ಹಾಸನ

ಚಳವಳಿಗಾರನ ಮೇಲೆ ರೌಡಿಶೀಟ್ ದಾಖಲು: ಖಂಡನೆ

ಕ.ಪ್ರ.ವಾರ್ತೆ ,  ಹಾಸನ ,  ಜು. 30
ಕಳೆದ 10 ವರ್ಷದಿಂದ ದಲಿತ ಚಳವಳಿಯಲ್ಲಿ ತೊಡಗಿಸಿಕೊಂಡಿರುವ ಸಮತಾ ಸೈನಿಕ ದಳ ಹಾಗೂ ಆರ್‌ಪಿಐ  ಜಿಲ್ಲಾಧ್ಯಕ್ಷ ಆರ್. ಪಿ. ಸತೀಶ್ ಮೇಲೆ ಉದ್ದೇಶ ಪೂರ್ವಕವಾಗಿ ಪೊಲೀಸರು ರೌಡಿ ಶೀಟ್ ಹಾಕಿದ್ದು ಕೂಡಲೇ ಅದನ್ನು ರದ್ದು ಪಡಿಸಬೇಕೆಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆತ್ತೂರು ನಾಗರಾಜ್ ಒತ್ತಾಯಿಸಿದ್ದಾರೆ.
ಹಾಸನ ತಾಲೂಕು ದುದ್ದ ಹೋಬಳಿ ಜೋಡಿ ಕೃಷ್ಣಾಪುರದ ನಿವಾಸಿ ಸತೀಶ್ ಕಳೆದ 10 ವರ್ಷಗಳಿಂದ ದಲಿತ ಪರ ಹೋರಾಟದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದಾರೆ. ಜನವರಿಯಲ್ಲಿ ಸತೀಶ್ ಕಬ್ಬಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದ ಅವ್ಯವಹಾರ ಬಯಲಿಗೆಳೆದಿದ್ದರು. ಈ ಸಂದರ್ಭ ರಾಜಿ ಮಾಡಿಕೊಳ್ಳುವಂತೆ ದುದ್ದ ಪೊಲೀಸ್ ಚಾಲಕ ಜವರೇಗೌಡ ಒತ್ತಡ ಹಾಕಿದ್ದರು. ಆದರೆ ಈ ಒತ್ತಡಕ್ಕೆ ಮಣಿಯದ ಸತೀಶ್ ಪ್ರತಿಭಟನೆ ನಡೆಸಿದಾಗ ಹಗರಣ ಬೆಳಕಿಗೆ ಬಂದಿತ್ತು.
ಈ ಭಾಗದಲ್ಲಿ ಯಾವುದೇ  ಪ್ರಕರಣ ನಡೆದರೂ ಪೊಲೀಸರಿಗೆ ಸಹಕಾರ ನೀಡುತ್ತಿದ್ದ ಸತೀಶ್ ಉತ್ತಮ ಬಾಂಧವ್ಯ  ಹೊಂದಿದ್ದಾರೆ. ಆದರೆ ಕಳೆದ 10 ವರ್ಷದಿಂದ ಇದೇ ಠಾಣೆಯಲ್ಲಿರುವ ಚಾಲಕ ಜವರೇಗೌಡ ಈ ಭಾಗದ ಜನರಿಗೆ ಕಿರುಕುಳ ನೀಡುತ್ತಿದ್ದರು. ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಹೊಸದಾಗಿ ಬರುವ ಎಸ್‌ಐಗಳ ದಾರಿ ತಪ್ಪಿಸಿ ಅವರ ಹೆಸರಲ್ಲಿ ಹಣ ವಸೂಲಿ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ವ್ಯಾಪಕ ಆರೋಪ, ದೂರುಗಳಿವೆ.
ಈ ಬಗ್ಗೆ ಜನಸಾಮಾನ್ಯರಿಗೆ ತೊಂದರೆ ಕೊಡದಂತೆ ಸತೀಶ್ ಬುದ್ಧಿ ಮಾತು ಹೇಳಿದ್ದಾರೆ. ಆದರೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡ ಚಾಲಕ ಜವರೇಗೌಡ - ಸತೀಶ್ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಮಾಡಿದ್ದಾರೆ. ಇದಕ್ಕೆ ಅಂದಿನ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಕುಮ್ಮಕ್ಕು ನೀಡಿದ್ದಾರೆ.
ಪ್ರಕರಣದ ಬಗ್ಗೆ ವಿಚಾರಿಸಲು ಹೋದಾಗ ಜವರೇಗೌಡ ಜಾತಿ ನಿಂದನೆ ಮಾಡಿ ಬೈದಿದ್ದಲ್ಲದೆ ನಿನ್ನ ಮೇಲೆ ರೌಡಿ ಶೀಟ್ ಹಾಕಿ ಎನ್ ಕೌಂಟರ್ ಮಾಡಿಸುತ್ತೇನೆಂದು ಹೇಳಿ ಕಳಿಸಿದ್ದಾರೆ.
ಇದಕ್ಕೆ ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ. ಕಳೆದ ಏಪ್ರಿಲ್ 17 ರಂದು ಜವರೇಗೌಡ ಹಾಗೂ ಮಹೇಶ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಜಾತಿ ನಿಂದನೆ ಹಾಗೂ ದೌರ್ಜನ್ಯ ವಿರುದ್ಧ ಎಸ್ಸಿ,ಎಸ್ಟಿ ಆಯೋಗ ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ. ಇಷ್ಟಾದರೂ ಸತೀಶ್ ವಿರುದ್ಧ ರೌಡಿ ಶೀಟ್ ಹಾಕುವ ಮೂಲಕ ಹೋರಾಟಗಾರರನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಇದರೆ ಹಿಂದೆ ಕಾಣದ ಕೈಗಳು ಕೆಲಸ  ಮಾಡಿದ್ದು ಜಿಲ್ಲಾ ಪೊಲೀಸರು ಯಾವ ಆಧಾರದ ಮೇಲೆ ರೌಡಿ ಶೀಟ್ ಹಾಕಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ನಾಗರಾಜ್ ಒತ್ತಾಯಿಸಿದ್ದಾರೆ.
ಪ್ರಸ್ತುತವಿರುವ ಹಾಸನ ಕ್ರೈಂ ಎಸ್‌ಐ ಮಹೇಶ್ ದಲಿತ ಮುಖಂಡರಿಗೆ ಅಗೌರವ ತೋರಿಸುವ ಸ್ವಭಾವ ಮುಂದುವರೆಸಿದ್ದಾರೆ. ಈಚೆಗೆ ಹಿರಿಯ ದಲಿತ ಮುಖಂಡ ಜಯರಾಂ ಅವರಿಗೂ ಅವಮಾನ ಮಾಡುವಂತೆ ನಡೆಸಿಕೊಂಡಿದ್ದಾರೆ. ಕೂಡಲೇ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಕಳೆದ 10 ಕ್ಕೂ ಹೆಚ್ಚು ವರ್ಷದಿಂದ ಒಂದೇ ಸ್ಥಳದಲ್ಲಿದ್ದು ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ದುದ್ದ ಠಾಣೆ ಚಾಲಕ ಜವರೇಗೌಡರನ್ನು ಅಮಾನತು ಮಾಡಬೇಕು. ಹಾಗೂ ಸತೀಶ್ ಮೇಲಿನ ರೌಡಿ ಶೀಟ್‌ನ್ನು ರದ್ದುಪಡಿಸಬೇಕು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ದಕ್ಷ ಜಿಲ್ಲಾ ಎಸ್ಪಿ ರವಿ. ಡಿ. ಚನ್ನಣ್ಣನವರ್ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ಬಯಲಿಗೆಳೆಯಬೇಕು. ರೌಡಿ ಶೀಟ್ ಹಿಂಪಡೆಯುವ ಸಂಬಂಧ ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ವೆಂಕಟಸ್ವಾಮಿ ಹಾಗೂ ದಲಿತ ಸಂಘಟನೆ ನೇತೃತ್ವದಲ್ಲಿ ದುದ್ದ ಬಂದ್ ಹಾಗೂ ದುದ್ದದಿಂದ ಹಾಸನದ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾ ಎಸ್ಪಿ ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಖಂಡನೆ: ದಲಿತ ಮುಖಂಡ ನಾರಾಯಣದಾಸ್, ಅಂತಾರಾಷ್ಟ್ರೀಯ ಚಿತ್ರ ಕಲಾವಿದ, ಕೆ.ಟಿ. ಶಿವಪ್ರಸಾದ್, ಎಚ್.ಕೆ. ಸಂದೇಶ್, ಬಿ.ಪಿ. ಜಯರಾಂ, ಈರಪ್ಪ ಕೃಷ್ಣಾದಾಸ್, ಸಿದ್ದಯ್ಯನಗರ ಪುಟ್ಟರಾಜು, ತಟ್ಟೆಕೆರೆ ಮಂಜು, ಟಿ.ಆರ್. ವಿಜಯಕುಮಾರ್, ಕ್ರಾಂತಿ ಪ್ರಸಾದ್ ತ್ಯಾಗಿ, ಮಾನವ ಹಕ್ಕು ದಲಿತ ವಿಮೋಚನಾ ವೇದಿಕೆಯ  ಆರ್. ಮರಿಜೋಸೆಫ್, ಅಂಬುಗ ಮಲ್ಲೇಶ್, ಯುವ ಕಾಂಗ್ರೆಸ್ ಮುಖಂಡ ಪರಮೇಶ್, ಕುಮಾರ್ ಪೆನ್ಷನ್ ಮೊಹಲ್ಲಾ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಯರಾಂ, ದಂಡೋರ ಸೋಮು, ಎಚ್.ಎಂ. ಪ್ರಕಾಶ್ ಹಾಗೂ ಜಿಲ್ಲೆಯ ನಾನಾ ದಲಿತ ಸಂಘಟನೆಗಳ ಮುಖಂಡರು ಇದನ್ನು ಖಂಡಿಸಿದ್ದು ಸತೀಶ್ ಮೇಲಿರುವ ರೌಡಿ ಶೀಟ್ ರದ್ದು ಪಡಿಸಲು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT