ಚನ್ನರಾಯಪಟ್ಟಣ: ದೇಶದಲ್ಲಿ ಅತ್ಯಂತ ದುಡಿಮೆಯ ವರ್ಗವೆಂದರೆ ರೈತರಾಗಿದ್ದು, ಆದರೆ ಅವರಿಂದು ಯಾರಿಗೂ ಬೇಡವಾದ ಸ್ಥಿತಿಗೆ ಬಂದಿದ್ದಾರೆಂದು ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ. ಬೋರಲಿಂಗಯ್ಯ ವಿಷಾದಿಸಿದರು.
ತಾಲೂಕಿನ ಅಮರಗಿರಿ ಚಿಕ್ಕೋನಹಳ್ಳಿ ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘ ಉದ್ಘಾಟಿಸಿ ಮಾತನಾಡಿ ಪಟ್ಟಣದ ಜನತೆಗೆ ಹಳ್ಳಿಗಳಿಂದ ಉತ್ಪಾದಿಸಿದ್ದು ಬೇಕು. ಆದರೆ ರೈತರಿಗೆ ಯಾವ ಸೌಲಭ್ಯ ನೀಡಲಾಗುತ್ತಿದೆ ಎಂಬುದನ್ನು ಚಿಂತಿಸಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಜನತೆಯ ಜೀವನ ಅತ್ಯಂತ ಕ್ಲಿಷ್ಟಕರವಾಗಿದ್ದು, ಮಳೆಯಿಲ್ಲದೆ ರೈತರ ಬದುಕು ಚಿಂತಾಜನಕವಾಗಿದೆ. ಸರ್ಕಾರದಿಂದ ಸಿಗುವ ಅಲ್ಪ ಸೌಲಭ್ಯಗಳೂ ಮಧ್ಯವರ್ತಿಗಳ ಪಾಲಾಗುತ್ತಿರುವುದರಿಂದ ಜೀವನವೇ ಸಾಕೆಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ ಎಂದರು.
ರೈತರೂ ಕೂಡ ಆಧುನಿಕತೆಗೆ ಮಾರು ಹೋಗುವ ನಿಟ್ಟಿನಲ್ಲಿ ಗ್ರಾಮೀಣ ಕಲೆಗಳನ್ನು ಮರೆಯುತ್ತಿದ್ದು, ಜಾನಪದ ಸಂಸ್ಕೃತಿ ಇಲ್ಲವಾಗಿದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕೂಡ ಮುಂದಾಗಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ ಮನುಷ್ಯ ತಾನು ಎಷ್ಟೇ ಎತ್ತರಕ್ಕೆ ಬೆಳೆದರೂ ತನಗೆ ಜ್ಞಾನ ಕೊಟ್ಟ ಶಾಲೆಯನ್ನು ಮರೆಯಲಾರ. ಆತ ಓದಿದ ಶಾಲೆಯಲ್ಲಿ ಒಂದು ಗೌರವ ದೊರೆತರೆ ತನ್ನ ವೃತ್ತಿಯಲ್ಲಿ ಸಿಕ್ಕಿದ ಎಲ್ಲಾ ಗೌರವಗಳಿಗಿಂತ ಮಿಗಿಲಾದ ಗೌರವದಂತೆ ಕಾಣುತ್ತಾನೆ ಎಂದು ತಿಳಿಸಿದರು.
ಹಳೆ ತಲೆಮಾರಿನ ಜನತೆ ಮುಂಗಾರು ಮಳೆ ಬಂತೆಂದರೆ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಿದ್ದರು. ಆದರೆ ಇಂದಿನ ಆಧುನಿಕತೆಯನ್ನು ಅಳವಡಿಕೆ ಮಾಡಿಕೊಳ್ಳಲು ತಾವು ಮರಗಿಡ ಬೆಳೆಸದೇ ಪರಿಸರವನ್ನು ಹಾಳು ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಬಿಎಚ್ಇಎಲ್ನ ಉಪ ವ್ಯವಸ್ಥಾಪಕ ವಿಜಯ್ಕುಮಾರ್ ಸಂಘ ಉದ್ಘಾಟಿಸಿದರು. ಹಿರೀಸಾವೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಸ್ವಾಮಿ, ಜಿಪಂ ಸದಸ್ಯ ರಂಗಸ್ವಾಮಿ ತಾಪಂ ಮಾಜಿ ಅಧ್ಯಕ್ಷ ಚಿಕ್ಕೇಗೌಡ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕೇಶ್ ನಿರೂಪಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.