'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಈ ನಡುವೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ನಾಯಕರು ಘೋಷಿಸಿದ್ದಾರೆ.
CJP urges unity against SIR, vows protests till CEC resigns
ಸಿಜೆಪಿ ನಾಯಕರ ಸುದ್ದಿಗೋಷ್ಠಿ
Updated on: 

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿರುದ್ಧದ ಪ್ರತಿಭಟನೆಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನಾಯಕರು ಭಾನುವಾರ ಘೋಷಿಸಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಜೆಪಿ ನೇತೃತ್ವ ಪ್ರತಿಭಟನೆ ಮುಂದುಲವರೆದಿದ್ದು, ಭಾನುವಾರ ದೆಹಲಿಯ ವಿವಿಧೆಡೆ ನಡೆದ ಪ್ರತಿಭಟನೆಗಳ ವೇಳೆ ಸುಮಾರು 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ನಾಯಕರು ಘೋಷಿಸಿದ್ದಾರೆ.

ಬಂಧನದಿಂದ ಬಿಡುಗಡೆಯಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ CJP ನಾಯಕರಾದ ಅಭಿಜೀತ್ ದೀಪ್ಕೆ, ಆಶುತೋಷ್ ರಂಕಾ ಮತ್ತು ಸೌರವ್ ದಾಸ್, ತಮ್ಮನ್ನು ಅಕ್ರಮವಾಗಿ ವಶಕ್ಕೆ ಪಡೆಯಲಾಗಿತ್ತು ಎಂದು ಆರೋಪಿಸಿದರು.

ಮತದಾನದ ಹಕ್ಕಿನ ರಕ್ಷಣೆಗಾಗಿ ರಾಜಕೀಯ ಪಕ್ಷಗಳು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದಾಗಬೇಕು ಎಂದು ಅವರು ಮನವಿ ಮಾಡಿದರು.

ದೇಶಾದ್ಯಂತ ಹೋರಾಟ

'ಪ್ರತಿಭಟನೆ ದೆಹಲಿಗೆ ಮಾತ್ರ ಸೀಮಿತವಾಗುವುದಿಲ್ಲ. ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವವರೆಗೂ ದೇಶಾದ್ಯಂತ ಹೋರಾಟ ನಡೆಯಲಿದೆ' ಎಂದು ಸೌರವ್ ದಾಸ್ ಹೇಳಿದರು.

'ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ, SIR ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಂದಾಗಬೇಕು. ಮತದಾನದ ಹಕ್ಕನ್ನೇ ಕಸಿದುಕೊಂಡರೆ ಯಾವುದೇ ಪಕ್ಷಕ್ಕೂ ಅದು ಒಳ್ಳೆಯದಲ್ಲ' ಎಂದು ಅವರು ತಿಳಿಸಿದರು.

ಪೊಲೀಸರ ವಿರುದ್ಧ ಫೋನ್‌ ಹ್ಯಾಕ್‌ ಆರೋಪ

ಪ್ರತಿಭಟನಾಕಾರರನ್ನು ಬಂಧಿಸುವ ಬದಲು, ನಿಗದಿತ ಸ್ಥಳದಲ್ಲಿ ಪ್ರತಿಭಟನೆ ನಡೆಸಲು ಬಯಸಿದವರೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಬಹುದಿತ್ತು ಎಂದು ದಾಸ್ ಆರೋಪಿಸಿದರು.

ಸರ್ಕಾರವೇ ತನ್ನ ನಾಗರಿಕರ ವಿರುದ್ಧ ಆಡಳಿತ ಯಂತ್ರವನ್ನು ಬಳಸುತ್ತಿದೆ. ಬಂಧನದ ವೇಳೆ ದೆಹಲಿ ಪೊಲೀಸರು ತಮ್ಮ ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದರು. ಆದರೆ, ಅದಕ್ಕೆ ಸಂಬಂಧಿಸಿದ ಯಾವುದೇ ಜಪ್ತಿ ದಾಖಲೆಯನ್ನು ನೀಡಿರಲಿಲ್ಲ ಎಂದು ದಾಸ್ ದೂರಿದರು.

'ಹಿಂದೆ ಕೆಲವು ಕಾರ್ಯಕರ್ತರ ಪ್ರಕರಣಗಳಲ್ಲಿ ಇಂತಹ ಆರೋಪಗಳು ಕೇಳಿಬಂದಿದ್ದವು. ನಮ್ಮ ಫೋನ್‌ಗಳನ್ನು ಹ್ಯಾಕ್ ಮಾಡಿರಬಹುದು ಅಥವಾ ಕ್ಲೋನ್ ಮಾಡಿರಬಹುದು ಎಂಬ ಅನುಮಾನವಿದೆ. ನಂತರ ನಮ್ಮ ವಿರುದ್ಧ ಸಾಕ್ಷ್ಯವಾಗಿ ಬಳಸಲು ದಾಖಲೆಗಳನ್ನು ಸೇರಿಸುವ ಸಾಧ್ಯತೆಯ ಬಗ್ಗೆಯೂ ಆತಂಕವಿದೆ' ಎಂದು ಅವರು ಹೇಳಿದರು.

ಬಿಡುಗಡೆಯ ಷರತ್ತಿನ ಪ್ರಕಾರ ಒಂದು ವರ್ಷ ಶಾಂತಿ ಕಾಪಾಡಬೇಕು ಎಂದು ಸೂಚಿಸಲಾಗಿದೆ ಎಂದು ದಾಸ್ ತಿಳಿಸಿದರು. 'ಶಾಂತಿಭಂಗಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಜ್ಞಾನೇಶ್ ಕುಮಾರ್ ಕಾರಣ' ಎಂದು ಅವರು ಆರೋಪಿಸಿದರು.

CEC ರಾಜೀನಾಮೆ ನೀಡುವವರೆಗೂ ಹೋರಾಟ

CJP ನಾಯಕ ಆಶುತೋಷ್ ರಂಕಾ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಿದರು. ನಿಗದಿತ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುವುದರಿಂದ ಶಾಂತಿಭಂಗವಾಗುವುದಿಲ್ಲ ಎಂಬುದು ಅವರ ವಾದವಾಗಿತ್ತು.

ದೆಹಲಿ ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಶಾಂತಿ ಮತ್ತು ಸನ್ನಡತೆ ಕಾಪಾಡುವ ಷರತ್ತಿನೊಂದಿಗೆ ತಲಾ 50,000 ರೂ ಮೊತ್ತದ ಬಾಂಡ್ ಸಲ್ಲಿಸಿದ ಬಳಿಕ ಮೂವರು ನಾಯಕರನ್ನು ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಬಿಡುಗಡೆ ಮಾಡಿದೆ.

ಇದಕ್ಕೂ ಹಿಂದಿನ ಶನಿವಾರ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ತೆರಳುತ್ತಿದ್ದ ಸುಮಾರು 7,000 ಮಂದಿಯನ್ನು ದೆಹಲಿಯ ವಿವಿಧೆಡೆ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅವರೆಲ್ಲರನ್ನೂ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com