಮಾವಿನಕೆರೆ ಗ್ರಾಮಕ್ಕೆ ಆಗಮಿಸಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಕೃತಾರ್ಥರಾಗುತ್ತಾರೆ.
ಶನಿವಾರ ಡೋಲಾಯಮಾನಂ ಗೋವಿಂದಂ ಮಂಚಸ್ಥಂ ಮಧುಸೂದನಂ ರಥಸ್ಥಂ ಶ್ರೀನಿವಾಸಂ ದೃಟ್ವಪುನರ್ಜನ್ಮನವಿದ್ಯತೆ ಎಂಬ ಮರ್ಯಾದೆಯೊಂದಿಗೆ ಶುಭ ಮೇಷ ಲಗ್ನದಲ್ಲಿ ನೆರವೇರಿತು. ಇಲ್ಲಿನ ಆಗಮಿಕರು ಲಕ್ಷ್ಮೀವೆಂಕಟರಮಣಸ್ವಾಮಿ ಉತ್ಸವಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ಸಕಲ ಪೂಜಾ ಕಾರ್ಯಗಳನ್ನೂ ನೆರವೇರಿಸಿದ ನಂತರದಲ್ಲಿ ನೆರದಿದ್ದ ಸಾವಿರಾರು ಭಕ್ತರು ಗೋವಿಂದ ನಾಮಸ್ಮರಣೆಯೊಂದಿಗೆ ರಥವನ್ನು ದೇವಾಲಯದ ಸುತ್ತಲಿನ ನಾಲ್ಕು ರಾಜಬೀದಿಗಳಲ್ಲಿ ಎಳೆಯುತ್ತಾ ಸಾಗಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ, ಉಪವಿಭಾಗಾಧಿಕಾರಿ ಕೆ.ಎಚ್.ಜಗದೀಶ್, ತಹಸೀಲ್ದಾರ್ ಈಶ್ವರಪ್ಪ ಮೂದಲಾದವರು ಪಾಲ್ಗೊಂಡು ಪೂಜೆ ಸಲ್ಲಿಸಿದರು.
ಈ ಬಾರಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ್ದ ಭಕ್ತರಲ್ಲದೆ, ವಿದೇಶಿಯರೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಫ್ರಾನ್ಸ್‌ನ ಲೂವ್ ಕ್ಯಾಸಿಯಂ ಆಫ್ ಪ್ಯಾರೀಸ್‌ನ ಪ್ರಾಚ್ಯ ವಸ್ತು ಸಂಗ್ರಹಾಲಯದ 6 ಮಂದಿ ವಿದೇಶಿ ಇತಿಹಾಸ ತಜ್ಞರು ಭಾರತ ಪ್ರವಾಸ ಸಂದರ್ಭದಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದು, ಇಲ್ಲಿನ ರಥೋತ್ಸವದ ವಿಷಯ ತಿಳಿದು ಸಂಭ್ರಮದಿಂದ ಪಾಲ್ಗೊಂಡು ರಥಕ್ಕೆ ಹಣ್ಣು ಜವನವನ್ನು ಶ್ರದ್ಧೆ
ಯಿಂದ ಎಸೆದು ಭಕ್ತಿ ಸಮರ್ಪಿಸಿದ್ದು ವಿಶೇಷವಾಗಿತ್ತು.
ಸುಡು ಬಿಸಿಲಿನಲ್ಲಿಯೂ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗಾಗಿ ಮಾವಿನಕೆರೆ ಗ್ರಾಮಸ್ಥರು ತಣ್ಣನೆಯ ಮಜ್ಜಿಗೆಯನ್ನು ಉಚಿತವಾಗಿ ಹಂಚಿದರು. ಡಿವೈಎಸ್ಪಿ ಪ್ರದೀಪ್‌ಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement