ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೊಬೈಲ್ ಬಳಕೆ ವ್ಯಕ್ತಿತ್ವ ಬೆಳವಣಿಗೆಗೆ ಮಾರಕ: ಡಾ. ವೀರಭದ್ರಪ್ಪ ವಿಷಾದ

Srinivasa Murthy VN
Updated On : 18 Mar 2013, 10:23 am

ಕ.ಪ್ರ. ವಾರ್ತೆ ಚನ್ನರಾಯಪಟ್ಟಣ ಮಾ.18
ಯುವ ಜನತೆ ಓದಿನ ಕಡೆ ಗಮನ ಹರಿಸದೇ ದೃಶ್ಯ ಮಾಧ್ಯಮ ಹಾಗೂ ಮೊಬೈಲ್ ಬಳಕೆಯಲ್ಲಿಯೇ ಹೆಚ್ಚಾಗಿ ಕಾಲಹರಣ ಮಾಡುತ್ತಿರುವುದರಿಂದ ಅವರ ವ್ಯಕ್ತಿತ್ವ ಬೆಳವಣಿಗೆಗೆ ಮಾರಕವಾಗುತ್ತಿದೆ ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ಡಾ.ವೈ.ಎಸ್. ವೀರಭದ್ರಪ್ಪ ವಿಷಾದಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಲ್ಪನಾಚಾವ್ಲಾ ರೇಂಜರ್ಸ್ ಟೀಮ್ ಹಾಗೂ ಸುಭಾಷ್‌ಚಂದ್ರ ಬೋಸ್ ರೋವರ್ಸ್ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಶೇ.50ರಷ್ಟು ಜನರು ಟಿವಿ ಮುಂದೆ ದಿನಗಟ್ಟಲೇ ಕುಳಿತು ಕಾಲಹರಣ ಮಾಡುತ್ತಿದ್ದು, ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್‌ಗಳಲ್ಲಿ ತಲ್ಲೀನರಾಗುವುದನ್ನು ಬಿಟ್ಟು ಉತ್ತಮ ಸಾಹಿತ್ಯದ ಪುಸ್ತಕಗಳನ್ನು ದೇಶದ ಇತಿಹಾಸ ತಿಳಿಸುವ ಹಾಗೂ ಸಾಹಿತ್ಯಾದ ಪುಸ್ತಕಗಳನ್ನು ಓದುವ ಮೂಲಕ ಜೀವನದ ಬೆಲೆಯನ್ನು  ತಿಳಿಯಬೇಕಾಗಿದೆ ಎಂದು ಹೇಳಿದರು.
ರಾಜ್ಯ ಮತ್ತು ಕೇಂದ್ರ ಸರ್ಕಾರ ಮತಗಳನ್ನು ಸೆಳೆಯಲು ಟಿವಿ, ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣ ಗಳಂತಹ ವಿವಿಧ ರೀತಿಯ ಉಪಕರಣಗಳನ್ನು ನೀಡುವುದಾಗಿ ಆಮಿಷಗಳನ್ನು ಒಡ್ಡುವ ಬದಲು ದೇಶಕ್ಕೆ ಅನ್ನ ನೀಡುವ ರೈತನ ಕುಟುಂಬಕ್ಕೆ ಬೇಕಾದ ವಿದ್ಯುತ್, ನೀರು, ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತಹ ಪ್ರಣಾಳಿಕೆಯನ್ನು ನೀಡಲಿ ಎಂದು ಒತ್ತಾಯಿಸಿದರು.
ಎಚ್.ಎಂ. ಗೌಡಯ್ಯ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣದಲ್ಲಿ ಮಕ್ಕಳ ಸರ್ವಾಂಗೀಣಾ ಬೆಳವಣಿಗೆಗೆ ಪೂರಕವಾದ ಹೊರಾಂಗಣ ಚಟುವಟಿಕೆಗಳನ್ನು ಹಮ್ಮಿಕೊಂಡು ಶಿಸ್ತು, ಸಂಯಮ, ರಾಷ್ಟ್ರಪ್ರೇಮ, ಮೈಗೂಡಿಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ಎಲ್.ಟಿ.ಲೋಕೇಶ್ ಮಾತನಾಡಿ ಇದು ರಾಜಕಿಯೇತರ ಸಂಸ್ಥೆಯಾಗಿದ್ದು, ಮಕ್ಕಳು ಆಧ್ಯಾತ್ಮಿಕ, ಮಾನಸಿಕ ಹಾಗೂ ಬೌದ್ಧಿಕವಾಗಿ ಬೆಳವಣಿಗೆ ಹೊಂದಲು ಸಂಪೂರ್ಣ ಸಹಕಾರ ನೀಡುತ್ತದೆ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಸರಳ ಜೀವನ ರೂಪಿಸಿಕೊಳ್ಳಲು ಕಲಿಸಿಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಉಮಾನಾಥ್, ಯುವ ಜನತೆ ಉತ್ತಮ ಮೌಲ್ಯಗಳನ್ನು ಜಾಗರೂಕತೆಯಿಂದ ಪಾಲಿಸಿ ಶಾಲೆಗೆ  ಕೀರ್ತಿ ತರಬೇಕು. ಸದೃಢ ಭಾರತ ನಿರ್ಮಾಣ ಮಾಡಲು ಸಹಕರಿಸಬೇಕು ಎಂದು ಸಲಹೆ ನೀಡಿದರು
ಎಡಿಸಿ ಎಂ.ಎಂ.ಗೌಡಯ್ಯ, ಪ್ರಾಂಶುಪಾಲ ಉಮಾನಾಥ್, ರೋವರ್ಸ್ ಲೀಡರ್ ಬೋರೇಗೌಡ, ರೆಂಜರ್ಸ್ ಲೀಡರ್ ರಶ್ಮಿ, ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಎಲ್.ಟಿ.ಲೋಕೇಶ್, ಪ್ರೊ.ಮಲ್ಲಯ್ಯ, ಸ್ಕೌಟ್ಸ್ ಶಿಕ್ಷಕ ಆರ್.ಜಿ. ಗಿರೀಶ್ ಇದ್ದರು. ಲತಾ ಪ್ರಾರ್ಥಿಸಿದರು.  ಅನುರಾಧ ಸ್ವಾಗತಿಸಿದರು. ಜಯಲಕ್ಷ್ಮಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement