ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ
ಹಾಸನ: ಮದ್ಯ ಸರಬರಾಜನ್ನು ನಿಯಂತ್ರಿಸಲು ನಗರ ಪ್ರದೇಶ ವ್ಯಾಪ್ತಿಯ ರಸ್ತೆಗಳನ್ನು ಸಂಪರ್ಕಿಸುವ ಎಲ್ಲಾ ಕಡೆ ಚೆಕ್ ಪೋಸ್ಟ್ಗಳನ್ನು ವ್ಯವಸ್ಥೆಗೊಳಿಸಿ, ತೀವ್ರ ನಿಗಾವಹಿಸಲಾಗಿದೆ. ಉಲ್ಲಂಘನೆ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಕಾಯ್ದೆ ಪ್ರಕಾರ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಹೇಳಿದ್ದಾರೆ.
ಸ್ಪರ್ಧಾಳುಗಳು ಮತ್ತು ರಾಜಕೀಯ ಪಕ್ಷಗಳು ಮತ ಯಾಚಿಸುವ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಗೋಪಾಲಕೃಷ್ಣ ತಿಳಿಸಿದ್ದಾರೆ.
ಕಟ್ಟುನಿಟ್ಟಿನ ಕ್ರಮ: ಮತದಾನದ ಹಿಂದಿನ ದಿನ, ಮತದಾನದ ದಿನ ಮತ್ತು ಏಣಿಕೆ ದಿನಗಳಂದು ಮದ್ಯಪಾನ ಶೇಖರಣೆ, ತಯಾರಿಕೆ, ಸರಬರಾಜು ಸಾಗಾಟ ಮತ್ತು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇಧಿಸಿ ಮದ್ಯದ ಅಂಗಡಿ ಮುಚ್ಚುವಂತೆ ಆದೇಶಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ನಿಷೇಧ: ಯಾವುದೇ ಪೋಸ್ಟರ್ಸ್, ಬ್ಯಾನರ್ಸ್, ಬಂಟಿಂಗ್ಸ್ ಇತ್ಯಾದಿ ಪ್ರಚಾರ ಸಾಮಗ್ರಿಗಳನ್ನು ಗಡಿ ಪ್ರದೇಶಗಳಲ್ಲಿ ಅಳವಡಿಸದಂತೆ ಹಾಗೂ ಸಭೆ ಸಮಾರಂಭ ನಡೆಸದಂತೆ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ಭಾವಿಸಿ ವಿವಿಧ ಕಾಯ್ದೆಗಳ ರೀತ್ಯಾ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಶ್ರವಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಪರಿಶೀಲಿಸಿ, ನಿಯಂತ್ರಣ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನಾ ಮತ್ತು ನಿಯಂತ್ರಣ ಸಮಿತಿಯನ್ನು ರಚಿಸಿದ್ದು, ಇದಕ್ಕೆ ಅಪರ ಜಿಲ್ಲಾಧಿಕಾರಿ ಸಂಚಾಲಕರಾಗಿರುತ್ತಾರೆ.
ಜಿಲ್ಲಾ ವಾರ್ತಾಧಿಕಾರಿ ಸದಸ್ಯರಾಗಿರುತ್ತಾರೆ. ಅಭ್ಯರ್ಥಿ ರಾಜಕೀಯ ಪಕ್ಷಗಳು ಮತ್ತು ದೃಶ್ಯ ಮಾಧ್ಯಮದಲ್ಲಿ ಪ್ರಸಾರ ಮಾಡುವ ಮೊದಲು ಈ ಪ್ರಚಾರ ಸಾಮಗ್ರಿಯನ್ನು ಸಮಿತಿಗೆ ಒಪ್ಪಿಸಿ, ಪರಿಶೀಲನಾ ನಂತರ ಪ್ರಮಾಣ ಪತ್ರ ಪಡೆದು ತುಣುಕು ಪ್ರಸಾರ ಮಾಡಬಹುದಾಗಿದೆ.
ಈ ಸಮಿತಿಯ ಒಪ್ಪಿಗೆ ಅನುಮತಿ ಇಲ್ಲದೇ ಪ್ರಸಾರ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಏನೇನ್ ಮಾಡಬಾರದು
- ಮತದಾನ ಪ್ರಾರಂಭವಾಗುವ ಮುಂಚಿನ 48 ಗಂಟೆಗಳ ಒಳಗಿನ ಅವಧಿಯಲ್ಲಿ ಯಾವುದೇ ರಾಜಕೀಯ ಪಕ್ಷವಾಗಲೀ ಅಥವಾ ಅಭ್ಯರ್ಥಿಗಳಾಗಲೀ ಅಥವಾ ಅವರ ಪರವಾಗಿ ಬೆಂಬಲಿಗರಾಗಲಿ ಪ್ರಚಾರ ಮಾಡಬಾರದು.
- ಸಾರ್ವಜನಿಕ ಸಭೆ ಮತ್ತು ಸಮಾರಂಭ-ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತಹವುಗಳನ್ನು ಏರ್ಪಡಿಸಬಾರದು.
- ಮತದಾರರಿಗೆ ಮೊಬೈಲ್ ಮೂಲಕ ಎಸ್ಎಂಎಸ್ ಕಳುಹಿಸಬಾರದು.
- ಎಫ್.ಎಂ.ರೇಡಿಯೋ, ಟಿವಿ ಚಾನಲ್ ಮಾಧ್ಯಮಗಳ ಮೂಲಕ ಪ್ರಚಾರ ಮಾಡಬಾರದು, ಮತದಾರರಿಗೆ ವಿಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸಬಾರದು, ದಿನಪತ್ರಿಕೆಗಳಲ್ಲಿ ಜಾಹೀರಾತು ಹೊರಡಿಸಬಾರದು.
ಏನೇನ್ ಮಾಡಬೇಕು
- ಪತ್ರಿಕೆಗಳಲ್ಲಿ ಪ್ರಕಟಿಸಿದ ಜಾಹೀರಾತಿ ಮಾಹಿತಿ, ಮುದ್ರಿಸಿದ ಪುಟಗಳ ಅಳತೆ ಹಾಗೂ ಪ್ರತಿಗಳ ಸಂಖ್ಯೆ ಮತ್ತು ಅದಕ್ಕಾಗಿ ಪಡೆದ ಸಂಭಾವನ ನಮೂದಿಸಬೇಕು ಹಾಗೂ ಜಿಲ್ಲಾಧಿಕಾರಿಗಳಿಗೆ ಘೋಷಣೆ ಕಡ್ಡಾಯಯವಾಗಿ ಸಲ್ಲಿಸಬೇಕು.
- ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸುವುದು ಮತ್ತು ಪ್ರಾಯೋಜಕರು ಅಭ್ಯರ್ಥಿ ಪರವಾಗಿ ಜಾಹೀರಾತು ನೀಡಿದಲ್ಲಿ ಆ ಎಲ್ಲಾ ವೆಚ್ಚಗಳನ್ನು ಸಂಬಂಧಿಸಿದ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರ್ಪಡೆ ಮಾಡಲಾಗುವುದು.
- ಅಭ್ಯರ್ಥಿಗಳ ವೆಚ್ಚ, ನಿರ್ವಹಣೆ, ಪರಿಶೀಲನೆಗೆ ಹಾಜರುಪಡಿಸುವುದು ಮತ್ತು ಲೆಕ್ಕ ಪತ್ರಗಳನ್ನು ಒಪ್ಪಿಸುವ ಬಗ್ಗೆ ಹಾಗೂ ಎಲ್ಲಾ ವಿಧಗಳಲ್ಲೂ ಚಾಚೂ ಚುನಾವಣಾ ನಿಯಮ ತಪ್ಪದೇ ಪಾಲಿಸಬೇಕು.