ಟಿ.ನರಸೀಪುರ: ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಲು ಪೌಷ್ಟಿಕಾಂಶವಿರುವ ಸತ್ವಯುತ ಆಹಾರವನ್ನು ಮಿತವಾಗಿ ಸೇವಿಸಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗೋವಿಂದಶೆಟ್ಟಿ ಹೇಳಿದರು. ಪಟ್ಟಣದ ಮರಿಗೌಡ ಭವನದಲ್ಲಿ ಮಂಗಳವಾರ ರೋಟರಿ ಸಂಸ್ಥೆಯ ವತಿಯಿಂದ ದಿ. ಡಾ.ಗೋಧಾವರಿ ಮತ್ತು ದಿ. ಎಸ್.ಶ್ರೀಕಂಠಸ್ವಾಮಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಹೃದಯ ರೋಗ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಜಾಗತಿಕ ತಾಪಮಾನದಿಂದ ಕಾಯಿಲೆಗಳು ಹೆಚ್ಚಾಗುವುದರ ಜತೆಗೆ ಹೃದಯಾಘಾತದಿಂದಲೇ ಅಕಾಲಿಕ ಸಾವು ಹೆಚ್ಚಾಗುತ್ತಿದೆ. ಹಾಗಾಗಿ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದರು. ನರಸೀಪುರದ ರೋಟರಿ ಸಂಸ್ಥೆ ಹಾಗೂ ಮೈಸೂರಿನ ಬಿಜಿಎಸ್ ಅಪೋಲೋ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ ಉಚಿತ ಹೃದಯ ರೋಗ ತಪಾಸಣಾ ಶಿಬಿರದಲ್ಲಿ ನೂರಾರು ಮಂದಿ ಹೃದಯ ಸಂಬಂಧಿ ಬೇನೆಗಳ ಬಗ್ಗೆ ತಪಾಸಣೆ ಮಾಡಿಸಿಕೊಂಡರು. ರೋಟರಿ ಅಧ್ಯಕ್ಷ ನಿರನ್ ಕೆ.ವಸಂತ್, ಆರ್.ಉಮೇಶ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಜಿ. ರಾಜಶೇಖರ್, ವಲಯ ಪ್ರತಿನಿಧಿ ಜಯಶೀಲ, ಕಿರಗಸೂರು ಗ್ರಾಪಂ ಅಧ್ಯಕ್ಷ ಮಂಡಿ ಪ್ರಕಾಶ್, ಡಾ.ಪರೂಲ್, ಮೂಳೆತಜ್ಞ ಡಾ.ಶ್ರೇಯಸ್, ಡಾ. ರಾಜೇಶ್, ನಾರಾಯಣ, ರಾಮಮೂರ್ತಿ ಇದ್ದರು.