ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ದ್ವಿತೀಯ ಪಿಯು ವಿದ್ಯಾರ್ಥಿ ದೆಸೆಯ ಪ್ರಮುಖ ಘಟ್ಟ'

Srinivasa Murthy VN
Updated On : 26 Feb 2013, 12:11 pm

ಹಿರೀಸಾವೆ (ಚನ್ನರಾಯಪಟ್ಟಣ ತಾ.):  ದ್ವಿತೀಯ ಪಿಯುಸಿ ವಿದ್ಯಾರ್ಥಿ ದೆಸೆಯ ಪ್ರಮುಖ ಘಟ್ಟ ಎಂದು ಚನ್ನರಾಯಪಟ್ಟಣ ಆದಿಚುಂಚನಗಿರಿ ಶಿಕ್ಷಣ ವಿದ್ಯಾಲಯ ಪ್ರಾಧ್ಯಾಪಕ ಡಾ.ಎಚ್.ಪಿ.ಶಂಕರ್ ಹೇಳಿದರು.
ಪಟ್ಟಣದ ದಿ.ನಾಗಮ್ಮ ಶ್ರೀಕಂಠಯ್ಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪಿಯುಸಿ ನಂತರದ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜೀವನಕ್ಕೆ ಭದ್ರತೆ ಒದಗಿಸುವ ಶಿಕ್ಷಣ ಪಡೆಯುವುದು ಸೂಕ್ತ ಎಂದರು. ಹಿರೀಸಾವೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಚ್.ಎಸ್.ಶ್ರೀಧರ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಪೋಷಕರು, ಬೋಧಕರಿಗೆ ಉಪನ್ಯಾಸಕರಿಗೆ ಗೌರವ ತರಬೇಕು ಎಂದು ತಿಳಿಸಿದರು. ರೈತ ಸಂಘ ಹೋಬಳಿ ಘಟಕ ಅಧ್ಯಕ್ಷ ಎಚ್.ವಿ.ಕೃಷ್ಣೇಗೌಡ ಮಾತನಾಡಿದರು. ಪ್ರಾಂಶುಪಾಲ ವಾಮರಾಜ್ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ವಾರ್ಷಿಕ ಶಿಬಿರ ಹಾಗೂ ರಾಷ್ಟ್ರೀಯ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯರಿಗೆ ಮತ್ತು ಜಿಲ್ಲಾ ಮಟ್ಟದ ನಾಟಕ ಸ್ಪರ್ಧೆಯಲ್ಲಿ ವಿಜೇತ ಬಾಲಕಿಯರಿಗೆ ಬಹುಮಾನ ವಿತರಿಸಲಾಯಿತು.

ನಾಳೆ ಸರ್ಕಾರಿ ಅನುದಾನಿತ ಮುಖ್ಯ ಶಿಕ್ಷಕರ ಸಭೆ
ಮೈಸೂರು: ನಂಜನಗೂಡು ಹಾಗೂ ಟಿ. ನರಸೀಪುರ ತಾಲೂಕುಗಳು, ಉತ್ತರ ವಲಯ, ದಕ್ಷಿಣವಲಯ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಭೆಯನ್ನು ಫೆ.27ರ ಬೆಳಗ್ಗೆ 9.30ಕ್ಕೆ ಕೆಆರ್‌ಎಸ್ ರಸ್ತೆಯ ಐಡಿಯಲ್ ಜಾವಾ ರೋಟರಿ ಶಾಲೆಯಲ್ಲಿ ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಆರ್‌ಎಂಎಸ್‌ಎ, ಯೋಜನಾ ತಯಾರಿಕೆ, ಎಸ್ಸೆಸ್ಸೆಲ್ಸಿ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ವಿಶ್ಲೇಷಣೆ ಮತ್ತು ಎಸ್‌ಡಿಪಿ ಬಗ್ಗೆ ಚರ್ಚಿಸಲಾಗುವುದು. ಆದ್ದರಿಂದ ಮುಖ್ಯಶಿಕ್ಷಕರು ಕಡ್ಡಾಯವಾಗಿ ಹಾಜರಾಗುವಂತೆ ಡಿಡಿಪಿಐ ಬಿ.ಕೆ. ಬಸವರಾಜು ತಿಳಿಸಿದ್ದಾರೆ.

ರಾಜ್ಯ ಬೈಕ್ ರೇಸ್: ಬೆಂಗಳೂರಿನ ಮಧು ಪ್ರಥಮ
ಅರಕಲಗೂಡು: ಇಲ್ಲಿನ ಕೆಂಗಟ್ಟೆ ಫಾರೆಸ್ಟ್‌ನಲ್ಲಿ ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಾಗಾರ ಮಾಲೀಕರ ಮತ್ತು ತಂತ್ರಜ್ಞರ ಸಂಘ ಆಯೋಜಿಸಿದ್ದ ರಾಜ್ಯ ಮಟ್ಟದ ಬೈಕ್ ರೇಸ್ ನೋಡುಗರನ್ನು ರೋಮಾಂಚನಗೊಳಿಸಿತು.  
 ಸ್ಪರ್ಧೆ ವೀಕ್ಷಿಸಲು ಜಿಲ್ಲೆಯ ವಿವಿದೆಢೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದವರನ್ನು ತಣಿಸುವಲ್ಲಿ ಸ್ಪರ್ಧಾಳುಗಳು ಸಫಲರಾದರು. ರಾಜ್ಯದ ಬೆಂಗಳೂರು, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಹಾಸನ,ನಾಗಮಂಗಲ, ಕೆ.ಆರ್.ನಗರಗಳಿಂದ ಸ್ಪರ್ಧಿಗಳು ಆಗಮಿಸಿದ್ದರು.
        ಸ್ಪರ್ಧೆ ಉದ್ಘಾಟಿಸಿದ ಶಾಸಕ ಎ.ಮಂಜು ಅರಕಲಗೂಡಿನಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಈ ಸ್ಪರ್ಧೆ ಐತಿಹಾಸಿಕವಾಗಿದ್ದು, ಯುವ ಸಮುದಾಯಕ್ಕೆ ಪ್ರೇರಕವಾಗಿದೆ ಎಂದರು. ಡಾ.ಮಂತರ್ಗೌಡ ಇತರರು ಉಪಸ್ಥಿತರಿದ್ದರು.
  ಸ್ಪರ್ಧೆಯಲ್ಲಿ ಬೆಂಗಳೂರಿನ ಮಧು ಬೆಸ್ಟ್ ರೈಡರ್ ಪ್ರಶಸ್ತಿ ಪಡೆದು 10 ಸಾವಿರ ರು. ಬಹುಮಾನ ಪಡೆದರು. ಇಂಡಿಯನ್ ಓಪನ್‌ಕ್ಲಾಸ್‌ನಲ್ಲಿ ಬೆಂಗಳೂರಿನ ನಟರಾಜು ಪ್ರಥಮ,  ಮೈಸೂರಿನ ತನ್ವಿರ್ ದ್ವಿತೀಯ ಸ್ಥಾನ ಪಡೆದರು.ಸ್ಪರ್ಧೆಯಲ್ಲಿ  4 ಸ್ಟ್ರೋಕ್ಸ್‌ನ 30 ಬೈಕ್ ಸವಾರರು, 2 ಸ್ಟ್ರೋಕ್ಸ್‌ನ 50 ಮತ್ತು ಟಿವಿಎಸ್ ಕ್ಲಾಸ್‌ನ 30 ಸವಾರರು ಭಾಗವಹಿಸಿದ್ದರು. ಸ್ಪರ್ಧಾಳುಗಳಿಗೆ ಒಟ್ಟು 1 ಲಕ್ಷ 85 ಸಾವಿರ ರು. ನಗದು ಬಹುಮಾನ ನೀಡಲಾಯಿತು.

ನಾಳೆ ನೇತ್ರ ತಪಾಸಣೆ ಶಿಬಿರ
ಮೈಸೂರು: ಇಲ್ಲಿನ ರಾಮಾನುಜ ರಸ್ತೆಯಲ್ಲಿರುವ ಜೆಎಸ್‌ಎಸ್ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಫೆ.27ರ ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಹಿರಿಯ ನಾಗರಿಕರಿಗೆ ನೇತ್ರ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿದ್ದು, ದೂ. 0821- 2548253 ಸಂಪರ್ಕಿಸಬಹುದು.

ಚಿತ್ರಕಲಾ ಸ್ಪರ್ಧೆ
ಎಲ್ ಅಂಡ್ ಟಿ ಸಂಸ್ಥೆಯಿಂದ ಫೆ.27ರ ಬೆಳಗ್ಗೆ 9ಕ್ಕೆ ಚೆಲುವಾಂಬ ಪಾರ್ಕ್‌ನಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದ್ದು, ಸ್ವಚ್ಛ ಶಾಲೆ ವಿಷಯ ಸೂಚಿಸಲಾಗಿದೆ. ಮೊ. 99017 23458 ಸಂಪರ್ಕಿಸಬಹುದು.

ನಾಮಪತ್ರ ಸ್ವೀಕೃತ
ಮೈಸೂರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಂಡಿದ್ದ ಪಾಲಿಕೆಯ ಮಾಜಿ ಸದಸ್ಯರ ನಾಮಪತ್ರಗಳು ಕೂಡ ಸ್ವೀಕೃತವಾಗಿವೆ. ಮೂವರನ್ನು ಹೊರತುಪಡಿಸಿ ಉಳಿದ ಸದಸ್ಯರ ಅನರ್ಹತೆ ಫೆ.17ಕ್ಕೆ ಮುಕ್ತಾಯವಾಗಿದೆ. ಹೀಗಾಗಿ ಮಾ.7ರ ಚುನಾವಣೆಯಲ್ಲಿ ಸ್ಪರ್ಧಿಸಿರುವ ಈ ಹಿಂದೆ ಅನರ್ಹಗೊಂಡಿದ್ದ ಎಲ್ಲಾ ಸದಸ್ಯರ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.

ಎಸ್‌ಜೆಎಸ್‌ಗೆ ಶ್ರದ್ಧಾಂಜಲಿ ಸಭೆ
ಇತ್ತೀಚೆಗೆ ನಿಧನರಾದ ವೀಣಾ ವಿದ್ವಾನ್ ಎಂ.ಜೆ. ಶ್ರೀನಿವಾಸ ಅಯ್ಯಂಗಾರ್ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಫೆ.28ರ ಸಂಜೆ 6.30ಕ್ಕೆ ಬಿಡಾರಂ ಕೃಷ್ಣಪ್ಪ ರಾಮ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಅವರ ಶಿಷ್ಯರಾದ ಎ.ಎಸ್. ಪದ್ಮಾ, ಎಂ.ಕೆ. ಸರಸ್ವತಿ, ಮೈಸೂರು ಎಸ್. ರಾಜಲಕ್ಷ್ಮೀ, ಎಸ್.ವಿ. ಸಹನಾ ನಾದನಮನ ಸಲ್ಲಿಸುವರು.

ಹಿರೀಸಾವೆ ದೊಡ್ಡಕೆರೆ ಅಂಗಳದಲ್ಲಿ ಅಪರಿಚಿತ ಮಹಿಳೆ ಕೊಲೆ
ಹಾಸನ: ಅಪರಿಚಿತ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಹಿರೀಸಾವೆ ದೊಡ್ಡಕೆರೆ ಅಂಗಳದಲ್ಲಿ ಸೋಮವಾರ ನಡೆದಿದೆ.
  ಹಿರೀಸಾವೆ ದೊಡ್ಡಕೆರೆ ಅಂಗಳದಲ್ಲಿ ಸುಮಾರು 20-25 ವಯಸ್ಸಿನ ಅಪರಿಚಿತ ಮಹಿಳೆಯನ್ನು ಕಿಡಿಗೇಡಿಗಳು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ಮುಚ್ಚಿ ಹಾಕಲು ಮೃತದೇಹಕ್ಕೆ ಬೆಂಕಿ ಹಾಕಿ ಸುಟ್ಟು ಹಾಕಿದ್ದಾರೆ. ಮೃತ ಮಹಿಳೆ ನೀಲಿ ಜೀನ್ಸ್ ಪ್ಯಾಂಟ್, ಹೂವಿನಂತಿರುವ ಟಾಪ್, ಸ್ವೆಟರ್, ಎರಡು ಕೈಯಲ್ಲಿ ರೋಲ್ಡ್‌ಗೋಲ್ಡ್ ಬಳೆಗಳಿರುತ್ತವೆ ಂದು ಹಿರೀಸಾವೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಎಸ್ಪಿ ಅಮಿತ್‌ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರು ಚಾಲಕ ಸಾವು
ಚನ್ನರಾಯಪಟ್ಟಣ: ಕ್ಯಾಂಟರ್ ಲಾರಿಯೊಂದು ಕಾರಿಗೆ ಡಿಕ್ಕಿ  ಹೊಡೆದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿದ ಘಟನೆ ತಾಲೂಕಿನ ದಂಡಿಗನಹಳ್ಳಿ  ಹೋಬಳಿಯ ಬರಗೂರುಕೊಪ್ಪಲು ಬಳಿ ಸೋಮವಾರ ನಡೆದಿದೆ.
 ಬೆಂಗಳೂರಿನ ಯಲಹಂಕ, ಅಟ್ಟೂರು ಲೇ ಔಟ್, ಬಸ್‌ನಿಲ್ದಾಣ ನಿವಾಸಿ ಕುಮಾರ್ (40) ಮೃತಪಟ್ಟ ದುರ್ದೈವಿ. ಕುಮಾರ್ ತಮ್ಮ  ಮಾರುತಿ ಓಮಿನಿ ಕಾರಿನಲ್ಲಿ ಕುಟುಂಬ ಸಮೇತ ಹಾಸನ ತಾ, ಕಟ್ಟಾಯ ಹೋಬಳಿ, ಮುದ್ದನಹಳ್ಳಿ ಗ್ರಾಮಕ್ಕೆ ದೇವರ ಪೂಜೆಗೆಂದು ಬಂದು ವಾಪಸ್ ಬೆಂಗಳೂರಿಗೆ ಹೋಗಲು ಚನ್ನರಾಯಪಟ್ಟಣ ತಾ, ದಂಡಿಗನಹಳ್ಳಿ ಹೋಬಳಿ, ಬರಗೂರು ಕೊಪ್ಪಲು ಹತ್ತಿರದ ಬಿಎಂ ರಸ್ತೆಯಲ್ಲಿ ಹೋಗುತ್ತಿದ್ದರು.
ಆಗ ಎದುರಿನಿಂದ ಬಂದ ಕ್ಯಾಂಟರ್ ಲಾರಿ ಚಾಲಕ  ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ಕುಮಾರನನ್ನು ಹಾಸನದ ಖಾಸಗಿ ಆಸ್ಪತ್ರೆಗೆ  ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಉರುಳಿ ವ್ಯಕ್ತಿ ಸಾವು
ಹಾಸನ: ಬೈಕ್ ಪಲ್ಟಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ  ತಾಲೂಕಿನ  ಕಂಚಮಾರನಹಳ್ಳಿಯ  ಶಾಲೆಯ ಬಳಿ ನಡೆದಿದೆ. ತಾಲೂಕಿನ  ದುದ್ದ ಹೋಬಳಿ, ಕಬ್ಬಳಿ ಗ್ರಾಮದ ನಂಜಪ್ಪ  (30) ಎಂಬವರೇ ಮೃತಪಟ್ಟ ದುರ್ದೈವಿ.
  ನಂಜಪ್ಪ ಕಾವಸಕಿ ಬೈಕ್‌ನಲ್ಲಿ ಹಾಸನಕ್ಕೆ ಬರಲೆಂದು ಹಾಸನ-ನಿಟ್ಟೂರು ರಸ್ತೆ, ಕಂಚಮಾರನಹಳ್ಳಿ ಶಾಲೆ ಹತ್ತಿರ ಹೋಗುತ್ತಿದ್ದರು. ಆಗ  ಬೈಕನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆಗೆ ಬಿದ್ದ ಪರಿಣಾಮ ತೀವ್ರ  ಗಾಯಗೊಂಡರು. ಅವರನ್ನು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ  ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ಬೈಕ್ ಕಳವು
ಜಾವಗಲ್: ಅರಸೀಕೆರೆ ತಾ, ಜಾವಗಲ್‌ನಎಸ್‌ಎಂ ಶೇಖರ ಕಾಲೇಜು ರಸ್ತೆಯ ತನ್ನ ಸ್ನೇಹಿತ ಶಿವಕುಮಾರ ಮನೆ ಮುಂದೆ ನಿಲ್ಲಿಸಿದ್ದ 30 ಸಾವಿರ ರು. ಮೌಲ್ಯದ ಬೈಕನ್ನು ಕಳ್ಳರು ಇತ್ತೀಚೆಗೆ ಕಳವು ಮಾಡಿದ್ದಾರೆ. ಈ ಬಗ್ಗೆ ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ  ಹೊಳೆನರಸೀಪುರ ಪಟ್ಟಣದ  ಅಕ್ಕಿ ಕುರುಬರ ಬೀದಿ ವಾಸಿ ಲಕ್ಷ್ಮಿ ನಾರಾಯಣ ತಮ್ಮ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ 10 ಸಾವಿರ ರು. ಮೌಲ್ಯದ ಮೋಟಾರ್ ಸೈಕಲ್‌ನ್ನು ಕಳ್ಳರು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಈ ಬಗ್ಗೆ  ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ನಾಪತ್ತೆ
ಹಾಸನ: ಕುವೆಂಪುನಗರ 2 ನೇ ಹಂತ, 5 ನೇ ಕ್ರಾಸ್, ನಂ. 14ಸಿ ವಾಸಿ ಶಿವಣ್ಣ ಎಂಬುವರ ಪತ್ನಿ ಶಾಂತಲಕ್ಷಿ ಉರುಫ್ ಲತಾ (38) ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಸಾಧಾರಣ ಮೈ ಕಟ್ಟು, ದುಂಡು ಮುಖ, ಎಣ್ಣೆಗೆಂಪು ಬಣ್ಣ, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಸೀರೆ ಮತ್ತು ರವಿಕೆ ಧರಿಸಿದ್ದರು ಎಂದು ಪತಿ ಶಿವಣ್ಣ  ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಯುವತಿ ನಾಪತ್ತೆ
ಹಾಸನ: ಕಟ್ಟಾಯ ಹೋಬಳಿಯ ಸೀಗೂರು ಗ್ರಾಮದ ಪರಮೇಶ್ವರರ ಪುತ್ರಿ ಪಲ್ಲವಿ (19)  ಕಾಲೇಜಿಗೆ ಹೋಗುತ್ತೇನೆಂದು ಮನೆಯಿಂದ ಹೋದವಳು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.5.5 ಅಡಿ ಎತ್ತರ, ಕೆಂಪುಬಣ್ಣ, ಕನ್ನಡ ಮಾತನಾಡುತ್ತಾರೆಂದು ತಾಯಿ ಜಯಶ್ರೀ ಗೊರೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಯಶಸ್ವಿ   
ಜಾವಗಲ್: ಜಾವಗಲ್‌ನಲ್ಲಿ  2ನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಪಟ್ಟಣದ 3 ಕಡೆಗಳಲ್ಲಿ ಬೂತ್ ವ್ಯವಸ್ಥೆ ಮಾಡಿತ್ತು. ಬಸ್ ನಿಲ್ದಾಣದ ಬೂತ್‌ನಲ್ಲಿ ಅರಸೀಕೆರೆ ಪಿಎಸ್‌ಐ ಗಂಗಾಧರಪ್ಪ ಮಗುವೊಂದಕ್ಕೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹಾಕಿಸುವಲ್ಲಿ ಪೋಷಕರು ಕಾಳಜಿ ವಹಿಸ ಬೇಕು. ಪೋಲಿಯೋ ರೋಗದಿಂದ ಮುಕ್ತಿ ಕಾಣಲು ಕಡ್ಡಾಯವಾಗಿ ಲಸಿಕೆ ಹಾಕಿಸ ಬೇಕು ಎಂದರು. ಗ್ರಾಪಂ ಅಧ್ಯಕ್ಷೆ ಕವಿತಾ ಮಂಜುನಾಥ್, ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್, ವೈದ್ಯಾಧಿಕಾರಿ ಡಾ. ಪ್ರೇಮಾನಂದ್ ಸಿಬ್ಬಂದಿ ಸುಧಾಕರ್, ರಜನೀಕಾಂತ್, ಟಿ.ಸಿ. ಜಿ.ಎನ್. ರಾಜಶೇಖರ್, ಸಿದ್ದೇಗೌಡ, ಅಂಗನವಾಡಿ ಕಾರ್ಯಕರ್ತೆ ಕವಿತಾ ಇದ್ದರು.  ದರ್ಗಾದಲ್ಲಿ ಉರುಸ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೊಬೈಲ್ ಸರ್ವೀಸ್ ಮೂಲಕ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗಿತ್ತು.

ಆಲೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕೆ
ಆಲೂರು: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಗ್ರೇಡ್ 2 ತಹಸೀಲ್ದಾರ್ ಈರಣ್ಣ ಮಗುವೊಂದಕ್ಕೆ ಲಸಿಕೆ ಹಾಕುವುದರ ಮೂಲಕ ಉದ್ಘಾಟಿಸಿದರು. ತಾಲೂಕು ಆರೋಗ್ಯಾಧಿಕಾರಿ ತಿಮ್ಮಯ್ಯ, ಆಡಳಿತ ಸಹಾಯಕಾಧಿಕಾರಿ ಡಾಉಮಾದೇವಿ, ಬ್ಲ್ಯಾಕ್ ಹೆಲ್ತ್ ಆಫೀಸರ್ ಸುಬ್ರಹಣ್ಯ, ಹಿರಿಯ ಆರೋಗ್ಯ ಸಹಾಯಕ ಎಚ್.ಎಸ್. ವೆಂಕಟೇಶ್, ರಾಜೇಗೌಡ ಹಾಗೂ ಹಿರಿಯ ಆರೋಗ್ಯ ಸಹಾಯಕಿ ವನಜಾಕ್ಷಿ ಮುಂತಾದವರು ಹಾಜರಿದ್ದರು. ಗ್ರಾಮಾಂತರ ಪ್ರದೇಶದಲ್ಲಿ 42 ಹಾಗು ಪಟ್ಟಣದ 2 ಬೂತ್ ಸೇರಿದಂತೆ ಒಟ್ಟು 46 ಬೂತ್‌ಗಳಲ್ಲಿ 186 ಲಸಿಕೆದಾರರು, 9 ಮೇಲ್ವಿಚಾರಕರು ಕಾರ್ಯ ನಿರ್ವಹಿಸುತ್ತಿದ್ದು, 9 ವಾಹನಗಳ ವ್ಯವಸ್ಥೆಯಿತ್ತು. 23 ವಲಸೆ ತಾಣಗಳಲ್ಲಿ 184 ಗುಡಿಸಲುಗಳನ್ನು ಪತ್ತೆ ಮಾಡಿ, ಅವುಗಳಲ್ಲಿ 5 ವರ್ಷ ಒಳಗಿರುವ 196 ಮಕ್ಕಳಿಗೆ ವಿಶೇಷ ಗಮನ ನೀಡಿ ಲಸಿಕೆ ಹಾಕುವ ಗುರಿ ಇದೆ. ಜಾತ್ರೆ, ಮದುವೆಗಳಲ್ಲಿ ಯಾವ ಮಗುವೂ ತಪ್ಪಿಸಿ ಕೊಳ್ಳದಂತೆ ವಿಶೇಷ ಲಸಿಕಾ ದಳ ಕಾರ್ಯ ನಿರ್ವಹಿಸಿತು.

121 ನಾಮಪತ್ರ ಕ್ರಮಬದ್ಧ
ಅರಸೀಕೆರೆ: ಪುರಸಭಾ ಚುನಾವಣೆಗೆ 135 ಮಂದಿ ನಾಮಪತ್ರ ಸಲ್ಲಿಸಿದ್ದು, ಆ ಪೈಕಿ 14 ನಾಮ ಪತ್ರಗಳು ತಿರಸ್ಕೃತಗೊಂಡಿದ್ದು 121 ನಾಮ ಪತ್ರ ಕ್ರಮಬದ್ಧವಾಗಿದೆ.ನಾಮಪತ್ರ ಪರಿಶೀಲನೆಯ ಕಾರ್ಯ 3 ಕೇಂದ್ರಗಳಲ್ಲಿ ನಡೆಯಿತು. ಅಧಿಕೃತ ಪಕ್ಷಗಳ ಬಿ ಫಾರಂ ದೊರೆಯದ ಹಿನ್ನೆಲೆಯಲ್ಲಿ 1ನೇ ವಾರ್ಡ್‌ನ ಶಶಿಧರ್, 2ನೇ ವಾರ್ಡ್‌ನ ಸುಧಾಕರ್, 3ನೇ ವಾರ್ಡ್‌ನ ಸಿದ್ದವೀರಯ್ಯ ಶಾಂತರಾಜ್, 4ನೇ ವಾರ್ಡ್‌ನ ಪಾಪಣ್ಣ, 5ನೇ ವಾರ್ಡ್ ನ ಗಣೇಶ, 6ನೇ ವಾರ್ಡ್‌ನ ಅನ್ನಪೂರ್ಣ, 7ನೇ ವಾರ್ಡ್‌ನ ಅಬ್ದುಲ್ ಕರೀಂ, 11ನೇ ವಾರ್ಡ್‌ನ ಟಿ.ಆರ್.ದಿವಾಕರ್, ಎಚ್.ಎಂ.ಲೇಪಾಕ್ಷಿ, 14ನೇ ವಾರ್ಡ್‌ನ ಚಂದ್ರಶೇಖರ್, 18ನೇ ವಾರ್ಡ್‌ನ ಪುರುಷೋತ್ತಮ್, 21ನೇ ವಾರ್ಡ್‌ನ ಲೇಪಾಕ್ಷಿ ಅವರುಗಳ ನಾಮಪತ್ರ ತಿರಸ್ಕರಿಸಲಾಗಿದೆ.

ಇಂದು ಮನೆ ಮನೆಗೆ ರಾಮಕೃಷ್ಣ ಸತ್ಸಂಗ
ಹಾಸನ: ಮನೆ ಮನೆಗೆ ಶ್ರೀರಾಮಕೃಷ್ಣ ತಿಂಗಳ ಸತ್ಸಂಗ ಕಾರ್ಯಕ್ರಮವನ್ನು ಫೆ.26 ರಂದು ಮಂಗಳವಾರ 3 ಗಂಟೆಗೆ ಉದಯಗಿರಿ ಬಡಾವಣೆಯ ರಂಗಸ್ವಾಮಿಯವರ ಮನೆಯಲ್ಲಿ ಏರ್ಪಡಿಸಲಾಗಿದೆ. ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಂಗ ಸಂಸ್ಥೆ ರಿಂಸೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಾಮಿ ಕರುಣಾಕರಾ ನಂದಜಿ ಮಹರಾಜ್ ಪ್ರವಚನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ 9741411349 ಸಂಪರ್ಕಿಸಲು ಕೋರಲಾಗಿದೆ.

ಶ್ರೀಗಳ ನಿಧನಕ್ಕೆ ಸಂತಾಪ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ತಾಲೂಕಿನ ಗಿರಿಕ್ಷೇತ್ರ ಶ್ರೀ ವೆಂಕಟೇಶ್ವರ ಕೃಪಾಶ್ರಮದ ಪೀಠಾಧಿಪತಿ ಚಂದ್ರಶೇಖರಭಾರತಿ ಸ್ವಾಮೀಜಿ  ನಿಧನದಿಂದ ಅಪಾರ ನಷ್ಟವಾಗಿದೆ ಎಂದು ನಿವೃತ್ತ ಮುಖ್ಯ ಶಿಕ್ಷಕ, ರಾಜ್ಯ ಪ್ರಶಸ್ತಿ ಪುರಸ್ಕೃತ ಬೆಳಗುಲಿ ಕೆಂಪಯ್ಯ  ಸಂತಾಪ ಸೂಚಿಸಿದ್ದಾರೆ. ಸ್ವಾಮೀಜಿ ಲೋಕಕಲ್ಯಾಣಕ್ಕಾಗಿ ಉಪವಾಸ, ಪಾದಯಾತ್ರೆ ನಡೆಸಿದ್ದರು. ಜನಪರ ಹಾಗೂ ಸಾಮಾಜಿಕ ಕಳಕಳಿ ಹೊಂದಿದ್ದು ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದ ಗುರುಗಳ ಅಗಲಿಕೆ ಗಿರಿಕ್ಷೇತ್ರದ ಸುತ್ತಮುತ್ತಲಿನ ಗ್ರಾಮಗಳ ಅಪಾರ ಭಕ್ತರಿಗೆ, ಸಾರ್ವಜನಿಕರಿಗೆ, ಧಾರ್ಮಿಕ ಲೋಕಕ್ಕೆ ತುಂಬಲಾರದ ನಷ್ಟ ಉಂಟುಮಾಡಿದೆ ಎಂದು ಹೇಳಿದ್ದಾರೆ.

ನಾಳೆ ಭಕ್ತಪ್ರಹ್ಲಾದ ನಾಟಕ ಪ್ರದರ್ಶನ
ಆಲೂರು: ಶ್ರೀಮಾತಾ ಪಾರ್ವತಮ್ಮ ಕೃಪಾ ಪೋಷಿತ ನಾಟಕ ಮಂಡಳಿ, ನವಿಲಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಸಹಯೋಗ ದೊಂದಿಗೆ ಫೆ.27 ರಂದು ಪಟ್ಟಣದಲ್ಲಿ ಭಕ್ತಪ್ರಹ್ಲಾದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement