ಭಾರತ ಸಂಸ್ಕೃತಿಗಳ ಮಡಿಲು: ಸುಬ್ರಹ್ಮಣ್ಯ
ಹಾಸನ: ಭಾರತವು ಹಲವು ಸಂಸ್ಕೃತಿಗಳ ಮಡಿಲು ಎಲ್ಲಾ ಸಂಸ್ಕೃತಿ ತತ್ವಗಳನ್ನು ಗೌರವಿಸುವುದು ಹಾಗೂ ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಎಂದು ಆರ್ಟ್ಸ್ ಆಫ್ ಲಿವಿಂಗ್ನ ಸುಬ್ರಹ್ಮಣ್ಯ ಅಭಿಪ್ರಾಯಪಟ್ಟಿದ್ದಾರೆ.
ಹಾಸನದ ಕೃಷಿ ಕಾಲೇಜಿನಲ್ಲಿ ಇತ್ತೀಚೆಗೆ ನಾನಾ ಸಂಸ್ಕೃತಿಗಳ ಅನಾವರಣ ಕುರಿತ ಸಾಂಪ್ರದಾಯಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತಿ-ಜೀವನದ ಒಂದು ವಿಧ, ವಿವಿಧ ಸಂಪ್ರದಾಯಗಳ ಅನಾವರಣ. ನಮ್ಮ ಸಂಸ್ಕೃತಿಯನ್ನು ಇತರರಿಗೆ ಹೆಮ್ಮೆಯಾಗಿ ವಿನಿಮಯ ಮಾಡಿಕೊಳ್ಳುವ ಉತ್ತಮ ಅವಕಾಶ ಇದಾಗಿದೆ ಎಂದರು.
ಸಂಸ್ಕೃತಿ, ಸಂಪ್ರದಾಯ ದಿನದ ಆಚರಣೆಗಳಿಗಷ್ಟೇ ಸೀಮಿತವಾಗದೆ, ದಿನ ನಿತ್ಯದ ಚಟುವಟಿಕೆಗಳಲ್ಲಿ ಅವುಗಳ ಮೌಲ್ಯ ಅಳವಡಿಸಿಕೊಳ್ಳುವುದರ ಮೂಲಕ ನಮ್ಮ ಸಂಸ್ಕೃತಿ ಉಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಡಾ.ಎಲ್.ಮಂಜುನಾಥ್ ಮಾತನಾಡಿ, ಸಂಸ್ಕೃತಿ ಮಹತ್ವ ತಿಳಿಸಿದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ-ತೊಡುಗೆ ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಪಡೆದು ಸಂಭ್ರಮಿಸಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಜಾವಗಲ್: ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಡಾ.ಸಿ.ವಿ.ರಾಮನ್ ವಿಜ್ಞಾನ ಸಂಘದ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು.
ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸಮಾಜ ವಿಜ್ಞಾನದ ಪಾಠೋಪಕರಣಗಳ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಡಾ.ಸಿ.ವಿ.ರಾಮನ್ ಕುರಿತಾದ ಭಾಷಣ ಸ್ಪರ್ಧೆ ಏರ್ಪಡಿಸಿ ವಿಜೇತರಾದ ಕಾವ್ಯ ಮತ್ತು ಅನುಷಾ ಅವರಿಗೆ ಬಹುಮಾನ ವಿತರಿಸಲಾಯಿತು.
ಕ್ರೀಡೆ ಮತ್ತು ಕಲಾ ಸಂಘದ ವತಿಯಿಂದ ಆಟೋಟ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿಜ್ಞಾನ ಶಿಕ್ಷಕಿ ಸವಿತಾ, ಡಾ.ಸಿ.ವಿ.ರಾಮನ್ ಅವರ ಕುರಿತು ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆ ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಇದೆ ಸಂದರ್ಭದಲ್ಲಿ ಡಾ.ಸಿ.ವಿ.ರಾಮನ್ ಅವರ ಕೆಲವು ಪ್ರಯೋಗಗಳ ಪ್ರಾತ್ಯಕ್ಷಿಕೆ ತೋರಿಸಿದರು.
ಶಿಕ್ಷಕರಾದ ರಾಮಲಿಂಗಯ್ಯ, ಸುರುಕೋಡ್, ಚಂದ್ರೇಗೌಡ, ಮರುಳಸಿದ್ದಪ್ಪ ಮತ್ತಿತರರು ಮಾತನಾಡಿದರು. ಪ್ರಭಾರ ಉಪ ಪ್ರಾಂಶುಪಾಲ ಪುಟ್ಟಶಂಕರಪ್ಪ ಅಧ್ಯಕ್ಷತೆ ವಹಿಸಿದ್ದರು.
ದೇವಾಲಯಗಳ ಪುನಶ್ಚೇತನಗೊಳ್ಳಲಿ: ಶಂಭುನಾಥಸ್ವಾಮಿ
ಅರಕಲಗೂಡು: ನೂರಾರು ಹೊಸ ಹೊಸ ದೇವಾಲಯಗಳನ್ನು ನಿರ್ಮಿಸುವ ಬದಲಿಗೆ ಹಳೆಯ ದೇವಾಲಯ ಒಂದನ್ನು ಪುನರುಜ್ಜೀವನಗೊಳಿಸಿದರೆ ನೂರು ದೇವಾಲಯಗಳನ್ನು ನಿರ್ಮಿಸಿದ ಸಾರ್ಥಕ ಸೇವೆಯಾದಂತೆ ಆಗುತ್ತದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಮಾರು 20 ಲಕ್ಷ ವೆಚ್ಚದಲ್ಲಿ ಪುನಶ್ಟೇತನಗೊಳಿಸಿದ ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಐತಿಹಾಸಿಕ ಶ್ರೀಆಂಜನೇಯಸ್ವಾಮಿ ದೇವಾಲಯದ ಪುನರ್ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪ್ರತಿಯೊಬ್ಬರೂ ಅಧ್ಯಾತ್ಮದಲ್ಲಿ ಶ್ರದ್ಧೆ ಹೊಂದಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಭಗವಂತನನ್ನು ಕಾಣುವಂತೆ ಕರೆ ನೀಡಿದರು. ದೇವಾಲಯಗಳನ್ನು ನಿರ್ಮಿಸಿ ಪೂಜೆ ಸಲ್ಲಿಸುವುದು ಮನಃ ಶಾಂತಿಗಾಗಿಯಾದರೆ, ದೇವರನ್ನು ಹೃದಯ ಮಂದಿರದಲ್ಲಿ ನಿರ್ಮಿಸಿ ಪೂಜಿಸಿದರೆ ಸಾಕ್ಷಾತ್ಕಾರವಾಗಲಿದೆ. ಮನೆಗಳಲ್ಲಿ ಮಾತೆಯರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಮೂಲಕ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ನೀಡುವಂತಾಗಬೇಕು ಎಂದರು.