ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಣಿಕೆ ಕೇಂದ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಸಭ್ಯ ವರ್ತನೆ: ಆರೋಪ

Srinivasa Murthy VN
Updated On : 18 Mar 2013, 10:24 am

ಹಾಸನ: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 6 ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಜೆಡಿಎಸ್ ಅಭ್ಯರ್ಥಿ ಎಚ್.ಎಸ್.ಪ್ರಸನ್ನ ಕೃಷ್ಣಮೂರ್ತಿ ಮತ ಎಣಿಕೆ ಕೇಂದ್ರದಲ್ಲಿ ಅಸಭ್ಯವಾಗಿ ವರ್ತಿಸಿದ್ದು, ಅದಕ್ಕಾಗಿ ಕ್ಷಮೆ ಯಾಚಿಸುವಂತೆ ವಕೀಲ ಶ್ಯಾಂಸುಂದರ್ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರದಲ್ಲಿ ಸತ್ಯಮೇವಜಯತೇ ಎಂದು ಕೂಗುತ್ತಾ ನನ್ನ ಮೇಲೆ ಕರ ಪತ್ರ ಹಂಚಿದವರಿಗೆ ಧಿಕ್ಕಾರ ಎನ್ನುತ್ತಾ ಅಸಭ್ಯವಾಗಿ ವರ್ತಿಸಿ ಅಶ್ಲೀಲ ಪದಗಳನ್ನು ಬಳಸಿದ್ದು ಅಕ್ಷಮ್ಯ ಅಪರಾಧವಾಗಿದೆ. ಅವರಿಗೆ ಯಾರೂ ತೇಜೋವಧೆ ಮಾಡಿಲ್ಲ. ನಾನಂತು ಅವರ ವಿರುದ್ಧ ಎದುರಾಳಿಯಾಗಿದ್ದರೂ ಕರಪತ್ರ ಹಂಚಿ ತೇಜೋವಧೆ ಮಾಡುವಷ್ಟು ಕೀಳು ಮಟ್ಟದವನಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಾಯಶಃ ಪ್ರಸನ್ನಕೃಷ್ಣಮೂರ್ತಿ ಅವರೇ ಸಹಾನುಭೂತಿ ಪಡೆಯುವ ಸಲುವಾಗಿ ತಾವೇ ಬೇನಾಮಿ ಹೆಸರಿನಲ್ಲಿ ತಮ್ಮ ವಿರುದ್ಧವೇ ಕರಪತ್ರ ಮುದ್ರಿಸಿ ಹಂಚಿಸಿರಬಹುದು. ಚುನಾವಣೆಯಲ್ಲಿ ಗೆದ್ದ ತಕ್ಷಣವೇ ನಾನು ಆರೋಪಗಳಿಂದ ಮುಕ್ತನಾಗಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ಚುನಾವಣೆ ಆಯೋಗಕ್ಕೆ ಅವರೇ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧ ಮೂರು ಕ್ರಿಮಿನಲ್ ಪ್ರಕರಣಗಳು ಇರುವ ಬಗ್ಗೆ ಮಾಹಿತಿ  ನೀಡಿದ್ದಾರೆ ಎಂದು ಹೇಳಿದರು. ಕೆಲವು ತಿಂಗಳಿನಿಂದ ಕೆ.ಆರ್.ಪುರಂನಲ್ಲಿ ಸಮರ್ಪವಾಗಿ ಕುಡಿಯುವ ನೀರು ಒದಗಿಸುವಲ್ಲಿ ಪ್ರಸನ್ನ  ವಿಫಲರಾಗಿದ್ದು, ಇದರ ವಿರುದ್ಧ ಸದ್ಯದಲ್ಲಿಯೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಯುವತಿ ನಾಪತ್ತೆ
ಅರಸೀಕೆರೆ: ತಾಲೂಕಿನ  ರಾಮಜಿಹಳ್ಳಿಕೊಪ್ಪಲು ಗ್ರಾಮದ ಗಿರೀಗೌಡ ಎಂಬುವರ ಪುತ್ರಿ ಲೋಲಾಕ್ಷಿ (22)  ತಮ್ಮ ಮನೆಯ ನಾಯಿಗೆ ಆಹಾರ ಹಾಕಲು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5 ಅಡಿ ಎತ್ತರ, ಬಿಳಿಬಣ್ಣ, ಕೋಲುಮುಖ, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಮೆರುನ್ ಕಲರ್ ಚೂಡಿದಾರ್ ಧರಿಸಿದ್ದರು ಎಂದು ಆಕೆಯ ತಂದೆ ಗಿರಿಗೌಡ ಗಂಡಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ತಾಮ್ರ ವಾಹಕ ಕಳವು
ಬೇಲೂರು: ತಾಲೂಕಿನ ಯಕಶೆಟ್ಟಿಹಳ್ಳಿಯಲ್ಲಿ ಚಿಕ್ಕಮಗಳೂರು ಪ್ರಸರಣ ಶಾಖೆಗೆ ಸಂಬಂಧಿಸಿದ್ದ 35 ಸಾವಿರ ರು. ಬೆಲೆಯ 150 ಮೀಟರ್ ಉದ್ದದ ಸೇರಿದ ತಾಮ್ರದ ವಾಹಕ ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಕಿರಣ್‌ಕುಮಾರ್ ಪಟ್ಟಣದ  ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಆಗ್ರಹ
ಹಾಸನ: ಕೇರಳ ರಾಜ್ಯ ಮಾದರಿಯಂತೆ ಕರ್ನಾಟಕದಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮೂಲ ವೇತನ ಹಾಗೂ ಮನೆ ಬಾಡಿಗೆ ಭತ್ಯೆ ಹೆಚ್ಚಿಸಬೇಕು ಎಂದು ಜಿಲ್ಲಾ ಶಿಕ್ಷಕರ ಹೋರಾಟ ಸಮಿತಿ ಅಧ್ಯಕ್ಷ ಸಿ.ಬಿ. ಜಯರಾಮ ಆಗ್ರಹಿಸಿದ್ದಾರೆ. ಪ್ರಸಕ್ತ ವರ್ಷದ ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿ ಶೆಟ್ಟರ್  ಬೆಂಗಳೂರು ನಗರದ ಸರ್ಕಾರಿ ನೌಕರರಿಗೆ ಮಾತ್ರ ಶೇ. 50 ರಷ್ಟು ಮನೆ ಬಾಡಿಗೆ ಭತ್ಯೆ ಹೆಚ್ಚಿಸಿರುವುದು ಶಿಕ್ಷಕ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದೆ ಎಂದಿದ್ದಾರೆ. ಸರ್ಕಾರಿ ನೌಕರರು ಎಂದರೆ ಗ್ರಾಮೀಣ ನೌಕರರು, ನಗರ ನೌಕರರು ಬೇರೆ ಎಂದೇನಾದರೂ ಮುಖ್ಯಮಂತ್ರಿ ಶೆಟ್ಟರ್ ಭಾವಿಸಿದ್ದಾರೆಯೇ ಎಂದು ಪ್ರಶ್ನಿಸಿರುವ ಅವರು, ಈ ತಾರತಮ್ಯ ನೀತಿಯನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.

ಬಿ.ಬಿ.ಶಿವಪ್ಪರಿಗೆ ಅಭಿನಂದನೆ
ಹಾಸನ: ಬಿಜೆಪಿ ಹಿರಿಯ ಮುಖಂಡ ಬಿ.ಬಿ.ಶಿವಪ್ಪ ರಾಜ್ಯ ವಿಧಾನ ಪರಿಷತ್ ನೂತನ ಸದಸ್ಯರಾಗಿ ನಾಮ ನಿರ್ದೇಶನ ಗೊಂಡಿರುವುದಕ್ಕೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡ ಎಂ.ಕೆ.ಕಮಲ್‌ಕುಮಾರ್, ಎಂ.ಆರ್.ರವಿ, ಮಂಜುನಾಥ್ ಆಚಾರ್ ಇತರರು ಅಭಿನಂದಿಸಿದ್ದಾರೆ.

ಹರಾಜು:  ರು. 16.68 ಲಕ್ಷ ಆದಾಯ
ಹಳೇಬೀಡು: ಇಲ್ಲಿನ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ  2013-14ನೇ ಸಾಲಿಗೆ ಸಂತೆ ಸುಂಕ ಮತ್ತು ಹೊಯ್ಸಳ ದೇವಾಲಯ ಖಾಸಗಿ ವಾಹನಗಳ ಬಹಿರಂಗ ಹರಾಜು ನಡೆಸಲಾಯಿತು. ಇದರಿಂದ ಗ್ರಾಮ ಪಂಚಾಯಿತಿಗೆ 16.68 ಲಕ್ಷ ರು. ಆದಾಯ ಬಂದಿದೆ. ದೇವಾಲಯ ವೀಕ್ಷಿಸುವ ವಾಹನಗಳ ವಸೂಲಿ ಶುಲ್ಕದ ಹರಾಜನ್ನು ಘಟ್ಟದ ಹಳ್ಳಿ ಸುರೇಶ್ 14.5 ಲಕ್ಷ ರು. ಹಾಗೂ ಸಂತೆ ಸುಂಕ ಶುಲ್ಕದ ಹರಾಜನ್ನು ಹುಲ್ಲೇನಹಳ್ಳಿ ಮೂರ್ತಿ 2.63 ಲಕ್ಷ ರು.ಗೆ 2014 ಮಾರ್ಚ್‌ವರೆಗೆ ತಮ್ಮದಾಗಿಸಿ ಕೊಂಡರು. ಈ ಸಾಲಿನಲ್ಲಿ 1.89 ಹೆಚ್ಚುವರಿ ಆದಾಯ ಬಂದಿದೆ. ಗ್ರಾಮ ಪಂಚಾಯಿತಿ, ರೈತಸಂಘ, ಕರವೇ, ರಾಜಕೀಯ ಪ್ರತಿನಿಧಿಗಳ ಹಾಗೂ ಸಾರ್ವಜನಿಕರ ಒಪ್ಪಿಗೆ ಮೇರೆ ಬಹಿರಂಗ ಹರಾಜನ್ನು ಗ್ರಾಮ ಪಂಚಾಯ್ತಿ ಆವರಣದಲ್ಲಿ ನಡೆಸಲಾಯಿತು. ಹಳೇಬೀಡು ಹೊಯ್ಸಳೇಶ್ವರ ಕಾರ್ತಿಕೋತ್ಸವ ದಿವ್ಯ ರಥೋತ್ಸವಕ್ಕಾಗಿ ಪ್ರತಿ ವರ್ಷ ಲಕ್ಷ ರು. ಮೀಸಲು ಇಡಲು ಜನತೆಯ ಒಪ್ಪಿಗೆ ಮೇರೆ ನಿರ್ಣಯ ಕೈಗೊಳ್ಳ ಲಾಯಿತು.  ಹರಾಜು ಪ್ರಕ್ರಿಯೆಯನ್ನು ಅಧ್ಯಕ್ಷ ಕೃಷ್ಣ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮಾಜಿ ಅಧ್ಯಕ್ಷ ಪ್ರೇಮಣ್ಣ, ಜಿಯಾ ವುಲ್ಲಾ, ಶಿವಕುಮಾರ್, ನಿಂಗಪ್ಪ, ಪರಮೇಶ್, ಪಿಡಿಓ ಸೋಮಶೇಖರ್,  ತಾಪಂ ಸದಸ್ಯ ಬಿ.ಎಸ್. ಸೋಮಶೇಖರ್, ರೈತ ಸಂಘದ ಕುಮಾರ್, ಚನ್ನೇಗೌಡ, ಈಶ್ವರಪ್ಪ, ಚಂದ್ರಶೇಖರ್ ಇದ್ದರು.   

ಪರಿಶಿಷ್ಟರ ಕಾಲೋನಿಗೆ ಸೌಲಭ್ಯ: ಶಾಸಕ
ರಾಮನಾಥಪುರ: ಎಸ್‌ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಲೊನಿಗಳಲ್ಲಿ ಮೂಲ ಸೌಲಭ್ಯ ಒದಗಿಸಲು ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎ.ಮಂಜು ತಿಳಿಸಿದರು. ರಾಮನಾಥಪುರ ಹೋಬಳಿಯ ದಾಸರಕೊಪ್ಪಲು, ಕೇರಳಾಪುರ, ಜಿಟ್ಟೇನಹಳ್ಳಿ, ಯಾಚನಕುಪ್ಪೆ, ಕಾಳೇನ ಹಳ್ಳಿ, ಬಸವಾಪಟ್ಟಣ ಹಾಗೂ ಕೊಣ ನೂರು ಗ್ರಾಮಕ್ಕೆ  1.2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಶೇ 65ರಷ್ಟು ದಲಿತ ಕಾಲೊನಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ.  ಇವುಗಳಲ್ಲಿ ಬಹುತೇಕ ಕಾಮಗಾರಿ ಮುಗಿದಿವೆ ಎಂದರು. ಹಾರಂಗಿ ಉಪ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ದೇವಿನಾಥ್, ಚೌಡೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರೇಗೌಡ  ಇದ್ದರು.

'ಆದಿಶ್ರೀಗಳು ಸಂಕಲ್ಪ ಸಿದ್ಧಿಗಳು'
ಚನ್ನರಾಯಪಟ್ಟಣ: ಬಾಲಗಂಗಾಧರನಾಥ ಸ್ವಾಮೀಜಿಗಳು ಸಂಕಲ್ಪ ಸಿದ್ಧಿಗಳಾಗಿದ್ದರು. ಅವರು 40 ವರ್ಷಗಳಲ್ಲಿ 100 ವರ್ಷದ ಸಾಧನೆಯನ್ನು ಶಿಕ್ಷಣ, ಆರೋಗ್ಯ, ಸಮಾಜಸೇವೆ, ಪರಿಸರ ರಕ್ಷಣೆ ಕಾರ್ಯಮಾಡಿದ್ದು ಪ್ರಪಂಚದ ಎಲ್ಲೆಡೆ ಜನಪ್ರಿಯರಾಗಿದ್ದರು ಎಂದು ಹಾಸನದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
 ಪಟ್ಟಣದ ಸ್ನೇಹಬಳಗ, ಭೂಮಿ ಉಳಿಸಿ ಆಂದೋಲನ ಸಮಿತಿ ಹಾಗೂ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಮ್ಮೂರ ಹಬ್ಬದ ಪ್ರಯುಕ್ತ ಜನಪದ ಜಾತ್ರೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಮೆಚ್ಚುಗೆ ಸೂಚಿಸಿ ಜನಪರ ಕಲಾವಿದರಿಗೆ, ಕಲಾ ಪ್ರದರ್ಶನಕ್ಕೆ ಉತ್ತಮ ವೇದಿಕೆಯ ಕಾರ್ಯಕ್ರಮ ಇದಾಗಿದೆ ಎಂದರು.
 ಸ್ವಾಮೀಜಿಯ ಭಾವಚಿತ್ರಕ್ಕೆ ಗಣ್ಯರು ಪುಷ್ಪ ಅರ್ಪಿಸಿದರು. ನೂರಾರು ಮಂದಿ ಕ್ಯಾಂಡಲ್ ಹಿಡಿದು ಜ್ಯೋತಿಯ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಜನಪದ ಕಾರ್ಯಕ್ರಮದಲ್ಲಿ ಕೋಲಾಟ, ನೃತ್ಯ, ಸೋಮನಕುಣಿತ, ವೀರಗಾಸೆ, ಪ್ರಕಾರಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು 30ಕ್ಕೂ ಹೆಚ್ಚು ಕಲಾ ತಂಡದಿಂದ ಶಾಲಾ ಕಾಲೇಜುಗಳಿಂದ ನಡೆಯಿತು.
 ಡಾ. ಮಹೇಶ್, ತಾ. ಕಸಾಪ ಅಧ್ಯಕ್ಷ ಎಚ್.ಎನ್. ಲೊಕೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪಟೇಲ್, ಮಂಜುನಾಥ್, ಜಿಪಂ ಸದಸ್ಯ ಎನ್.ಡಿ. ಕಿಶೋರ್, ಸಿ.ಎನ್. ಅಶೋಕ್, ಪ್ರಕಾಶ್ ಜೈನ್, ಅಜ್ಜು, ಲಾ.ನ. ಗುಪ್ತ ಮುಂತಾದವರಿದ್ದರು.  ಶಿಕ್ಷಕಿ ನೀಲಸ್ವಾಮಿ ನಿರೂಪಿಸಿದರು.ಸಂಸಾರದಲ್ಲಿ ಪ್ರೀತಿ ನಂಬಿಕೆ ಗಟ್ಟಿ ಇರಲಿ
ಸಕಲೇಶಪುರ: ಕುಟುಂಬದಲ್ಲಿ ಮಹಿಳೆ ಮತ್ತು ಪುರುಷರ ನಡುವೆ ಪ್ರೀತಿ, ನಂಬಿಕೆ ಗಟ್ಟಿಯಾಗಿದ್ದರೆ ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎನ್.ಆರ್. ಲೋಕಪ್ಪ ಹೇಳಿದರು.
 ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘ ಸಹಯೋಗದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ನ್ಯಾಯಾಲಯ ಆವರಣ ದಲ್ಲಿ ಇತ್ತೀಚೆಗೆ ಮಹಿಳೆಯರಿಗೆ ಏರ್ಪಡಿಸಿದ್ದ ಕಾನೂನು ಕಾರ್ಯಾಗಾರದಲ್ಲಿ ಮಾತನಾಡಿದರು.
  ಮಹಿಳೆಯರ ರಕ್ಷಣೆಗೆ ಕಾನೂನಿನಲ್ಲಿ ಸಾಕಷ್ಟು ರಕ್ಷಣೆ ಇದ್ದು, ಕೆಲವು ಬಾರಿ ಪ್ರತಿಷ್ಠೆಗೋ, ಇನ್ಯಾವುದೋ ಕಾರಣಕ್ಕೋ ಕಾನೂನು ದುರುಪಯೋಗಪಡಿಸಿಕೊಂಡು ದಾವೆ ಹೂಡಿದಾಗ ಕುಟುಂಬಗಳು ಬೀದಿಗೆ ಬರಬೇಕಾಗುತ್ತದೆ. ಪುರುಷ ಹೊರಗೆ ಹೋಗಿ ದುಡಿಯುವಷ್ಟೇ, ಶ್ರಮವನ್ನು ಮನೆಕೆಲಸದಲ್ಲಿ ಯಾವ ಗೌರವ ಧನ, ಸಂಬಳವೂ ಇಲ್ಲದಂತೆ ಮಹಿಳೆ ಮಾಡುತ್ತಾಳೆ. ಇದನ್ನು ಪ್ರತಿ ಪುರುಷರು ತಿಳಿದುಕೊಂಡು ಮಹಿಳೆ ಮೇಲೆ ದಬ್ಬಾಳಿಕೆ, ದೌರ್ಜನ್ಯಗಳನ್ನು ಮಾಡದೆ ಗೌರವದಿಂದ ನಡೆಸಿಕೊಳ್ಳಬೇಕಾಗಿದೆ ಎಂದರು.
  ವಕೀಲರ ಸಂಘದ ಅಧ್ಯಕ್ಷ ಆರ್.ಎನ್. ಕೃಷ್ಣಮೂರ್ತಿ, ವಕೀಲೆ ಕಲ್ಪನಾ ಕೀರ್ತಿ, ನ್ಯಾಯವಾದಿ ಬಿ. ಪರಮೇಶ್ವರ್ ಮಾತನಾಡಿದರು. ಸಿವಿಲ್ ನ್ಯಾ. ರಾಘವೇಂದ್ರ ಶೆಟ್ಟಿಗಾರ್, ವಕೀಲರ ಸಂಘದ ಕಾರ್ಯದರ್ಶಿ ಯಶ್ವಂತ್‌ಕುಮಾರ್, ಸರ್ಕಾರಿ ಅಭಿಯೋಜಕಿ ಕೆ.ಜಿ. ಅಶ್ವಿನಿ, ಶಿರಸ್ತೇದಾರ್ ರೋನಕ್ ಜಹಾನ್, ವಿಜಯಕುಮಾರಿ ಇದ್ದರು.

ಮಾಡ್ಯುಲರ್ ಶಾಲೆ ಶಾಖೆ ಉದ್ಘಾಟನೆ
ಹಾಸನ: ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಶ್ರದ್ಧೆ ಹಾಗೂ ಕಲಿಯುವ ಪ್ರವೃತ್ತಿ ಕ್ಷೀಣಿಸುತ್ತಿದೆ ಎಂದು ಮೊಸಳೆ ಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬೋರಣ್ಣಗೌಡ ನುಡಿದರು.
 ತಾಲೂಕಿನ ಮೊಸಳೆ ಹೊಸಹಳ್ಳಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಇತ್ತೀಚೆಗೆ ಮಾಡ್ಯುಲರ್ ಎಂಪ್ಲಾಯೇಬಲ್ ಶಾಲೆ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರೌಢಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಶಾಲೆ ಬಿಡುವ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದರು.
 ಅಧ್ಯಕ್ಷತೆ ಐಟಿಐ ಪ್ರಾಂಶುಪಾಲ ಎಂ. ಜಯೇಂದ್ರ ವಹಿಸಿದ್ದರು. ಉಪನ್ಯಾಸಕ ವೆಂಕಟೇಶ್, ಜಯಪ್ರಕಾಶ್, ಗ್ರಾ.ಪಂ. ಅಧ್ಯಕ್ಷೆ ಪುಟ್ಟಲಕ್ಷ್ಮೀ, ಮುಖ್ಯ ಶಿಕ್ಷಕ ನಟೇಶ್, ಕೆ.ಪಿ. ಮಂಜುನಾಥ ಇತರರಿದ್ದರು.

ಟ್ರ್ಯಾಕ್ಟರ್ ಡಿಕ್ಕಿ: ಎರಡು ವರ್ಷದ ಮಗು ಸಾವು
ಕ.ಪ್ರ.ವಾರ್ತೆ೤ ಅರಕಲಗೂಡು೤ ಮಾ. 18
ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಎರಡು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಪುಟ್ನಹೊಸಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಗ್ರಾಮದ ಮಧುಪ್ರಸಾದ್ ಎಂಬುವರ ಮಗು ನಿಶ್ಚಿತ್ (2) ಮೃತಪಟ್ಟ ಮಗು.   
  ನಿಶ್ಚಿತ್ ಮನೆಯ ಹತ್ತಿರ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ್ದಾನೆ. ಇದರಿಂದ ಮಗು ರಸ್ತೆಗೆ ಬಿದ್ದು,  ಟ್ರ್ಯಾಕ್ಟರ್ ಚಕ್ರ ತಲೆಯ ಮೇಲೆ ಹರಿದ ಪರಿಣಾಮ  ಸ್ಥಳದಲ್ಲೇ ಮಗು ಮೃತಪಟ್ಟಿದೆ.ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ನಾಪತ್ತೆ:
ಹಾಸನ: ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಅನ್ನಪೂರ್ಣೇಶ್ (33) ಎಂಬಾತ ಇತ್ತೀಚೆಗೆ ನಾಪತ್ತೆಯಾಗಿದ್ದಾನೆ. 6 ಅಡಿ ಎತ್ತರವಿದ್ದು, ಕಪ್ಪುಬಣ್ಣ ಚಹರೆ ಹೊಂದಿರುವ ಈತ ಮಾ.4 ರಂದು ಮನೆಯಿಂದ ಬ್ಯಾಂಕಿನಲ್ಲಿ ಹಣ ತರುವುದಾಗಿ ಹೋದವರು ಇದುವರೆಗೆ ವಾಪಸ್ಸಾಗಿಲ್ಲ. ಈ ಬಗ್ಗೆ ನಗರಠಾಣೆಗೆ ದೂರು ನೀಡಲಾಗಿದೆ.

ಇಂದು ಅರಸೀಕೆರೆಗೆ ಡಿಸಿಎಂ ಈಶ್ವರಪ್ಪ
ಹಾಸನ: ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಮಾ. 19ರಂದು ಬೆಳಗ್ಗೆ 10.30ಕ್ಕೆ ಅರಸೀಕೆರೆಯಲ್ಲಿ ನಡೆಯುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3ಕ್ಕೆ ಅರಸೀಕೆರೆಯಿಂದ ಬೆಂಗಳೂರಿಗೆ ಪ್ರಯಾಣಿಸುವರು.

ಬರಾಳು ಪ್ರಕಾಶ್‌ಗೆ ಚಿನ್ನದ ಪದಕ
ಹಾಸನ: ಬ್ಯಾಂಕಾಕ್‌ನ ಥೈಲ್ಯಾಂಡಿನಲ್ಲಿ ಮಾರ್ಚ್ 8, 9, 10 ರಂದು ನಡೆದ 18ನೇ ಹಿರಿಯರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ  ಜಿಲ್ಲಾ ಹಿರಿಯರ ಕ್ರೀಡಾ ಸಂಸ್ಥೆಯ ಕ್ರೀಡಾಪಟು ಚನ್ನರಾಯಪಟ್ಟಣದ ಬರಾಳು ರೈತ ಪ್ರಕಾಶ್ 50 ವರ್ಷದ ವಯೋವುತಿ ವಿಭಾಗದ 5 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಹಾಗೂ 4್ಗ 400 ಮೀಟರ್ ರಿಲೆ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ.

ಬಿ.ಬಿ.ಶಿವಪ್ಪಗೆ ಎಂಎಲ್‌ಸಿ ಪಟ್ಟ: ತಾ. ಬಿಜೆಪಿ ಸ್ವಾಗತ
ಕ.ಪ್ರವಾರ್ತೆ೤ಸಕಲೇಶಪುರ೤ಮಾ. 18
ಬಿಜೆಪಿ ಹಿರಿಯ ಮುಖಂಡ ಬಿ.ಬಿ ಶಿವಪ್ಪ ವಿಧಾನ ಪರಿಷತ್ ಸದಸ್ಯರಾಗಿ ನೇಮಕವಾಗಿರುವುದನ್ನು ತಾಲೂಕು ಬಿಜೆಪಿ ಘಟಕ ಸ್ವಾಗತಿಸಿದೆ. ಬಿಜೆಪಿ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸಿದ್ದ ಬಿ.ಬಿ. ಶಿವಪ್ಪನವರಿಗೆ ತಡವಾದರೂ ವಿಧಾನ ಪರಿಷತ್ ಸದಸ್ಯತ್ವ ನೀಡಿರುವುದು ಪಕ್ಷದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ ಎಂದಿರುವ ನಾಯಕರು ಮುಂಬರುವ ದಿನಗಳಲಿ ಅವರಿಗೆ ಪಕ್ಷದಲ್ಲಿ ಉತ್ತಮ ಹುದ್ದೆ ನೀಡ ಬೇಕು ಎಂದು ಬಿಜೆಪಿ ಮುಖಂಡ ಹೆತ್ತೂರು ದೇವರಾಜ್, ಎಸ್.ಎ. ಮೋಹನ್ ಹೇಳಿದ್ದಾರೆ.

ಹಳೆಯ ವಿದ್ಯಾರ್ಥಿಗಳ ಒಕ್ಕೂಟದ ಸಭೆ
ಹಾಸನ: ಶ್ರೀಆದಿಚುಂಚನಗಿರಿ ಮಠದ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಎಲ್ಲಿ ಹೇಗೆ ಇರಲಿ ಮಠದ ಬಗ್ಗೆ ಕಾಳಜಿ ಹೊಂದಿರಲಿ, ಬಡ ವಿದ್ಯಾರ್ಥಿಗಳಿಗೆ ತಮ್ಮ ಕೈಲಾದ ನೆರವನ್ನು ನೀಡಲಿ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಹೇಳಿದರು.ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಆದಿಚುಂಚನಗಿರಿ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಕಾರ್ಯಕಾರಿ ಹಾಗೂ ಪದಾಧಿಕಾರಿಗಳ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರಿಂದ ಸ್ಥಾಪಿತವಾದ ಶಿಕ್ಷಣ ಸಂಸ್ಥೆಗಳು ಉತ್ತಮವಾಗಿದ್ದು, ತನ್ನದೇ ಆದ ಛಾಪನ್ನು ಮೂಡಿಸಿವೆ. ಅವುಗಳನ್ನು ಉಳಿಸ ಬೆಳೆಸಬೇಕಾದುದು ಎಲ್ಲರ ಹಾಗೂ ಅದರಲ್ಲಿಯೂ ಬಹುಮುಖ್ಯವಾಗಿ ಹಳೆಯ ವಿದ್ಯಾರ್ಥಿಗಳ ಕರ್ತವ್ಯವಾಗಿದೆ ಎಂದರು. ಒಕ್ಕೂಟದ ಅಧ್ಯಕ್ಷ ಜೆ.ಎಂ. ರಾಮಕೃಷ್ಣೇಗೌಡ, ಕಾರ್ಯದರ್ಶಿ ಪ್ರೊ.ಸಿ. ನಂಜುಂಡಯ್ಯ, ನಗರಸಭಾ ಸದಸ್ಯ ಎಚ್.ಎಸ್.ಅನಿಲ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಪುಟ್ಟರಾಜು, ಅರಸೀಕೆರೆ ಒಕ್ಕಲಿಗರ ಸಂಘದ ಅಧ್ಯಕ್ಷ ಅನಂತ್‌ಕುಮಾರ್, ಪ್ರಗತಿ ಪರ ರೈತ ರಂಗಸ್ವಾಮಿ ಇತರರಿದ್ದರು.

ನೀರು ಸರಬರಾಜು -ಇಂದು, ನಾಳೆ ವ್ಯತ್ಯಯ
ಹಾಸನ: ನಗರದ ಹೊಸಲೈನ್ ಟ್ಯಾಂಕ್ ಮುಂಭಾಗ 500 ಮಿ.ಮೀ.  ಮತ್ತು 300 ಮಿ.ಮೀ ಸಿ.ಐ.ಏರು ಕೊಳವೆ ಮಾರ್ಗದ ದುರಸ್ಥಿ ಕೆಲಸವು  ನಡೆಯಲಿದೆ.
  ಪ್ರಯುಕ್ತ ಮಾ. 19  ಮತ್ತು 20ರಂದು ಎರಡು ದಿನ  ಹೇಮಾವತಿ ಹಾಗು ಹಾಲುವಾಗಿಲು ನೀರು ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ.
  ಎಂದಿನಂತೆ ಬೋರ್‌ವೆಲ್‌ಗಳಿಂದ  ನೀರು ಸರಬರಾಜು ಮಾಡಲಾಗುವುದು. ಸಾರ್ವಜನಿಕರು ಎಂದಿನಂತೆ ಸಹಕರಿಸುವಂತೆ  ನಗರಸಭೆ ಪೌರಾಯುಕ್ತ ನಾಗಭೂಷಣ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement