ಅರಸೀಕೆರೆ ಕ್ಷೇತ್ರ ಅಭ್ಯರ್ಥಿ ಘೋಷಿಸಿಲ್ಲ: ಗಾಳಿ ಸುದ್ದಿಗೆ ಕಿವಿಗೊಡದಿರಲು ಮನವಿ
ಕ.ಪ್ರ. ವಾರ್ತೆ ಅರಸೀಕೆರೆ ಮಾ.18
ಯಡಿಯೂರಪ್ಪನವರು ಕ್ಷೇತ್ರದ ಅಭ್ಯರ್ಥಿ ಇಂಥವರೇ ಎಂದು ಈವರೆಗೂ ಯಾರನ್ನೂ ಘೋಷಿಸಿಲ್ಲ. ಆದ್ದರಿಂದ ಕಾರ್ಯಕರ್ತರು ಗಾಳಿಸುದ್ದಿಯಿಂದ ವಿಚಲಿತರಾಗುವ ಅಗತ್ಯವಿಲ್ಲ ಎಂದು ಕೆಜೆಪಿ ಮುಖಂಡ ಗಂಜೀಗೆರೆ ಬಸವರಾಜು ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಯಡಿಯೂರಪ್ಪನವರ ಅಭಿಮಾನಿಗಳು ಹೆಚ್ಚಾಗಿರುವುದರಿಂದ ಕೆಜೆಪಿಗೆ ಭದ್ರಬುನಾದಿಯಿದೆ. ಆದ್ದರಿಂದಲೇ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ಕೆಲವರು ತಾವೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಳ್ಳುತ್ತಿರುವುದರಿಂದ ಗೊಂದಲವುಂಟಾಗಿದ್ದು ಯಾರನ್ನೂ ಈವರೆಗೆ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದಿಲ್ಲ. ಕಾರ್ಯಕರ್ತರು ವಿಚಲಿತರಾಗುವ ಅಗತ್ಯವಿಲ್ಲ. ಕೆಜೆಪಿಗೆ ಅವಕಾಶ ನೀಡಿದರೆ ಗೆಲುವು ನಿಶ್ಚಿತ. ಈ ಸಂಬಂಧ ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು. ಅವರು ಸೂಚಿಸುವ ಅಭ್ಯರ್ಥಿ ಗೆಲುವಿಗೆ ಹೋರಾಟ ನಡೆಸುವುದಾಗಿ ಹೇಳಿದರು.
ಕರ್ನಾಟಕ ಜನತಾ ಪಕ್ಷ ಹೊಸ ಪಕ್ಷವಾಗಿರುವುದರಿಂದ ಮತಪಟ್ಟಿಯ ಗೊಂದಲ, ಶೀಘ್ರದಲ್ಲಿ ಚುನಾವಣೆ ಎದುರಾಗಿದ್ದರಿಂದ, ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಸಫಲವಾಗದಿದ್ದರಿಂದ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆದರೂ ಗಣನೀಯ ಪ್ರಮಾಣದಲ್ಲಿ ಮತ ಪಡೆದಿರುವುದು ಪಕ್ಷ ಬಲಗೊಳ್ಳುತ್ತಿರುವ ಸಂಕೇತವಾಗಿದೆ. ಸೋಲನ್ನು ಸವಾಲಾಗಿ ಸ್ವೀಕರಿಸಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಪಡೆಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪರಮೇಶ್ವರಪ್ಪ ಸಮುದಾಯ ಭವನದಲ್ಲಿ ಮಾ.22ರ ಶುಕ್ರವಾರ ಸಂಜೆ 6 ಕ್ಕೆ ಕೆಜೆಪಿ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಪಕ್ಷ ಸಂಘಟನೆ ಹಾಗೂ ತಾಲೂಕು ಕೆಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಿಸುವ ಸಂಬಂಧ ಹಿಂದುಳಿದ, ಪ.ಜಾತಿ, ಪ.ಪಂಗಡ, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಕಾರ್ಯಕರ್ತರ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಕೆಜೆಪಿ ರಾಜ್ಯ ಮುಖಂಡರಾದ ಶೋಭಾ ಕರಂದ್ಲಾಜೆ ಹಾಗೂ ಬಿ.ಆರ್.ಪಾಟೀಲ್ ಭಾಗವಹಿಸಲಿದ್ದು ಪ್ರತಿ ಬೂತ್‌ಮಟ್ಟದಿಂದ 20 ಕಾರ್ಯಕರ್ತರನ್ನು ಆಹ್ವಾನಿಸಲಾಗಿದೆ. ಸುಮಾರು 3 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕೆಜೆಪಿ ಮುಖಂಡ ಲಾಳನಕೆರೆ ಮಹಾಲಿಂಗಪ್ಪ, ಶ್ರೀನಿವಾಸ್, ಕೆ.ವಿ.ಎನ್.ಶಿವು, ಮಾದನಹಳ್ಳಿ ನಾಗರಾಜ್, ಜಯದೇವ್, ಫಾರೂಖ್, ಬೂದೇಶ್, ಯಡಿಯೂರಪ್ಪ ಅಭಿಮಾನಿ ಸಂಘದ ಉಪಾಧ್ಯಕ್ಷ ಮಾದನಹಳ್ಳಿ ಚಂದ್ರು, ಮಹಮದ್ ಸಲೀಂ ಇತರರು ಇದ್ದರು.