ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮೋದ್ಧಾರದಿಂದ ಗಾಂಧಿ ಕನಸು ನನಸು

Srinivasa Murthy VN
Updated On : 2 Mar 2013, 11:10 am

ಅರಸೀಕೆರೆ: ಗ್ರಾಮಗಳ ಉದ್ಧಾರದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ. ಆಗ ಮಾತ್ರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡ ಕನಸನ್ನು ನನಸು ಮಾಡಲು ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅಭಿಪ್ರಾಯಪಟ್ಟರು.
ಅರಸೀಕೆರೆ ಹಾಗೂ ಬಾಣಾವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ತಾಲೂಕಿನ ಕಸ್ತೂರಿ ಬಾ ಟ್ರಸ್ಟ್‌ನ ಆವರಣದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರ ಉದ್ಘಾಟಿಸಿ, ಗ್ರಾಮೀಣ ಪ್ರದೇಶಗಳು ಇಂದಿಗೂ ಮೂಲ ಸೌಲಭ್ಯಗಳಿಂದ ವಂಚಿತವಾಗಿವೆ. ಉತ್ತಮ ಆರೋಗ್ಯ, ಶಿಕ್ಷಣ ದೂರೆಯದ ಹಿನ್ನೆಲೆಯಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗಿಲ್ಲ. ಯುವಜನತೆ ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಜನರ ಸೇವೆಗೆ ಮುಂದಾದಾಗ ಮಾತ್ರವೇ ಗ್ರಾಮಗಳ ಅಭಿವೃದ್ಧಿ ಸಾಧುವಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಶಾಲಾ ಕಾಲೇಜುಗಳಲ್ಲಿ ಆಯೋಜಿಸಲಾಗುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಮಹತ್ವಪೂರ್ಣವಾಗಿದ್ದು, ಪ್ರತಿಯೊಬ್ಬರೂ ಸಕ್ರಿಯ ಸ್ವಯಂ ಸೇವಕರಾಗಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ದೇಶದ 2ನೇ ರಾಜ್‌ಘಾಟ್ ಎಂದೇ ಹೆಸರಾದ ಕಸ್ತೂರಬಾ ಟ್ರಸ್ಟ್‌ನಲ್ಲಿ ಇಂಥ ಚಟುವಟಿಕೆಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಹಾಗೂ ಈ ಸ್ಥಳಕ್ಕೆ ಭೇಟಿ ನೀಡಿ ಗಾಂಧೀಜಿಯವರ ಚಿತಾಭಸ್ಮಕ್ಕೆ ನಮನ ಸಲ್ಲಿಸಿರುವುದು ಸಂತಸ ನೀಡಿದೆ ಎಂದರು.
 ಈ ಸ್ಥಳವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಿದ ಶ್ರೀಮತಿ ಯಶೋಧರಮ್ಮ ದಾಸಪ್ಪನವರ ಕೊಡುಗೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕೆಂದರು.
ಕನ್ನಡ ಪ್ರಾಧ್ಯಾಪಕ ದೊರೇಶ್ ಕಾರ್ಯಕ್ರಮ ನಿರೂಪಿಸಿದರೆ, ಶಿಬಿರಾಧಿಕಾರಿ ವಿಶ್ವನಾಥ್ ಅಥಿತಿಗಳನ್ನು ಸ್ವಾಗತಿಸಿದರು.

'ಸ್ಕೌಟ್ಸ್, ಗೈಡ್ಸ್ ಶಿಸ್ತು ಕಲಿಸುತ್ತದೆ'
ಹೊಳೆನರಸೀಪುರ:
ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲ ವಯೋವಾನದವರಿಗೆ, ಎಲ್ಲ ಹಂತಗಳಲ್ಲಿಯೂ ಬದುಕಿನ ಶಿಸ್ತು ಹಾಗೂ ಸಮಯ ಪ್ರಜ್ಞೆಯನ್ನೂ ಕಲಿಯಲು ಸಹಕಾರಿಯಾಗಿದೆ ಎಂದು ಜಿಲ್ಲಾ ಸಂಘಟನಾ ಸ್ಕೌಟ್ಸ್ ಮತ್ತು ಗೈಡ್ಸ್ ಆಯುಕ್ತ ಎಲ್.ಟಿ. ಲೋಕೇಶ್ ತಿಳಿಸಿದರು.
ತಾಲೂಕಿನ ಹಳ್ಳಿಮೈಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರ್ ಘಟಕ ಉದ್ಘಾಟಿಸಿ, ಶಾಲೆ ಮತ್ತು ಮನೆಗಳಲ್ಲಿ ಸಿಗದಿರುವ ಜ್ಞಾನವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತುಬದ್ಧವಾಗಿ ಒದಗಿಸುವಲ್ಲಿ ಸಹಕಾರಿಯಾಗಿದ್ದು, ಎಲ್ಲ ವಯೋವಾನದವರಿಗೂ ನಾನಾ ಹಂತಗಳಲ್ಲಿ ಸಮಾಜ ಸೇವೆಯನ್ನು ಮಾಡಲು ಸಹಕಾರಿಯಾಗಿದೆ ಎಂದು ಹೇಳಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆದು ಬಂದ ದಾರಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ತರಬೇತುದಾರ ಎಂ.ಎಸ್.ಪ್ರಕಾಶ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಪೂರ್ಣವಾಗಿ ಹೊರಾಂಗಣ ಚಟುವಟಿಕೆಯಾಗಿದ್ದು, ವಿದ್ಯಾರ್ಥಿಗಳು ವಿಶೇಷ ಕೌಶಲ್ಯವನ್ನು ಮೈಗೂಡಿಸಿಕೊಳ್ಳಲು ಸಹಕಾರಿ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನ ರೋವರಿಂಗ್ ಮತ್ತು ರೇಂಜರಿಂಗ್‌ಗೇ ಸೇರಿ ಇದರ ಮಹತ್ವವನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮವನ್ನು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ರೋವರ್ ಘಟಕದ ನಾಯಕ ಕೆ.ಶಿವರಾಜು ಆಯೋಜಿಸಿ ನೇತೃತ್ವ ವಹಿಸಿದ್ದರು.

ಧಾರ್ಮಿಕತೆಯಿಂದ ಮಾನಸಿಕ ನೆಮ್ಮದಿ: ಬಾಲಕೃಷ್ಣ
ಚನ್ನರಾಯಪಟ್ಟಣ:
ಜೀವನದಲ್ಲಿ ಧಾರ್ಮಿಕ ಭಾವನೆಗಳನ್ನು ಮೂಡಿಸಿಕೊಂಡವರು ಬದುಕನ್ನು ಹಸನು ಮಾಡಿಕೊಳ್ಳಬಹುದು ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಶ್ರವಣಬೆಳಗೊಳ ಹೋಬಳಿ ಜಿನ್ನೇನಹಳ್ಳಿ ಗ್ರಾಮದಲ್ಲಿ ರು. 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಶನೈಶ್ಚರ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಧಾರ್ಮಿಕ ಭಾವನೆಗಳನ್ನು ಜನತೆ ಮೂಡಿಸಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.
ತಾಲೂಕಿನಲ್ಲಿ ಬರಗಾಲ ಉಲ್ಬಣಗೊಂಡಿದ್ದು, ಕುಡಿಯುವ ನೀರಿಗೆ ಹಾಹಾಕಾರ ಪ್ರಾರಂಭವಾಗಿದೆ. ತಾಲೂಕಿನಲ್ಲಿ ಹೇಮಾವತಿ ನದಿ ಹಾಗೂ ನಾಲೆ ಹರಿದು ಹೋಗಿದ್ದರೂ ಕುಡಿಯುವ ನೀರಿಗೆ ಹಾಹಾಕಾರವಿದ್ದು, ಮುಂದಿನ ದಿನಗಳಲ್ಲಿ ಸರ್ಕಾರ ಕುಡಿಯುವ ನೀರು ನೀಡಲು ಏತ ನೀರಾವರಿ ಯೋಜನೆಗಳನ್ನು ಕೈ ಗೆತ್ತಿಕೊಳ್ಳಬೇಕು ಎಂದು ತಿಳಿಸಿದರು.
ಆಗಮಿಕರಾದ ಬಾಲಕೃಷ್ಣ ಭಟ್, ತಾಪಂ ಮಾಜಿ ಅಧ್ಯಕ್ಷ ಕೆ.ಎಲ್. ಶ್ರೀಧರ್, ಜಿಪಂ ಮಾಜಿ ಸದಸ್ಯ ದೇವರಾಜೇಗೌಡ, ಪರಮಕೃಷ್ಣೇಗೌಡ, ಮಧು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement