ಶಿಕ್ಷಕರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
ಕ.ಪ್ರ. ವಾರ್ತೆ ಹಾಸನ ಮಾ.18
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಿಯಾಗಿ ಮಾಸಿಕ ವೇತನ ನೀಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ಶಿಕ್ಷಕರು ಸೋಮವಾರದಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಪ್ರತಿಭಟನಾಕಾರರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್.ಆರ್.ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ಅಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜಿಲ್ಲೆಯಲ್ಲಿ ಫೆಬ್ರವರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸರಿಯಾಗಿ ವೇತನ ನೀಡದಿರುವುದರ ಬಗ್ಗೆ ಕಳೆದ ಬಾರಿ ಪ್ರತಿಭಟನೆ ನಡೆಸಿ ಇಲಾಖಾ ಅಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರೂ ಅಧಿಕಾರಿಗಳು ಶಿಕ್ಷಕರ ಸಮಸ್ಯೆಗಳ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರತಿ ತಿಂಗಳ 1ನೇ ತಾರೀಖಿಗೆ ವೇತನ ಪಾವತಿಸುವಂತೆ ಕರ್ನಾಟಕ ಸರ್ಕಾರ ಅದೇಶಿಸಿದ್ದರೂ ಪ್ರತಿ ತಿಂಗಳು ವೇತನ ನೀಡುವಲ್ಲಿ ಇಲಾಖೆ ಅಧಿಕಾರಿಗಳು ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದ್ದಾರೆ. ಫೆಬ್ರವರಿಯ ವೇತನ ಇನ್ನೂ ಶಿಕ್ಷಕರಿಗೆ ನೀಡಿಲ್ಲ. ಶಿಕ್ಷಕರು ತಮ್ಮ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದರೂ ತಿಂಗಳಿಗೆ ಸರಿಯಾಗಿ ವೇತನ ನೀಡಿದೆ ಶಿಕ್ಷಕರಿಗೆ ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 7575 ಶಿಕ್ಷಕರು: ಜಿಲ್ಲೆಯಲ್ಲಿ 7575 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆಲೂರು ತಾಲೂಕಿನಲ್ಲಿ ಜನವರಿ ವೇತನ ಇನ್ನೂ ನೀಡಿಲ್ಲ. ಜಿಲ್ಲಾದ್ಯಂತ ಫೆಬ್ರವರಿ ವೇತನವನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡಿದೆ ವಿಳಂಬ ಮಾಡಲಾಗುತ್ತಿದೆ. ರಾಜ್ಯ ಸರ್ಕಾರ ಬಜೆಟ್ನಲ್ಲಿ 178 ಕೋಟಿ ರು.ಗಳ ಅವಶ್ಯಕ ಹಣವನ್ನು ನೀಡದೆ ಕೇವಲ 138 ಕೋಟಿ ರು.ಗಳನ್ನು ನೀಡಿತ್ತು. ಮತ್ತೆ ಹೆಚ್ಚುವರಿ ಹಣವನ್ನು ನೀಡುವಂತೆ ಒತ್ತಡ ಏರಿದ್ದರಿಂದ 28 ಕೋಟಿ ರು.ಗಳನ್ನು ನೀಡಿತ್ತು. ಉಳಿದಂತೆ ಅವಶ್ಯಕವಾಗಿರುವ ಬಾಕಿ ಹಣವನ್ನು ಸರ್ಕಾರ ಬಜೆಟ್ನಲ್ಲಿ ನೀಡದ ಕಾರಣ ಈ ರೀತಿ ಶಾಲಾ ಶಿಕ್ಷಕರ ವೇತನಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ದೂರಿದರು.
ಬೇರೆ ರಾಜ್ಯಕ್ಕೆ ಹೋಲಿಸಿದರೆ ಕಡಿಮೆ ವೇತನ: ಕೇಂದ್ರ ಹಾಗೂ ನೆರೆ ಹೊರೆ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರ ಪದವಿ ಪೂರ್ವ ಉಪನ್ಯಾಸಕರು, ಅತ್ಯಂತ ಕಡಿಮೆ ಮೂಲ ವೇತನ ಪಡೆಯುತ್ತಿದ್ದಾರೆ. ಇದೇ ರಾಜ್ಯದ ಬೇರೆ ಇಲಾಖೆಯ ಇತರೆ ನೌಕರರಿಗಿಂತ ಶಿಕ್ಷಕರು, ಉಪನ್ಯಾಸಕರು, ಕಡಿಮೆ ವೇತನ ಪಡೆಯುತ್ತಿದ್ದಾರೆ. ಇತರೆ ನೌಕರರಂದೆ ಶಿಕ್ಷಕರು, ಉಪನ್ಯಾಸಕರು ಪ್ರಾಮಾಣಿಕವಾಗಿ ಹಾಗೂ ಅವರಷ್ಟೆ ಸಮಾನವಾದ ಕೆಲಸವನ್ನು ನಿರ್ವಹಿಸುತ್ತಿದ್ದರು. ಸಹ ಸಮಾನ ವೇತನ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ಮಕ್ಕಳ ವಿದ್ಯಾಭ್ಯಾಸಕ್ಕೆ, ಕುಟುಂಬ ನಿರ್ವಹಣೆಗೆ ಹಾಗೂ ವೈದ್ಯಕೀಯ ನಿರ್ವಹಣೆ ಹಾಗೂ ಹಬ್ಬಗಳನ್ನು ಆಚರಿಸಿ ನಿತ್ಯ ಜೀವನ ನಡೆಸಲು ಶಿಕ್ಷಕರು ವೇತನವನ್ನೇ ಅವಲಂಬಿಸುತ್ತಿರುವುದರಿಂದ ತಿಂಗಳಿಗೆ ಸರಿಯಾಗಿ ವೇತನ ನೀಡಬೇಕು. ಸರಿಯಾಗಿ ವೇತನ ನೀಡದ ಪರಿಣಾಮ ಶಿಕ್ಷಣಕರು ಹಣಕ್ಕಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಾಲ ಮಾಡಿ ಜೀವನ ನಿರ್ವಹಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡರು.
ಮೊದಲೆ ವೇತನ ತಾರತಮ್ಯದಿಂದ ಶಿಕ್ಷಕರು ಕಷ್ಟ ಅನುಭವಿಸುತ್ತಿರುವ ಸಂದರ್ಭದಲ್ಲಿ ತಿಂಗಳಿಗೆ ಸರಿಯಾಗಿ ವೇತನ ನೀಡದೆ ಶಿಕ್ಷಕರಿಗೆ ತೊಂದರೆ ನೀಡುತ್ತಿದ್ದಾರೆ. ಸರ್ಕಾರ ತಕ್ಷಣ ನ್ಯಾಯ ದೊರಕಿಸಿಕೊಡದಿದ್ದಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಲ್ಲಾ ಘಟಕ ಅಧ್ಯಕ್ಷ ಶಿವೇಗೌಡ, ಉಪಾಧ್ಯಕ್ಷ ಕಾಳೇಗೌಡ, ಕಾರ್ಯಾಧ್ಯಕ್ಷ ಹೊನ್ನವಳ್ಳಿ ವೆಂಕಟೇಶ್, ಕಾರ್ಯದರ್ಶಿ ಹನುಮಂತೇಗೌಡ, ಉಪಾಧ್ಯಕ್ಷ ಬಿ.ಎಸ್.ಸೋಮಶೇಖರ್, ನಾಯಕರಹಳ್ಳಿ ಮಂಜೇಗೌಡ, ಎಚ್.ಕೆ.ಮಂಜುನಾಥ್, ವರದರಾಜ್, ಕೆ.ಎನ್.ಚೈತ್ರ, ಸಿ.ಎಂ.ನಾಗರತ್ನ ಹಾಗೂ ಇತರರು ಇದ್ದರು.