ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಲೆಗೆ ಬೀಗ ಜಡಿದು ಗ್ರಾಮಸ್ಥರ ಪ್ರತಿಭಟನೆ

Srinivasa Murthy VN
Updated On : 26 Feb 2013, 12:08 pm

ಅರಸೀಕೆರೆ: ಶಿಕ್ಷಕರು ಹಾಗೂ ಗ್ರಾಮಸ್ಥರಿಗೆ ಜಾತಿನಿಂದನೆಯ ಹೆಸರಿನಲ್ಲಿ ಕಿರುಕುಳ ನೀಡಿ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ಶಿಕ್ಷಕಿ ನಳಿನಾಂಬ ಅವರನ್ನು ಶಾಲೆಯಿಂದ ವರ್ಗಾಯಿಸ ಬೇಕು ಇಲ್ಲವೆ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಹೊಸ ಕಲ್ಲನಾಯಕನಹಳ್ಳಿ ಗ್ರಾಮಸ್ಥರು ಸೋಮವಾರ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸಬೇಕಾದ ಶಿಕ್ಷಕರೆ ದಿನನಿತ್ಯ ಒಂದಿಲ್ಲೊಂದು ಕಾರಣಕ್ಕಾಗಿ ಜಗಳ ಮಾಡಿಕೊಳ್ಳುತ್ತಿದ್ದು, ಇದು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೆ ಶಿಕ್ಷಕಿ ನಳಿನಾಂಬ ಈ ಹಿಂದೆ ತಮ್ಮ ಪತಿ ಹಾಗೂ ಪುತ್ರನನ್ನು ಶಾಲೆ ಆವರಣಕ್ಕೆ ಕರೆಸಿ ಸಹಶಿಕ್ಷಕರಾದ ವಿನಯ್ ಹಾಗೂ ದ್ರಾಕ್ಷಾಯಿಣಿ ಎಂಬುವವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದರಲ್ಲದೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ದಾಖಲಿಸುವ ಮೂಲಕ ಶಿಕ್ಷಕರನ್ನು ಶಾಲೆಗೆ ಬಾರದಂತೆ ಮಾಡಿದ್ದಾರೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮೇಗೌಡ, ಗ್ರಾಪಂ ಸದಸ್ಯ ಸಿದ್ದಪ್ಪ ಮಾತನಾಡಿ, ಇಲ್ಲಿ ಪ ಜಾತಿ, ಹಿಂದುಳಿದ ವರ್ಗದ ಬಡಮಕ್ಕಳೆ ವ್ಯಾಸಂಗ ಮಾಡುತ್ತಿದ್ದು ಈ ಶಿಕ್ಷಕಿ ಶಾಲೆಗೆ ಬಂದಾಗಿನಿಂದಲೂ ದಿನಕ್ಕೊಂದು ಅವಾಂತರ ಸೃಷ್ಟಿಸಿ ಪಾಠ ಪ್ರವಚನ ನಡೆಯದಂತೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಶಿಕ್ಷಕಿಯ ವರ್ತನೆ ಅತಿರೇಕಕ್ಕೆ ಹೋಗಿದ್ದರೂ ಗ್ರಾಮಸ್ಥರು ಮಕ್ಕಳ ಹಿತದೃಷ್ಟಿಯಿಂದ ಇವರನ್ನು ವರ್ಗಾವಣೆ ಮಾಡುವಂತೆ ಮೇಲಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇಂತಹ ಶಿಕ್ಷಕಿಯಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುವದಾದರು ಹೇಗೆ? ಸಂಬಂಧಿಸಿದ ಅಧಿಕಾರಿಗಳು ಕ್ರಮ ತೆಗೆದುಕೊಳ್ಳ ಬೇಕು. ಇಲ್ಲವಾದಲ್ಲಿ ಶಾಲೆ ನಡೆಯಲು  ಬಿಡುವುದಿಲ್ಲ. ಇವರು ಈ ಹಿಂದೆ ಕರ್ತವ್ಯ ನಿರ್ವಹಿಸಿದ ಬಾಗೇಶಪುರ ಆಧಿಹಳ್ಳಿ ಶಾಲೆಗಳಲ್ಲಿಯೂ ಇದೆ ರೀತಿ ವರ್ತಿಸಿದ್ದಾರೆಂಬುದಕ್ಕೆ ಅನೇಕ ನಿದರ್ಶನಗಳಿವೆ. ಒಂದೆರಡು ಬಾರಿ ಕ್ರಮ ತೆಗೆದುಕೊಂಡಿದ್ದರೂ ಶಿಕ್ಷಕಿ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಆದ್ದರಿಂದ ಈ ಶಿಕ್ಷಕಿಯನ್ನು ತಕ್ಷಣವೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಯೋಜನಾಧಿಕಾರಿ ಮೋಹನ್‌ಕುಮಾರ್ ಗ್ರಾಮಸ್ಥರನ್ನು ಶಾಲೆಯ ಬೀಗ ತೆರೆಯುವಂತೆ ಮನವೊಲಿಸಲು ಪ್ರಯತ್ನಿಸಿದಾದರೂ ಯಾವುದೆ ಪ್ರಯೋಜನ ಆಗಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement